ಸ್ವಾತಂತ್ರ್ಯ ಹೋರಾಟಗಾರ್ತಿ, ಕವಯತ್ರಿ ಸುಭದ್ರಾ ಕುಮಾರಿ ಚೌಹಾಣ್

ಸ್ವಾತಂತ್ರ್ಯ ಹೋರಾಟಗಾರ್ತಿ, ಕವಯತ್ರಿ ಸುಭದ್ರಾ ಕುಮಾರಿ ಚೌಹಾಣ್

ಈ ವರ್ಷ ಸ್ವಾತಂತ್ರ್ಯ ದಿನದ ಮರುದಿನ ಅಂತರ್ಜಾಲ ತಾಣವನ್ನು ಗಮನಿಸುತ್ತಿರುವಾಗ ಗೂಗಲ್ ಡೂಡಲ್ ನಲ್ಲಿ ಸುಭದ್ರಾ ಕುಮಾರಿ ಚೌಹಾಣ್ ಇವರ ಭಾವಚಿತ್ರವನ್ನು ಹಾಕಲಾಗಿತ್ತು. ಗೂಗಲ್ ತನ್ನ ಮುಖಪುಟದಲ್ಲಿ ವಿಶೇಷ ಸಾಧಕರ ಚಿತ್ರಗಳನ್ನು 'ಡೂಡಲ್' ರೂಪದಲ್ಲಿ ಪ್ರಕಟಿಸುವ ಸಂಪ್ರದಾಯವಿದೆ. ಹಲವಾರು ಮಂದಿ ಭಾರತೀಯರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶೇಷ ದಿನಗಳಂದೂ ಈ ಡೂಡಲ್ ರಚನೆಯಾಗುವುದಿದೆ. ಗೂಗಲ್ ಹುಡುಕಿದ ಈ ಸುಭದ್ರಾ ಕುಮಾರಿ ಚೌಹಾಣ್ ಯಾರು ಇರಬಹುದು ಎಂದು ಗಮನಿಸ ಹೋದರೆ ಸಿಕ್ಕ ಮಾಹಿತಿಗಳು ಅಪಾರ. 

ಸುಭದ್ರಾ ಕುಮಾರಿ ಇವರು ಆಗಸ್ಟ್ ೧೬, ೧೯೦೪ರಲ್ಲಿ ಉತ್ತರ ಪ್ರದೇಶ ರಾಜ್ಯದ ಅಲಹಾಬಾದ್ ಜಿಲ್ಲೆಯ ನಿಹಲಾಪುರ ಗ್ರಾಮದಲ್ಲಿ ಜನಿಸಿದರು. ಇವರಿಗೆ ಬಾಲ್ಯದಿಂದಲೇ ಕವನಗಳನ್ನು ರಚಿಸುವ ಉತ್ಸಾಹ ಮತ್ತು ಆಸಕ್ತಿ ಇತ್ತು. ಸುಭದ್ರಾ ಕುಮಾರಿ ಇವರ ಮೊದಲ ಕವಿತೆ ೯ನೇಯ ವಯಸ್ಸಿನಲ್ಲೇ ಪ್ರಕಟವಾಗಿತ್ತು. ಅಲಹಾಬಾದಿನ ಕ್ರಾಸ್ಟ್ ವೈಟ್ ಹುಡುಗಿಯರ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ ಇವರಿಗೆ ೧೬ನೇಯ ವಯಸ್ಸಿನಲ್ಲೇ (೧೯೧೯) ಖಾಂಡ್ವಾ ಪ್ರದೇಶದ ಠಾಕೂರ್ ಲಕ್ಷಣ್ ಸಿಂಗ್ ಚೌಹಾಣ್ ಇವರ ಜೊತೆ ವಿವಾಹವಾಗುತ್ತದೆ. ಮದುವೆಯ ನಂತರ ಅವರು ತಮ್ಮ ಪತಿಯೊಂದಿಗೆ ಮಧ್ಯಪ್ರದೇಶದ ಜಬಲ್ ಪುರದಲ್ಲಿ ವಾಸ್ತವ್ಯ ಹೂಡುತ್ತಾರೆ. ಇವರಿಗೆ ೫ ಮಂದಿ ಮಕ್ಕಳು.

೧೯೨೧ರಲ್ಲಿ ಇವರು ತಮ್ಮ ಪತಿಯೊಂದಿಗೆ ಮಹಾತ್ಮ ಗಾಂಧೀಜಿಯವರ ಅಹಿಂಸಾ ಸತ್ಯಾಗ್ರಹಕ್ಕೆ ಬೆಂಬಲ ನೀಡುತ್ತಾರೆ. ಈ ಸತ್ಯಾಗ್ರಹದಲ್ಲಿ ಭಾಗವಹಿಸುವ ಮೂಲಕ ಸುಭದ್ರಾ ಕುಮಾರಿ ಚೌಹಾಣ್ ಬಂಧನಕ್ಕೊಳಗಾದ ಮೊದಲ ಮಹಿಳಾ ಸತ್ಯಾಗ್ರಹಿ ಎಂದು ಗುರುತಿಸಲಾಗುತ್ತದೆ. ೧೯೨೩ರಲ್ಲಿ ಇವರನ್ನು ಮೊದಲ ಸಲ ನಾಗ್ಪುರದಲ್ಲಿ ಬಂಧಿಸಲಾಗಿತ್ತು. ನಂತರ ಅವರನ್ನು ಮತ್ತೊಮ್ಮೆ ೧೯೪೨ರಲ್ಲಿ ಬಂಧಿಸಿ ಜೈಲಿನಲ್ಲಿ ಇಡಲಾಗುತ್ತದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಇವರು, ಆ ಕುರಿತು ಹಲವಾರು ಕವನಗಳನ್ನು ರಚನೆ ಮಾಡಿದ್ದಾರೆ. ಇವರು ಜೈಲಿನಲ್ಲಿ ಇದ್ದ ಸಮಯದಲ್ಲಿ ಸುಮಾರು ೮೫ ಕ್ಕೂ ಅಧಿಕ ಕವನಗಳನ್ನು ಹಾಗೂ ಸುಮಾರು ೪೫ ಸಣ್ಣ ಕಥೆಗಳನ್ನು ರಚಿಸಿದ್ದಾರೆ. 

ಇವರು ಹಿಂದಿ ಭಾಷೆಯಲ್ಲಿ ಬರೆದ ಬಹಳಷ್ಟು ಕವನಗಳು ಪ್ರಸಿದ್ಧಿಯನ್ನು ಪಡೆದಿವೆ. ಅದರಲ್ಲೂ ಝಾನ್ಸಿ ರಾಣಿ ಲಕ್ಷ್ಮಿ ಬಾಯಿಯವರ ಕುರಿತಾದ ‘ಝಾನ್ಸಿ ಕೀ ರಾಣಿ' ಎಂಬ ಕವಿತೆ ಬಹಳ ಖ್ಯಾತಿಯನ್ನು ಪಡೆದಿದೆ. ಈ ಕವಿತೆಯಲ್ಲಿ ಝಾನ್ಸಿಯ ರಾಣಿಯ ಜೀವನವನ್ನು ಬಹಳ ಭಾವನಾತ್ಮಕವಾಗಿ ವರ್ಣಿಸಿದ್ದಾರೆ. ಈಗಲೂ ಉತ್ತರ ಭಾರತದಲ್ಲಿ ಈ ಕವನವನ್ನು ಜನರು ನೆನಪಿಸಿಕೊಳ್ಳುತ್ತಾರೆ ಮತ್ತು ಹಾಡುತ್ತಾರೆ. ಕವನದಲ್ಲಿ ೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಕುರಿತಾಗಿಯೂ ವರ್ಣಿಸಿದ್ದಾರೆ. ಆ ಸಮಯದಲ್ಲಿ ಶಾಲೆಗಳಲ್ಲಿ ಈ ಕವನವನ್ನು ಕಲಿಸಲಾಗುತ್ತಿತ್ತು.

ಈ ಕವನದ ಜೊತೆಗೆ ಅವರು ಜಲಿಯಾನ್ ವಾಲಾ ಭಾಗ್ ದುರಂತದ ಬಗ್ಗೆ ‘ಜಲಿಯಾನ್ ವಾಲಾ ಭಾಗ್ ಮೆ ವಸಂತ್', ‘ವೀರೋಂ ಕಾ ಕೈಸಾ ಹೋ ಬಸಂತ್', ‘ರಾಖಿ ಕಿ ಚುನೌತಿ' ಹಾಗೂ ‘ವಿದಾ’ ಮುಂತಾದ ಕವನಗಳನ್ನು ರಚನೆ ಮಾಡಿದ್ದಾರೆ. ಇವರ ಕವಿತೆಗಳು ಬಹಳ ಸರಳ ಭಾಷೆಯಲ್ಲಿದ್ದು, ಜನ ಸಾಮಾನ್ಯರೂ ಅರ್ಥೈಸುವಂತೆ ಇರುತ್ತಿತ್ತು. ಈ ಕಾರಣದಿಂದ ಅವರ ಕವನಗಳು ಬಹುಬೇಗನೇ ಪ್ರಸಿದ್ಧಿಯನ್ನು ಪಡೆದವು. ಇವರ ಕವನ ಸಂಕಲನಗಳಲ್ಲಿ ಖಿಲೋನಾವಾಲಾ, ತ್ರಿಧಾರಾ, ಮುಕುಲ್, ಯೇ ಕದಂಬ್ ಕಾ ಪೇಡ್ ಇವುಗಳು ಖ್ಯಾತಿಯನ್ನು ಪಡೆದಿವೆ. ‘ಹಿಂಗ್ ವಾಲಾ’ ಎಂಬ ಸಣ್ಣ ಕಥೆಗಳ ಸಂಕಲನವೂ ಪ್ರಕಟವಾಗಿದೆ. 

ಸುಭದ್ರಾ ಕುಮಾರಿ ಇವರು ವಿಧಾನ ಸಭೆಯ ಸದಸ್ಯರೂ ಆಗಿದ್ದರು. ಆದರೆ ದುರದೃಷ್ಟವಷಾತ್ ೧೯೪೮ರ ಫೆಬ್ರವರಿ ೧೫ರಂದು ನಡೆದ ಒಂದು ಕಾರು ದುರ್ಘಟನೆಯಲ್ಲಿ ಇವರು ಮೃತಪಟ್ಟರು. ಆ ಸಮಯ ಅವರಿಗೆ ಕೇವಲ ೪೩ ವರ್ಷ. ಇವರು ಮೃತ ಪಟ್ಟಾಗ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಕೇವಲ ೬ ತಿಂಗಳಷ್ಟೇ ಆಗಿತ್ತು. ಭಾರತ ಕಂಡ ಮೊದಲ ಸತ್ಯಾಗ್ರಹಿ, ಕವಯತ್ರಿಯ ಅಕಾಲ ನಿಧನ ದೇಶದ ಪಾಲಿಗೆ ನಿಜಕ್ಕೂ ಬಹು ದೊಡ್ಡ ಕೊರತೆಯಾಗಿಯೇ ಉಳಿಯಲಿದೆ.  

ಇವರ ಸಾಧನೆಯನ್ನು ಗುರುತಿಸಿದ ಭಾರತ ಸರಕಾರ ಕೋಸ್ಟ್ ಗಾರ್ಡ್ ನ ಹಡಗೊಂದಕ್ಕೆ ಇವರ ಹೆಸರನ್ನು ಇಟ್ಟು ಗೌರವಿಸಿದೆ. ಇವರ ಗೌರವಾರ್ಥ ಮಧ್ಯಪ್ರದೇಶ ಸರಕಾರ ಜಬಲ್ ಪುರ ನಗರಸಭೆಯ ಕಟ್ಟಡದ ಎದುರು ಪ್ರತಿಮೆಯನ್ನು ಸ್ಥಾಪಿಸಿದೆ. ಆಗಸ್ಟ್ ೬, ೧೯೭೬ರಲ್ಲಿ ಭಾರತೀಯ ಅಂಚೆ ಇಲಾಖೆಯು ಇವರ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಗೊಳಿಸಿದೆ (ಚಿತ್ರ ೧). ೨೦೨೧ರಲ್ಲಿ ಇವರ ೧೧೬ನೇಯ ಜನ್ಮ ದಿನದ ಸಂದರ್ಭದಲ್ಲಿ ಗೂಗಲ್ ಸರ್ಚ್ ಇಂಜಿನ್ ಇವರಿಗೆ ‘ಡೂಡಲ್’ ಗೌರವ ನೀಡಿದೆ. ಈ ಡೂಡಲ್ ನಲ್ಲಿ ಸುಭದ್ರಾ ಕುಮಾರಿ ಚೌಹಾಣ್ ಬರೆಯುತ್ತಿರುವ ಭಂಗಿಯ ಚಿತ್ರ (ಚಿತ್ರ ೨) ಇದೆ. ಈ ಚಿತ್ರವನ್ನು ನ್ಯೂಜಿಲ್ಯಾಂಡಿನಲ್ಲಿರುವ ಭಾರತೀಯ ಮೂಲದ ಕಲಾವಿದೆ ಪ್ರಭಾ ಮಲ್ಯ ವಿನ್ಯಾಸ ಮಾಡಿದ್ದಾರೆ. ತಮ್ಮ ಕವನಗಳ ಮೂಲಕ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಬ್ಬಿಸಿದ ಸುಭದ್ರಾ ಕುಮಾರಿ ಚೌಹಾಣ್ ಹೆಸರು ಸದಾ ಅಜರಾಮರವಾಗಿ ಉಳಿಯಲಿದೆ.   

ಚಿತ್ರ ಕೃಪೆ: ಅಂತರ್ಜಾಲ ತಾಣ