ಸ್ವಾತಂತ್ರ್ಯದ ಅಮೃತ ಮಹೋತ್ಸವ

ಸ್ವಾತಂತ್ರ್ಯದ ಅಮೃತ ಮಹೋತ್ಸವ

‘ಸ್ವಾತಂತ್ರ್ಯ’ ಎನ್ನುವ ಪದವೇ ಕರ್ಣಾನಂದ, ಮೈರೋಮಾಂಚನ. 'ಒಂದೊಂದು ಅಕ್ಷರದ ಹಿಂದಿನ ಕಥೆ, ವ್ಯಥೆ, ಹೋರಾಟ, ತ್ಯಾಗ, ಉಪವಾಸ, ಧೀರ-ವೀರತ್ವಗಳ ಪ್ರಭೆ, ಸಾವು-ನೋವುಗಳ ಅರಿವು' ಎಲ್ಲವೂ ಇದರಲ್ಲಡಗಿದೆ.

ಸ್ವಾತಂತ್ರ್ಯ ಸಂಭ್ರಮವನ್ನು ನಾವು ಎಲ್ಲೇ ಇರಲಿ, ಹೇಗೆ ಇರಲಿ, ಆಚರಿಸುತ್ತೇವೆ, ಅನುಭವಿಸುತ್ತೇವೆ. ನಮ್ಮ ಹಿರಿಯರು, ರಾಷ್ಟ್ರ ನಾಯಕರು ಪಟ್ಟ ಭವಣೆಗಳನ್ನು ನೆನಪಿಸುತ್ತೇವೆ. ರಾಷ್ಟ್ರ ಲಾಂಛನಗಳಿಗೆ ಗೌರವವನ್ನು ಸೂಚಿಸುವುದು ಭಾರತದ ಪ್ರತಿಯೋರ್ವ ಪ್ರಜೆಯ ಆದ್ಯ ಕರ್ತವ್ಯ. ಪುಟ್ಟ ಮಕ್ಕಳಿಂದ ಹಿರಿಯರವರೆಗೂ ಸಂಭ್ರಮಿಸುತ್ತೇವೆ. ದೇಶಭಕ್ತಿ ಗೀತೆ, ಸಂಗೀತ, ನೃತ್ಯ ನಾಟಕ, ಮೆರವಣಿಗೆ, ಘೋಷಣೆ, ರೋಗಿಗಳಿಗೆ, ವೃದ್ಧರಿಗೆ ಹಣ್ಣು ವಿತರಣೆ, ಕೈಲಾಗದವರಿಗೆ ಸಹಾಯ, ರಕ್ತದಾನ ಶಿಬಿರ ಹೀಗೆ ಚಟುವಟಿಕೆಗಳನ್ನು ಹಮ್ಮಿಕೊಂಡು ಅರ್ಥಪೂರ್ಣವಾಗಿ ಆಚರಿಸಿ, ಸಂಭ್ರಮಿಸುತ್ತೇವೆ. ರಾಷ್ಟ್ರೀಯ ನಾಯಕರ ಭಾವಚಿತ್ರಗಳಿಗೆ ಪುಷ್ಪ ಸಮರ್ಪಣೆ, ನುಡಿನಮನ, ಅವರ ಆದರ್ಶಗಳನ್ನು ಇಂದಿನವರಿಗೆ ನೆನಪಿಸುವಂತೆ ಭಾಷಣ ಇತ್ಯಾದಿ ಹಮ್ಮಿಕೊಳ್ಳುತ್ತೇವೆ. ಸಿಹಿತಿಂಡಿ ಈ ಬಾಬ್ತು ಹಂಚಲಾಗುತ್ತದೆ. ನಿಜವಾದ ಸ್ವಾತಂತ್ರ್ಯ ಎಂದರೇನು? ಹಿರಿಯರು ಕಷ್ಟಪಟ್ಟು ಗಳಿಸಿದ್ದನ್ನು ಉಳಿಸಿ ಬೆಳೆಸಿ, ಮುಂದಿನ ಪೀಳಿಗೆಗೆ ಜನಾಂಗಕ್ಕೆ ದಾಟಿಸುವುದೇ ಆಗಿದೆ ಎಂಬುದನ್ನು ತಿಳಿಸುವುದು ಸಹ ಈ ಆಚರಣೆಯ ಹಿಂದಿನ ಉದ್ದೇಶ.

ಈ ಜಗತ್ತಿನಲ್ಲಿ ಎಲ್ಲದಕ್ಕಿಂತಲೂ ಅಮೂಲ್ಯವಾದದ್ದು ಸ್ವಾತಂತ್ರ್ಯ. ಸ್ವಾತಂತ್ರ್ಯ ಎಂಬುದಕ್ಕೆ ವಿಶಾಲವಾದ ಅರ್ಥವನ್ನು ನೀಡಿದೆ ನಮ್ಮ ದೇಶ.'ವಂದೇ ಮಾತರಂ' ಎಂಬ ಆ ಒಕ್ಕೊರಲಿನ ಧ್ವನಿ ಆ ಕಾಲಕ್ಕೆ ಮೈನವಿರೇಳಿಸಿತು, ಈಗಲೂ ಅದನ್ನೇ ಕಾಪಿಟ್ಟುಕೊಂಡಿದೆ. ನಾವೆಲ್ಲ ಚಿಕ್ಕವರಿರುವಾಗ ಶಾಲೆಗಳಲ್ಲಿ ಮೊದಲೇ ತಯಾರಿ ನಡೆಸಿ, ಬೀದಿಗಳಲ್ಲಿ ಮೆರವಣಿಗೆ, ಘೋಷಣೆ ಕೂಗುತ್ತಾ ಸಾಗುವ ದಿನಗಳು ಎಂಥ ಆನಂದ.ಹಲವಾರು ‌ಸ್ಸರ್ಧೆಗಳು, ಬಹುಮಾನ ಆ ಖುಷಿಯೇ ಅವರ್ಣನೀಯ.

ಅಧ್ಯಾಪಕರು ಹೇಳುತ್ತಿದ್ದ ಒಂದು ಮಾತು ಈಗಲೂ ನೆನಪಿದೆ  'ಸ್ವಾತಂತ್ರ್ಯ ಇದೆ ಎಂದು ನನ್ನದೇ ತೋಟದಲ್ಲಿ ಕೈಬೀಸಿ ಹೋದರೆ ಗಿಡಗಳಿಗೆ ಕೈತಾಗಿ ನಮ್ಮದೇ ಕೈಗಳು ತುಂಡಾಗಬಹುದು' ಸಿಕ್ಕಿದ ಸ್ವಾತಂತ್ರ್ಯವನ್ನು ಜೋಪಾನವಾಗಿ ಕಾಪಾಡಬೇಕು. ಕೇಸರಿ, ಬಿಳಿ, ಹಸಿರು ಈ ಬಣ್ಣಗಳ ಮಹತ್ವ ನಮ್ಮ ಜೀವನಕ್ಕೂ ಹೇಗೆ ಪೂರಕವಾಗಿದೆ, ನಡುವೆ ಇರುವ ಚಕ್ರ, ಅದನ್ನೇ ಯಾಕೆ ಆಯ್ಕೆ ಮಾಡಿದರೆಂಬ ಬಗ್ಗೆ ಸಹ ನಾವು ಸಮಾರಂಭದಲ್ಲಿ ತಿಳಿಸಿಕೊಟ್ಟಾಗ ಮಕ್ಕಳು ಅರಿಯುವರು. ಸ್ವಚ್ಛತೆಯ ಬಗ್ಗೆ, ಅದರಿಂದಾಗುವ ಉಪಯೋಗ ತಿಳಿಸಬಹುದು. ಬಣ್ಣ ಬಣ್ಣದ ದಿರಿಸುಗಳನ್ನು ಧರಿಸಿ  ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸಂಭ್ರಮವರ್ಣನಾತೀತ. ಚಕ್ರ ಯಾವತ್ತೂ ಮುಂದಕ್ಕೆ ಚಲಿಸುತ್ತಿರಬೇಕು. ಎಲ್ಲಿಯಾದರೂ ಹಿಂದಕ್ಕೆ ಚಲಿಸಿದರೆ ಅಲ್ಲಿಯೇ ನಿಂತು ಬಿಡುವುದು. ಆ ಚಕ್ರ ನಮ್ಮ ಪ್ರಗತಿಯ ಸಂಕೇತ. ಎಷ್ಟೇ ಕಷ್ಟಗಳಿದ್ದರೂ ಹಿಂದಿರುಗಿ ನೋಡದೆ ಮುಂದುವರಿಯೋಣ ಎಂಬ ಧ್ಯೋತಕ. ದೇಶದ ಸಮಗ್ರ ಸಂವಿಧಾನವನ್ನು ಒಪ್ಪಿ, ಗೌರವಿಸಿ, ಅದರಲ್ಲಿರುವ ತತ್ವಗಳಿಗೆ ಬದ್ಧರಾಗಿರಬೇಕು. ಹಕ್ಕುಗಳನ್ನು ಕೇಳುವುದರೊಂದಿಗೆ ನಮ್ಮ ಕರ್ತವ್ಯ ಸಹ ಮರೆಯಬಾರದು. ಮಹಾನ್ ಪುರುಷರ, ಸ್ವಾತಂತ್ರ್ಯ ಹೋರಾಟಗಾರರ ಜೀವನಚರಿತ್ರೆಯನ್ನು ನಮ್ಮ ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು. 'ವಂದೇ ಮಾತರಂ' ಹಿಂದಿನ ಶಕ್ತಿ ಯ ಅರಿವು ಮೂಡಿಸಬೇಕು. ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗುವಂತೆ ಮಕ್ಕಳನ್ನು ಕಲಿಸಿ ಬೆಳೆಸಿ ಸಮಾಜಕ್ಕೆ ನೀಡುವ ಕೆಲಸವಾಗಬೇಕಾಗಿದೆ.

ಈ ಸಂದರ್ಭದಲ್ಲಿ ನಾಗರಿಕರಾದ ನಮ್ಮ ಜವಾಬ್ದಾರಿ ಏನು ಎಂದು ಯೋಚಿಸಿದರೆ ಬಹಳಷ್ಟಿದೆ. ಪ್ರತಿಯೊಂದು ಸಮತೂಕ, ಸಮಭಾವದಲ್ಲಿ ಸಾಗಲು ನಾವೇ ಜವಾಬ್ದಾರರು. ಸ್ವಾತಂತ್ರ್ಯದ ದುರುಪಯೋಗ ಸಲ್ಲದು. ಮಾತಿನ ಸ್ವಾತಂತ್ರ್ಯ ಇದೆ ಎಂದು ಯಾರನ್ನೂ ನೋಯಿಸುವ, ಅವಹೇಳನ ಮಾಡುವುದು ಸಲ್ಲದು.ಬಡವ-ಬಲ್ಲಿದ ಎಂಬ ತಾರತಮ್ಯ ಹೋಗಲಾಡಿಸಬೇಕು. ಮೌಲ್ಯವರ್ಧಿತ ಕೆಲಸ, ಗಳಿಕೆಯತ್ತ ಆಲೋಚನೆ ಇರಬೇಕು.

ನಮಗೆ ಅವಶ್ಯಕತೆ ಇರುವುದು ಈಗ ನಿಜವಾದ ಸ್ವಾತಂತ್ರ್ಯ. ಜವಾಬ್ದಾರಿಯ ಸ್ವಾತಂತ್ರ್ಯದ ಕೊರತೆ ಸದ್ದಿಲ್ಲದೆ ದೇಶವಿಡೀ ವ್ಯಾಪಿಸಿದೆ. ನಿಸ್ವಾರ್ಥ, ಪರಿಶುದ್ಧ ವ್ಯಕ್ತಿ ತ್ವ ನಶಿಸಿದೆ.ಕೊಲೆ, ಸುಲಿಗೆ, ಅನ್ಯಾಯ, ಅಧರ್ಮ, ಅಗೌರವ, ಮಾತಾಪಿತರನ್ನು ಬೀದಿಪಾಲು ಮಾಡುವ ವರ್ತನೆಗಳು, ಸೌಜನ್ಯದ ಕೊರತೆ ಎಲ್ಲವೂ ದೇಶವ್ಯಾಪಿ ವ್ಯಾಪಿಸಿದೆ, ಇವುಗಳನ್ನೆಲ್ಲ ಹೋಗಲಾಡಿಸಬೇಕು. ಹೇಗೆ? ಎಂದರೆ ಇಂದಿನಿಂದ ನಾಳೆಗೆ ಸಾಧ್ಯವಾಗದು, ವರ್ಷಾನುವರ್ಷಗಳೇ ಬೇಕು.

ದೇಶದೆಲ್ಲೆಡೆ ನವ ನಿರ್ಮಾಣಗಳ ಕನಸುಹೊತ್ತ ಮನಸ್ಸುಗಳ ಅವಶ್ಯಕತೆ ಇದೆ. ಪ್ರಾಮಾಣಿಕ, ದಕ್ಷ, ಸೇವಾ ಮನೋಭಾವ, ಕರ್ತವ್ಯನಿಷ್ಠೆ, ಯುವಜನಾಂಗದವರ, ಯೋಚಿಸುವ ಮನಸ್ಸಿನವರ ಅವಶ್ಯಕತೆಯಿದೆ. ಇಂದಿನ ಪರಿಸ್ಥಿತಿಯಲ್ಲಿ ದೇಶದ ಸಂಕಷ್ಟಕ್ಕೆ ಮಿಡಿಯುವ ಮನಗಳ ಅವಶ್ಯಕತೆಯಿದೆ. ಅದಕ್ಕೆ ಸರಿಯಾದ ಮೂಲ ವ್ಯವಸ್ಥೆಗಳನ್ನು ಕಂಡುಹಿಡಿದು ಅನುಷ್ಠಾನ ಗೊಳಿಸಬೇಕಾಗಿದೆ.ದೇಶದ ಪ್ರತಿಯೊಬ್ಬನೂ ಮೂರು ಹೊತ್ತಿನ ಊಟ, ಕುಡಿಯಲು ಶುದ್ಧ ನೀರು, ಮಲಗಲೊಂದು ನೆಮ್ಮದಿಯ ಸೂರು ಕಂಡರೆ ಸ್ವಾತಂತ್ರ್ಯದ ನಿಜ ಅರ್ಥ ಲಭಿಸಿದಂತೆ.

ಎಲ್ಲಿಯವರೆಗೆ ಸಾಮಾಜಿಕ ಭದ್ರತೆ  ಇಲ್ಲವೋ ಅಲ್ಲಿಯವರೆಗೂ ಸ್ವಾತಂತ್ರ್ಯ ಪದ ಅರ್ಥಹೀನ ಅಲ್ಲವೇ? ನಮ್ಮ ಹಿಂದಿನ ರಾಷ್ಟ್ರನಾಯಕರು, ದೇಶಕ್ಕಾಗಿ ಪ್ರಾಣತೆತ್ತವರು ಹೇಳಿದ ಒಂದೊಂದು ಮಾತುಗಳೂ ಹೊನ್ನಿನ ನುಡಿಗಳು. ವೀರ ಭಗತ್ ಸಿಂಗ್ ನ ಒಂದು ಮಾತನ್ನು ನೆನಪಿಸಲೇ ಬೇಕು 'ವ್ಯಕ್ತಿಗಳನ್ನು ಕೊಲ್ಲಬಹುದು, ವ್ಯಕ್ತಿಗಳ ಆಲೋಚನೆಗಳನ್ನು ಕೊಲ್ಲಲು ಸಾಧ್ಯವಿಲ್'*. ದ್ವೇಷ, ಅಸೂಯೆ, ಅಸಮಾಧಾನ, ಹಿಂಸೆಗಳ ಜಂಜಾಟಗಳಿಂದ ನಲುಗಿ ಬಸವಳಿದಿಹ ನಾವುಗಳು ಎಚ್ಚೆತ್ತುಕೊಳ್ಳಲೇ ಬೇಕಾಗಿದೆ.

ದೇಶದ ಹಿತರಕ್ಷಣೆ, ಕೃಷಿಕಾಯಕಗಳಿಗೆ ಒತ್ತುನೀಡಬೇಕಾಗಿದೆ. ಎಲ್ಲರೂ ವಿದ್ಯಾವಂತರಾಗಬೇಕು. ನಮ್ಮದೇಶ ನಮ್ಮ ಹೆಮ್ಮೆ, ಸ್ವಚ್ಛತೆ, ಆರೋಗ್ಯ, ನೆಮ್ಮದಿ ಮುಖೇನ ಸ್ವಾರ್ಥ ರಹಿತ ಬದುಕು ನಡೆಸೋಣ. ಇದೀಗ ವಕ್ಕರಿಸಿದ ಕರಾಳ ಛಾಯೆಯ ಹಿಡಿತದಿಂದ ಹೊರ ಬರುತ್ತಾ, ಎಲ್ಲಾ ಮುಂಜಾಗ್ರತೆ ಗಳನ್ನು ಕೈಗೊಂಡು  ಬದುಕಲು ಕಲಿಯೋಣ. ನಿಜವಾದ ಸ್ವಾತಂತ್ರ್ಯಕ್ಕೆ ಬದುಕನ್ನು ಮುಡಿಪಾಗಿಡೋಣ.

೭೫ರ ಅಮೃತೋತ್ಸವದ ಆಚರಣೆ ಇಂದಿನ ವಿಶೇಷತೆ. ೧೩ನೇ ದಿನಾಂಕದಿಂದ ಮನೆ ಮನೆಯಲ್ಲೂ ತಿರಂಗವನ್ನು ಹಾರಿಸಿ ಗೌರವ ವಂದನೆ ಸಲ್ಲಿಸುತ್ತಿದ್ದೇವೆ. ಸಾವಿರಾರು ವರ್ಷಗಳ ಇತಿಹಾಸ, ಪರಂಪರೆ, ಆಚಾರ-ವಿಚಾರಗಳು, ಸಂಸ್ಕೃತಿಯಿಂದ ವಿರಾಜಮಾನವಾದ ನಮ್ಮ ದೇಶ ಭಾರತ. ಅತ್ಯಂತ ಬಲಿಷ್ಠವಾದ ರಕ್ಷಣಾ ವ್ಯವಸ್ಥೆ ಹೊಂದಿದವರು ನಾವು. ಒಂದು ಕುಟುಂಬಕ್ಕೊಂದು ಸೂರು, ಶುದ್ಧ ಕುಡಿಯುವ ನೀರು, ರಸ್ತೆ ಸೌಕರ್ಯ, ಶಾಲೆ, ಸಾಕ್ಷರತೆ, ಆರೋಗ್ಯ, ನೈರ್ಮಲ್ಯ ಎಲ್ಲದರಲ್ಲೂ ಮುಂದುವರಿದವರು ನಾವು. ಆಧುನಿಕ ಮತ್ತು ಸಾವಯವ ಕೃಷಿಗೆ ಪ್ರಾಧಾನ್ಯತೆ, ತಾಂತ್ರಿಕತೆ, ದೂರಸಂಪರ್ಕ ವ್ಯವಸ್ಥೆಯಲ್ಲಿ ಅಪಾರ ಮೇಲುಗೈ ಸಾಧಿಸಿ, ಮೌಲ್ಯವರ್ಧಿತ ಹೆಚ್ಚಳ ಕಂಡವರು. ಆತ್ಮ ನಿರ್ಭರ ಭಾರತದ ಕನಸು ನನಸಾಗಲು ಪ್ರತಿಯೊಬ್ಬ ದೇಶವಾಸಿಯೂ ಶ್ರಮಿಸಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕನಸುಗಳನ್ನು ನನಸಾಗಿಸುವುದು ನಮ್ಮ ಆದ್ಯ ಕರ್ತವ್ಯ. ತ್ಯಾಗ, ಬಲಿದಾನಕ್ಕೆ ಪ್ರತಿಯಾಗಿ ನೆನಪಿಸುವುದು, ನುಡಿನಮನ, ಗೌರವ ಸಲ್ಲಿಸುತ್ತೇವೆ. ಇಡೀ ವಿಶ್ವಕ್ಕೆ ಮಾದರಿ ನಮ್ಮ ದೇಶ ಭಾರತವೆಂಬ ಹೆಮ್ಮೆ ನಮಗಿದೆ.  

ದಿನದಿಂದ ದಿನಕ್ಕೆ ಸ್ವತಂತ್ರ ನೀಡಿದ್ದು ಹೆಚ್ಚಾಯಿತೇನೋ ಅನ್ನಿಸ್ತಾ ಇದೆ. ಭಾವೈಕ್ಯತೆಯ ಅಡಿಪಾಯ ಕುಸಿಯದಂತೆ ಗಟ್ಟಿಗೊಳಿಸಬೇಕಾಗಿದೆ. ಸ್ವಾತಂತ್ರ್ಯದ ಅರ್ಥ ಮತ್ತು ವ್ಯಾಪ್ತಿಯನ್ನು ತಿಳಿಸುವ ಯುವ ಮನಸ್ಸುಗಳು ಸ್ವಯಂ ಮುಂದೆ ಬರಬೇಕಾಗಿದೆ. ಮಾನವ ಸಂಪನ್ಮೂಲದ ಸರಿಯಾದ ಬಳಕೆಯಾಗಬೇಕಾಗಿದೆ. ಸಮಾಜಘಾತುಕ ಶಕ್ತಿಗಳಿಗೆ ಉತ್ತೇಜನ ನೀಡದೆ, ಮೊಟಕುಗೊಳಿಸಿ ಪ್ರತಿಯೋರ್ವರೂ 'ನನ್ನ ದೇಶ ನನ್ನ ಜನ, ನಾವೆಲ್ಲರೊಂದೇ' ಎಂಬ ಚಿಂತನೆ ಮೂಡಬೇಕಾಗಿದೆ. ಯುವಶಕ್ತಿಯ ತೋಳುಗಳನ್ನು ಬಲಿಷ್ಠಗೊಳಿಸುವ ಕಾಯಕವಾಗಬೇಕು. ಸಾಮಾಜಿಕ ಅಡ್ಡಗೋಡೆಗಳ ನಿರ್ಮೂಲನೆಯಾಗಬೇಕು. ಪರಿಸರ ವಿನಾಶಕ್ಕೆ ತಡೆಗೋಡೆ ಕಟ್ಟಬೇಕು. ಎಲ್ಲೆಲ್ಲೂ ಹಸಿರಿನ ಹಂದರ ವಿಜೃಂಭಿಸಲಿ.

೭೫ರ ಸಂಭ್ರಮಾಚರಣೆಯೊಂದಿಗೆ  ಪ್ರತಿಯೊಬ್ಬನಿಗೂ ನಿರಾಳವಾಗಿ ಉಸಿರಾಡಿ ಜೀವಿಸುವಂತಾಗಲಿ, ನೆಮ್ಮದಿಯ ಬದುಕು ಸಿಗಲಿ, ಕಾಯಕದೊಂದಿಗೆ ಬೆವರಿನ ಬೆಲೆ ಅರಿಯುವಂತಾಗಲಿ, ಭದ್ರತೆಯಿರಲಿ,ಭಯ-ಅಂಜಿಕೆ ದೂರವಾಗಲಿ  ಎಂಬ ಆಶಯ, ಕನಸು ಸಾಕಾರಗೊಂಡು ಸಂತಸ ಮನೆ ಮಾಡಲಿ. ಜೈ ಹಿಂದ್.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ