ಸ್ವಾತಂತ್ರ್ಯ ದಿನಾಚರಣೆಯ ಕವನಗಳು

ಸ್ವಾತಂತ್ರ್ಯ ದಿನಾಚರಣೆಯ ಕವನಗಳು

ಕವನ

ಸ್ವಾತಂತ್ರ್ಯ

ಸ್ವಾತಂತ್ರ್ಯ ಸಿಕ್ಕಿತು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು

ಆಂಗ್ಲರ ದಾಸ್ಯದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು

 

ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಮೋಸಕ್ಕೆ ಸಿಗಲಿಲ್ಲ

ಮಾತಿಗೆ ಸಿಕ್ಕ ಸ್ವಾತಂತ್ರ್ಯ ಮೌನಕ್ಕೆ ಸಿಗಲಿಲ್ಲ

ಹಣಕ್ಕೆ ಸಿಕ್ಕ ಸ್ವಾತಂತ್ರ್ಯ ಗುಣಕ್ಕೆ ಸಿಗಲಿಲ್ಲ

ಭಾಷೆಗೆ ಸಿಕ್ಕ ಸ್ವಾತಂತ್ರ್ಯ ಭಾಷೆಯ ಬಳಕೆಗೆ ಸಿಗಲಿಲ್ಲ

!!ಸ್ವಾತಂತ್ರ್ಯ ಸಿಕ್ಕಿತು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು!!

 

ಧನಿಕರಿಗೆ ಸಿಕ್ಕ ಸ್ವಾತಂತ್ರ್ಯ ದಲಿತರಿಗೆ ಸಿಗಲಿಲ್ಲ

ಅರಸರಿಗೆ ಸಿಕ್ಕ ಸ್ವಾತಂತ್ರ್ಯ ಪ್ರಜೆಗಳಿಗೆ ಸಿಗಲಿಲ್ಲ

ಕನಸಿಗೆ ಸಿಕ್ಕ ಸ್ವಾತಂತ್ರ್ಯ ನನಸಿಗೆ ಸಿಗಲಿಲ್ಲ

ಮಿಥ್ಯಕ್ಕೆ ಸಿಕ್ಕ ಸ್ವಾತಂತ್ರ್ಯ ಸತ್ಯಕ್ಕೆ ಸಿಗಲಿಲ್ಲ

!!ಸ್ವಾತಂತ್ರ್ಯ ಸಿಕ್ಕಿತು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು!!

 

ಸ್ವಾರ್ಥಕ್ಕೆ ಸಿಕ್ಕ ಸ್ವಾತಂತ್ರ್ಯ ನಿಸ್ವಾರ್ಥಕ್ಕೆ ಸಿಗಲಿಲ್ಲ

ಅನ್ಯಾಯಕ್ಕೆ ಸಿಕ್ಕ ಸ್ವಾತಂತ್ರ್ಯ ನ್ಯಾಯಕ್ಕೆ ಸಿಗಲಿಲ್ಲ

ಹಿಂಸೆಗೆ ಸಿಕ್ಕ ಸ್ವಾತಂತ್ರ್ಯ ಅಹಿಂಸೆಗೆ ಸಿಗಲಿಲ್ಲ

ಅಧರ್ಮಕ್ಕೆ ಸಿಕ್ಕ ಸ್ವಾತಂತ್ರ್ಯ ಧರ್ಮಕ್ಕೆ ಸಿಗಲಿಲ್ಲ

!!ಸ್ವಾತಂತ್ರ್ಯ ಸಿಕ್ಕಿತು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು!!

-ತುಂಬೇನಹಳ್ಳಿ ಕಿರಣ್ ರಾಜು ಎನ್

***

ಸ್ವಾತಂತ್ರ ದಿನಾಚರಣೆ

ಅಭಿಮಾನದಲ್ಲಿ ಪ್ರಗತಿಯ ಚಕ್ರವು ತಿರುಗಿ

ಉಳಿಸಿದೆ ನೋಡಲ್ಲಿ ತನ್ನ ಹೆಗ್ಗುರುತುಗಳ||

 

ಹೆಗಲಿಗೆ ಹೆಗಲಾಣಿಸಿ ನೊಗದಂತೆ ಹೊತ್ತು

ಸ್ವತಂತ್ರವನ್ನು ತಂದಿರುವರು ಸ್ಮರಿಸಿರಿಂದು||

 

ಹೊಂಗಿರಣ ಸೂಸುತ್ತಿದೆ 75 ರ ಹೊಸ್ತಿಲಲಿ

ಭರವಸೆಯ ಬುತ್ತಿ ಗಂಟಿರುವುದು ಎಲ್ಲರಲಿ||

 

ಮಹಮಾರಿ ಜಯಿಸಿ ದೇಶ ಮುನ್ನಡೆಯಲಿ

ವಿಶ್ವಗುರು ತಾನೆಂದೂ ಜಗವೆಲ್ಲಾ ಬೆಳಗಲಿ||

 

ಅವರಿವರು ಎನ್ನದೆ ಎಲ್ಲಾ ನಮ್ಮವರೆಂದು

ಸಾಗುತ್ತಿರಲಿ ಬದುಕು ಏಳ್ಗೆಯನ್ನು ಪಡೆದು||

75 ನೇಯ ಸ್ವಾತಂತ್ರ ದಿನಾಚರಣೆಯ ಶುಭಾಶಯಗಳು.

-ದ್ಯಾವಪ್ಪ. ಎಂ (ಮುಗುಳ್ನಗೆಯ ಮೌನಿ)

ಕಾರವಾರ

***

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್