ಸ್ವಾತಂತ್ರ್ಯದ ಸಂಭ್ರಮ

ಸ್ವಾತಂತ್ರ್ಯದ ಸಂಭ್ರಮ

ಕವನ

ಬನ್ನಿ ಗೆಳೆಯರೆ ಓಡೋಡಿ ಬನ್ನಿ

ಒಟ್ಟಾಗಿ ಸ್ವಚ್ಛತೆಯ ಮಾಡೋಣ ಬನ್ನಿ

ಕಸಕಡ್ಡಿ ಹೆಕ್ಕುತಲಿ ನೆಲವನ್ನು ಗುಡಿಸುತಲಿ

ಶಾಲಾ ಪರಿಸರದಿ ಸೇರೋಣ ಬನ್ನಿ

 

ಧ್ವಜಕಟ್ಟೆಯನು ತೊಳೆಯೋಣವಿಂದು

ಸತ್ಯಮೇವ ಜಯತೇ ಹೇಳೋಣವೆಂದು

ವಿಧವಿಧ ಹೂಗಳ ಅಲಂಕಾರ ಮಾಡುತ

ಕಟ್ಟೆಯನು ಸಿಂಗರಿಸಿ ಸ್ವಾಗತ ಕೋರುತ

 

ಅತಿಥಿ ಅಭ್ಯಾಗತರ ಕರೆಯೋಣ ನಾವು

ತ್ರಿವರ್ಣ ಧ್ವಜವನು ಏರಿಸುತ ಹಾರಿಸುತ

ಗೌರವ ವಂದನೆ ಸಲಿಸೋಣ

ರಾಷ್ಟ್ರಗೀತೆಯನು  ಮುದದಿಂದ ಹಾಡೋಣ

 

ರಾಷ್ಟ್ರನಾಯಕರ  ನೆನೆಯೋಣ ನಮಿಸೋಣ

ತ್ಯಾಗ ಅಹಿಂಸೆ ಬಲಿದಾನ ಅಸ್ತ್ರವು

ಮುನ್ನುಡಿ ಬರೆಯಿತು ಸ್ವಾತಂತ್ರ್ಯ ಗುಡಿಗೆ

ಪರಕೀಯ ಆಡಳಿತ ಕೊನೆಯಾದ ಗ(ಘ)ಳಿಗೆ

 

ಗಾಂಧಿ ನೆಹರೂ ಲಾಲ ಪಾಲರು

ಠಾಗೋರ ಬಕೀಮಚಂದ್ರ ಅಂಬೇಡ್ಕರರು

ಝಾನ್ಸಿ ಚೆನ್ನಮ್ಮ ಉಳ್ಳಾಲದ ರಾಣಿ ಅಬ್ಬಕ್ಕ

ಕಿತ್ತೂರಿನ ಸಿಂಹಿಣಿ ಚೆನ್ನಮ್ಮಾಜಿಯು

 

ಸಂಗೊಳ್ಳಿ ರಾಯಣ್ಣ ಛತ್ರಪತಿ ಶಿವಾಜಿ

ವಿವೇಕಾನಂದ ಪರಮಹಂಸ ಆಜಾದ್

ಶಾಸ್ತ್ರೀಜಿ ಬೋಸರು ರಾಮಮೋಹನರಾಯರು

ದೇಶದ ಅಮೂಲ್ಯ ರತ್ನಗಳು ತಿಳಿಯಿರೆಲ್ಲ

 

ಭಾಷಣ ನೃತ್ಯ ವೈವಿಧ್ಯ ಸ್ಪರ್ಧೆಗಳು

ಬಹುಮಾನ ಪಡೆಯೋಣ ಸಂಭ್ರಮದಿ ಇಂದು

ಮೆರವಣಿಗೆ ಘೋಷಣೆ ಬೀದಿ ನಾಟಕ

ಸಿಹಿಯೂಟ ತಿನ್ನುತ ಆಚರಣೆ ಸೊಗಸು

 

ವಿವಿಧತೆಯಲಿ ಏಕತೆ ಸೌಹಾರ್ದ ಸಾರೋಣ

ದೇಶ ಭಾಷೆ ಮೌಲ್ಯಗಳ ಗೌರವಿಸೋಣ

ಪರಿಸರ ಕಾಳಜಿ ಇರಲೆಂದು ನಮಗೆ

ಬೆಳಗುತ್ತ ನಮಿಸೋಣ ಸ್ವಾತಂತ್ರ್ಯ ದೀವಿಗೆಗೆ

-ರತ್ನಾ ಕೆ ಭಟ್ ತಲಂಜೇರಿ ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್