ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತುಳುನಾಡಿನ ಅಪ್ರತಿಮ ವೀರರ ನೆನಪಿನಲ್ಲಿ...

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತುಳುನಾಡಿನ ಅಪ್ರತಿಮ ವೀರರ ನೆನಪಿನಲ್ಲಿ...

ಆಗಸ್ಟ್ 15 ನಮಗೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ದಿನ. ಪರಕೀಯರ ದಾಸ್ಯದಿಂದ ಭಾರತಮಾತೆ ಮುಕ್ತಿಯಾದ ಪುಣ್ಯ ದಿನ. ಈ ಸ್ವಾತಂತ್ರ್ಯ ನಮಗೆ ಸಿಗಲು ಹಲವಾರು ಮಂದಿ ತಮ್ಮ ಪ್ರಾಣಗಳ ಬಲಿದಾನ ನೀಡಿದ್ದಾರೆ. ನಮ್ಮ ದಕ್ಷಿಣ ಕನ್ನಡದಲ್ಲೂ ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿ ಅಮರರಾದ ವೀರರನ್ನು ನಾವಿಂದು ನೆನಪಿಸಿಕೊಳ್ಳಲೇ ಬೇಕಾಗಿದೆ.  

ಬ್ರಿಟಿಷರಿಗಿಂತ ಮೊದಲು ಪೋರ್ಚುಗೀಸರು ಭಾರತವನ್ನು ತಮ್ಮ ಅಂಕೆಯಲ್ಲಿಡಲು ಪ್ರಯತ್ನಿಸಿದ್ದರು. ಆದರೆ ಬ್ರಿಟಿಷರ ಮುಂದೆ ಅವರ ಆಟ ನಡೆಯಲಿಲ್ಲ ಎಂಬುದು ನಮಗೆ ಚರಿತ್ರೆಯಿಂದ ಸಿಗುವ ವಿವರಣೆ. ಬ್ರಿಟಿಷರಿಂದ ಭಾರತ ಸ್ವಾತಂತ್ರ್ಯ ಪಡೆದ ನಂತರವೂ ಗೋವಾವನ್ನು ತಮ್ಮ ವಶದಲ್ಲಿಯೇ ಇರಿಸಿದ್ದ ಪೋರ್ಚುಗೀಸರನ್ನು 1961ರಲ್ಲಿ ಭಾರತದಿಂದ ಹೊರಹಾಕಲಾಯಿತು. ಬ್ರಿಟಿಷರು, ಪೋರ್ಚ್ ಗೀಸರು, ಫ್ರೆಂಚರು, ಡಚ್ಚರು ಸೇರಿದಂತೆ ಈ ವಿದೇಶಿ ಆಕ್ರಮಣಕಾರರು ಭಾರತೀಯರಿಂದ ಸಾಕಷ್ಟು ಬಂಡಾಯಗಳನ್ನು ಎದುರಿಸಿದ್ದರು. 

ದಕ್ಷಿಣ ಕನ್ನಡದ ಹೋರಾಟ

 1618ರಲ್ಲಿ ಮಂಗಳೂರು ಉಲ್ಲಾಲ ಪ್ರದೇಶದ  ರಾಣಿಯಾಗಿದ್ದ  ಕಿರಿಯ ಅಬ್ಬಕ್ಕ, ಸ್ಥಳೀಯ ಮೊಗವೀರ ವೀರರ ಸೈನ್ಯ ದೊಂದಿಗೆ ಪೋರ್ಚುಗೀಸರ ವಿರುದ್ಧ ಹೋರಾಡಿ ಜಯಶಾಲಿಯಾಗಿದ್ದಳು. ಕಿರಿಯ ಅಬ್ಬಕ್ಕ ರಾಣಿಗಿಂತ ಮೊದಲು ಆಕೆಯ ತಾಯಿ, ಹಿರಿಯ ಅಬ್ಬಕ್ಕ ರಾಣಿ ಪೋರ್ಚುಗೀಸರನ್ನು ಎದುರಿಸಿದ್ದಳು, ಆದರೆ ಮೊದಲ ಯುದ್ಧದಲ್ಲಿ ಆಕೆ ವಿಜಯಿಯಾದರೂ ನಂತರ ಪೋರ್ಚುಗೀಸರ ದೊಡ್ಡ ಪಡೆಯ ಮುಂದೆ ಸೋಲಿಸಲ್ಪಟ್ಟಿದ್ದಳು.

ವಿದೇಶಿ ಪೋರ್ಚುಗೀಸರನ್ನು ಎದುರಿಸಿದ್ದ  ಸ್ಥಳೀಯ ನಾಯಕತ್ವಗಳು ವಿದೇಶಿಯರ ಕ್ಷಮತೆಗೆ ದೊಡ್ಡ ಸವಾಲಾಗಿತ್ತು ಎನ್ನುವುದು ಇಂದಿಗೂ ಹೆಮ್ಮೆ ಪಡುವ ವಿಚಾರ.

ಬ್ರಿಟಿಷರು ಪೊರ್ಚುಗೀಸರಿಗಿಂತ ಪ್ರಬಲರಾಗಿದ್ದರು. ಅವರನ್ನು ಎದುರಿಸಲು ದೇಶದಾದ್ಯಂತ ಸ್ಥಳೀಯ ಅರಸರಿಂದ ಹೋರಾಟಗಳು ನಡೆದಿದ್ದವು. 1799ರಲ್ಲಿ ವಿಟ್ಲದ ಸ್ಥಳೀಯ ಅರಸ ಡೊಂಬ ಹೆಗಡೆ ಮತ್ತು ಆತನ ಮಿತ್ರ ಸುಬ್ಬರಾವ್ ಬ್ರಿಟಿಷರ ವಿರುದ್ಧ ಹೋರಾಡಿ ಸೋತು ಹೋದರು.

ಟಿಪ್ಪು ಬೆಂಬಲಿಗರ ಹೋರಾಟ: ಟಿಪ್ಪು ಸಾವಿನ ನಂತರವೂ ಟಿಪ್ಪು ಆಡಳಿತದ ಬೆಂಬಲಿಗರು ಮತ್ತು ಸ್ಥಳೀಯ ಅರಸರು ಬ್ರಿಟಿಷರಿಗೆ ಸವಾಲಾಗಿದ್ದರು. 1800ರಲ್ಲಿ ಟಿಪ್ಪು ಬೆಂಬಲಿಗ ಧೋಂಡ್ ಜಿ ವಾಘಾ ಶಿಕಾರಿಪುರದಿಂದ ಬ್ರಿಟಿಷರ ವಿರುದ್ಧ ಬಂಡಾಯ ಆರಂಭಿಸಿದ, ಆತನ ಬೆಂಬಲಿಗ ತಿಮ್ಮಪ್ಪ ನಾಯ್ಕ ಬೆಳ್ತಂಗಡಿ ಬಳಿಯ ಜಮಲಾಬಾದ್ (ಗಡಾಯಿಕಲ್) ಕೋಟೆಯಿಂದ ಬ್ರಿಟಿಷರನ್ನು ಸತತ ಮೂರು ತಿಂಗಳು ವೀರೋಚಿತವಾಗಿ ಎದುರಿಸಿ ನಂತರ ಸೋಲೊಪ್ಪಿಕೊಂಡ. ಟಿಪ್ಪು ಸುಲ್ತಾನ್ ನ ಬೆಂಬಲಿಗ ಬಂಟ್ವಾಳ ವೀರಕಂಭದ ಸಾದು ಬ್ಯಾರಿ ಬಂಟ್ವಾಳದಲ್ಲಿ ಮತ್ತು ಉದ್ಯಾವರದಲ್ಲಿ ತನ್ನ ಬೆಂಬಲಿಗರೊಂದಿಗೆ ಬ್ರಿಟಿಷರನ್ನು ಎದುರಿಸಿ ಕೊನೆಗೆ ಬ್ರಿಟಿಷ್ ದಂಡಿನ ಎದುರು ಸೋಲಬೇಕಾಯಿತು. ಆಗಿನ ಕಾಲದಲ್ಲೇ ಬ್ರಿಟಿಷರು ಸಾದು ಬ್ಯಾರಿ ತಲೆಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು.

ದಕ್ಷಿಣ ಕನ್ನಡದ ರೈತರ ದಂಗೆ

1830ರಲ್ಲಿ ಇಲ್ಲಿನ ರೈತರು ಬ್ರಿಟಿಷರ ವಿರುದ್ಧ ಕರ ನಿರಾಕರಣೆ  ಹೋರಾಟ ನಡೆಸಿದ್ದರು. ಬ್ರಿಟಿಷರು ಹೊಗೆಸೊಪ್ಪು ನಂತಹ ರೈತ ಉತ್ಪನ್ನ ಗಳಿಗೆ ಮಿತಿ ಮೀರಿ ತೆರಿಗೆ ವಿಧಿಸಿದ್ದರು. ಇದು ರೈತರಲ್ಲಿ ಬ್ರಿಟಿಷರ ಬಗೆಗಿನ ಆಕ್ರೋಶ ವನ್ನು ಹೆಚ್ಚಿಸಿತ್ತು. 1837ರಲ್ಲಿ ಬ್ರಿಟಿಷ್ ವಿರುದ್ಧ ಹೋರಾಟಕ್ಕೆ ನಿಂತ  ಕುಂಬ್ಳೆ ಸುಬ್ರಾಯ ಹೆಗ್ಡೆ ಬ್ರಿಟಿಷ್ ಗುಂಡಿಗೆ ಬಲಿಯಾದ. ಮೇಲ್ಕೊಡಗಿನ ಕುರ್ತು ಕುಡಿಯ ಮತ್ತು ಚೆಟ್ಟಿ ಕುಡಿಯ ಸಹೋದರರು ಹೋರಾಟದಲ್ಲಿ ಬಲಿಯಾದರು. ಬಂಗಾಡಿಯ ಲಕ್ಷಪ್ಪರಸ ಬಂಗ ಹಾಗೂ ಶನಿವಾರ ಸಂತೆಯ 'ಪುಟ್ಟ ಬಸಪ್ಪ' ಮತ್ತು ಕಾಸರಗೋಡು 'ಬೀರಣ್ಣ ಬಂಟ'ರನ್ನು ಬ್ರಿಟಿಷರು ಸೆರೆ ಹಿಡಿದು ಬಿಕರ್ಣಕಟ್ಟೆಯಲ್ಲಿ ಗಲ್ಲಿಗೇರಿಸಿದರು. ರೈತರ ಕೂಟಗಳು ದಂಗೆಯಲ್ಲಿ  ಪಾಲ್ಗೊಂಡವು. ಈ ದಂಗೆಯಲ್ಲಿ ಪಾಲ್ಗೊಂಡಿದ್ದ ನರಿಂಗಾನದ ಮೋನು ಬ್ಯಾರಿ ಮತ್ತು ಬಂಟ್ವಾಳದ ಅದ್ದುನ್ನಿ ಬ್ಯಾರಿ ಬ್ರಿಟಿಷರಿಂದ ಶಿಕ್ಷೆ ಗೊಳಗಾಗದರು.

ಉಬರಡ್ಕ ಸಮೀಪದ ಕೆದಂಬಾಡಿ ರಾಮೇಗೌಡ, ಹುಲಿ ಕಡಿದ ನಂಜಯ್ಯ, ಪುಟ್ಟಬಸಪ್ಪರೊಂದಿಗೆ ಈ ಹೋರಾಟದಲ್ಲಿ ದಕ್ಷಿಣ ಕನ್ನಡದ ಅರೆಭಾಷೆ ಗೌಡರು, ಬಂಟರು, ಜೈನರು, ಮಲೆಕುಡಿಯರು, ಬ್ಯಾರಿಗಳು ಸೇರಿದಂತೆ ವಿವಿಧ ಸಮುದಾಯಗಳ ವೀರರು ಪಾಲ್ಗೊಂಡಿದ್ದರು. ಒಟ್ಟು ಸೇರಿದ ಜನಸೇನೆ ಬೆಳ್ಳಾರೆಯಲ್ಲಿ ಮತ್ತು ಪುತ್ತೂರಿನಲ್ಲಿ ಬ್ರಿಟಿಷರ ಖಜಾನೆ ಲೂಟಿ ಮಾಡಿ, ಬಂಟ್ವಾಳದ ಬ್ರಿಟಿಷ್ ಕಚೇರಿಗಳನ್ನು ಹಾಳುಗೆಡವಿ ಮಂಗಳೂರು ತಲುಪಿದರು. ಅಲ್ಲಿನ ಬಂಧೀಖಾನೆ ಒಡೆದು ಬ್ರಿಟಿಷರಿಂದ ಖೈದಿಗಳಾಗಿದ್ದವರನ್ನು ಬಿಡುಗಡೆಗೊಳಿಸಿ ಬ್ರಿಟಿಷರ ಮನೆಗಳಿಗೆ ಬೆಂಕಿ ಹಚ್ಚಿದರು. ಬಾವುಟಗುಡ್ಡೆಯ ಬ್ರಿಟಿಷ್ ಧ್ವಜವನ್ನು ಕೆಳಗಿಳಿಸಿದ್ದರು. ತಲಚೇರಿಯಿಂದ ಬಂದ ಬ್ರಹತ್ ಬ್ರಿಟಿಷ್ ಸೇನೆ ದಕ್ಷಿಣ ಕನ್ನಡದ ಹೋರಾಟಗಾರರನ್ನು ಮಣಿಸಿತು. ಹೋರಾಟದ ನೇತೃತ್ವ ವಹಿಸಿದವರನ್ನು ಗಲ್ಲಿಗೆ ಹಾಕಿದರೆ ಉಳಿದವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಿತು.ಒಟ್ಟಾರೆಯಾಗಿ ಈ ಹೋರಾಟವನ್ನು 'ಕಲ್ಯಾಣಪ್ಪನ ಕಾಟಕಾಯಿ 'ಎಂದು ಕರೆಯಲಾಗಿದೆ. 

1857ರ ಸಿಪಾಯಿ ದಂಗೆಗೆ ಪೂರಕವಾಗಿ ನಡೆದ ಸಶಸ್ತ್ರ ಬಂಡಾಯದಲ್ಲಿ  ಕೇರಳದ ಪಯಸ್ಸಿ ರಾಜ, ವೇಲು ತಂಬಿ,

ತಮಿಳುನಾಡಿನ ವೀರ ಪಾಂಡ್ಯ ಕಟ್ಟಬೊಮ್ಮನ್ , ಶಿಕಾರಿಪುರದ  ದೋಂಡು ವಾಘ್, ಶನಿವಾರ ಸಂತೆಯ  ಕಲ್ಯಾಣ ಸ್ವಾಮಿ ನೇತೃತ್ವದ ಬ್ರಿಟಿಷ್ ವಿರುದ್ಧದ ಬಂಡಾಯ ಗಳು ಬ್ರಿಟಿಷರಿಗೆ ಭಯ ಹುಟ್ಟಿಸಿ ಭಾರತೀಯರು ಕುರಿಗಳಲ್ಲ ಎಂಬ ಸಂದೇಶ ರವಾನಿಸಿತ್ತು. ದಕ್ಷಿಣ ಕನ್ನಡದ ನೆಲ ವಿದೇಶಿಯರಾದ ಪೋರ್ಚುಗೀಸರು ಮತ್ತು  ಬ್ರಿಟಿಷರಿಗೆ ಭಯ ಹುಟ್ಟಿಸಿತ್ತು ಎನ್ನುವುದು ಚರಿತ್ರೆಯಲ್ಲಿ ದಾಖಲಾಗಿದೆ.ದಾಖಲೆಗಳಲ್ಲಿ ಜಾಗ ಪಡೆಯದ ಅನೇಕರು ಈ ಹೋರಾಟದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಪಾಲ್ಗೊಂಡಿದ್ದರು ಎನ್ನುವುದೂ ಸತ್ಯ.

ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ಎಲ್ಲಾ ಭಾರತೀಯ ಮತ್ತು ತುಳುವನಾಡಿನ ಸ್ವಾತಂತ್ರ್ಯ ಯೋಧರ ಆತ್ಮಕ್ಕೆ ಗೌರವ ವಂದನೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ.

ಜೈ ಹಿಂದ್ 

 -ಹರೀಶ್ ಆಳ್ವಾ

ವೀರ ರಾಣಿ ಅಬ್ಬಕ್ಕ ಚಿತ್ರ ಕೃಪೆ: ಅಂತರ್ಜಾಲ ತಾಣ