ಸ್ವಾತಂತ್ರ್ಯೋತ್ಸವ ಗೀತೆ…
ಕವನ
ಸ್ವಾತಂತ್ರ್ಯೋತ್ಸವ.. ಸ್ವಾತಂತ್ರ್ಯೋತ್ಸವ..
ನಾಡಿನ ದೇಶದ ಸ್ವಾತಂತ್ರ್ಯೋತ್ಸವ ||
ವರುಷ ವರುಷವೂ| ಹರುಷ ತುಂಬುವ ||ಸ್ವಾತಂತ್ರ್ಯೋತ್ಸವ ||ಪಲ್ಲ||
ಹಿಂದೂ ಕ್ರೈಸ್ತ ಮುಸಲ್ಮಾನ
ಸಿಕ್ಖ ಪಾರಸೀಕ ಜೈನ |
ಜಾತಿ ಮತ ಬೇಧ ಭಾವ
ಮರೆವ ಮನ ಎಲ್ಲ ಜನ ||
ಆಡಿ ನಲಿಯುವ| ಕೂಡಿ ಮೆರೆಯುವ ||ಸ್ವಾತಂತ್ರ್ಯೋತ್ಸವ||೧||
ಝಾನ್ಸಿ ಓಬವ್ವ ಅಬ್ಬಕ್ಕ ರಾಣಿ
ಕಿತ್ತೂರು ಚೆನ್ನಮ್ಮ |
ಆಜಾದ ಭಗತಸಿಂಗ್ ತಾತ್ಯಾಟೋಪಿ
ಸಂಗೊಳ್ಳಿ ರಾಯಣ್ಣ ||
ಸಿಡಿಗುಂಡ ತೋಪಿಗೆ
ನೇಣುಗಂಬದುರುಳಿಗೆ
ಜೀವಬೆಲೆಯ ತೆತ್ತರು| ಪಾರತಂತ್ರ್ಯ ಕಳೆದರು ||ಸ್ವಾತಂತ್ರ್ಯೋತ್ಸವ||೨||
ಗಾಂಧಿ-ನೆಹರು ನೇತಾಜಿ
ತಿಲಕ ಗೋಖಲೆ ರಾಜಾಜಿ |
ಲಾಲ ಪಾಲ ಪಟೇಲ
ತ್ಯಾಗ ಶೀಲ ಸತ್ಯ ಬಲ ||
ಗುಣವ ಪೊಗಳುವ | ಹಾಡಿ ಕುಣಿಯುವ ||ಸ್ವಾತಂತ್ರ್ಯೋತ್ಸವ||೩||
ಬಿಡುಗಡೆಯ ಈ ಸುಖ
ಭಾರತಿಯ ಶ್ರೀಮುಖ |
ಸೂರ್ಯ ಚಂದ್ರರಿರುವ ತನಕ
ಸತ್ಯ ಶಾಂತಿ ತಾರಕ ||
ಮುದವ ನೀಡಲಿ | ನಗುವ ತುಂಬಲಿ ||ಸ್ವಾತಂತ್ರ್ಯೋತ್ಸವ||೪||
ರಚನೆ: ಭಾಸ್ಕರ ರೈ ಕುಕ್ಕುವಳ್ಳಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
