ಸ್ವಾತಂತ್ರ್ಯ ಹೋರಾಟಕ್ಕೆ ಹೆಸರಾದ ವಿದುರಾಶ್ವತ್ಥ



ಅಶ್ವತ್ಥವೃಕ್ಷ, ನಾಗರಕಲ್ಲುಗಳು ಹಾಗೂ ಪಿನಾಕಿನಿ ನದಿಯಿಂದ ಹೆಸರಾಗಿರುವ ವಿದುರಾಶ್ವತ್ಥ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರ. ವಿಧುರ ಈ ಅಶ್ವತ್ಥ ವೃಕ್ಷ ನೆಟ್ಟನೆಂಬ ಪ್ರತೀತಿ ಇದ್ದು, ಇಲ್ಲಿ ನಾಗರಕಲ್ಲು ಹಾಕಿಸುವ ಹರಕೆ ಬಹುದಿನಗಳಿಂದ ರೂಢಿಯಲ್ಲಿದೆ. ವಿದುರಾಶ್ವತ್ಥ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿಯೂ ಸ್ಥಾನ ಪಡೆದು ಕೊಂಡಿದೆ. ವಿದುರಾಶ್ವತ್ಥದಲ್ಲಿ ನಡೆದ ಧ್ವಜ ಸತ್ಯಾಗ್ರಹದಲ್ಲಿ ಪೊಲೀಸರ ಗುಂಡೇಟಿಗೆ ಹುತಾತ್ಮರಾದ ಘಟನೆ ಇಡೀ ಭಾರತದಲ್ಲಿ ಪ್ರತಿಧ್ವನಿಸಿತ್ತು.
ಮಹಾತ್ಮಗಾಂಧಿ ಅವರೇ ವಿದುರಾಶ್ವತ್ಥ ಹತ್ಯಾಕಾಂಡ ಕುರಿತು ವಿಚಾರಣೆಗೆ ಒತ್ತಾಯಿಸಿದ್ದರು. ಗೋಲಿಬಾರ್ ಆದ ಸ್ಥಳದಲ್ಲಿ ವೀರಸ್ಥಂಭ ನಿರ್ಮಿಸಲಾಗಿದ್ದು, ಈಗ ಅಲ್ಲೊಂದು ವೀರಸೌಧ ನಿಲ್ದಾಣವಾಗಿದೆ. ತಾಲ್ಲೂಕಿನ ಕೇಂದ್ರ ಗೌರಿಬಿದನೂರಿನಿಂದ ವಿದುರಾಶ್ವತ್ಥ 8 ಕಿಲೋಮೀಟರ್ ದೂರದಲ್ಲಿದೆ. ಗೌರಿಬಿದನೂರು ತಾಲ್ಲೂಕಿನ ಎದುರಾಶ್ವತ್ಥ ಗ್ರಾಮ ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಎಂದೇ ಹೆಸರು ಪಡೆದಿದೆ.
1938ರ ಏಪ್ರಿಲ್ 25ರಂದು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಇಲ್ಲಿ 'ಧ್ವಜ ಸತ್ಯಾಗ್ರಹ' ಚಳವಳಿಗಾಗಿ ಸಭೆ ನಡೆಸುತ್ತಿದ್ದರು. ಸಭೆಯನ್ನು ನಿಲ್ಲಿಸಿ ಈ ಸ್ಥಳ ತೊರೆಯುವಂತೆ ಪೊಲೀಸರು ಪದೇ ಪದೇ ಸೂಚಿಸಿದರು. ಸತ್ಯಾಗ್ರಹಿಗಳು ಅದಕ್ಕೆ ಸೊಪ್ಪು ಹಾಕಲಿಲ್ಲ. ಆಗ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಅದು ಫಲಿಸದಿದ್ದಾಗ ಜನರನ್ನು ಚೆದುರಿಸಲು ಗುಂಡು ಹಾರಿಸಿದರು. ಹೋರಾಟಗಾರರಾದ ಇಡಗೂರು ಭೀಮಯ್ಯ, ಚೌಳೂರು ನರಸಪ್ಪ, ಗಜ್ಜನ್ನಗಾರಿ ನರಸಪ್ಪ, ಹನುಮಂತಪ್ಪ, ರಾಯಗೊಂಡನಹಳ್ಳಿ ಮಲ್ಲಯ್ಯ, ನಾಮಾ ಅಶ್ವತ್ಥನಾರಾಯಣಶೆಟ್ಟಿ, ನರಸಪ್ಪ ಮತ್ತು ಮರಳೂರು ಗೌರಮ್ಮ ಸ್ಥಳದಲ್ಲಿಯೇ ಗುಂಡಿಗೆ ಬಲಿಯಾದರು.
ಈ ಘಟನೆಯನ್ನು ವಿದುರಾಶ್ವತ್ಥ ಹತ್ಯಾಕಾಂಡ ಎಂದೇ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ದಾಖಲಾಗಿದೆ. ವಿದುರಾಶ್ವತ್ಥದಲ್ಲಿ ಸತ್ಯಾಗ್ರಹ ನೆನಪಿನ ಸ್ಮಾರಕವಿದೆ. ಈ ಸ್ಮಾರಕ ಇಂದಿಗೂ ದೇಶದ ಸ್ವಾತಂತ್ರ್ಯ ಹೋರಾಟದ ಸಂಕೇತವಾಗಿದೆ. ವಿದುರಾಶ್ವತ್ಥ ನಾಗಾರಾಧನೆಯ ಕ್ಷೇತ್ರವೂ ಹೌದು. ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥ ಪುರಾಣಿಕ, ಚಾರಿತ್ರಿಕ ಹಿನ್ನೆಲೆಯ ಪುಟ್ಟ ಗ್ರಾಮ. ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದೇ ಪ್ರಸಿದ್ಧವಾದ ಊರು. 1938ರ ಏಪ್ರಿಲ್ 25ರಂದು ಇಲ್ಲಿ ನಡೆದ ಅಮಾನವೀಯ ಘಟನೆಯಿಂದಾಗಿ ವಿದುರಾಶ್ವತ್ಥ ಚರಿತ್ರೆಯ ಪುಟಗಳಲ್ಲಿ ಸ್ಥಾನ ಪಡೆದಿದೆ.
ಸ್ವಾತಂತ್ರ್ಯ ಚಳವಳಿ ಉತ್ತುಂಗದಲ್ಲಿದ್ದಾಗ ವಿದುರಾಶ್ವತ್ಥ ಪರಿಸರದಲ್ಲೂ ಚಳವಳಿಯ ಕಾವು ಸಹಜವಾಗಿಯೇ ಪಸರಿಸಿತ್ತು. ಸ್ವಾತಂತ್ರ್ಯ ಪ್ರೇಮಿಗಳ ಗುಂಪೊಂದು ದೇಗುಲಕ್ಕೆ ಸಮೀಪದ ಮೈದಾನದಲ್ಲಿ ಶಾಂತಿಯುತ ಸಭೆ ನಡೆಸುತ್ತಿದ್ದಾಗ ಪೊಲೀಸರು ಹಲವು ಸುತ್ತು ಗುಂಡು ಹಾರಿಸಿದರು. ಈ ದುರ್ಘಟನೆಯಲ್ಲಿ ಕೆಲವು ಸ್ವಾತಂತ್ರ್ಯ ಪ್ರೇಮಿಗಳು ಬಲಿಯಾದರೆ, ಹಲವರು ಗಾಯಗೊಂಡರು. ಪಂಜಾಬ್‌ನ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದರೆ ಸಂಖ್ಯಾ ದೃಷ್ಟಿಯಲ್ಲಿ ವಿದುರಾಶ್ವತ್ಥದ ಮಾರಣಹೋಮ ಸಣ್ಣದು. ಆದರೆ ವ್ಯವಸ್ಥೆಯ ಕ್ರೌರ್ಯ ಹಾಗೂ ಚಳವಳಿಕಾರರ ಸ್ವಾತಂತ್ರ್ಯ ಪ್ರೇಮ ಏಕರೂಪವಾದದ್ದು.
ಮಹಾಭಾರತದ ವಿದುರ ನೆಟ್ಟ ಅಶ್ವತ್ಥ ವೃಕ್ಷದ ಕಾರಣ ಈ ಪ್ರದೇಶಕ್ಕೆ ವಿದುರಾಶ್ವತ್ಥ ಎನ್ನುವ ಹೆಸರು ಎನ್ನುತ್ತದೆ ನಾಮಪುರಾಣ. ಒಂದೆಡೆ ಬೀಳುತ್ತ, ಇನ್ನೊಂದೆಡೆ ಚಿಗುರುವ ನೂರಾರು ವರ್ಷ ಪ್ರಾಯದ ಅಶ್ವತ್ಥ ವೃಕ್ಷ ಇಲ್ಲಿದ್ದು, ಆಸ್ತಿಕರ ನಂಬಿಕೆಗಳನ್ನು ಪ್ರಚೋದಿಸುವಂತಿದೆ. ವಿದುರಾಶ್ವತ್ಥದ ಮತ್ತೊಂದು ವಿಶೇಷ ಕಣ್ಣು ಹಾಯಿಸಿದಲ್ಲೆಲ್ಲ ಕಾಣಿಸುವ ನಾಗರಕಲ್ಲುಗಳು. ನಾಗಪೂಜೆಗೆ ಪ್ರಸಿದ್ಧವಾದ ಸ್ಥಳವಿದು. ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಇಲ್ಲಿಗೆ ಬರುವ ಭಕ್ತರು ನಾಗದೇವತೆಯನ್ನು ಪ್ರತಿಷ್ಠಾಪಿಸುತ್ತಾರೆ, ಹಾಲೆರೆದು ಪ್ರಾರ್ಥಿಸುತ್ತಾರೆ. ಹಾಗಾಗಿ ಇಲ್ಲಿ ಸಾವಿರಾರು ನಾಗರಕಲ್ಲುಗಳನ್ನು ಕಾಣಬಹುದು. ಈ ನಾಗ - ನಂಬಿಕೆಗಳ ಕಾರಣದಿಂದಾಗಿ ಕೆಲವು ಕನ್ನಡ ಚಿತ್ರಗಳ ಚಿತ್ರೀಕರಣವೂ ಇಲ್ಲಿ ನಡೆದಿದೆ.
ಸರಳ ವಿವಾಹಗಳಿಗೂ ವಿದುರಾಶ್ವತ್ಥ ಹೆಸರುವಾಸಿ. ಸುತ್ತಮುತ್ತಲ ಊರುಗಳ, ಆರ್ಥಿಕವಾಗಿ ಅನುಕೂಲವಿಲ್ಲದ ಜನರು ಇಲ್ಲಿಗೆ ಬಂದು ದೈವಸನ್ನಿಧಿಯಲ್ಲಿ ವಿವಾಹದ ಸೂತ್ರಕ್ಕೆ ಒಳಗಾಗುವುದುಂಟು. ವಿದುರಾಶ್ವತ್ಥ ಉತ್ತರ ಪಿನಾಕಿನಿ ನದಿ ದಂಡೆಯ ಮೇಲಿದೆ. ನದಿ ಬತ್ತಿ ಯಾವುದೋ ಕಾಲವಾಗಿದೆ. ಉಳಿದಿರುವುದು ಮರಳಿನ ಬಯಲು ಮಾತ್ರ. ನದಿ ದಂಡೆಯುದ್ದಕ್ಕೂ ಹೆಜ್ಜೆ ಹಾಕುತ್ತ, 'ಏ ಗಾಳಿ ಆ ಕಥೆಯನೊರೆದು ಮುಂದಕೆ ತೆರಳು' ಎಂದು ಸಾಗಿದರೆ - ದಿನೇ ದಿನೇ ಸಣ್ಣದಾಗುತ್ತಿರುವ ನದಿಪಾತ್ರದ ಪಳೆಯುಳಿಕೆ ವರ್ತಮಾನದ ಹಲವು ಕಥೆಗಳನ್ನು ಪಿಸುಗುಡುತ್ತದೆ. "ಗೌರಿಬಿದನೂರು ತಾಲ್ಲೂಕಿನ ಎದುರಾಶ್ವತ್ಥ ಗ್ರಾಮ ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಎಂದೇ ಹೆಸರು ಪಡೆದಿದೆ. ಒಂದೆಡೆ ಧಾರ್ಮಿಕ ಕ್ಷೇತ್ರ , ಇನ್ನೊಂದೆಡೆ ಸ್ವಾತಂತ್ರ್ಯ ಕಿಚ್ಚನ್ನು ಹಬ್ಬಿಸಿದ ಸ್ವಾಭಿಮಾನದ ಪ್ರಸಿದ್ಧ ಪ್ರವಾಸ ತಾಣವಾಗಿದೆ." ಬನ್ನಿ ಒಮ್ಮೆ ಪ್ರವಾಸಕ್ಕೆ…
(ಚಿತ್ರಗಳು : ಅಂತರ್ಜಾಲ ಕೃಪೆ)
-ರಮೇಶ ನಾಯ್ಕ, ಉಪ್ಪುಂದ, ಬೈಂದೂರು