ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾದ ಕಿತ್ತೂರು
ಕಿತ್ತೂರಿನ ಕೊನೆಯ ಕಾಳಗ ಘಟಿಸಿ (1824) 200 ವರ್ಷಗಳು ಗತಿಸಿದರೂ ಕಿತ್ತೂರಿನ ಗತೈತಿಹಾಸ ಸ್ಮೃತಿಪಟಲದಲ್ಲಿದೆ. ಬೆಳಗಾವಿ ಜಿಲ್ಲೆಯ ಹಲವೆಡೆ ಕಿತ್ತೂರ ವೀರರ ಸಮಾಧಿಗಳು, ಸ್ಮಾರಕಗಳು ಇದ್ದು, ಅವು ಕಿತ್ತೂರ ರಾಜ - ರಾಣಿಯರ, ಬಂಟರ ಕ್ಷಾತ್ರತೇಜಸ್ಸನ್ನು ಕನ್ನಡಿಗರ ಮನದಂಗಳದಲ್ಲಿ ಹಚ್ಚಹಸಿರಾಗಿಸಿವೆ. ಕಿತ್ತೂರ ನಾಡವರ ಸ್ವಾತಂತ್ರ್ಯದ ಕಿಚ್ಚನ್ನು ಸ್ವದೇಶಾಭಿಮಾನವನ್ನು ಬೀರುತ್ತಿದೆ. ಹಾಳಾದ ಕಿತ್ತೂರಕೋಟೆ, ಬಿದ್ದುಹೋದ ಅರಮನೆ, ವೈಭವ ಕಳೆದುಕೊಂಡ ಕಲ್ಮಠ - ಚೌಕಿಮಠಗಳು.. ಕಿತ್ತೂರ ನಾಡನ್ನು ಬ್ರಿಟಿಷ್ ದಾಸ್ಯದ ಶೃಂಖಲೆಯಿಂದ ಬಿಡುಗಡೆಗೊಳಿಸಲು ರಕ್ತತರ್ಪಣ ನೀಡಿದ, ತ್ಯಾಗಬಲಿದಾನಗಳ ಗಾಥೆಯನ್ನು ಹೇಳುತ್ತಾ ನಿಂತಿವೆ. ದೊರೆತ ಆಯುಧಗಳು, ಉಡಿಗೆ ತೊಡಿಗೆಗಳು, ಇತರ ವಸ್ತು ಸಾಮಗ್ರಿಗಳು ಕಿತ್ತೂರ ಕತೆಯನ್ನು ಹೇಳುತ್ತಲಿವೆ.
ಬ್ರಿಟಿಷ್ ಸರಕಾರಿ ದಾಖಲೆಗಳು, ಕಿತ್ತೂರ ಸಂಸ್ಥಾನ ಕುರಿತ ಜನಪದ ಸಾಹಿತ್ಯ ಹಾಗೂ ಸ್ಥಳೀಯರಿಂದ ಸಂಗ್ರಹಿಸಿದ ಮಾಹಿತಿ ಇವು ಕಿತ್ತೂರ ಸ್ಮಾರಕ ಆಯುಧ ಅವಶೇಷಗಳ ಬಗೆಗಿನ ಆಕರ ಸಾಮಗ್ರಿ. ಓಡಿ ಸರದಾರ ಗುರುಸಿದ್ಧಪ್ಪ ಕಿತ್ತೂರ ಯುದ್ಧದಲ್ಲಿ ಬಳಸಿದ ಖಡ್ಗ (ಸುಮಾರು ಆರು) ಗಳು ಧರಿಸುತ್ತಿದ್ದ ಚಿಲಕವುಳ್ಳ ನಿಲುವಂಗಿ, ಆಮೆಯ ಗುರಾಣಿಗಳು - ಕಿತ್ತೂರು ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ನೀಡಲಾದುದ್ದು ಇತಿಹಾಸ ಹೇಳುತ್ತದೆ.
ಕಿತ್ತೂರು ಕೋಟೆಯಲ್ಲಿ ಸುಮಾರು ಐದು ಸಾವಿರದಷ್ಟು ಸೈನಿಕರಿದ್ದರೆಂದು ಹೇಳಲಾಗುತ್ತದೆ. ಆದರೆ ಕಿತ್ತೂರ ಕಿಲ್ಲೆಯ ವಸ್ತು ಸಂಗ್ರಹಾಲಯದಲ್ಲಿ ಸೈನಿಕರ ಬೆರಳೆಣಿಕೆಯ ಕತ್ತಿ, ಗುರಾಣಿ, ಹತ್ಯಾರ, ಕೊಡಲಿ, ಢಾಲ, ಡ್ರೆಸ್ಗಳಿವೆ. ಆ ಕಾಲದ ಹಲವು ನಾಣ್ಯಗಳೂ ಇವೆ. ಅರಮನೆಯ ಬಾಗಿಲುಗಳು, ಕಿಟಕಿಗಳು, ಪಾತ್ರೆಗಳು, ಬೀಸುಕಲ್ಲುಗಳೂ ಇವೆ. ಆದರೆ, ಸಂಸ್ಥಾನದ ಶ್ರೀಮಂತಿಕೆಯ ಪ್ರತೀಕವಾದ ಹಾಗೂ ರಾಣಿ ಚೆನ್ನಮ್ಮ ರುದ್ರಮ್ಮರ ಶಿವಭಕ್ತಿಯ ಸಂಕೇತವಾದ ಬಂಗಾರದ ಬಸವಣ್ಣನ ಮೂರ್ತಿ ಎಲ್ಲಿ? ಅಂತೆಯೇ ಬಂಗಾರದ ಗಣಪತಿ ವಿಗ್ರಹ ಎಲ್ಲಿ? ಬ್ರಿಟಿಷರು ಚೆನ್ನಮ್ಮನಿಗೆ ತೊಡಿಸಿದ ಕೈಕೋಳಗಳೆಲ್ಲಿ? ಸಂಗೊಳ್ಳಿ ರಾಯಣ್ಣನ ಕೈ - ಕಾಲುಗಳಿಗೆ ಕಟ್ಟಿದ ಬೇಡಿಗಳೆಲ್ಲಿ? ನಂದಿಹಳ್ಳಿಯ ಬಸವಣ್ಣ ಕಿತ್ತೂರ ಅರಸರ ಕುಲದೇವತೆ. ಈ ಕುಲದೇವರ ಮೂರ್ತಿಯನ್ನು ಸಂಸ್ಥಾನಿಕರು ರಾಜಮುದ್ರೆಯಾಗಿರಿಸಿಕೊಂಡಿದ್ದರು . (ಪ್ರಾಯಶಃ ಅದು ಬಂಗಾರದ್ದೇ) ಅದು ಈಗೆಲ್ಲಿ? ಅರಮನೆಯ ಮರದ ಕಂಬಗಳೆಲ್ಲಿ? ಆಂಗ್ಲ ಚಾಪ್ಲಿನ್ ಕಿತ್ತೂರಿಗೆ ಮುತ್ತಿಗೆ ಹಾಕಿದ್ದರಿಂದ... ಮೋಸದಿಂದ ಸಂಸ್ಥಾನ ಹಾಳಾಯಿತು.
ಅರಮನೆಯಲ್ಲಿಯ ಬೆಳ್ಳಿ, ಬಂಗಾರ, ವಜ್ರವೈಢೂರ್ಯ, ಬಟ್ಟೆಬರೆ.... ಒಟ್ಟಾರೆ ಸಂಪತ್ತೆಲ್ಲ ಲೂಟಿಯಾಯಿತು. ಇನ್ನು ಕಿತ್ತೂರ ಕಾಳಗದ ಕತೆ ಹೇಳುವ ನಿಜವಾದ ಆಯುಧಗಳೆಷ್ಟು? ಅವು ಎಲ್ಲಿವೆ? ಎನ್ನುವ ಪ್ರಶ್ನೆ ಸಹಜವಾದುದು. ಚೆನ್ನಮ್ಮ ಯುದ್ಧ ವೀರಳು. ಯುದ್ಧಕಲೆಯಲ್ಲಿ ಪ್ರವೀಣೆ, ಕುದುರೆ ಏರುವುದು, ಖಡ್ಗ ವರಸೆ, ಬಿಲ್ಲುಬಾಣ ಪ್ರಯೋಗ ಬಾಲ್ಯದಲ್ಲೇ ಕಂಡಿದ್ದಳು. ಹುಲಿ ಬೇಟೆ ಕೂಡ ಆಡಿದವಳು. ಇಂಥ ಶತಶೂರಿ ಚೆನ್ನಮ್ಮ ಬ್ರಿಟಿಷರ ಕೈಸೆರೆಯಾದ ನಂತರ ಅವಳ ಆತ್ಮರಕ್ಷಣೆಗೆ ಇರುವ ಚಿಕ್ಕ ಬೆಲೆಬಾಳುವ ಚೂರಿ ಎಲ್ಲಿ? ಅವಳು ಯುದ್ಧದಲ್ಲಿ ಬಳಸುವ ಅಮೂಲ್ಯ ಖಡ್ಗ ಎಲ್ಲಿ? ಹಾಗೆಯೇ ಚೆನ್ನಮ್ಮನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ ತನ್ನ ಹತ್ತಿರ ಯಾವಾಗಲೂ ಇಟ್ಟುಕೊಂಡಿರುತ್ತಿದ್ದ ಖಡ್ಗ ಎಲ್ಲಿ? ಅವನ ಕೈಯಲ್ಲಿ ಖಡ್ಗ ಇರುವವರೆಗೆ ಬ್ರಿಟಿಷರಿಗೆ ಅವನನ್ನು ಬಂಧಿಸಲಾಗಲಿಲ್ಲ. ಖಡ್ಗ ಬಿಟ್ಟು ಬಾವಿಯಲ್ಲಿ ಸ್ನಾನಕ್ಕಿಳಿದಾಗ ನಮ್ಮವರ ಪಿತೂರಿಯಿಂದ ಬ್ರಿಟಿಷರು ರಾಯಣ್ಣನನ್ನು ಹಿಡಿದರು.
ಚೆನ್ನಮ್ಮ, ರಾಯಣ್ಣರ ಖಡ್ಗ ಗುರಾಣಿಗಳು ಬ್ರಿಟಿಷರಲ್ಲಿವೆಯೋ ! ನಮ್ಮವರ ಜಗುಲಿಯ ಮೇಲೆ ಪೂಜೆಗೊಳ್ಳುತ್ತಿವೆಯೋ ! ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ಕಿತ್ತೂರಿನ ಇನ್ನೋರ್ವ ಬಂಟ ಅಮಟೂರ ಬಾಳಪ್ಪ ಥ್ಯಾಕರೆಯನ್ನೂ ಪಿಸ್ತೂಲಿನಿಂದ ಕೊಂದ ಎನ್ನಲಾಗಿದೆ. ಆ ಪಿಸ್ತೂಲ್ ಎಲ್ಲಿ ? ಬಿಚ್ಚುಗತ್ತಿ ಚೆನ್ನಬಸಪ್ಪ - ಮತ್ತೊಬ್ಬ ಭಂಟ ಅಂಗರಕ್ಷಕ ಈತನ ಬಿಚ್ಚುಗತ್ತಿ ಎಲ್ಲಿ ? ಅಂತೆಯೇ 'ಗಜವೀರ' ನೆಂಬ ಮತ್ತೋರ್ವ ವೀರನ ಕತ್ತಿ ಎಲ್ಲಿ? ಮೈಸೂರಿನ ಹುಲಿ ಟಿಪ್ಪು ಸುಲ್ತಾನ ಖಡ್ಗವನ್ನು ವಿಜಯಮಲ್ಯ ಕೋಟ್ಯಾಂತರ ಹಣ ಕೊಟ್ಟು ವಿದೇಶದಿಂದ ತರುವುದಾದರೆ, ಬ್ರಿಟಿಷರ ವಿರುದ್ಧ ಮೊಟ್ಟ ಮೊದಲ ಸ್ವಾತಂತ್ರ್ಯದ ಕಹಳೆ ಊದಿದ ರಾಣಿಚೆನ್ನಮ್ಮನ ಖಡ್ಗ, ಅವಳ ಭಂಟರ ಖಡ್ಗ - ಪಿಸ್ತೂಲು ಬಿಚ್ಚುಗತ್ತಿಗಳನ್ನು ಏಕೆ ಹುಡುಕಬಾರದು.
ಇತಿಹಾಸಕಾರರು, ಬುದ್ಧಿಜೀವಿಗಳು ಈ ಬಗೆಗೆ ಈವರೆಗೆ ಏಕೆ ಆಲೋಚಿಸಿಲ್ಲ. ಚರ್ಚಿಸಿಲ್ಲ. ಸೈನಿಕರ ಢಾಲು, ಹತಿಯಾರ, ಖಡ್ಗ, ಭಲ್ಲೆ, ಗುರಾಣಿಗಳೆಲ್ಲ ಹೆಚ್ಚಾಗಿ ತಾಮ್ರದಿಂದ ತಯಾರಾದವು. ರಾಜ - ರಾಣಿಯರ ಖಡ್ಗಗಳು ಪಂಚಲೋಹದಿಂದ ತಯಾರಿಸಿದವು. ಕೆಲವು ಚಿನ್ನದ್ದೂ ಇರುವ ಸಾಧ್ಯತೆ ಇದೆ. ರಾಣಿ ರುದ್ರಮ್ಮನ ಪೀತಾಂಬರ, ಚೆನ್ನಮ್ಮ ರಾಣಿಯ ಬೆಲೆಬಾಳುವ ಸೀರೆ, ಚೆನ್ನವ್ವನ ಸೊಸೆ ಈರವ್ವನ ಸೀರೆ (ಬಂಗಾರದ ಎಳೆಗಳಿಂದ ಕೂಡಿದಂತವು) ವಸ್ತು, ಒಡವೆಗಳನ್ನು ಹುಡುಕುವ ಕಡೆಗೆ ಜನಪ್ರತಿನಿಧಿಗಳು - ಸಾರ್ವಜನಿಕರು ಗಮನಹರಿಸಬೇಕಾಗಿದೆ. ಇದನ್ನೆಲ್ಲ ಪತ್ತೆ ಮಾಡಿದರೆ ಕಿತ್ತೂರು ನಾಡಿಗೇ ಗೌರವ, ಸರಕಾರಕ್ಕೆ ಪ್ರತಿಷ್ಠೆ, ಕಿತ್ತೂರು ವೀರರ ಪ್ರತೀಕವೇ ಆದ ಆಯುಧ, ವಸ್ತು, ಒಡವೆ, ಸ್ಮಾರಕ, ಅವಶೇಷಗಳನ್ನು ರಕ್ಷಿಸುವುದು, ಸುಸ್ಥಿತಿಯಲ್ಲಿಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು.
ನಮ್ಮ ಹಿಂದಿನ ವಸ್ತು, ಆಯುಧ, ಸ್ಮಾರಕಗಳು, ಇತಿಹಾಸ ಚರಿತ್ರೆಯ ಬಗೆಗೆ ನಾವಿಂದು ಆಸಕ್ತಿ ತಳೆದಿಲ್ಲ. ಅಭಿಮಾನ ಕಳೆದುಕೊಂಡಿದ್ದೇವೆ. ಅವುಗಳ ಬಗೆಗಿನ ಈ ದಿವ್ಯ ನಿರ್ಲಕ್ಷ್ಯವೇ ನಮ್ಮ ಇತಿಹಾಸ-ಸಂಸ್ಕೃತಿ ವಿನಾಶಕ್ಕೆ ಕಾರಣವಾಗುತ್ತಿದೆ. ಕಿತ್ತೂರು ಸಂಸ್ಥಾನಕ್ಕೆ ಸಂಬಂಧಪಟ್ಟ ಒಂದು ಚಿಕ್ಕ ಕಲ್ಲಿಗೂ ಮಹತ್ವ ಇರುವುದರಿಂದ ರಾಜ - ರಾಣಿಯರ ಯುದ್ಧಾಸ್ತ್ರಗಳು, ಉಡುಪು-ತೊಡಪು, ವಸ್ತು - ಒಡವೆಗಳು , ಸೈನಿಕರ ಆಯುಧಗಳು, ಇತರ ವಸ್ತುಗಳು ಅವಶೇಷಗಳು, ಸ್ಮಾರಕಗಳು ಎಷ್ಟು ದೊರಕುತ್ತಿವೆಯೋ ಅವನ್ನೆಲ್ಲ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ತೋರಿಸುವ ವ್ಯವಸ್ಥೆ ಮಾಡುವ ಜವಾಬ್ದಾರಿ ಸರಕಾರ ಹಾಗೂ ಕಿತ್ತೂರು ಅಭಿಮಾನಿ ನಾಡವರದ್ದು.
ಇದಕ್ಕೆ ಸಂಸ್ಥಾನದ ವಂಶಸ್ಥರು, ಕಾಕತಿ, ತಲ್ಲೂರು, ಮಾಸ್ತಮರಡಿ ದೇಸಾಯಿ ಕುಲಬಾಂಧವರು, ಸಂಸ್ಥಾನಕ್ಕೆ ಸಂಬಂಧಪಟ್ಟ ಇತರ ವರ್ಗದವರೆಲ್ಲರ ಸಹಾಯ - ಸಹಕಾರ ಅವಶ್ಯಕ. ಮೇಲಿನವುಗಳಲ್ಲಿ ಕೆಲವನ್ನಾದರೂ ಹುಡುಕಿ ತೆಗೆದು, ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಟ್ಟರೆ, ವರುಷ ವರುಷವೂ ಕಿತ್ತೂರು ಉತ್ಸವ ಮಾಡುತ್ತಿರುವುದಕ್ಕೆ ಒಂದು ಅರ್ಥ, ಸಾರ್ಥಕತೆ ಪ್ರಾಪ್ತವಾಗುತ್ತದೆ. "ದೇಶದ ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆದ, ಅಪ್ರತಿಮ ದೇಶಾಭಿಮಾನಿಗಳ ತವರೂರು ಕಿತ್ತೂರು. ಇಂದಿನ, ಮುಂದಿನ ಪೀಳಿಗೆಗೆ ಅದೆಷ್ಟು ಸ್ಪೂರ್ತಿ ಸೆಲೆ ಕಿತ್ತೂರು ಕೊಟ್ಟಿದೆ. ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯಾರಿಗೆ ಮರೆಯಲು ಸಾಧ್ಯ ? " ಬನ್ನಿ ಪ್ರವಾಸಕ್ಕೊಮ್ಮೆ ಕಿತ್ತೂರಿಗೆ....
(ಚಿತ್ರಗಳು : ಅಂತರ್ಜಾಲ ಕೃಪೆ)
-ರಮೇಶ ನಾಯ್ಕ, ಉಪ್ಪುಂದ, ಬೈಂದೂರು