ಸ್ವಾತಂತ್ರ್ಯ ಸೇನಾನಿ ‘ಮಾಸ್ಟರ್ ದಾ’ - ಸೂರ್ಯ ಸೇನ್

ಸ್ವಾತಂತ್ರ್ಯ ಸೇನಾನಿ ‘ಮಾಸ್ಟರ್ ದಾ’ - ಸೂರ್ಯ ಸೇನ್

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವಿರಾರು ವೀರ ಯೋಧರು ಪಾಲ್ಗೊಂಡು ಇತಿಹಾಸದ ಪುಟಗಳಲ್ಲಿ ಅಮರರಾಗಿದ್ದಾರೆ. ಆದರೆ ನಾವಿಂದು ನೆನಪಲ್ಲಿ ಇಟ್ಟಿರುವುದು ಕೆಲವೇ ಕೆಲವು ಸ್ವಾತಂತ್ರ್ಯ ವೀರರ ಹೆಸರುಗಳನ್ನು ಮಾತ್ರ. ನಮ್ಮ ಪಠ್ಯ ಪುಸ್ತಕಗಳ ರಚಿತರೂ ಈ ಬಗ್ಗೆ ವಿಶೇಷವಾದ ಗಮನವನ್ನು ನೀಡದಿರುವುದು ನಮಗೆ ತಿಳಿದು ಬರುತ್ತದೆ. ಅಂತಹ ಮರೆತು ಹೋದ ವೀರ ಕ್ರಾಂತಿಕಾರಿಗಳಲ್ಲಿ ‘ಮಾಸ್ಟರ್ ದಾ’ ಚಿತ್ತಗಾಂಗ್ ನ ಶಸ್ತ್ರಾಸ್ತ್ರ ಕ್ರಾಂತಿಯ ಹುಲಿ ಸೂರ್ಯ ಸೇನ್ ಒಬ್ಬರು. ಇವರ ಹೆಸರು ಕೇಳುತ್ತಲೇ ಬ್ರಿಟೀಷರಲ್ಲಿ ಭಯ ಎದ್ದು ಕಾಣುತ್ತಿತ್ತು. ಬನ್ನಿ, ಸೂರ್ಯ ಸೇನ್ ಇವರನ್ನು ನೆನಪು ಮಾಡಿಕೊಳ್ಳುವ...   

ಸೂರ್ಯ ಸೇನ ಇವರು ಹುಟ್ಟಿದ್ದು ಮಾರ್ಚ್ ೨೨, ೧೮೯೪ರಲ್ಲಿ ಆಗಿನ ಅವಿಭಜಿತ ಬಂಗಾಳದ ಚಿತ್ತಗಾಂಗ್ (ಪ್ರಸ್ತುತ ಬಾಂಗ್ಲಾದೇಶದಲ್ಲಿದೆ) ಎಂಬ ಜಿಲ್ಲೆಯ ನೌಪಾರಾ ಎಂಬ ಗ್ರಾಮದಲ್ಲಿ. ಇವರ ತಂದೆ ರಾಮನಿರಂಜನ್ ಸೇನ್ ಓರ್ವ ಶಿಕ್ಷಕರಾಗಿದ್ದರು. ಇವರ ತಾಯಿಯ ಹೆಸರು ಶೈಲಾ ಬಾಲಾ ದೇವಿ. ಸೂರ್ಯ ಸೇನ್ ಅಥವಾ ಸುರ್ಜ್ಯ ಸೇನ್ ಎಂದು ಕರೆಯಲ್ಪಡುತ್ತಿದ್ದ ಇವರು ಬಾಲ್ಯದಿಂದಲೇ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ಬೆಳೆದಿದ್ದರು. ಶಾಲಾ, ಕಾಲೇಜು ದಿನಗಳಲ್ಲಿ ಇವರು ಉತ್ತಮ ವಾಗ್ಮಿ ಹಾಗೂ ಸಂಘಟಕ ಎಂದು ಹೆಸರುವಾಸಿಯಾಗಿದ್ದರು. ಈ ಉದಾತ್ತ ಗುಣಗಳು ಇವರನ್ನು ಬಹುಬೇಗನೇ ಸ್ವಾತಂತ್ರ್ಯ ಸಂಗ್ರಾಮದ ಕಡೆಗೆ ಸೆಳೆದವು. 

೧೯೧೬ರಲ್ಲಿ ಸೂರ್ಯ ಸೇನ್ ಬೆಹ್ರಾಂಪುರದ ಕಾಲೇಜಿನಲ್ಲಿ ಬಿ.ಎ. ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ತಮ್ಮ ಉಪನ್ಯಾಸಕರಿಂದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾಹಿತಿ ಪಡೆದುಕೊಂಡು, ಅದರಿಂದ ಪ್ರಭಾವಿತರಾದರು. ಭಾರತಕ್ಕೆ ಸ್ವಾತಂತ್ರ್ಯ ದೊರೆಯಬೇಕಾದರೆ ಕ್ರಾಂತಿಕಾರಕ ಮಾರ್ಗದಿಂದ ಮಾತ್ರ ಸಾಧ್ಯ ಎಂದು ನಂಬಿದ್ದ ಸೂರ್ಯ ಸೇನ್ ಆ ಕುರಿತಾಗಿ ಬಹಳ ಪ್ರಯತ್ನ ಪಟ್ಟರು. ಅನುಶೀಲನ್ ಸಮಿತಿಯ ತತ್ವಗಳಿಂದ ಪ್ರಭಾವೀತರಾದರು. ೧೯೧೮ರಲ್ಲಿ ಭಾರತೀಯ ರಾಷ್ಟೀಯ ಕಾಂಗ್ರೆಸ್ ನ ಚಿತ್ತಗಾಂಗ್ ನ ಶಾಖೆಯ ಅಧ್ಯಕ್ಷರಾದರು. ಅದೇ ವರ್ಷ ಅವರು ನಂದನಕನನ್ ನ ನ್ಯಾಷನಲ್ ಶಾಲೆಯಲ್ಲಿ ಗಣಿತದ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿಕೊಂಡರು. ಇವರು ಅಧ್ಯಾಪಕರಾಗಿದ್ದುದರಿಂದ ಇವರನ್ನು ‘ಮಾಸ್ಟರ್ ದಾ’ (ದಾ ಅಥವಾ ದಾದಾ ಎನ್ನುವುದು ಬಂಗಾಳಿ ಭಾಷೆಯಲ್ಲಿ ಇರುವ ಗೌರವ ಸೂಚಕ) ಎಂದು ಕರೆಯತೊಡಗಿದರು.

ಸೂರ್ಯ ಸೇನರು ಬಹಳ ಉತ್ತಮ ಸಂಘಟಕರೂ, ಉತ್ತಮ ವಾಗ್ಮಿಯೂ, ಬಹಳ ತಾಳ್ಮೆಯುಳ್ಳ ಕೇಳುಗರೂ ಆಗಿದ್ದರು. ಬಹಳಷ್ಟು ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಅಧ್ಯಾಪಕರಾಗಿದ್ದರು. ೧೯೧೯ರ ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ಸುದ್ಧಿ ತಿಳಿದ ಸೂರ್ಯ ಸೇನ್ ಅವರ ನೆತ್ತರು ಕುದಿಯತೊಡಗಿತು. ಪಂಜಾಬ್, ಉತ್ತರ ಪ್ರದೇಶ, ಬಿಹಾರ ಹಾಗೂ ಬಂಗಾಳದಲ್ಲಿ ಆಗಲೇ ಪ್ರತಿಭಟನೆಯ ಕಾವು ಜೋರಾಗತೊಡಗಿತು. ಬ್ರಿಟೀಷರಿಗೆ ತಕ್ಕ ಉತ್ತರ ನೀಡಬೇಕಾದಲ್ಲಿ ನಮ್ಮ ಬಳಿಯೂ ಶಸ್ತ್ರಾಸ್ತ್ರಗಳು ಇರಬೇಕು ಎಂಬ ಸತ್ಯವನ್ನು ಸೂರ್ಯ ಸೇನ್ ಬಹುಬೇಗನೇ ಅರ್ಥ ಮಾಡಿಕೊಂಡರು. ಅಸಹಕಾರ ಚಳುವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡರು. ಈ ಕಾರಣದಿಂದ ಇವರನ್ನು ೧೯೨೬ರಂದು ಬಂಧಿಸಿ ೧೯೨೮ರವರೆಗೆ ಸೆರೆಮನೆಯಲ್ಲಿ ಇಡಲಾಗಿತ್ತು. 

ಶಸ್ತ್ರಾಸ್ತ್ರವನ್ನು ಸಂಗ್ರಹಿಸುವುದಕ್ಕಾಗಿ ೧೯೩೦ರ ಎಪ್ರಿಲ್ ೧೮ರಂದು ಸೂರ್ಯ ಸೇನ್ ಚಿತ್ತಗಾಂಗ್ ಶಸ್ತ್ರಾಗಾರದಲ್ಲಿದ್ದ ಪೋಲೀಸ್ ಮತ್ತು ಸಹಾಯಕ ಪಡೆಗಳ ಶಸ್ತ್ರಾಸ್ತ್ರಗಳನ್ನು ಅಪಹರಿಸುವ ತಂತ್ರವನ್ನು ರೂಪಿಸುತ್ತಾರೆ. ಇವರ ನೇತೃತ್ವದಲ್ಲಿ ನೂರಾರು ಕ್ರಾಂತಿಕಾರಿಗಳು ಈ ಲೂಟಿಯಲ್ಲಿ ಭಾಗವಹಿಸಿದ್ದರು. ಶಸ್ತ್ರಾಸ್ತ್ರಗಳ ಅಪಹರಣದ ಜೊತೆಗೆ ಅಲ್ಲಿನ ದೂರವಾಣಿ, ಟೆಲಿಗ್ರಾಂ ಮತ್ತು ರೈಲ್ವೇ ಹಳಿಗಳನ್ನು ಹಾಳು ಮಾಡುವುದು ಇವರ ಉದ್ಡೇಶವಾಗಿತ್ತು. ಇವರ ಈ ದಾಳಿ ಪೂರ್ಣವಾಗಿ ಯಶಸ್ಸು ಕಾಣದೇ ಹೋದರೂ ಭಾಗಶಃ ಯಶಸ್ವಿಯಾಯಿತು. ಇವರಿಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ದೊರೆತರೂ ಮದ್ದು ಗುಂಡುಗಳು ಸಿಗಲಿಲ್ಲ. ದಾಳಿಯ ಬಳಿಕ ಶಸ್ತ್ರಾಗಾರದಲ್ಲಿ ಭಾರತೀಯ ಧ್ವಜವನ್ನು ಹಾರಿಸಿದ ಕೀರ್ತಿ ಸೂರ್ಯ ಸೇನರದ್ದು. ಇವರ ಈ ದಾಳಿಯು ಬ್ರಿಟೀಷರಲ್ಲಿ ನಡುಕವುಂಟು ಮಾಡಿತು. ಕೂಡಲೇ ಎಚ್ಚೆತ್ತ ಬ್ರಿಟೀಷ್ ಆಡಳಿತ ದಾಳಿಯಲ್ಲಿ ಪಾಲ್ಗೊಂಡ ಬಹುತೇಕ ಕ್ರಾಂತಿಕಾರಿಗಳನ್ನು ಬಂಧಿಸಿ ಅವರಿಗೆಲ್ಲಾ ಗಲ್ಲು ಶಿಕ್ಷೆ ವಿಧಿಸಲು ಪ್ರಾರಂಭಿಸಿದರು. 

ಸೂರ್ಯ ಸೇನರು ಬ್ರಿಟೀಷರ ಬಂಧನದಿಂದ ತಪ್ಪಿಸಿಕೊಳ್ಳಲು ತಲೆ ಮರೆಸಿ ತಿರುಗಾಡತೊಡಗಿದರು. ಪ್ರತೀ ದಿನ ತಾವಿದ್ದ ಸ್ಥಳವನ್ನು ಬದಲಾಯಿಸತೊಡಗಿದರು. ಕೂಲಿ ಕೆಲಸದವರಾಗಿ, ಕೃಷಿ ಕಾರ್ಮಿಕರಾಗಿ, ದೇವಾಲಯದ ಅರ್ಚಕರಾಗಿ, ಮನೆ ಕೆಲಸದವರಾಗಿ ಮತ್ತು ಮುಸ್ಲಿಮ್ ವ್ಯಕ್ತಿಯಾಗಿ ಬಹುರೂಪಗಳನ್ನು ಧರಿಸಿ ತಪ್ಪಿಸಿಕೊಳ್ಳುತ್ತಿದ್ದರು. 

ಆದರೆ ಒಮ್ಮೆ ಸೂರ್ಯ ಸೇನ್ ತಮ್ಮ ಸ್ನೇಹಿತರ ಮನೆಯಲ್ಲಿ ತಲೆಮರೆಸಿಕೊಂಡಿರುವಾಗ ಅವರ ದೂರದ  ಸಂಬಂಧಿಯಾದ ನೇತ್ರ ಸೇನ್ ಎಂಬಾತ ಇವರ ಇರುವಿಕೆಯ ಸುದ್ದಿಯನ್ನು ಬ್ರಿಟೀಷರಿಗೆ ತಿಳಿಸಿದ. ಈ ಕಾರಣದಿಂದಾಗಿ ೧೯೩೩ರ ಫೆಬ್ರವರಿಯಲ್ಲಿ ಸೂರ್ಯ ಸೇನ್ ಎಂಬ ಮಹಾನ್ ಕ್ರಾಂತಿಕಾರಿಯ ಬಂಧನವಾಗುತ್ತದೆ. ಬ್ರಿಟೀಷರಿಂದ ಸಿಗುವ ಬಹುಮಾನ ಲಾಲಸೆಯಿಂದಾಗಿ ದೇಶದ್ರೋಹದ ಕೆಲಸ ಮಾಡಿದ್ದ ನೇತ್ರ ಸೇನ್ ನನ್ನು ಓರ್ವ ಆಜ್ಞಾತ ಕ್ರಾಂತಿಕಾರಿ ಚಾಕುವಿನಿಂದ ಇರಿದು ಕೊಲ್ಲುತ್ತಾನೆ. ನೇತ್ರ ಸೇನನನ್ನು ಕೊಲ್ಲುವಾಗ ಅಲ್ಲೇ ಪ್ರತ್ಯಕ್ಷದರ್ಶಿಯಾಗಿದ್ದ ಆತನ ಪತ್ರಿ ಪೋಲೀಸರಿಗೆ ಆ ಕೊಲೆಗಾರ ಕ್ರಾಂತಿಕಾರಿಯ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ . ಏಕೆಂದರೆ ಆಕೆ ಸೂರ್ಯ ಸೇನರ ಬೆಂಬಲಿಗಳಾಗಿದ್ದಳು. ತನ್ನ ಪತಿ ಮಾಡಿದ ಕಾರ್ಯದ ಬಗ್ಗೆ ಅವಳಿಗೆ ಸಹಮತವಿರಲಿಲ್ಲ. 

ಬಂಧನದ ಸಮಯದಲ್ಲಿ ಸೂರ್ಯ ಸೇನರಿಗೆ ಬಹಳ ಕಠಿಣವಾಗಿ ಶಿಕ್ಷೆ ಹಾಗೂ ಕಿರುಕುಳವನ್ನು ನೀಡಲಾಗುತ್ತದೆ. ಆದರೆ ಅವರು ತಮ್ಮ ಸಹಪಾಠಿಗಳ ಬಗ್ಗೆ ಯಾವುದೇ ಮಾಹಿತಿಯನ್ನು ಪೋಲೀಸರಿಗೆ ನೀಡುವುದಿಲ್ಲ. ಜನವರಿ ೧೨, ೧೯೩೪ರಂದು ಸೂರ್ಯ ಸೇನರಿಗೆ ಗಲ್ಲು ಶಿಕ್ಷೆಯಾಗುತ್ತದೆ. ಅವರ ಜೊತೆ ಮತ್ತೊಬ್ಬ ಕ್ರಾಂತಿಕಾರಿ ತಾರಕೇಶ್ವರ ದಸ್ತಿದಾರರನ್ನೂ ಗಲ್ಲಿಗೇರಿಸಲಾಗುತ್ತದೆ. ಈ ರೀತಿಯಾಗಿ ಭಾರತ ಮಾತೆಯ ಮತ್ತಿಬ್ಬರು ವೀರ ಪುತ್ರರು  ಹುತಾತ್ಮರಾಗುತ್ತಾರೆ.   

ಹೀಗೆ ಹುತಾತ್ಮರಾದ ಅಸಂಖ್ಯಾತ ಕ್ರಾಂತಿಕಾರಿಗಳನ್ನು ನಾವು ಇಂದು ಸ್ಮರಿಸುವುದೇ ಇಲ್ಲ. ನಮ್ಮ ಮಕ್ಕಳಿಗೂ ಈ ಬಗ್ಗೆ ತಿಳಿಸುವುದಿಲ್ಲ. ಇತಿಹಾಸಕಾರರೂ ಇವರ ಬಗ್ಗೆ ಮಾಹಿತಿ ನೀಡುವುದಿಲ್ಲ. ೧೯೩೦ರ ಎಪ್ರಿಲ್ ೧೮ರಂದು ಸೂರ್ಯ ಸೇನರು ತಮ್ಮ ಕ್ರಾಂತಿಕಾರಿ ಸಹಪಾಠಿಗಳಿಗಾಗಿ ಒಂದು ಪತ್ರ ಬರೆಯುತ್ತಾರೆ. ಅದರಲ್ಲಿ ಅವರು ಬರೆಯುತ್ತಾರೆ “ಸಾವು ನನ್ನ ಬಾಗಿಲು ತಟ್ಟುತ್ತಿದೆ, ಆದರೆ ನನ್ನ ಮನಸ್ಸು ದೂರದ ಶಾಶ್ವತ ಸುಖದ ಕಡೆಗೆ ಹಾರುತ್ತಿದೆ. ಇದೊಂದು ಬಹಳ ಹಿತಕರವಾದ ಅನುಭವ. ನಾನು ನನ್ನ ಸಮಾಧಿಯೆಡೆಗೆ ಹೋಗುವಾದ ನಿಮಗೆ ಏನು ಬಿಟ್ಟು ಹೋಗುತ್ತಿದ್ದೇನೆ ಎಂದು ಯೋಚನೆ ಮಾಡುವಾಗ ನನಗೆ ಒಂದೇ ವಿಷಯ ನೆನಪಿಗೆ ಬರುತ್ತದೆ. ಅದುವೇ ನನ್ನ ಕನಸು, ಬಂಗಾರದ ಕನಸು, ಸ್ವತಂತ್ರ ಭಾರತದ ಕನಸು. ಈ ಕನಸನ್ನು ಯಾವತ್ತೂ ಮರೆಯದಿರಿ. ಕೊನೆಗೆ ಒಂದು ಮಾತು ಹೇಳುವೆ - ಎದ್ದೇಳಿ, ನಿರಾಸೆಗೆ ನಿಮ್ಮ ಮನಸ್ಸಿನಲ್ಲಿ ಜಾಗ ನೀಡಬೇಡಿ, ಏಕೆಂದರೆ ಯಶಸ್ಸು ಇನ್ನಷ್ಟೇ ಬರಬೇಕಾಗಿದೆ"

ಚಿತ್ರ ಕೃಪೆ: ಅಂತರ್ಜಾಲ ತಾಣ