ಸ್ವಾತಂತ್ರ್ಯ ದೇವಿಯ ಕರುಣೆಯ ಕಗ್ಗ
ಕಳೆದ ಹಲವಾರು ವರ್ಷಗಳಿಂದ ಅಮೇರಿಕದಲ್ಲಿರುವ ಬರಹಗಾರ ಮೈ ಶ್ರೀ ನಟರಾಜ ಅವರು ಬರೆದ ವಿಡಂಬನಾತ್ಮಕ ಕವಿತೆಗಳ ಸಂಗ್ರಹವೇ ‘ಸ್ವಾತಂತ್ರ್ಯ ದೇವಿಯ ಕರುಣೆಯ ಕಗ್ಗ’ ಎಂಬ ಕೃತಿ. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಅಂಕಣಕಾರ, ಲೇಖಕ ಜೋಗಿಯವರು. “ಸರಸಮಯ ಶೈಲಿ, ಲಯಬದ್ಧತೆ, ತುಸು ವ್ಯಂಗ್ಯ ಮತ್ತು ನಿರಾಳ ಕನ್ನಡದ ಈ ಕವಿತೆಗಳು ಕಷ್ಟ ಕೊಡುವುದಿಲ್ಲ. ಕವಿಯ ಸಕಾರಣ ಸಿಟ್ಟನ್ನು ತೋರುವಾಗಲೂ ಈ ಕವಿತೆಗಳು ಗದ್ದಲ ಮಾಡುವುದಿಲ್ಲ. ಅಣಕವಾಡು, ಸಾಂದರ್ಭಿಕ ರಚನೆ, ಪ್ರತಿಕ್ರಿಯೆ - ಹೀಗೆ ಮೂರು ಬಗೆಯ ಪದ್ಯಗಳು ಇಲ್ಲಿವೆ. ಇವು ಅರ್ಥ ಮಾಡಿಕೊಳ್ಳಲು ತಿಣುಕಾಡಬೇಕಾದ ರಚನೆಗಳಲ್ಲ. ಬದಲಾಗಿ ಮನಸ್ಸನ್ನು ಮುದಗೊಳಿಸಿ, ಮುಗುಳ್ನಗು ತುಳುಕಿಸುವಂಥ ಸಜ್ಜನ ಕವಿತೆಗಳು" ಎಂದಿದ್ದಾರೆ ಜೋಗಿ.
ಈ ಕೃತಿಯ ಬಗ್ಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ವಿಕ್ರಮ್ ಹತ್ವಾರ್. ಇವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ಹೀಗಿವೆ... “ಐದಾರು ದಶಕಗಳ ಹಿಂದೆ ಅಮೆರಿಕ ದೇಶಕ್ಕೆ ತಮ್ಮ ಭವಿಷ್ಯವನ್ನು ಅರಸಿಕೊಂಡು ಹೋದವರಲ್ಲಿ ಅಪಾರವಾದ ಉತ್ಸಾಹ, ಭರವಸೆ, ಅಂಜಿಕೆ ಮತ್ತು ಹೆಮ್ಮೆ ಸಹಜವಾಗಿ ಮೂಡಿತ್ತು. ಅಮೆರಿಕಾದಲ್ಲಿ ಪೂರ್ತಿಯಾಗಿ ನೆಲೆ ನಿಂತು ಅದರ ಪೌರತ್ವ ಸ್ವೀಕರಿಸಿ ಅದನ್ನೇ ತನ್ನ ದೇಶವೆಂದು ಘೋಷಿಸಿಕೊಂಡವರು ಹಲವರು. ಕ್ರಮೇಣ ತನ್ನ ಸುತ್ತಲಿನ ವಿದ್ಯಮಾನಗಳನ್ನು ಗಮನಿಸುತ್ತ ಹೋದಂತೆ ತಾನು ಅಂದುಕೊಂಡಿದ್ದಕ್ಕಿಂತ ಬೇರೆಯೇ ಸ್ಥಿತಿಗತಿಗಳ ಅರಿವಾಗತೊಡಗಿತು. ಅಂತಹ ಭ್ರಮನಿರಸನದಿಂದ ಹೊಮ್ಮಿದ ಅನೇಕ ಕವಿತೆಗಳು ಈ ಸಂಕಲನದಲ್ಲಿ ಕಂಡವು.
ಶ್ರೀಯುತ ನಟರಾಜ್ ಅವರು ಅನೇಕ ವರ್ಷಗಳ ಕಾಲ ಅಮೆರಿಕನ್ನರ ಜನಜೀವನ, ಅಲ್ಲಿನ ಭಾರತೀಯರ ಜೀವನಶೈಲಿ, ರಾಜಕೀಯ, ಸಾಮಾಜಿಕ ಪರಿಸ್ಥಿತಿ, ಇತ್ಯಾದಿ ಸಂಗತಿಗಳನ್ನು ಹತ್ತಿರದಿಂದ ನೋಡಿದವರು. ಅವರ ಬಹುತೇಕ ಕವಿತೆಗಳಲ್ಲಿ ಈ ಎಲ್ಲದರ ಅವಲೋಕನ ವ್ಯಕ್ತವಾಗಿದೆ. ಅವರ ಅಮೆರಿಕಾಯಣ ಎನ್ನುವ ಕವಿತೆಯಲ್ಲಿ ಇಡಿಯ ಅಮೆರಿಕದ ಚರಿತ್ರೆಯನ್ನು ಅವಲೋಕಿಸುತ್ತ, ಅಲ್ಲಿನ ಮೂಲನಿವಾಸಿಗಳು, ಅವರ ಮೇಲೆ ನಡೆದ ಸಂಚು, ಅವರ ಹತ್ಯಾಕಾಂಡ, ನಂತರ ಆಫ್ರಿಕಾದ ಮೂಲನಿವಾಸಿಗಳನ್ನು ಅಲ್ಲಿಗೆ ಕರೆತಂದು ಅವರ ಮೇಲೆ ನಡೆಸಿದ ದೌರ್ಜನ್ಯ, ಸ್ತ್ರೀಯರ ಬಗೆಗಿನ ಧೋರಣೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಆ ದೇಶ ಹೊರಳಿಕೊಂಡಿದ್ದು, ಸ್ವಾತಂತ್ಯ್ರ ದೇವಿಯ ಭವ್ಯತೆ, ಎಲ್ಲರನ್ನೂ ಆಕರ್ಷಿಸುವ ಅದರ ಸೆಳೆತ, ಏನೆಲ್ಲ ಹಾದುಬಂದು ಕೊನೆಗೆ ಟ್ರಂಪ್ ಮಹಾಶಯನ ಕೈಯೊಳಗೆ ಸಿಲುಕಿದ್ದರವರೆಗಿನ ಚಿತ್ರಣ ಸಿಗುತ್ತದೆ. ಟ್ರಂಪ್ನ ಧೋರಣೆಗಳನ್ನು ಟೀಕಿಸುವ, ಅಪಹಾಸ್ಯ ಮಾಡುವ, ಸಿಟ್ಟಾಗುವ, ಹೇವರಿಸಿಕೊಳ್ಳುವ ಅನೇಕ ಕವಿತೆಗಳಿವೆ. ಈ ಎಲ್ಲ ಕವಿತೆಗಳು ಕೇವಲ ಒಬ್ಬ ವ್ಯಕ್ತಿಯ ನಿಂದನೆ ಆಗದೆ, ಸರಿದಾರಿಗೆ ಮರಳುವ ಹಂತದಲ್ಲಿರುವ ದೇಶವೊಂದು ಇಂಥವನ ಕೈಯಲ್ಲಿ ಸಿಲುಕಿಬಿಟ್ಟಿತಲ್ಲ ಎನ್ನುವ ವಿಷಾದವನ್ನು ತುಂಬಿಕೊಂಡಿದೆ. ಅದಕ್ಕೇ ಅವರು ಯಾರು ಹಿತವರು ಈ ಮೂವರೊಳಗೆ ಎಂದು ಕೇಳುತ್ತ: ನಿಯಮ ಮುರಿಯುವವರೊ, ಮನೆ ಮುರಿಯುವವರೊ, ಗೋಡೆ ಕಟ್ಟುವವರೊ ಎಂದು ಮಾರ್ಮಿಕವಾಗಿ ಕೇಳುತ್ತಾರೆ. ಮೆಕ್ಸಿಕೊ ಗಡಿಯುದ್ದಕ್ಕು ಗೋಡೆ ಕಟ್ಟಿಸುತ್ತೇನೆ ಎಂದು ಟ್ರಂಪ್ ಘೋಷಿಸಿದ್ದು ಎಲ್ಲರಿಗೂ ತಿಳಿದೇ ಇದೆ.
ಆದರೆ ನಟರಾಜ್ ಅವರು ಒಂದು ಚೋದ್ಯವನ್ನು ಇಲ್ಲಿ ಕಾಣಿಸುತ್ತಾರೆ. ಅದೇನೆಂದರೆ- ಹಾಗೆ ಗೋಡೆ ಕಟ್ಟುವುದಕ್ಕೂ ಮೆಕ್ಸಿಕನ್ ಕಾರ್ಮಿಕರೇ ಬೇಕು ಎನ್ನುವುದು. ಇಂಥ ವ್ಯಂಗ್ಯ ಭಾವ ಅವರು ಅಮೆರಿಕದ ಹೆಮ್ಮೆಯಿಂದ ಆಡುವ ಮಾತುಗಳಲ್ಲು ಕೇಳುತ್ತದೆ. ಗೆದ್ದುಬಿಟ್ಟೆ ಎಂದು ಬೀಗಿದ ಉಮೇದು ಕುಂದಿದ ಮೇಲಿನ ಸ್ವಗತಗಳು ಹೆಚ್ಚಿನ ಕವಿತೆಗಳಲ್ಲಿ ಹಾಸುಹೊಕ್ಕಾಗಿವೆ. `ಆಕೃತಿ’ಯ ದೃಷ್ಟಿಯಿಂದ ಸೊರಗಿವೆ ಅನ್ನಿಸಿದರೂ `ಆಶಯ’ದ ದೃಷ್ಟಿಯಿಂದ ಕೆಲವು ಕವಿತೆಗಳು ತೀವ್ರವಾಗಿವೆ. ಅನೇಕ ಕವಿತೆಗಳು ಕನ್ನಡದ ಬೇರೆ ಬೇರೆ ಪ್ರಸಿದ್ಧ ಕವಿತೆಯ ಜಾಡನ್ನು ಅನುಸರಿಸುತ್ತವೆ. ಅವೆಲ್ಲ ನಟರಾಜ್ ಅವರ ಜಾಡಿನಲ್ಲೇ ದನಿಯಲ್ಲೇ ಒಡಮೂಡಿದ್ದರೆ ಅದರ ಸ್ತರವೇ ಬೇರೆ ಆಗುತ್ತಿತ್ತು.
ಈ ಸಂಕಲನದಲ್ಲಿ ನನಗೆ ತುಂಬ ಇಷ್ಟವಾದ ಮತ್ತು ಬಹುಮಟ್ಟಿಗೆ ಯಶಸ್ವಿಯಾದ ಕವಿತೆ ‘ಸ್ವಾತಾಂತ್ರ್ಯ ದೇವಿಯ ಕರುಣೆಯ ಕಗ್ಗ.’ ಇದು ಬಡವರ ಬಗ್ಗರ ಬವಣೆಯ ಕಗ್ಗ. ಉತ್ತರ ಮತ್ತು ದಕ್ಷಿಣ ಅಮೆರಿಕವನ್ನು ಬೆಸೆಯುವ ಕೊಂಡಿಯಂತಿರುವ ಮೆಕ್ಸಿಕೊ ದೇಶದ ಜನರ ಪಡಿಪಾಟಲುಗಳನ್ನೆಲ್ಲ ವಿವರಿಸುತ್ತದೆ. ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ ಮೆಕ್ಸಿಕೊ ಬಿಟ್ಟು ಓಡಿಹೋಗದೆ ಬೇರೆ ವಿಧಿಯಿಲ್ಲ ಎನ್ನುವಂಥ ಪರಿಸ್ಥಿತಿ. ಹೇಗಾದರು ಮಾಡಿ ಗಡಿ ದಾಟಿ ಅಮೆರಿಕ ಸೇರಬೇಕು. ಅಲ್ಲಿ ಎದುರಾಗುವ ಸವಾಲುಗಳು ವಂಚನೆಗಳು- ಅದನ್ನೆಲ್ಲ ಹಾದು ಬಂದವರ ಗುಂಪಿನಲ್ಲಿ ಎರಡು ಮಕ್ಕಳನ್ನು ಹಿಡಿದು ಕೊಂಡು ವಲಸೆ ಹೊರಟ ಗರ್ಭಿಣಿ ಹೆಂಗಸೊಬ್ಬಳು ಇದ್ದಾಳೆ. ಎದುರಿನಲ್ಲಿ ಸ್ವಾತಂತ್ರ್ಯ ದೇವತೆಯ ಭವ್ಯ ಚಿತ್ರವಿದೆ. ಅವಳ ದಿವ್ಯ ಸಂದೇಶದ ಆಹ್ವಾನವಿದೆ. ಅಂಥ ಪ್ರಭೆಯ ಆ ದೇಶದೊಳಕ್ಕೆ ಸೇರಿಕೊಳ್ಳಲು ಎಲ್ಲರೂ ಕಾತರಿಸಿ ನಿಂತಿದ್ದಾರೆ. ಗಡಿ ದಾಟುವ ನೂಕುನುಗ್ಗಲು ತಳ್ಳಾಟದಲ್ಲಿ ಆ ಎರಡು ಮಕ್ಕಳು ಗಡಿ ದಾಟಿ ಅಮೆರಿಕ ಪ್ರದೇಶದೊಳಕ್ಕೆ ಸೇರಿಕೊಳ್ಳುತ್ತಾರೆ. ಆದರೆ ಆ ಗರ್ಭಿಣಿ ಹೆಂಗಸನ್ನು ಒಬ್ಬ ಕಾವಲುಗಾರ ಸೈನಿಕ ತಡೆಯುತ್ತಾನೆ. ಜನರನ್ನು ತಮ್ಮ ತಾಯ್ನಾಡಿನಿಂದ ಬೇರ್ಪಡಿಸುವ ಅಮೆರಿಕದ ಅವ್ಯಕ್ತ ಸೆಳೆತಕ್ಕೆ, ತಾಯ್ನಾಡಿನ ನಂಟನ್ನು ಕಡಿದುಹಾಕುವ ವ್ಯವಸ್ಥೆಗೆ ಇದೊಂದು ರೂಪಕವಾಗಿದೆ! ಆ ಗರ್ಭಿಣಿ ಹೆಂಗಸು ದಾಟಲು ಯತ್ನಿಸುತ್ತಾಳೆ. ಆ ಚಕಮಕಿಯಲ್ಲಿ ಅವಳು ಅಲ್ಲೇ ಬಿದ್ದು ಮಗುವನ್ನು ಹಡೆಯುತ್ತಾಳೆ. ಆಗ ಮೂಡಿಬಂದ ಸಾಲುಗಳು ಹೀಗಿವೆ:
ವೈದ್ಯನು ಇಲ್ಲದೆ ದಾದಿಯು ಇಲ್ಲದೆ
ಭೂಮಿಯ ಮಡಿಲಲಿ ಶಿಶು ಜನನ
ಗಡಿಯನು ಬಿಡಿಸುವ ರೇಖೆಯನಳಿಸಿತು
ಹರಿಯುವ ರಕ್ತದ ಸಂಚಲನ
ಕಲ್ಪನೆಗೆಟುಕದ ಶಸ್ತ್ರದ ಸೀಳಿಗೆ
ಚಿಮ್ಮುತ ಹುಟ್ಟಿದ ಹೊಸ ಜೀವ
ಅಮೆರಿಕ ದೇಶದ ಪ್ರಜೆಗಳ ಗುಂಪಿಗೆ
ಸೇರಲಿ ಹರಸೋ ಎಲೆ ದೇವ!
ಗಡಿಯ ರೇಖೆಯನ್ನು ತಾಯಿ-ಮಗುವಿನ ರಕ್ತ ಅಳಿಸಿಹಾಕುವ ಈ ದೃಶ್ಯ ತುಂಬ ಪರಿಣಾಮಕಾರಿಯಾಗಿದೆ. ಮತ್ತು ಅಂಥ ಶಕ್ತಿ ಇರುವುದು ತಾಯಿ-ಮಗುವಿನ ರಕ್ತದ ಸಂಚಲನಕ್ಕೆ ಮಾತ್ರ. ಇಲ್ಲಿ ಸಂಚಲನ ಎನ್ನುವ ಶಬ್ದವೂ, ಕೇವಲ ರಕ್ತದ ಹರಿಯುವಿಕೆಯನ್ನಲ್ಲದೆ ಜನರ ಮನಸ್ಸಿನಲ್ಲಿ ಉಂಟಾದ ಸಂಚಲನವನ್ನೂ ಸೂಚಿಸುತ್ತಿದೆ. ಹಾಗಾಗಿ ಆ ಸೈನಿಕನಿಗೂ ಪೆಚ್ಚೆನಿಸುತ್ತದೆ. ತನ್ನ ತಪ್ಪಿನ ಅರಿವಾಗುತ್ತದೆ. ಅಂಥ ಸಂದರ್ಭದಲ್ಲಿ ಹುಟ್ಟಿದ ಮಗು ಅಮೆರಿಕದ ಪ್ರಜೆಗಳ ಗುಂಪಿಗೆ ಸೇರಲಿ ಎನ್ನುವುದು ಆ ತಾಯಿಯ ಪ್ರಾರ್ಥನೆಯೇನೋ ಹೌದು. ಅದರ ಜೊತೆಗೇ ತಾಯಿ ಮಕ್ಕಳನ್ನು ಬೇರ್ಪಡಿಸುವ ಅಮೆರಿಕನ್ನರ ಗುಂಪಿಗೆ ಈ ಮಗು ಸೇರುತ್ತಿದೆ. ಅದರ ಮನಸ್ಸು ಹದಗೆಡದಂತೆ ಹರಸು ಎಲೆ ದೇವ! ಎನ್ನುವ ಪ್ರಾರ್ಥನೆಯಂತೆಯೂ ಕೇಳಿಸುತ್ತದೆ. ನಿಜಕ್ಕೂ ತುಂಬ ಸಶಕ್ತ ಸಾಲುಗಳಿವು.
ನನಗೆ ಇಲ್ಲಿ ನಾಗ ಐತಾಳರು ನೆನಪಾಗುತ್ತಿದ್ದಾರೆ. ಅಮೆರಿಕದ ಕನ್ನಡವನ್ನು ಕನವರಿಸುತ್ತಿದ್ದ ಹಿರಿಯ ಜೀವ ಅವರು. ಅಮೆರಿಕವನ್ನು ತನ್ನ ದೇಶ ಅಂತ ಭಾವಿಸುತ್ತ, ಅದರ ಕುರಿತು ಕೊಂಕನ್ನಾಡದೆ ಕೊನೆಯವರೆಗು ಕನ್ನಡದ ಅಸ್ಮಿತೆಯನ್ನು ಉಳಿಸಿಕೊಂಡವರು ಅವರು. ಅಮೆರಿಕದಲ್ಲಿ ನಟರಾಜ್ ಅವರೂ ಸೇರಿದಂತೆ ಕನ್ನಡದ ಹಲವು ಮನಸ್ಸುಗಳ ಪಾಡಿದು. ಗಡಿಯ ರೇಖೆಯನ್ನು ಅಳಿಸಿಹಾಕುವಂಥ ತಾಯಿ-ಮಗುವಿನ ರಕ್ತದ ಸಂಚಲನ ಅಂಥವರಲ್ಲಿ ಸದಾ ಇರುತ್ತದೆ ಎನ್ನುವುದಕ್ಕೆ ಇದು ಸಾಕ್ಷಿ.”