ಸ್ವರ್ಗ - ನರಕ

ಸ್ವರ್ಗ - ನರಕ

ಬದುಕಿರುವಾಗ ಬಹಳ ಜನರಿಗೆ ಸತ್ತ ಬಳಿಕ ತಾವೆಲ್ಲಿಗೆ ಹೋಗುತ್ತೇವೆ ಎಂಬ ಚಿಂತೆ. ಸ್ವರ್ಗ (ಯಾರೂ ಇಷ್ಟರವರೆಗೆ ನೋಡಿರದ) ದಲ್ಲಿ ಹೀಗೆ ಇದೆ, ಹಾಗೆ ಇದೆ ಎಂಬ ಹಂಬಲ. ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗಬೇಕಾದರೆ ಇರುವ ಪ್ರಾಥಮಿಕ ಅಗತ್ಯ “ನೀವು ಸಾಯುವುದು". ಸಾಯದೇ ಸ್ವರ್ಗಕ್ಕೆ ಹೋಗಲು ಇಲ್ಲಿ ಯಾರೂ ಧರ್ಮರಾಯರು ಉಳಿದಿಲ್ಲ. ಆದರೆ ಸಾಯಲು ಯಾರೂ ತಯಾರಿಲ್ಲ. ಮತ್ತೆ ಸ್ವರ್ಗ ಕಾಣುವುದು ಹೇಗೆ? ಎಂಬ ಪ್ರಶ್ನೆ ಕಾಡುತ್ತದೆ. ಹೀಗೇ ‘ಕ್ಷಣಕ್ಕೊಂದು ಕಥೆ' ಪುಸ್ತಕವನ್ನು ಓದುವಾಗ ಸ್ವರ್ಗ - ನರಕದ ಕುರಿತಾದ ಒಂದು ಪುಟ್ಟ ಕಥೆ ಸಿಕ್ಕಿತು. ಹೀಗೇ ಓದಿಕೊಳ್ಳಿ…

ಸುಮಾರು ಐದು ನೂರು ವರ್ಷಗಳ ಹಿಂದೆ, ಒಬ್ಬ ಸೈನಿಕ, ಧರ್ಮಗುರುವನ್ನು ಅಡ್ಡಗಟ್ಟಿ, ದಪ್ಪಗಂಟಲಿನಲ್ಲಿ ಕೇಳಿದ. 

“ಎಲ್ಲರೂ ನಿನ್ನನ್ನು ಮಹಾಮೇಧಾವಿ ಅನ್ನುತ್ತಾರೆ. ಅವರು ಹೇಳುವುದು ನಿಜವೇ ಆದರೆ ನನ್ನ ಒಂದು ಪ್ರಶ್ನೆಗೆ ಉತ್ತರ ಹೇಳಿ ಮುಂದೆ ಹೋಗು. ನಾನು ಚಕ್ರವರ್ತಿಯ ಅಂಗರಕ್ಷಕ".

“ಏನಪ್ಪಾ ನಿನ್ನ ಪ್ರಶ್ನೆ?”

“ಸ್ವರ್ಗ-ನರಕ ಇವೆಯೇ?”

“ನೀನು, ಚಕ್ರವರ್ತಿಯ ಅಂಗರಕ್ಷಕನೇ? ನಿನ್ನನ್ನೇ ನೀನು ಕಾಪಾಡಿಕೊಳ್ಳೋಕೆ ಆಗಲ್ಲ ಅನಿಸುತ್ತೆ ನನಗೆ. ನೀನು ಚಕ್ರವರ್ತಿಯನ್ನು ಹೇಗೆ ಕಾಪಾಡ್ತಿಯೋ ಏನೋ?”

ಸೈನಿಕನಿಗೆ ಕೋಪ ಬಂತು. ಸೊಂಟದಿಂದ ಕತ್ತಿಯನ್ನು ಹೊರಕ್ಕೆಳೆದ. ಅದನ್ನು ಬೀಸುತ್ತಾ ಹೇಳಿದ. “ನಿನ್ನ ಗರ್ವದ ಮಾತಿಗೆ ನಿನ್ನನ್ನು ಕತ್ತರಿಸಿ ಬಿಡ್ತೀನಿ.”

ಧರ್ಮಗುರು, ಗಾಬರಿಯಾಗದೆ ಸಮಾಧಾನವಾಗಿಯೇ ಇದ್ದ. ಒಂದರ್ಧ ನಿಮಿಷದ ನಂತರ, “ನೀನು ಕೇಳಿದ ಪ್ರಶ್ನೆಗೆ ಅರ್ಧ ಉತ್ತರ ಸಿಕ್ಕಿದ ಹಾಗಾಯಿತು. ನರಕ ಇದೆಯೇ ಅಂದೆ. ನಿನ್ನ ಕೋಪ ನಿನ್ನನ್ನು ನರಕದ ಬಾಗಿಲಲ್ಲಿ ನಿಲ್ಲಿಸಿದೆ.” ಅಂದ ಧರ್ಮಗುರು.

ಈ ಮಾತನ್ನು ಕೇಳಿ ಸೈನಿಕನ ಕೋಪ ಕಳೆಯಿತು. ಗಡಸಾಗಿದ್ದ ಮುಖ ಶಾಂತವಾಯಿತು. ಕತ್ತಿ ಅದರ ಸ್ಥಳಕ್ಕೇ ಹಿಂದಿರುಗಿತು. ಸೈನಿಕ ಕ್ಷಮೆ ಕೇಳಿ ನಮಸ್ಕಾರ ಮಾಡಿದ.

ಪುನಃ ಧರ್ಮಗುರು ಹೇಳಿದ. “ ಈ ನಿನ್ನ ನಡವಳಿಕೆ, ನಿನ್ನ ಪ್ರಶ್ನೆಗೆ ಉಳಿದ ಅರ್ಧ ಉತ್ತರವನ್ನು ತಿಳಿಸಿದೆ. ನಿನ್ನ ಕೋಪ, ರೋಷ, ದ್ವೇಷವನ್ನು ಹತೋಟಿಯಲ್ಲಿಟ್ಟುಕೊಂಡಿರುವುದರಿಂದ, ಈಗ ನೀನು ಸ್ವರ್ಗದ ಬಾಗಿಲಲ್ಲಿ ನಿಂತಿದ್ದೀಯಾ”.

ಈ ಧರ್ಮಗುರುವಿನ “ಈ ಕೋಪ ಎಂಬ ನರಕದಿಂದ ಸಮಾಧಾನ ಎಂಬ ಸ್ವರ್ಗಕ್ಕೆ ಬಂದಿದ್ದೀಯ" ವಿವೇಕದ ಮಾತುಗಳಿಂದ, ನರಕ ಸ್ವರ್ಗ ಎಂದರೇನು ಅಂತ, ತನ್ನದೇ ರೀತಿಯಲ್ಲಿ ಸೈನಿಕ ಅರ್ಥ ಮಾಡಿಕೊಂಡ.

***

ಇಲ್ಲಿಗೆ ಕಥೆ ಮುಗಿಯಿತು. ಆದರೆ, ಪ್ರತಿಯೊಬ್ಬ ಉತ್ತಮ ಮಾರ್ಗದಲ್ಲಿ ನಡೆದು ನೆಮ್ಮದಿಯ ಬದುಕು ಕಂಡುಕೊಂಡರೆ ಅದೇ ಸ್ವರ್ಗ ಅಲ್ಲವೇ? ಕೆಲವು ಮಂದಿ ಸುಖಾಸುಮ್ಮನೇ ದುಷ್ಟ ಹಾಗೂ ಕೆಟ್ಟ ಚಟಗಳಿಗೆ ಒಳಗಾಗಿ ತಮ್ಮ ಬದುಕನ್ನೇ ನರಕವನ್ನಾಗಿಸಿಕೊಳ್ಳುತ್ತಾರೆ. ಇದರ ಬದಲು ಸಜ್ಜನರ ಸಂಗವನ್ನು ಮಾಡಿ ಜೀವನದಲ್ಲಿ ಉತ್ತಮ ಧ್ಯೇಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಭೂಮಿಯೇ ಸ್ವರ್ಗವಾಗುತ್ತದೆ.

(ಸಂಗ್ರಹ ಕಥೆ)

ಚಿತ್ರ ಕೃಪೆ: ಅಂತರ್ಜಾಲ ತಾಣ