ಸ್ವಾತಂತ್ರ್ಯ ಎಂಬ ಅರ್ಥದ ಮೂಲ ಭಾವವನ್ನು ಹುಡುಕುತ್ತಾ...

ಸ್ವಾತಂತ್ರ್ಯ ಎಂಬ ಅರ್ಥದ ಮೂಲ ಭಾವವನ್ನು ಹುಡುಕುತ್ತಾ...

ಸ್ವಾತಂತ್ರ್ಯ ಎಂಬುದು...

ಮಾನಸಿಕ ಸ್ಥಿತಿಯೇ,

ದೈಹಿಕ ವ್ಯಾಪ್ತಿಯೇ,

ಇವೆರಡರ ಸಮ್ಮಿಲನದ ಒಟ್ಟು ವ್ಯಕ್ತಿತ್ವವೇ,

ಸಾಮಾಜಿಕವೇ,

ರಾಜಕೀಯವೇ,

ಆರ್ಥಿಕವೇ,

ಶೈಕ್ಷಣಿಕವೇ,

ಧಾರ್ಮಿಕವೇ,

ಸಾಂವಿಧಾನಿಕವೇ,

ಪ್ರಾದೇಶಿಕವೇ,

ಪ್ರಾಕೃತಿಕವೇ,

ಜೊತೆಗೆ ಅದರ ವ್ಯಾಪ್ತಿ ಎಷ್ಟು ?

ಅದರ ಅನುಭವ ಏನು ?

ಮನುಷ್ಯರಿಗೆ ಮಾತ್ರ ಸೀಮಿತವೇ ಅಥವಾ ಎಲ್ಲಾ ಜೀವಚರಗಳಿಗು ಅನ್ವಯವೇ ?

ಪ್ರಾಕೃತಿಕವಾಗಿ ಹೇಳುವುದಾದರೆ, ಮೆದುಳು ಸ್ವಾತಂತ್ರ್ಯದ ಮೂಲ ಸ್ಥಾನ ಮತ್ತು ಅದರಿಂದ ಉಂಟಾಗುವ  ತರಂಗಗಳು ಮೊಳಕೆಯೊಡೆಯುವ ಮನಸ್ಸು ಅದರ  ವಾಸ ಸ್ಥಾನ. ಅರಿವಿನ ಚಿಗುರೊಡೆಯುವುದೇ ಅಲ್ಲಿ. ಅಲ್ಲಿಂದ ದೇಹದ ನರನಾಡಿಗಳು - ಪಂಚೇಂದ್ರಿಯಗಳ ಮೂಲಕ ನಿಯಂತ್ರಣ ಸಾಧಿಸಿ ಚಲನೆಯ ರೂಪ ಹೊಂದಿ ಪ್ರಕೃತಿಯೆಡೆಗೆ ಸಾಗುತ್ತದೆ. ಪ್ರಕೃತಿಯೊಂದಿಗೆ ಸರಸ ಸಲ್ಲಾಪ ವಿರಸ ಘರ್ಷಣೆ ಸಮನ್ವಯ ಹೊಂದಾಣಿಕೆ ಮೂಲಕ ಹರಿದಾಡುತ್ತದೆ. ಕೊನೆಗೆ ಜೀವ ಸಾಯುತ್ತದೆ.

ಈ ಸ್ವಾತಂತ್ರ್ಯ ಮನುಷ್ಯ ಹೊರತುಪಡಿಸಿ ಬಹುತೇಕ ಎಲ್ಲಾ ಜೀವಿಗಳ ಸ್ವಾತಂತ್ರ್ಯವೂ ಕಾಡು ನದಿ ಸಮುದ್ರ ಬೆಟ್ಟ ಗುಡ್ಡ ಮುಂತಾದ ಹೆಸರಿನ ನಿಯಂತ್ರಣದಲ್ಲಿ ಸಿಲುಕಿದೆ. ಅವುಗಳ ಸ್ವಾತಂತ್ರ್ಯ ಸಹ ಮನುಷ್ಯರ ವರ್ತನೆ ಮೇಲೆ ನಿಂತಿದೆ. ಆದರೂ ಒಟ್ಟು ಬದುಕಿನ ಅವಧಿಯಲ್ಲಿ ಮಾನಸಿಕ ನಿಯಂತ್ರಣದ ಆಧಾರದಲ್ಲಿ ಮನುಷ್ಯರಿಗಿಂತ ಹೆಚ್ಚು ಸ್ವಾತಂತ್ರ್ಯ ಅನುಭವಿಸುತ್ತಿವೆ ಎಂದು ನಮ್ಮ ಮಿತಿಯಲ್ಲಿ ಊಹಿಸಬಹುದು. ಸತ್ಯ ಆ ಜೀವಿಗಳಿಗೆ ಮಾತ್ರ ಗೊತ್ತಿರುತ್ತದೆ. ದುರಾದೃಷ್ಟವಶಾತ್ ಅದರ ಭಾವಗಳು ನಮಗೆ ಅರ್ಥವಾಗುವುದು ಕಷ್ಟ.

ಈಗ ಬದುಕಿನ ನಡುವಿನ ಅವಧಿಯಲ್ಲಿ ಮನುಷ್ಯ ಪ್ರಾಣಿಯ ಸ್ವಾತಂತ್ರ್ಯದ ಅರ್ಥ ಹುಡುಕಬೇಕಾಗುತ್ತದೆ. ಆದರೆ ‌2022 ರ ಸಂದರ್ಭದಲ್ಲಿ ಮನುಷ್ಯ ಸ್ವಾತಂತ್ರ್ಯ ಅಲ್ಲಿಯೇ ಉಳಿದಿಲ್ಲ. ಸಂಪೂರ್ಣ ಬದಲಾಗಿ ಸಂಕೀರ್ಣ ಘಟ್ಟ ತಲುಪಿದೆ. ಜಾತಿ, ಧರ್ಮ, ಭಾಷೆ, ಊರು, ರಾಜ್ಯ, ದೇಶ, ಅಪ್ಪ, ಅಮ್ಮ, ಹೆಂಡತಿ, ಮಕ್ಕಳು, ಹಣ, ಅಧಿಕಾರ, ಪ್ರಚಾರ, ಪ್ರಶಸ್ತಿ, ಕಾನೂನು, ಶಿಕ್ಷಣ, ಉದ್ಯೋಗ, ಹೀಗೆ ರಾಶಿ ರಾಶಿ ಅಂಶಗಳು ಅಡಕವಾಗಿರುವಾಗ ದೇಶ ಅಥವಾ ವ್ಯಕ್ತಿಯ ಸ್ವಾತಂತ್ರ್ಯದ ಹುಡುಕಾಟ ತುಂಬಾ ತುಂಬಾ ಜಟಿಲವಾಗಿದೆ ಮತ್ತು ಸಮಗ್ರ ಕಲ್ಪನೆ ಸಿಗುವುದಿಲ್ಲ. ಕೇವಲ ಒಂದು ವಿಚಾರ ಸರಣಿ ಮಂಡಿಸಬಹುದಷ್ಟೇ...

ನಮ್ಮ ದೇಶ, ನಮ್ಮ ರಾಜ್ಯ, ನಮ್ಮ ಕುಟುಂಬ ಮತ್ತು ನಾನು ಈ ನಾಲ್ಕು ಅಂಶಗಳನ್ನು ಇಟ್ಟುಕೊಂಡು ಭಾರತದಲ್ಲಿ ಸ್ವಾತಂತ್ರ್ಯದ ಅರ್ಥ ಹುಡಕಬೇಕಾಗಿದೆ. ಹಾಗೆ ಯೋಚಿಸಿದಾಗ ನಿಜವಾದ ಸ್ವಾಭಾವಿಕ ಸ್ವಾತಂತ್ರ್ಯ ಎಂಬುದು ಅಸ್ತಿತ್ವಸಲ್ಲೇ ಇಲ್ಲ. ಈಗ ಇರುವುದು ಅನೇಕ ಮಿತಿಗಳಿಗೆ ಒಳಪಟ್ಟ ಒಂದು ಕೃತಕ ಸ್ವಾತಂತ್ರ್ಯ ಮಾತ್ರ.

1947 ರಲ್ಲಿ ಬ್ರಿಟಿಷರು ಭಾರತಕ್ಕೆ ಅವರ ಆಡಳಿತ ಅಧಿಕಾರ ಮತ್ತು ನೀತಿ ನಿಯಮಗಳಿಂದ ಮುಕ್ತಿ ನೀಡಿ ನಮಗೆ ಸ್ವಾತಂತ್ರ್ಯ ನೀಡಿದರು. ತದನಂತರ ನಾವೇ ಸಂವಿಧಾನ ರಚಿಸಿಕೊಂಡು ನಮ್ಮದೇ ಕಾನೂನು ರೂಪಿಸಿಕೊಂಡೆವು. ಮತ್ತೊಂದು ಅಧಿಕಾರ ಕೇಂದ್ರದ ಸ್ಥಾಪನೆ ಅಷ್ಟೇ. ಮೇಲ್ನೋಟಕ್ಕೆ ಯಾವುದೇ ದೇಶ ಅಂತರರಾಷ್ಟ್ರೀಯವಾಗಿ ಸ್ವತಂತ್ರ ದೇಶ ಹೌದು, ಆದರೆ ತನ್ನ ದಿನನಿತ್ಯದ ಚಟುವಟಿಕೆಗಳಲ್ಲಿ ತನ್ನ ಇಷ್ಟ ಬಂದಂತೆ ಸಂಪೂರ್ಣ ಸ್ವಾತಂತ್ರ್ಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಇತರ ದೇಶಗಳ ಚಟುವಟಿಕೆಗಳ ಮೇಲೆ ಅವಲಂಬಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಹಾಗೆಯೇ ರಾಜ್ಯವೇ ಇರಲಿ, ಕುಟುಂಬವೇ ಇರಲಿ, ವ್ಯಕ್ತಿಯೇ ಇರಲಿ ತನ್ನ ಮೆದುಳು ಮತ್ತು ಮನಸ್ಸಿನ ಗ್ರಹಿಕೆಯ ಸ್ವಚ್ಚಂದ ಸ್ವಾತಂತ್ರ್ಯದ ರೀತಿಯಲ್ಲಿ ತೀರ್ಮಾನ ಕೈಗೊಳ್ಳುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. 

ಏಕೆಂದರೆ ಮನುಷ್ಯ ಮೂಲಭೂತವಾಗಿ ಸಂಘ ಜೀವಿ.  ವೈಯಕ್ತಿಕ ನೆಲೆಯಲ್ಲಿ ಕೆಲವು ಮಿತಿಗೆ ಒಳಪಟ್ಟು ಒಂದಷ್ಟು ಸ್ವಾತಂತ್ರ್ಯ ಅನುಭವಿಸಬಹುದೇ ಹೊರತು ಸಂಪೂರ್ಣ ಪ್ರಾಕೃತಿಕ ಸ್ವಾತಂತ್ರ್ಯ ಸಿಗುವುದೇ ಇಲ್ಲ. ಉದಾಹರಣೆಗೆ ನಾನು ಪ್ರಕೃತಿಯ ಶಿಶು. ಹುಟ್ಟಿನಿಂದ ಬೆತ್ತಲೆ. ಆದ್ದರಿಂದ ಸಹಜವಾಗಿ ನಾನು ಯಾವುದೇ ಉಡುಗೆ ತೊಡುಗೆ ಧರಿಸುವುದಿಲ್ಲ. ಅದು ನನ್ನ ಸ್ವಾತಂತ್ರ್ಯಕ್ಕೆ ಅಡ್ಡಿ ಎಂದು ಕೊಂಡರೆ ಈಗಿನ ಸದ್ಯದ ಪರಿಸ್ಥಿತಿಯಲ್ಲಿ ವಿಶ್ವದ ಯಾವುದೇ ಭಾಗದಲ್ಲಿ ಅದಕ್ಕೆ ಅವಕಾಶ ಇಲ್ಲ. ಕೆಲವು ದೇಶಗಳಲ್ಲಿ ಗಲ್ಲು ಶಿಕ್ಷೆ ವಿಧಿಸಿದರೆ ನಮ್ಮ ದೇಶದಲ್ಲಿ ಅಶ್ಲೀಲ ಎಂದು ಪರಿಗಣಿಸಿ ಜೈಲಿಗೆ ಅಥವಾ ಹುಚ್ಚಾಸ್ಪತ್ರೆಗೆ ಸೇರಿಸುತ್ತಾರೆ.

ಒಟ್ಟಾರೆ ಸ್ವಾತಂತ್ರ್ಯ ಎಂಬುದು ಮೇಲೆ ಹೇಳಿದ ಎಲ್ಲಾ ಅಂಶಗಳನ್ನು ಒಳಗೊಂಡ ಮತ್ತು ಬಹಳಷ್ಟು ಮಿತಿಗೆ ಒಳಪಟ್ಟ ಒಂದು ಬದುಕಿನ ಕ್ರಮ ಅಥವಾ ಜೀವನಶೈಲಿ. ಅದು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಕೊನೆಯದಾಗಿ ಸ್ವಾತಂತ್ರ್ಯ ಎಂಬ ಅನುಭವ ಆಧುನಿಕ ಕಾಲದಲ್ಲಿ  ಅದರ ಮೂಲ ಆಶಯದಿಂದ ದೂರವಾಗಿ ಕೇವಲ ಕಾಲ್ಪನಿಕ ಭ್ರಮೆಯಾಗಿ ರೂಪಾಂತರ ಹೊಂದಿದ ಸ್ಥಿತಿಯಲ್ಲಿ ನಾವಿದ್ದೇವೆ. ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ವಾತಂತ್ರ್ಯದ ಅರ್ಥವನ್ನು ಮತ್ತಷ್ಟು ಹುಡುಕುತ್ತಾ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ