ಸ್ವಾತಂತ್ರ್ಯ ದಿನಾಚರಣೆಯ ಮರೆಯಲಾಗದ ನೆನಪುಗಳು !

ಸ್ವಾತಂತ್ರ್ಯ ದಿನಾಚರಣೆಯ ಮರೆಯಲಾಗದ ನೆನಪುಗಳು !

ಭಾರತಕ್ಕೆ ಸ್ವಾತಂತ್ರ್ಯ ದೊರೆತು ೭೬ ವರ್ಷಗಳೇ ಕಳೆದುಹೋದವು. ನಂತರದ ದಿನಗಳಲ್ಲಿ ಬಹಳಷ್ಟು ಕ್ಷೇತ್ರಗಳಲ್ಲಿ ನಾವು ಪ್ರಗತಿಯನ್ನು ಸಾಧಿಸಿದ್ದೇವೆ. ಹಲವಾರು ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗಿದ್ದೇವೆ. ನಮ್ಮಲ್ಲಿ ಉತ್ಪಾದನೆಯಾಗುವ ಸಾವಿರಾರು ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತೇವೆ. ಆದರೆ ನಾವಿನ್ನೂ ಹಲವಾರು ವಿಷಯಗಳಲ್ಲಿ ಹಿಂದೆ ಇದ್ದೇವೆ. ಆದರೆ ಭವಿಷ್ಯದಲ್ಲಿ ಅದನ್ನೆಲ್ಲಾ ಸಾಧಿಸುವ ಗುರಿಯನ್ನು ಹೊಂದಿದ್ದೇವೆ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದೇನೆ. ಈ ಸಂದರ್ಭದಲ್ಲಿ ನನ್ನ ನೆನಪಿನಾಳದಲ್ಲಿ ಹುದುಗಿರುವ ಬಾಲ್ಯದ ಸ್ವಾತಂತ್ರ್ಯ ದಿನಾಚರಣೆಯ ಘಟನೆಯೊಂದನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುತ್ತಿದ್ದೇನೆ.

ನಾನಾಗ ೬ ಅಥವಾ ೭ ನೇ ತರಗತಿಯಲ್ಲಿ ಇದ್ದೆ ಎಂದು ನೆನಪು. ನಾನು ವಾಸವಿದ್ದ ಊರು ಮಂಗಳೂರಿನ ಪದವಿನಂಗಡಿಯಲ್ಲಿ ಆಗ ಇನ್ನೂ ಯುವಕರ ಸಂಘ ಸಂಸ್ಥೆಗಳು ಸರಿಯಾಗಿ ಪ್ರಾರಂಭವಾಗಿರಲಿಲ್ಲ. ಆದರೆ ಸ್ವಾತಂತ್ರ್ಯ ದಿನ ಬಂತು ಎಂದೊಡನೆ ಹಲವು ಯುವಕರಲ್ಲಿ ದೇಶ ಭಕ್ತಿಯ ಕಿಚ್ಚು ಜಾಗೃತವಾಗುತ್ತಿತ್ತು. ಸ್ವಾತಂತ್ರ್ಯ ದಿನವನ್ನು ಆಚರಿಸುವುದಕ್ಕಾಗಿ ಊರಿನ ಖಾಲಿ ಜಾಗವನ್ನು ಆಯ್ದುಕೊಂಡು ಅಲ್ಲಿ ಮರದ ಕೋಲುಗಳನ್ನು ಊರಿ ಅದಕ್ಕೆ ಈಂದ್ ಅಥವಾ ಈಚಲು ಮರ ಇಲ್ಲವೇ ಇರೋಳು (ತಾಳೆ ಹಣ್ಣು/ ಐಸ್ ಆಪಲ್) ಮರದ ಗರಿಗಳನ್ನು ತಂದು ಮೇಲ್ಗಡೆ ಹರಡುತ್ತಿದ್ದರು. ಆಗಿನ್ನೂ ಶಾಮಿಯಾನ ಗಾಳಿ ಅಷ್ಟಾಗಿ ಬೀಸಿರಲಿಲ್ಲ(೧೯೮೫-೮೬). ಆ ಸಮಯದಲ್ಲಿ ನಡೆಯುತ್ತಿದ್ದ ಮದುವೆಯ ಮನೆಯಲ್ಲೂ ತೆಂಗಿನ ಗರಿಗಳನ್ನು ಹೆಣೆದು ಮಾಡಿದ ಮುಚ್ಚಿಗೆಯನ್ನೇ ಬಳಸುತ್ತಿದ್ದರು. ತೆಂಗಿನ ಗರಿಗಳಲ್ಲಿ ಬಿಟ್ಟರೆ ಈಚಲು/ಇರೋಳು ಮರದ ಗರಿಗಳು ಬಳಕೆಯಾಗುತ್ತಿದ್ದವು. ತೆಂಗಿನ ಗರಿಗಳಾದರೆ ಹೆಣೆಯಬೇಕಿತ್ತು. ಆದರೆ ತಾಳೆ ಮರದ ಎಲೆಗಳು ಸಾಕಷ್ಟು ಅಗಲವಾಗಿರುವುದರಿಂದ ಅವುಗಳನ್ನು ಹೆಣೆಯುವ ಅಗತ್ಯವಿರುತ್ತಿರಲಿಲ್ಲ. ಅದನ್ನು ಮುಚ್ಚಿಗೆಯಾಗಿ ಉಪಯೋಗಿಸಿದರೆ ಕೆಳಗಡೆ ಬಿಸಿಲೂ ಅಷ್ಟಾಗಿ ನುಸುಳುತ್ತಿರಲಿಲ್ಲ. ಆಗ ಅದೇ ದೊಡ್ದ ಡೆಕೋರೋಶನ್ ಆಗಿತ್ತು.

ಆ ವರ್ಷ ಸ್ವಾತಂತ್ರ್ಯ ದಿನದ ಮುನ್ನಾ ದಿನ ನಾನೂ ನಮ್ಮ ಊರಿನ ಯುವಕರ ಜೊತೆ ತಾಳೆ ಮರದ ಎಲೆಗಳನ್ನು ತರಲು ಉತ್ಸಾಹದಿಂದ ಹೊರಟೆ. ಅಲ್ಲೇ ಸಮೀಪದ ಕಾಡಿನಂತಹ ಜಾಗದಲ್ಲಿ ಹೊಕ್ಕ ಯುವಕರಲ್ಲಿ ಒಬ್ಬ ಮರ ಹತ್ತಿ ಹತ್ತಾರು ಎಲೆಗಳನ್ನು ಕಡಿದು ಹಾಕಿದನು. ನಮ್ಮ ಪೈಕಿ ದೊಡ್ದವರಾಗಿದ್ದವರು ಒಂದು ಇಡೀ ಗರಿಯನ್ನು ಹಿಡಿದುಕೊಂಡರು. ಆದರೆ ನಾನು ಆಗಿನ್ನೂ ಸಣ್ಣ ಬಾಲಕನಾಗಿದ್ದ ಕಾರಣ ನನ್ನ ಜೊತೆ ಇನ್ನೊಬ್ಬ ಹುಡುಗ ಸೇರಿ ನಾವು ಗರಿಯನ್ನು ಹಿಡಿದುಕೊಂಡೆವು. ಹಾಗೆ ಕಾಡಿನ ಮಾರ್ಗದಲ್ಲಿ ನುಸುಳಿಕೊಂಡು ಬರುತ್ತಿರುವಾಗ ಪೋಲೀಸ್ ಜೀಪ್ ನ ಸೈರನ್ ಕೇಳಿಸಿತು. ನಮ್ಮ ಜೊತೆ ಇದ್ದ ಯುವಕರು, ತಾಳೆ ಗರಿಗಳನ್ನು ಕದ್ದದ್ದಕ್ಕೆ ಯಾರೋ ಪೋಲೀಸರಿಗೆ ತಿಳಿಸಿದ್ದಾರೆ, ಅವರು ನಮ್ಮನ್ನೇ ಹುಡುಕಿಕೊಂಡು ಬಂದಿದ್ದಾರೆ ಎಂದು ಮಾತನಾಡಿಕೊಳ್ಳುವುದು ನನ್ನ ಕಿವಿಗೆ ಬಿತ್ತು. ಪೋಲೀಸ್ ಎಂಬ ಹೆಸರು ಕೇಳುತ್ತಲೇ ನನ್ನಲ್ಲಿ ನಡುಕ ಉಂಟಾಗತೊಡಗಿತು. ಮೈಯೆಲ್ಲಾ ಬೆವರಿ, ಹೆದರಿಕೆಯಿಂದ ನಡುಗ ತೊಡಗಿದೆ. ನನ್ನ ಜೊತೆ ಇದ್ದವನು ನನಗಿಂತ ಜಾಸ್ತಿ ಹೆದರಿದ್ದ. ಇನ್ನು ನಮ್ಮನ್ನೆಲ್ಲಾ ಹಿಡಿದುಕೊಂಡು ಹೋಗಿ ಜೈಲಿಗೆ ಹಾಕುತ್ತಾರೆ ಎಂದು ಅನಿಸಿತು. 

ನಮ್ಮ ಜೊತೆ ಇದ್ದ ಯುವಕನೊಬ್ಬ ಎಲ್ಲರೂ ಇದ್ದಲ್ಲೇ ಕುಳಿತುಕೊಳ್ಳಲು ಹೇಳಿದ. ಪರಸ್ಪರ ಮಾತನಾಡಬೇಡಿ ಎಂದು ಆಜ್ಞೆ ಮಾಡಿದ. ನಾನು ಹಾಗೇ ಅಲ್ಲಿಯೇ ಕುಳಿತುಕೊಂಡು ಬಿಟ್ಟೆ. ಹೆದರಿಕೆಯಲ್ಲಿ ಉಚ್ಚೆ ಮಾಡದ್ದು ಒಂದು ಪುಣ್ಯ ಅಷ್ಟೇ. ಐದು-ಹತ್ತು ನಿಮಿಷದ ನಂತರ ಪೋಲೀಸ್ ಸೈರನ್ ಶಬ್ದ ನಮ್ಮಿಂದ ದೂರವಾದಂತೆ ಕೇಳ ತೊಡಗಿತು. ನಮ್ಮಲ್ಲಿದ್ದ ಯುವಕರಲ್ಲಿ ಓರ್ವ ಮೆಲ್ಲನೆ ಎದ್ದು ರಸ್ತೆಯ ಬದಿಯ ತನಕ ಹೋಗಿ ನೋಡಿ ಬಂದ. ಬಂದವನೇ ಹೇಳಿದ “ಪೋಲೀಸ್ ಜೀಪ್ ಹೋಯ್ತು. ನಾವು ಬೇಗ ಹೋಗುವ" ಎಂದು. ನಾವೆಲ್ಲರೂ ಎದ್ದೆವೋ, ಬಿದ್ದೆವೋ ಎಂದು ಗಾಬರಿಯಿಂದ ಓಡೋಡಿ ಹೊರ ಬಂದೆವು. ಆದರೆ ಹಾಗೆ ಬರುವಾಗಲೂ ಹಿಡಿದಿದ್ದ ಎಲೆಯನ್ನು ಮಾತ್ರ ಬಿಡಲಿಲ್ಲ. ಅದನ್ನು ಹಿಡಿದುಕೊಂಡೇ ರಸ್ತೆಗೆ ಬಂದಿದ್ದೆವು. ರಸ್ತೆಯನ್ನು ದಾಟಿ ಈಚೆಗೆ ಬಂದರೆ ಒಂದು ಪುಟ್ಟ ಮೈದಾನ. ಆಗಿನ್ನೂ ಅದರಲ್ಲಿ ಮನೆಗಳ ನಿರ್ಮಾಣವಾಗಿರಲಿಲ್ಲ, ಆದರೆ ಈಗ ಅಲ್ಲಿ ಮೈದಾನ ಇತ್ತು ಎಂದು ಹೇಳಲೂ ಆಗದಂತೆ ಮನೆಗಳು, ಬಹುಮಹಡಿ ಕಟ್ಟಡಗಳ ನಿರ್ಮಾಣವಾಗಿದೆ. 

ಹೀಗೆ ತಂದ ಗರಿಗಳನ್ನು ಆಗಲೇ ಗುಂಡಿ ಮಾಡಿ ಇಟ್ಟಿದ್ದ ಕೋಲಿನ ಮೇಲ್ಗಡೆ ಕಟ್ಟಲಾಯಿತು. ಹಾಗೇ ಬದಿಗಳಲ್ಲೂ ಕಟ್ಟಿ, ಅತಿಥಿಗಳಿಗೆ ಕುಳಿತುಕೊಳ್ಳಲು ಒಂದು ವೇದಿಕೆ ತಯಾರು ಮಾಡಿದೆವು. ಮರುದಿನ ಸ್ವಾತಂತ್ರ್ಯ ದಿನಾಚರಣೆ. ಆ ಸಮಯ ಅಲ್ಲಿಯ ಯುವಕರಿಗೆಲ್ಲಾ ಸ್ಥಳೀಯ ಗಣ್ಯ ವ್ಯಕ್ತಿಗಳೇ ಅತಿಥಿಗಳು. ಆ ವರ್ಷ ಬ್ಯಾಂಕ್ ಉದ್ಯೋಗಿಯಾಗಿದ್ದ ನನ್ನ ತಂದೆ ಮತ್ತು ಸ್ಥಳೀಯ ಗುತ್ತಿಗೆದಾರರೊಬ್ಬರನ್ನು ಅತಿಥಿಯನ್ನಾಗಿ ಕರೆದಿದ್ದರು. ನನ್ನ ತಂದೆಗೆ ಭಾಷಣ ಮಾಡುವುದೆಂದರೆ ಅಲರ್ಜಿ ಮತ್ತು ಅವರು ಈ ಮೊದಲು ಎಂದೂ ಯಾವ ಸಮಾರಂಭದಲ್ಲೂ ಅತಿಥಿಯಾಗಿ ಭಾಗವಹಿಸಿರಲಿಲ್ಲ. ಅವರು ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ ತಮ್ಮ ಚುಟುಕಾದ ಭಾಷಣ (?!)ವನ್ನು ಮುಗಿಸಿದರು. ನಮಗೆಲ್ಲಾ ಚಾಕಲೇಟು ಮತ್ತು ಲಾಡು ನೀಡಿದರು. ಪುಟ್ಟ ಮಕ್ಕಳಾದ ನಮಗೆಲ್ಲಾ ಖುಷಿಯೇ ಖುಷಿ. ನಾವು ತಾಳೆ ಮರದ ಗರಿ ತಂದದ್ದು, ಪೋಲೀಸ್ ಬಂದದ್ದು, ನಾವು ಅಡಗಿಕೊಂಡದ್ದು ಎಲ್ಲಾ ವಿಷಯನ್ನು ನಮ್ಮ ಜೊತೆ ಬಾರದೇ ಇದ್ದ ಗೆಳೆಯರಲ್ಲಿ ಹೇಳಿಕೊಂಡು ನಮ್ಮ ಸಾಹಸವನ್ನು (?) ಕೊಚ್ಚಿಕೊಂಡದ್ದೇ.. 

ಕೆಲವು ದಿನಗಳ ನಂತರ ನಾವು ಅಂದು ಗರಿಗಳನ್ನು ತೆಗೆದುಕೊಂಡು ಬರುವಾಗ ಪೋಲೀಸ್ ಜೀಪ್ ಬಂದದ್ದು ಏಕೆ ಎಂಬ ಸತ್ಯ ಸಂಗತಿ ತಿಳಿಯಿತು. ನಿಜ ಸಂಗತಿ ಏನೆಂದರೆ ಅಂದು ಪೋಲೀಸ್ ಬಂದದ್ದು ಕಳ್ಳನೊಬ್ಬನ ಹುಡುಕಾಟಕ್ಕೆ. ಆತ ನಾವು ಇದ್ದ ಪ್ರದೇಶದ ಸುತ್ತಮುತ್ತಲು ಎಲ್ಲೋ ಅಡಗಿಕೊಂಡಿದ್ದನಂತೆ. ಆದರೆ ಅಂದು ನಾನು ಹೆದರಿಕೊಂಡಿದ್ದು ನನಗಿನ್ನೂ ನೆನಪಿದೆ. ಈ ಕಾರಣದಿಂದ ಪ್ರತೀ ವರ್ಷ ಸ್ವಾತಂತ್ರ್ಯ ದಿನಾಚರಣೆ ಬರುವಾಗ ನನಗೆ ಈ ಘಟನೆಯ ನೆನಪಾಗುತ್ತದೆ. ಆದರೆ ಈ ನನ್ನ ಹುಚ್ಚು ಸಾಹಸದ ವಿಷಯವನ್ನು ಮನೆಯಲ್ಲಿ ಇಲ್ಲಿಯವರೆಗೆ ಹೇಳಲು ಹೋಗಿಲ್ಲ. ಇನ್ನೂ ಕೆಲವು ಘಟನೆಗಳ ನೆನಪು ನನ್ನ ಮನದಾಳದಲ್ಲಿವೆ. ಮುಂದಿನ ದಿನಗಳಲ್ಲಿ ನಿಮ್ಮ ಜೊತೆ ಹಂಚಿಕೊಳ್ಳುವೆ. ಸದ್ಯಕ್ಕೆ ಇಷ್ಟು ಸಾಕು…

ಚಿತ್ರ ಕೃಪೆ: ಅಂತರ್ಜಾಲ ತಾಣ