ಸ್ವಾತಂತ್ರ್ಯ ಮತ್ತು ಸ್ವರಾಜ್ಯ

ಸ್ವಾತಂತ್ರ್ಯ ಮತ್ತು ಸ್ವರಾಜ್ಯ

ಬರಹ

ಸ್ವಾತಂತ್ರ್ಯ ಮತ್ತು ಸ್ವರಾಜ್ಯ

ಹೆಗ್ಗೋಡಿನ 'ನೀನಾಸಂ' ಬಗ್ಗೆ, ಅದು ನಡೆಸುವ ಚಟುವಟಿಕೆಗಳ ಸ್ವರೂಪ ಮತ್ತು ಸಾರ್ಥಕತೆಯ ಬಗ್ಗೆ ಹಲವರ ಅನೇಕ ರೀತಿಯ ಅಭಿಪ್ರಾಯ - ಭಿನ್ನಾಭಿಪ್ರಾಯಗಳಿವೆ. ಆದರೆ, ಭಾರತದ ಈ ಹಳ್ಳಿ ಮೂಲೆಯಲ್ಲಿ ರಾಷ್ಟ್ರದ ಪ್ರಮುಖ ಚಿಂತಕರನೇಕರು ವರ್ಷಕ್ಕೊಮ್ಮೆ ಕರ್ನಾಟಕದ ನೂರಾರು ಎಳೆಯರೊಂದಿಗೆ ಒಂದೇ ಸೂರಿನಡಿ ಕುಳಿತು ವಿಚಾರ ವಿನಿಮಯ ಮಾಡಿಕೊಳ್ಳುವ ಘಟನೆ, ಅದರ ಕೆಲ ಭಾಗಗಳ ಮಟ್ಟಿಗಾದರೂ ನನಗೆ ಹಲವು ಬಾರಿ ರೋಮಾಂಚನ ತಂದಿದೆ. ಈ ಬಾರಿ ಅದು ತನ್ನ ಇಂತಹ ಅನನ್ಯ ವಾರ್ಷಿಕ ಸಾಂಸ್ಕ್ರತಿಕ ಶಿಬಿರ (ಅಕ್ಟೋ.5ರಿಂದ 11ರವರೆಗೆ)ಕ್ಕಾಗಿ 'ಹಿಂದ್ ಸ್ವರಾಜ್'ನ್ನು ಚರ್ಚೆಯ ವಸ್ತುವನ್ನಾಗಿ ಆಯ್ಕೆ ಮಾಡಿಕೊಂಡಿದೆ. ಗಾಂಧಿ ಈ ಕೃತಿಯನ್ನು ಮೊದಲಿಗೆ 1908ರಲ್ಲಿ ಗುಜರಾತಿಯಲ್ಲಿ ಬರೆದರಾದರೂ, ಅದು ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಪ್ರಕಟವಾದದ್ದು 1909ರಲ್ಲಿ. ಅವರ ಸಂಪಾದಕತ್ವದ 'ಇಂಡಿಯನ್ ಒಪಿನಿಯನ್' ಪತ್ರಿಕೆಯಲ್ಲಿ ಧಾರಾವಾಹಿಯಾಗಿ; ಅವರ ಗೆಳೆಯ ಕಲೆನ್ಬಾಕ್ಗೋಸ್ಕರ ಅವರೇ ಮಾಡಿದ ಇಂಗ್ಲಿಷ್ ಭಾಷಾಂತರದಲ್ಲಿ. ಆದರೂ, ಗಾಂಧಿವಾದದ ಬೈಬಲ್ ಎನಿಸಿರುವ ಈ ಕೃತಿಗೆ ಈಗ ನೂರು ವರ್ಷ ತುಂಬುತ್ತಿದೆಯೆಂದು 'ನೀನಾಸಂ' ಇದನ್ನು 'ಮನೋಭೂಮಿಕೆಯಲ್ಲಿ ಸ್ವರಾಜ್ಯ' ಎಂಬ ಶೀರ್ಷಿಕೆಯಡಿ ಚರ್ಚೆಗೆ ಎತ್ತಿಕೊಂಡಿರುವುದು, ಇಂದಿನ ಸಂದರ್ಭದ ರಾಜಕೀಯ ತುರ್ತನ್ನು ಸೂಚಿಸುತ್ತದೆ ಎಂದೇ ನಾನು ಭಾವಿಸಿದ್ದೇನೆ.

ಹಾಗೆ ನೋಡಿದರೆ, ಇತ್ತೀಚಿನವರೆಗೆ ಗಾಂಧಿ ಕೃತಿಗಳಲ್ಲೆಲ್ಲ ಅತ್ಯಂತ ಹೆಚ್ಚು ಔದಾಸೀನ್ಯಕ್ಕೆ ಒಳಗಾಗಿದ್ದಂತೆ ತೋರುತ್ತಿದ್ದ ಈ ಕೃತಿ, ಕಳೆದ ಹತ್ತು - ಹದಿನೈದು ವರ್ಷಗಳಲ್ಲಿ ಇದ್ದಕ್ಕಿದ್ದಂತೆ ಮತ್ತೆ ಮತ್ತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಒಳಗಾಗುತ್ತಿದೆ. ಇಪ್ಪತ್ತನೇ ಶತಮಾನದ ಆರಂಭದ ದಶಕದ ಹೊತ್ತಿಗೆ, ಹಿಂದೂ ಪುರುತ್ಥಾನವಾದಿಗಳು, ಸಾಂಸ್ಕೃತಿಕ ರಾಷ್ಟ್ರೀಯವಾದಿಗಳು ಮತ್ತು ಹಿಂಸಾವಾದಿ ಕ್ರಾಂತಿಕಾರಿಗಳು ಲಂಡನ್ನಲ್ಲಿ ಒಟ್ಟುಗೂಡಿ ಭಾರತದ ಸ್ವಾತಂತ್ರ್ಯವನ್ನು ಆಗಿನ ಕಾಂಗ್ರೆಸ್ನ 'ಸಂವಿಧಾನಾತ್ಮಕ' ಮಾರ್ಗದ ಮೂಲಕ ಪಡೆಯುವ ಪ್ರಯತ್ನಗಳಿಗೆ ಪ್ರತಿಯಾಗಿ, ಹಿಂಸೆಯೂ ಸೇರಿದಂತೆ ತೀವ್ರವಾದಿ ಮಾರ್ಗಗಳ ಮೂಲಕ ಪಡೆಯುವ ಪ್ರಯತ್ನಗಳಿಗೆ ಭೂಮಿಕೆಯನ್ನು ಸಿದ್ಧಪಡಿಸುತ್ತಿದ್ದರು. ಆಗ ಇವರೊಂದಿಗೆ ಸಂಪರ್ಕಕ್ಕೆ ಬಂದ ಗಾಂಧಿ, ಇಂತಹ ಪ್ರಯತ್ನಗಳು ಏಕೆ ನಿಷ್ಪ್ರಯೋಜಕ ಮತ್ತು ಹೇಗೆ ನಿಜವಾದ ಸಾತಂತ್ರ್ಯವನ್ನು ತಂದುಕೊಡಲಾರವು ಎಂದು ದ.ಆಫ್ರಿಕಾದಲ್ಲಿನ ಜನಾಂಗವಾದಿ ಸರ್ಕಾರವನ್ನೆದುರಿಸಿದ ತಮ್ಮ ಅನುಭವಗಳ ಆಧಾರದ ಮೇಲೆ ವಿವರಿಸಿ ಈ ಪುಸ್ತಕ ಬರೆದರು. ಈ ಪುಸ್ತಕವನ್ನು ಅವರು 1908ರಲ್ಲಿ ಇಂಗ್ಲೆಂಡ್ನಿಂದ ದ.ಆಫ್ರಿಕಾಕ್ಕೆ ಸಮುದ್ರಯಾನ ಮಾಡುತ್ತಿದ್ದಾಗ ಎಂತಹ ಅದಮ್ಯ ಹುರುಪಿನಲ್ಲಿ ಬರೆದರೆಂದರೆ, ಅದನ್ನು ಪೂರ್ಣಗೊಳಿಸಲು ಬಲಗೈಗೆ ಆಯಾಸವಾದಾಗ ಎಡಗೈಯನ್ನೂ ಬಳಸಬೇಕಾಯಿತಂತೆ!

ಆದರೆ, ಆಗ ಅವಸರದ ಮತ್ತು ಅಪಕ್ವ ಬರವಣಿಗೆಯೆಂದು ತಮ್ಮ ಗುರು ತಿಲಕರಿಂದಲೇ ತಿರಸ್ಕರಿಸಲ್ಪಟ್ಟಿದ್ದ ಈ ಪುಸ್ತಕ ತಿಲಕರಂತೆಯೇ ಅನೇಕರಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳಿಗೊಳಪಟ್ಟಿದ್ದರೂ, ಗಾಂಧಿ ತಮ್ಮ ಉಸಿರಿನ ಕೊನೆಯವರೆಗೂ ಅದಕ್ಕೆ ಎಷ್ಟು ಕಟಿ ಬದ್ಧರಾಗಿದ್ದರೆಂದರೆ, ಬ್ರಿಟಿಷ್ ಪಾರ್ಲಿಮೆಂಟನ್ನು 'ವೇಶ್ಯೆ' ಎಂದು ಕರೆದ ಶಬ್ದದ ಹೊರತಾಗಿ ಅದರ ಒಂದು ಶಬ್ದವನ್ನೂ ಬದಲಿಸಲಾರೆ ಎಂದು ಸ್ಪಷ್ಟಪಡಿಸಿದ್ದರು. ಈ ತಮ್ಮ ಕೃತಿಯ ಮೂಲ ತಾತ್ವಿಕತೆ ಬಗ್ಗೆ ಗಾಂಧೀಜಿಗೆ ಎಷ್ಟು ದೃಢ ನಂಬಿಕೆ ಇತ್ತೆಂದರೆ, 1945ರಲ್ಲಿ ನೆಹರೂ ವೈಸ್ರಾಯ್ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಸ್ವತಂತ್ರ ಭಾರತದ ಪ್ರಧಾನಮಂತ್ರಿ ಎಂದು ಬಿಂಬಿತವಾಗಿದ್ದಾಗಲೇ ಅವರು 'ಹಿಂದ್ ಸ್ವರಾಜ್' ಕಡೆ ನೆಹರೂ ಅವರ ಗಮನ ಸೆಳೆಯುತ್ತಾರೆ. ಆದರೆ ನೆಹರೂ ಅದನ್ನು, ಜಗತ್ತು ಮಂದಕ್ಕೆ ಹೆಜ್ಜೆ ಹಾಕುತ್ತಿರುವಾಗ ಹಿಂದಕ್ಕೆ ಹೆಜ್ಜೆ ಹಾಕೆನ್ನುವ ಅಪ್ರಸ್ತುತ ಕೃತಿ ಎಂದು ತಿರಸ್ಕರಿಸಿದಾಗ, ಗಾಂಧೀಜಿಯ ಮನಸ್ಸಿನಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸನ್ನು ಒಂದು ರಾಜಕೀಯ ಪಕ್ಷವಾಗಿ ವಿಸರ್ಜಿಸಿ ಅದನ್ನೊಂದು ಸ್ವಯಂಸೇವಾ ಸಂಘಟನೆಯನ್ನಾಗಿ ಪರಿವರ್ತಿಸಬೇಕೆಂಬ ಆಲೋಚನೆ ಹಾದು ಹೋಗುತ್ತದೆ! ನಂತರದ ದಿನಗಳಲ್ಲಿ ಕಾಂಗ್ರೆಸ್‌ನ ರಾಜಕೀಯ ನಾಯಕತ್ವದ ಬಗ್ಗೆ ತಮ್ಮಂತೆಯೇ ಭ್ರಮನಿರಸನಗೊಂಡಿದ್ದ ಮತ್ತು ರಾಷ್ಟ್ರ ವಿಭಜನೆಯ ಕೋಮು ಹಿಂಸಾಚಾರವನ್ನು ತಣಿಸುವ ತಮ್ಮ ಪ್ರಯತ್ನದ ಯಾತ್ರೆಯುದ್ದಕ್ಕೂ ತಮ್ಮೊಡನಿದ್ದ ಕಾಂಗ್ರೆಸ್ ಸೋಶಲಿಸ್ಟ್ ನಾಯಕರಲ್ಲೊಬ್ಬರಾಗಿದ್ದ ಡಾ||ರಾಮಮನೋಹರ ಲೋಹಿಯಾ ಅವರೊಂದಿಗೆ ಈ ಬಗ್ಗೆ ಪ್ರಸ್ತಾಪವನ್ನೂ ಮಾಡುತ್ತಾರೆ. ಆದರೆ ಅದಕ್ಕೆ ಅಂತಿಮ ರೂಪ ಕೊಡುವ ಮುನ್ನವೇ ಗಾಂಧಿ ಹಿಂದೂ ಕೋಮುವಾದಿಯ ಗುಂಡಿಗೆ ಬಲಿಯಾಗುತ್ತಾರೆ.

ಗಾಂಧೀಜಿಗೆ ಇಷ್ಟು ಮುಖ್ಯವೆನಿಸಿದ್ದ ಮತ್ತು ಅದನ್ನು ಅನುಷ್ಠಾನಗೊಳಿಸಬೇಕೆಂದು ಅವರು ಬಯಸಿದ ಸರ್ಕಾರಿ ಗಾಂಧೀವಾದಿಗಳೆಲ್ಲರ (ಇದು ಲೋಹಿಯಾರ ವರ್ಗೀಕರಣ. ಅವರ ಪ್ರಕಾರ ಗಾಂಧೀವಾದಿಗಳ ಇನ್ನೆರಡು ವರ್ಗಗಳೆಂದರೆ, ವಿನೋಬಾ ನೇತೃತ್ವದ ಮಠೀಯ ಗಾಂಧೀವಾದಿಗಳು ಮತ್ತು ಸಮಾಜವಾದದ ಹಾದಿ ಹಿಡಿದ ಬಂಡುಕೋರ ಗಾಂಧೀವಾದಿಗಳು!) ಕಣ್ಣಲ್ಲಿ ಶುದ್ಧ ಅವ್ಯವಾಹಾರಿಕವೆನಿಸಿದ; ಹಾಗಾಗಿ ತಮ್ಮ ರಾಜಕೀಯ ವಾರಸುದಾರಿಕೆಯ ಬಗ್ಗೆಯೇ ಅವರನ್ನು ಪುನರಾಲೋಚನೆಗೆ ಒಡ್ಡಿದ ಈ ಕೃತಿಯಲ್ಲಿ ನಿಜವಾಗಿ ಏನಿದೆ?

'ಇಂಡಿಯನ್ ಒಪಿನಿಯನ್' ಪತ್ರಿಕೆಯ ಸಂಪಾದಕರಾಗಿದ್ದ ಗಾಂಧಿ, ತಾವು ಸಂಪಾದಕರಾಗಿ ಓದುಗರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವ ಧಾಟಿಯಲ್ಲಿ ಬರೆಯಲಾಗಿರುವ ಈ ಪುಸ್ತಕ, ಪತ್ರಿಕೋದ್ಯಮ ಬರವಣಿಗೆಯ ಒಂದು ಅತ್ಯುತ್ತಮ ಮಾದರಿಯಂತಿದೆ. ಅಷ್ಟೇ ಅಲ್ಲ, ತೀವ್ರವಾದಿ ಸ್ವಾತಂತ್ರ್ಯ ಹೋರಾಟಗಾರರ ಪರವಾಗಿ ಪ್ರಶ್ನೆಗಳನ್ನು ತಾವೇ ಹಾಕಿಕೊಳ್ಳುತ್ತಾ; ಅದಕ್ಕೆ ನೀಡಲಾಗುವ ಉತ್ತರಗಳಿಂದ ಅವರಲ್ಲಿ ಏಳಬಹುದಾದ ಸಂಶಯಗಳನ್ನು ಉಪ ಪ್ರಶ್ನೆಗಳ ರೂಪದಲ್ಲಿ ಪ್ರಸ್ತುತಪಡಿಸುತ್ತಾ, ಅವಕ್ಕೂ ಉತ್ತರ ನೀಡುವ ಮೂಲಕ ವಿಚಾರ ವೃತ್ತವೊಂದನ್ನು ಪೂರ್ಣ ಮಾಡುವ ಗಾಂಧಿಯವರ ಈ ಶೈಲಿ, ರಾಜಕೀಯ ಸಂವಾದದ ಅತ್ಯುತ್ತಮ ಮಾದರಿಯೂ ಹೌದು. ಈ ಸಂವಾದದ ಮೂಲಕ ಅವರು ಪಶ್ಚಿಮದಲ್ಲಿ ಆಗ ರೂಪುಗೊಳ್ಳುತ್ತಿದ್ದ ರಾಷ್ಟ್ರ ಕಲ್ಪನೆಯ ಹಿನ್ನೆಲೆಯಲ್ಲಿ ಚಲಾವಣೆಗೆ ಬಂದಿದ್ದ ರಾಷ್ಟ್ರೀಯ ಸ್ವಾತಂತ್ರ್ಯದ ಪರಿಕಲ್ಪನೆಗೆ ಭಾರತೀಯ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು 'ಸ್ವರಾಜ್ಯ' ಎಂಬ ಅರ್ಥ ವಿಸ್ತರಣೆ ಒದಗಿಸಿದರು. ಸ್ವಾತಂತ್ರ್ಯ ಎನ್ನುವುದು ಸಮೂಹವೊಂದು ಹೊರಗಿನಿಂದ ಪಡೆದುಕೊಳ್ಳುವಂತಹುದಾಗಿದ್ದು, ಅದು ಪೂರ್ಣ ಸ್ವಾತಂತ್ರ್ಯವೆನಿಸಿಕೊಳ್ಳುವುದಿಲ್ಲ. ಅದರೊಂದಿಗೆ ವ್ಯಕ್ತಿ ಒಳಗಿಂದ ಸಾಧಿಸಿಕೊಳ್ಳುವ ಸಾತಂತ್ರ್ಯವೂ ಸೇರಿದಾಗ ಮಾತ್ರ ಪೂರ್ಣವಾಗುತ್ತದೆ ಎಂದು ಭಾವಿಸಿದ ಗಾಂದಿ, ಅದನ್ನು 'ಸ್ವರಾಜ್ಯ' ಎಂದು ಕರೆದರು. ಸ್ವಾತಂತ್ರ್ಯ ಎನ್ನುವುದು ಪ್ರಜೆಗಳ ಹಕ್ಕುಗಳನ್ನಷ್ಟೇ ಮೂಲ ಕಾಳಜಿಯನ್ನಾಗಿರಿಸಿಕೊಂಡಿದ್ದರೆ; ಗಾಂಧಿ ರೂಪಿಸಿದ 'ಸ್ವರಾಜ್ಯ' ಪರಿಕಲ್ಪನೆಯು ಕರ್ತವ್ಯ ಪಾಲನೆಯಿಂದಷ್ಟೇ ಹಕ್ಕುಗಳು ದೊರೆಯುವುವು ಎಂದು ಪ್ರತಿಪಾದಿಸುವ ಮೂಲಕ ಸ್ವಾತಂತ್ರ್ಯ ಸ್ವಚ್ಛಂದವಾಗದಂತೆ ತಡೆಯುತ್ತಾ, ಒಂದು ಜವಾಬ್ದಾರಿಯುಳ್ಳ ರಾಷ್ಟ್ರದ ಪರಿಕಲ್ಪನೆಯನ್ನು ಮುಂದಿಡುತ್ತದೆ.

ಪ್ರತಿಯೊಂದು ಜನಸಮುದಾಯಕ್ಕೂ ಒಂದು ಪ್ರತಿಭಾ ವೈಶಿಷ್ಟ್ಯ(Genius)ವಿರುತ್ತದೆ. ಅದೇ ಅವರ ಜೀವಶಕ್ತಿ ಕೂಡ. ಅದನ್ನು ಭಂಗಗೊಳಿಸಿದರೆ, ಅವರ ಎಲ್ಲವನ್ನೂ ಭಂಗಗೊಳಿಸಿದಂತೆಯೇ. ಬ್ರಿಟಿಷ್ ವಸಾಹತುಶಾಹಿ ತನ್ನ ಆಡಳಿತ, ಶಿಕ್ಷಣ ಮತ್ತು ಉದ್ಯೋಗ ನೀತಿಗಳ ಮೂಲಕ ಮಾಡುತ್ತಿರುವುದು ಅದನ್ನೇ. ಹಾಗಾಗಿ ಬ್ರಿಟಿಷ್ ವಸಾಹತುಶಾಹಿಯಿಂದ ಬಿಡುಗಡೆ ಎಂದರೆ ಕೇವಲ ಬ್ರಿಟಿಷ್ ಆಳ್ವಿಕೆಯಿಂದ ಬಿಡುಗಡೆಯಲ್ಲ; ಅದು ನಡೆಸಿರುವ ವಿನಾಶಕಾರಿ ಕಾರ್ಯಾಚರಣೆ ಮತ್ತು ಅದರ ದುಷ್ಪರಿಣಾಮಗಳಿಂದ ಕೂಡ ಬಿಡುಗಡೆ ಆಗಬೇಕು. ಅದರಿಂದ, ನಮ್ಮ ಭವಿಷ್ಯವನ್ನು ನಮ್ಮ ಪ್ರತಿಭಾ ವೈಶಿಷ್ಟ್ಯಗಳ ಸೃಜನಶೀಲ ಅನ್ವಯಗಳಿಂದಲೇ ರೂಪಿಸಿಕೊಳ್ಳುವ ಸಂಕಲ್ಪವೂ ಮೂಡಬೇಕು. ಹಾಗಾಗಿ ಬ್ರಿಟಷರಷ್ಟೇ ಹೋದರೆ ಸಾಲದು; ಬ್ರಿಟಿಷತ್ವವೂ ಹೋಗಬೇಕು. ಇದು ಗಾಂಧಿ ಮಂಡಿಸಿದ 'ಸ್ವರಾಜ್ಯ' ಕಲ್ಪನೆಯ ಮೂಲ ತಾತ್ವಿಕತೆ.

ಈ ಬ್ರಿಟಿಷತ್ವವನ್ನು ಗಾಂಧಿ ಆಗ ಯಾವುದನ್ನು ಆಧುನಿಕ ನಾಗರೀಕತೆ ಎಂದು ಕರೆಯಲಾಗುತ್ತಿತ್ತೋ ಅದರಲ್ಲಿ ಗುರುತಿಸುತ್ತಾರೆ. 'ಹಿಂದೂಸ್ತಾನ ತಿಣುಕುತ್ತಿರುವುದು ಬ್ರಿಟಿಷರ ಭಾರದಿಂದಲ್ಲ, ಆಧುನಿಕ ನಾಗರೀಕತೆಯ ರಾಕ್ಷಸ ಭಾರದಿಂದ' ಎಂಬುದು 'ಹಿಂದ್ ಸ್ವರಾಜ್'ನ ಬೀಜವಾಕ್ಯ. ಆತ್ಮಶಕ್ತಿ ಸಂವರ್ಧನೆಗೆ ಬದಲಾಗಿ ಶರೀರಸುಖ ಸಂವರ್ಧನೆಯನ್ನಷ್ಟೇ ತನ್ನ ಗುರಿಯನ್ನಾಗಿಸಿಕೊಂಡಿದೆ ಎಂದು ಅವರು ಆಧುನಿಕ ನಾಗರೀಕತೆಯನ್ನು ಒಂದು 'ರೋಗ' ಎಂದು ಕರೆಯುತ್ತಾರೆ. ಅವರ ಪ್ರಕಾರ ಆತ್ಮ ನಿಯಂತ್ರಣವಿಲ್ಲದೆ ಯಾವ ರೀತಿಯ ಸ್ವಾತಂತ್ರ್ಯ ಸಂರಕ್ಷಣೆಯೂ ಸಾಧ್ಯವಿಲ್ಲ. ಪ್ರಜೆ ತನ್ನ ಧರ್ಮವೆಂದು ರಾಷ್ಟ್ರ ಕುರಿತ ತನ್ನ ಕರ್ತವ್ಯಗಳನ್ನು ಪಾಲಿಸದ ಹೊರತು, ಅದು ಹಕ್ಕುಗಳ ಹೆಸರಲ್ಲಿ ಬಲಾಢ್ಯರ ಪಾಲಾಗಿ ಎಲ್ಲ ನೆಲೆಗಳ ಸ್ವಾತಂತ್ರ್ಯದ ಹಾನಿಗೆ ಕಾರಣವಾಗುತ್ತದೆಂದು ಗಾಂಧಿ ವಾದಿಸುತ್ತಾರೆ. ಹಾಗಾಗಿ ಆತ್ಮದ (ಅಂದರೆ ಆತ್ಮಸಾಕ್ಷಿಯ) ಪ್ರಜ್ಞೆ ಕಳೆದುಕೊಳ್ಳದಂತಹ ಪ್ರಜೆಗಳನ್ನುಳ್ಳ ರಾಷ್ಟ್ರವನ್ನು ಪಡೆಯುವುದೇ ನಿಜವಾದ ಮತ್ತು ಪರಿಪೂರ್ಣ ಸ್ವಾತಂತ್ರ್ಯವೆಂದು ಅವರು ಅಭಿಪ್ರಾಯಪಡುತ್ತಾರೆ. ಇದನ್ನು ಸತ್ಯ ಮತ್ತು ಅಹಿಂಸೆಗಳ ಮೂಲಕ ಆಳುವವರ ಮತ್ತು ಆಳಿಸಿಕೊಳ್ಳುವವರ ಆತ್ಮಸಾಕ್ಷಿಯನ್ನು ಮುಟ್ಟುವಂತಹ 'ಸತ್ಯಾಗ್ರಹ'ದ ಮೂಲಕ ಮಾತ್ರ ಪಡೆಯಲು ಸಾಧ್ಯ ಎಂಬ ನಂಬಿಕೆಯೂ ಸೇರಿಕೊಂಡು ಗಾಂಧೀಜಿಯ ಸ್ವರಾಜ್ಯದ ಕಲ್ಪನೆ ಪೂರ್ಣಗೊಳ್ಳುತ್ತದೆ.

ಇದು ಸಾಧ್ಯವಾಗುವುದು, ಆಧುನಿಕತೆಯ ಆಕರ್ಷಣೆಗಳಿಗೆ ಸಿಕ್ಕಿ ತನ್ನ ಪ್ರತಿಭಾ ವೈಶಿಷ್ಟ್ಯದ ಬಗ್ಗೆಯೇ ಕೀಳರಿಮೆ ಬೆಳೆಸಿಕೊಂಡಿರುವ - ಆಗ 'ಹಿಂದೂಸ್ತಾನ'ವೆಂದು ಕರೆಯಲ್ಪಡುತ್ತಿದ್ದ - ಭಾರತ, ಈ ಸಂದಿಗ್ಧ ಉಂಟಾದುದೇಕೆಂದು ಯೋಚಿಸಿ ತನ್ನ ಪ್ರತಿಭಾ ವೈಶಿಷ್ಟ್ಯ ಸೃಷ್ಟಿಸಿರುವ ಪರಂಪರೆಯ ದೋಷಗಳನ್ನು ತಿದ್ದಿಕೊಂಡು ಅದರ ಆಧಾರದ ಮೇಲೆ ತನ್ನದೇ ರಾಷ್ಟ್ರವನ್ನು ಪುನಾರಚಿಸಿಕೊಂಡಾಗ ಮಾತ್ರ. ಹಾಗಾಗಿ ಗಾಂಧಿ ಪ್ರತಿಪಾದಿಸಿದ ಸ್ವರಾಜ್ಯ 'ಹಿಂದ್ ಸ್ವರಾಜ್' ಎನಿಸಿಕೊಂಡಿತಷ್ಟೆ. ಇದನ್ನು ಯಾವುದೇ ಕಾರಣಕ್ಕೂ ಹಿಂದೂ ಸ್ವರಾಜ್ಯ ಎಂದು ಗೊಂದಲ ಮಾಡಿಕೊಳ್ಳಬಾರದು! ಏಕೆಂದರೆ, ಆಗ (ಮತ್ತು ಈಗಲೂ) ಹಿಂದೂ ರಾಷ್ಟ್ರೀಯತೆ ಆರ್ಯಸಂಸ್ಕೃತಿ, ಪವಿತ್ರಭೂಮಿ, ಪಿತೃಭೂಮಿ, ಮಾತೃಭೂಮಿ ಇತ್ಯಾದಿ ಪೌರಾಣಿಕ ಪರಿಕಲ್ಪನೆಗಳಿಂದ ಪ್ರೇರಿತವಾದ ಜನಾಂಗವಾದ ಹಾಗೂ ಅನ್ಯಮತ ಅಸಹನೆ (ಹಿಂದೂಗಳಲ್ಲದವರೆಲ್ಲರೂ ಇಲ್ಲಿನ 'ಅತಿಥಿ'ಗಳಷ್ಟೆ!) ಮತ್ತು ಅವಕ್ಕೆ ಪೂರಕವಾಗಿ ರಾಜಕಾರಣದ ಹಿಂದೂಕರಣ ಹಾಗೂ ಹಿಂದೂ ಧರ್ಮದ ಸೇನೀಕರಣಗಳನ್ನು ಪ್ರತಿಪಾದಿಸುತ್ತಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಗಾಂಧಿ ಹಿಂದೂ ಧರ್ಮದ ಸನಾತನ ತಿರುಳೆನಿಸಿದ ಒಬ್ಬೊಬ್ಬನಿಗೂ ಒಂದೊಂದು ಮತ ಎನ್ನುವ ಬಹು ಸಂಸ್ಕೃತಿತ್ವ ಮತ್ತು ನೈಸರ್ಗಿಕ ಧರ್ಮಪಾಲನೆಯನ್ನಾಧರಿಸಿದ ಸಮುದಾಯ ಪ್ರಜ್ಞೆಯ ಹೊಸ ರಾಷ್ಟ್ರೀಯತೆಯನ್ನು ರೂಪಿಸುವ ಪ್ರಯತ್ನದಲ್ಲಿ ತೊಡಗಿದ್ದರು. ಆ ಮೂಲಕ ಸ್ವಾತಂತ್ರ್ಯ ಹೋರಾಟವನ್ನು ಸ್ವರಾಜ್ಯ ಸ್ಥಾಪನೆಯ ಕಾರ್ಯಾಚರಣೆಯನ್ನಾಗಿ ಮತ್ತು ಹಿಂದೂ ಧರ್ಮವನ್ನು ಎಲ್ಲರ - ಪ್ರಜಾಸತ್ತಾತ್ಮಕ - ಧರ್ಮವನ್ನಾಗಿ ಪರಿವರ್ತಿಸುವ ಉದ್ದೇಶವನ್ನೂ ಹೊಂದಿದ್ದರು. ಹಿಂದೂವಾದಿಗಳೆನಿಸಿಕೊಂಡವರಿಗೆ ಹಿಂದುತ್ವವೆನ್ನುವುದು ಹಿಂದೂ ಧರ್ಮದ ರಾಜಕೀಯ ಸ್ವರೂಪವನ್ನಷ್ಟೇ ಸಂರಕ್ಷಿಸಿಕೊಳ್ಳುವ ಸಾಧನವಾಗಿದ್ದರೆ, ಗಾಂಧೀಜಿಗೆ ತಮ್ಮ ರಾಜಕಾರಣ ಹಿಂದೂ ಧರ್ಮದ ಧಾರಣ ಶಕ್ತಿಯನ್ನು ಸಂವರ್ಧಿಸಿಕೊಳ್ಳುವ ಸಾಧನವಾಗಿತ್ತು. ದೇವರು, ದೇವಸ್ಥಾನ, ಜಾತಿ, ಕರ್ಮ, ಸಂಸ್ಕಾರ, ಇತಿಹಾಸ ಇತ್ಯಾದಿಗಳ ಬಗ್ಗೆ ಗಾಂಧೀಜಿಯ ಧೋರಣೆಗಳನ್ನು ಹಿಂದೂವಾದಿಗಳ ಧೋರಣೆಗಳೊಂದಿಗೆ ಹೋಲಿಸಿ ನೋಡಿದರೆ ಇದು ಇನ್ನಷ್ಟು ಸ್ಪಷ್ಟವಾದೀತು.

ಹಾಗಾಗಿಯೇ ಗಾಂಧಿ ಹಿಂದ್ ಸ್ವರಾಜ್ ಸ್ಥಾಪನೆಗಾಗಿ ಮುದ್ರಣ ಯಂತ್ರ, ರೈಲೂ ಸೇರಿದಂತೆ ಎಲ್ಲ ಆಧುನಿಕ ಯಂತ್ರ ಸಾಮಗ್ರಿಗಳ ವಿರುದ್ಧ, ವಕೀಲಿಕೆಯನ್ನಾಧರಿಸಿದ ಆಧುನಿಕ ನ್ಯಾಯ ಪದ್ಧತಿಯ ವಿರುದ್ಧ , ಔಷಧ ಕೈಗಾರಿಕೆಯ ಸಾಮ್ರಾಜ್ಯ ಸ್ಥಾಪಿಸುವ ಆಧುನಿಕ ವೈದ್ಯ ಪದ್ಧತಿಯ ವಿರುದ್ಧ, ಒಂದು ಧರ್ಮದವರ ವಿರುದ್ಧ ಇನ್ನೊಂದು ಧರ್ಮದವರನ್ನು ಎತ್ತಿಕಟ್ಟುವ ಆಧುನಿಕ ಚರಿತ್ರೆಕಾರಿಕೆಯ ವಿರುದ್ಧ ತಮ್ಮ ವಾದಗಳನ್ನು ಮಂಡಿಸಿದರು. ಆಧುನಿಕ ನಾಗರೀಕತೆಯ ತಾತ್ವಿಕ ಹೆಗ್ಗುರುತುಗಳೆನಿಸಿದ್ದ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆಗಳನ್ನು ತಮ್ಮ ಸ್ವರಾಜ್ಯದ ತಾತ್ವಿಕ ಪರಿಕಲ್ಪನೆಗೆ ಪೂರಕವಾಗಿ ಅಳವಡಿಸಿಕೊಂಡಿದ್ದ ಗಾಂಧಿ ಅದೇ ನಾಗರೀಕತೆಯ ಹೆಗ್ಗುರುತಗಳೆನಿಸಿದ್ದ ಯಂತ್ರ, ರೈಲು, ವಕೀಲಿಕೆ, ರಸಾಯನಿಕ ಔಷಧ ಪದ್ಧತಿ ಇತ್ಯಾದಿಗಳನ್ನು ಮಾರಕವೆಂದೇತಕೆ ಪರಿಗಣಿಸಿದರೆಂದು ನಾವು ಚಿಂತಿಸಬೇಕು. ಮನುಷ್ಯ ತನ್ನೊಳಗಿನ ದೈವಿಕತೆಯನ್ನು ಕಂಡುಕೊಳ್ಳುವುದೇ ಆತನ ಬದುಕಿನ ಪರಮ ಗುರಿ ಮತ್ತು ಸಾರ್ಥಕತೆಯಾಗಿದೆ ಮತ್ತು ಅದಕ್ಕೆ ದೇಹವೊಂದು (ಕರ್ಮ) ಮಾಧ್ಯಮವಾಗಿದೆ ಎಂದು ಗಾಂಧಿ ಭಾವಿಸಿದ್ದರು. ಇದಕ್ಕೆ ಅಡಚಣೆ ಉಂಟುಮಾಡುವ ಎಲ್ಲವನ್ನೂ ಅನುಮಾನದಿಂದ ನೋಡುತ್ತಿದ್ದ ಅವರು, ಆಧುನಿಕ ನಾಗರೀಕತೆಯ ಈ ಎಲ್ಲ ಸಾಧನಗಳು ಮನುಷ್ಯನ ದೇಹದ ಆರೋಗ್ಯ ಮತ್ತು ಆತ್ಮದ ಘನತೆಯನ್ನು ಹಾಳುಗೆಡುಹುವ ಮೂಲಕ ಅವನನ್ನು ತನ್ನ ಪರಮ ಗುರಿಯಿಂದ ಚ್ಯುತಿಗೊಳಿಸುವುವೆಂದು ಬಲವಾಗಿ ನಂಬಿದ್ದರು.

ಆದರೆ ಗಾಂಧಿ ಇವುಗಳ ವಿರುದ್ಧ ತಮ್ಮ ಸತ್ಯಾಗ್ರಹದ ಸಾಧನವನ್ನೇಕೆ ಬಳಸಲಿಲ್ಲ ಎಂಬುದನ್ನೂ ನಾವು ಯೋಚಿಸಬೇಕು. ಹಾಗೆ ಯೋಚಿಸಿದಾಗ ಗೊತ್ತಾಗುವುದು, ಗಾಂಧಿ ಇವುಗಳ ವಿರುದ್ಧ ಮಾತನಾಡುತ್ತಿದ್ದುದು ರೂಪಕ ಭಾಷೆಯಲ್ಲಿ ಎಂದು. ಇದನ್ನರಿಯದ ಪ್ರಗತಿಪರರೆನ್ನಿಸಿಕೊಂಡ ಕೆಲವು ಮೂಢರು ಗಾಂಧೀಜಿಯನ್ನು ಯಥಾಸ್ಥಿತಿವಾದಿ, ಪ್ರತಿಗಾಮಿ, ಸನಾತನಿ ಎಂದೆಲ್ಲ ಟೀಕಿಸುವರು. ಆದರೆ ಇಂದು ಜಾಗತೀಕರಣದ ರೂಪ ತಳೆದು ನಮ್ಮೆದುರಿಗೆ ನಿಂತಿರುವ ಆಧುನಿಕ ನಾಗರೀಕತೆ ನಮ್ಮನ್ನು ವ್ಯಕ್ತಿಗಳನ್ನಾಗಿ ಮತ್ತು ಸಮೂಹವನ್ನಾಗಿ ನೈಸರ್ಗಿಕ ಮತ್ತು ನೈತಿಕ ನೆಲೆಗಳಲ್ಲಿ ಎಲ್ಲಿಗೆ ಮತ್ತು ಎಂತಹ ಸಂದಿಗ್ಧಗಳಲ್ಲಿ ತಂದು ನಿಲ್ಲಿಸಿದೆ ಎಂಬುದನ್ನು ಯೋಚಿಸಿದಾಗ ಇಂತಹ ಟೀಕೆಗಳ ಹುಸಿತನದ ಅರಿವಾದೀತು.

ಗಾಂಧಿ ಬಹು ಹಿಂದೆಯೇ ಸ್ಪಷ್ಟಪಡಿಸಿದ್ದರು, 'ನಾನು ಯಂತ್ರ ವಿರೋಧಿಯಲ್ಲ, ಯಂತ್ರ ನಾಗರೀಕತೆಯ ವಿರೋಧಿ'. ವಿಚಾರಗಳಲ್ಲಿ ಆಧುನಿಕರಲ್ಲಿ ಅತ್ಯಾಧುನಿಕರೆನಿಸಿದ್ದ ಗಾಂಧೀಜಿಯ ಈ ಮಾತಿನ ಮರ್ಮವನ್ನರಿಯುವ ಕಾಲವೀಗ ಬಂದಿದೆ. ಹಾಗಾಗಿಯೇ ಇಂದು ಜಗತ್ತಿನಾದ್ಯಂತ 'ಹಿಂದ್ ಸ್ವರಾಜ್' ಬಗ್ಗೆ ಹೊಸ ಕುತೂಹಲ ಹುಟ್ಟಿದೆ. ಅಧ್ಯಯನ, ಚರ್ಚೆ, ಸಂವಾದಗಳು ನಡೆದಿವೆ. ಗಾಂಧಿಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲಾಗುತ್ತಿದೆ. ಆದರೆ, ಗಾಂಧೀಜಿಯನ್ನು ರಾಷ್ರಪಿತನೆಂದು ಕರೆದುಕೊಳ್ಳುತ್ತಿರುವ ನಾವು?