ಸ್ವಾತಂತ್ರ್ಯ ಹೋರಾಟದಲ್ಲಿ ಮಾತೆಯರ ಪಾತ್ರ

ಸ್ವಾತಂತ್ರ್ಯ ಹೋರಾಟದಲ್ಲಿ ಮಾತೆಯರ ಪಾತ್ರ

“ಸ್ವಾತಂತ್ರ್ಯ” ಎಂಬ ಪದವೇ ದೇಹದ ಕಣಕಣದಲ್ಲಿ ನವಚೈತನ್ಯ, ನವೋಲ್ಲಾಸ ಮೂಡಿಸುವಂತಿದೆ. ಈ ಸ್ವಾತಂತ್ರ್ಯ ಹೋರಾಟದ ಹಿಂದಿನ ಕೆಚ್ಚು, ಕಿಚ್ಚು, ಹೋರಾಟ, ಹಿಂಸೆ, ಅಸಹಕಾರ, ತ್ಯಾಗ, ತಾಳ್ಮೆ, ಬಲಿದಾನ, ಅಹಿಂಸಾತತ್ವ, ಉಪವಾಸ, ಕೆರಳುವಿಕೆ, ಅಡಗುವಿಕೆ ಈ ಎಲ್ಲವನ್ನೂ  ಬಿಡಿಸಿ ತೆರದಿಟ್ಟರೆ ಮೈ ರೋಮಾಂಚನಗೊಳ್ಳುವುದಲ್ಲವೇ? ಇಲ್ಲಿ ನಾವು ನೋಡುವುದು ಓರ್ವ ಮನುಷ್ಯನ ಸ್ವಾರ್ಥವಲ್ಲ. ಅವನ ಅಥವಾ ಅವಳ ಮಾತುಗಳ ಹಿಂದಿನ ಶಕ್ತಿ ಸಾಮರ್ಥ್ಯ, ಪ್ರೇರಣೆ, ಪ್ರೋತ್ಸಾಹ, ದಿಟ್ಟತನ, ಹೋರಾಟ ಇವುಗಳನ್ನು ಗಮನಿಸಬೇಕಾಗುತ್ತದೆ. ಈ ಎಲ್ಲವುಗಳೂ ಮುಂದಿನ ಭವಿಷ್ಯದ ಮೆಟ್ಟಿಲುಗಳಾಗುವಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ.

“ಪತಿತಪಾವನೆ ಮಹಾಮಾತೆ ಶಾರದಾದೇವಿ” ಯವರ ಬಗ್ಗೆ ಹೇಳುವುದಾದರೆ ಅವರೆಷ್ಟು ಪ್ರೇರಕರಾಗಿದ್ದರು. ಅವರೋರ್ವ ಆದರ್ಶ ಮಹಿಳೆಯಾಗಿದ್ದರು. “ಸ್ವಾಮಿ ವಿವೇಕಾನಂದರಂಥ” ವೀರ ಯುವಕನನ್ನು ಅಣಿಗೊಳಿಸಿ ಸಮಾಜಕ್ಕೆ ನೀಡಿದ ಮಹಾನ್ ಶಕ್ತಿ ಇವರು. ಆಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕವಾಗಿ ತಯಾರುಗೊಳಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುವಂತೆ ಮಾಡಿದವರು.ತಮ್ಮ ಆಶ್ರಯದಡಿ ಬೆಳೆದ ಇವರನ್ನು ಪ್ರಪಂಚವೇ ಗುರುತಿಸುವಂತಾಯಿತು. ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರತಿಪಾದಿಸಿದವರು. ಓರ್ವ ಯಶಸ್ವಿ ಪುರುಷನ ಹಿಂದಿನ ಪ್ರೇರಕ ಶಕ್ತಿಯೇ ಮಹಿಳೆ ಎಂಬುದನ್ನು ತೋರಿಸಿಕೊಟ್ಟವರು.

“ಜಯದೇವಿ ತಾಯಿ ಲಿಗಾಡೆ” ಸ್ವಾತಂತ್ರ್ಯ ಹೋರಾಟದ ಕಿಚ್ಚು ಎಲ್ಲೆಡೆ ಹೊತ್ತಿ ಉರಿಯುತ್ತಿರುವ ಕಾಲದಲ್ಲಿ, ನಾಡು, ನುಡಿ, ದೇಶ ರಕ್ಷಣೆಗಾಗಿ, ತಮ್ಮ ಎಲ್ಲಾ ಐಶ್ವರ್ಯವನ್ನು ದಾನಮಾಡಿ, ತ್ಯಜಿಸಿ ಹೋರಾಟಕ್ಕೆ ಧುಮುಕಿದ ಧೀರ ಮಹಿಳೆ. ಖಾದಿ ಬಟ್ಟೆ ಮಾತ್ರ ಧರಿಸುತ್ತಿದ್ದರು. ಗಾಂಧಿಯವರ ಚಳವಳಿಯಲ್ಲಿ ಸೇರಿಕೊಂಡು, ಸ್ವಾತಂತ್ರ್ಯದ ಕಟ್ಟಾ ಸೇನಾನಿಯಾಗಿ ಮೈನವಿರೇಳಿಸು ಭಾಷಣಗಳನ್ನು ಮಾಡುತ್ತಿದ್ದರು.

“ವಿಜಯಲಕ್ಷ್ಮೀ ಪಂಡಿತ್" ಬಾಲ್ಯವಿವಾಹ, ಸ್ತ್ರೀ ಶಿಕ್ಷಣ, ವರದಕ್ಷಿಣೆ ಪಿಡುಗು ವಿರುದ್ಧ ಹೋರಾಡಿದರು. ನಿಸ್ವಾರ್ಥ ಸೇವೆ, ವಿಧವಾ ವಿವಾಹದ ಬಗ್ಗೆ ಹೋರಾಡಿದರು. ಸ್ವಾತಂತ್ರ್ಯಹೋರಾಟದಲ್ಲಿ ಜೈಲು ಶಿಕ್ಷೆ ಅನುಭವಿಸಿದರು.

“ಕಸ್ತೂರ್ ಬಾ ಗಾಂಧಿ” ಎಲ್ಲವನ್ನೂ ತ್ಯಾಗ ಮಾಡಿದ ಧೀಮಂತ ಮಹಿಳೆ. ಮಹಾತ್ಮರನ್ನು ಕೈಹಿಡಿದು ಒಂದು ದಿನ ಸಹ ಸುಖಪಟ್ಟವರಲ್ಲ. ಸ್ವಾವಲಂಬನೆಯೇ ಧ್ಯೇಯವಾಗಿತ್ತು. ಯಾವತ್ತೂ ತಮ್ಮ ಪತಿಯಿಂದ ಐಷಾರಾಮಿ ಬದುಕನ್ನು ಇಷ್ಟಪಟ್ಟವರಲ್ಲ. ಎಷ್ಟೋ ಬಾರಿ ಉಪವಾಸವನ್ನೂ ಮಾಡಿದವರು. ಪತಿಯ ಹೆಗಲಿಗೆ ಹೆಗಲಾಗಿ ನಿಂತವರು. ಉಪ್ಪಿನ ಸತ್ಯಾಗ್ರಹದಲ್ಲಿ, ಸ್ವದೇಶಿ ಚಳವಳಿಯಲ್ಲಿ ಭಾಗವಹಿಸಿದವರು. ಸ್ವಚ್ಛತೆಯ ಹರಿಕಾರರು.

‘ಜೀಜಾಬಾಯಿ’ ತನ್ನ ಪುತ್ರ ಸಿಂಹನಿಗೆ ಧೈರ್ಯ, ಸಾಹಸ, ಹೋರಾಟ, ತ್ಯಾಗ, ಪರಕೀಯತೆಯ ವಿರುದ್ಧ  ನಿಲ್ಲುವ ಎದೆಗಾರಿಕೆ, ದೇಶಪ್ರೇಮ, ರಾಷ್ಟ್ರ ಭಕ್ತಿ ಎಲ್ಲವನ್ನೂ ಕಥೆಯ ರೂಪದಲ್ಲಿ ಹೇಳಿ ತಮ್ಮ ಮಗ ಶಿವಾಜಿಯನ್ನು ಅಪ್ರತಿಮ ವೀರನನ್ನಾಗಿ ಬೆಳೆಸಿದ ಮಹಾತ್ಯಾಗಿ, ಅಪ್ಪಟ ದೇಶಭಕ್ತೆ.

‘ಝಾನ್ಸಿ ರಾಣಿ ಲಕ್ಷ್ಮೀ ಬಾಯಿ’ ಸ್ವಾತಂತ್ರ್ಯದ ಕಿಚ್ಚಿನಲ್ಲಿ ಧುಮುಕಿ ಬ್ರಿಟಿಷ್ ಸರಕಾರದ ವಿರುದ್ಧ ಹೋರಾಡಿದ ವೀರ ಮಹಿಳೆ. ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ “ಸಿಪಾಯಿದಂಗೆ” ಯಲ್ಲಿ ಅತ್ಯಂತ ವೀರಾವೇಶದಿಂದ ಹೋರಾಡಿದ ಇವರನ್ನು ಮರೆಯಲು ಸಾಧ್ಯವೇ? ಕ್ರೌರ್ಯ ಹಾಗೂ ದಕ್ಷತೆಯ ಗುಣಗಳು ಹೋರಾಟದಲ್ಲಿ ಎದ್ದು ಕಾಣುತಿತ್ತು. ಅಜರಾಮರವಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನನ್ನು ತೊಡಗಿಸಿಕೊಂಡು ನಿಂತ ಕೆಚ್ಚೆದೆಯ ಮಹಿಳೆ.

“ಕಿತ್ತೂರು ರಾಣಿ ಚೆನ್ನಮ್ಮ” ಭಾರತದ ಸ್ವಾತಂತ್ರ್ಯದ ಕಹಳೆಯೂದಿದ ಮಹಿಳೆ ಈಕೆ. “ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಿರಿ” ಎಂಬುದನ್ನು ತೋರಿಸಿಕೊಟ್ಟವಳು. ತನ್ನ ಮಗ ವಿದೇಶಿಯರಿಗೆ ಸೈನ್ಯ ಸಹಕಾರ ನೀಡಿದಾಗ ಬಹಳಷ್ಟು ಬುದ್ಧಿವಾದ ಹೇಳಿದಳು. ದತ್ತಕಕ್ಕೆ ಮನ್ನಣೆ ಇಲ್ಲವೆಂದು ಸಾರಿದ ಬ್ರಿಟಿಷರ ವಿರುದ್ಧ ಧ್ವನಿಯೆತ್ತಿದಳು. ಕಿತ್ತೂರಿನ ಕೋಟೆಗೆ ಮುತ್ತಿಗೆ ಹಾಕಿದ ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡಿದರೂ, ಮೋಸದಿಂದ ಆಕೆಯನ್ನು ಬಂಧಿಸಿದರು. ಮುಂದೆ ಸೆರೆಮನೆಯಲ್ಲಿ ವೀರಮರಣವನ್ನಪ್ಪಿದಳು.

“ಸರೋಜಿನಿ ನಾಯ್ಡು” ಬಾಪೂಜಿಯವರ ಎಲ್ಲಾ ಸಭೆ ಸಮಾರಂಭಗಳಲ್ಲಿ *ಸ್ವಾತಂತ್ರ್ಯ ಸಮರ ಗೀತೆಗಳನ್ನು ಹಾಡಿ* ಜನಸಾಮಾನ್ಯರನ್ನು ಹುರಿದುಂಬಿಸುತ್ತಿದ್ದರು.

“ಅನ್ನಿಬೆಸೆಂಟ್” ಹೋಂರೂಲ್ ಚಳವಳಿಯಲ್ಲಿ ಪ್ರಧಾನರಾಗಿ ದುಡಿದವರು. ಮಹಿಳೆಯರ ಹಕ್ಕುಗಳು, ಸ್ವಾತಂತ್ರ್ಯ ಹೋರಾಟ, ಜನನ ನಿಯಂತ್ರಣ, ಕಾರ್ಮಿಕರ ಹಕ್ಕುಗಳು ಈ ಎಲ್ಲಾ ಹೋರಾಟಗಳಲ್ಲೂ ತಾನು, ತನ್ನೊಂದಿಗೆ ಇತರ ಮಹಿಳೆಯರನ್ನು ಒಗ್ಗೂಡಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದರು.

“ಕಮಲಾ ನೆಹರೂರವರು” ಕುಡಿತದ ವಿರುದ್ಧ ಧ್ವನಿಯೆತ್ತಿದರು, ವಿದೇಶಿ ವಸ್ತ್ರಗಳನ್ನು ತ್ಯಜಿಸಲು ಕರೆಯಿತ್ತರು. ಸ್ವಾತಂತ್ರ್ಯದ ಹೋರಾಟದಲ್ಲಿ ಗಾಯಗೊಂಡವರಿಗೆ ಔಷಧೋಪಚಾರಕ್ಕಾಗಿ ತಮ್ಮ ಭವನದ ಒಂದು ಕೋಣೆಯನ್ನು ಬಿಟ್ಟು ಕೊಟ್ಟು ಸಹಕರಿಸಿದವರು. ಜೈಲು ಶಿಕ್ಷೆ ಅನುಭವಿಸಿದರು.

“ಉಮಾಬಾಯಿ ಕುಂದಾಪುರ” ಅವರು ತಮ್ಮ ಪತಿ ಸುಬ್ರಹ್ಮಣ್ಯ ಭಾರತಿ ಅವರ ಜೊತೆ ಸ್ವಾತಂತ್ರ್ಯ ಹೋರಾಟದಲ್ಲಿ ದುಡಿದವರು. ಹರ್ಡೀಕರ್ ಸ್ಥಾಪಿಸಿದ “ಭಾರತ್ ಸೇವಾದಳ” ದ ಅಧ್ಯಕ್ಷೆಯಾಗಿ, ಸ್ವಾತಂತ್ರ್ಯ ಹೋರಾಟ ಮಹಿಳಾ ಸಂಘದ ಅಧ್ಯಕ್ಷೆಯಾಗಿ ದುಡಿದರು.

ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಧುಮುಕಿ  ಹೋರಾಡಿದವರು ಸುಚೇತಾ ಕೃಪಲಾನಿ, ಅರುಣಾ ಅಸಫ್ ಆಲಿ, ಬೇಗಂ ಹಝರತ್ ಮಹಲ್ ದಿಟ್ಟ ಹೋರಾಟಗೈದು ಇತರರಿಗೂ ಮಾದರಿಯಾದರು. ಬಾಲಕ ನರೇಂದ್ರರ ತಾಯಿ ಭುವನೇಶ್ವರಿ ದೇವಿ ತನ್ನ ಮಗನಿಗೆ “ಭಗವಾನ್ ಶ್ರೀ ಕೃಷ್ಣನ ಹಾಗೆ ಜಗತ್ತಿನ ಸಾರಥಿ”ಯಾಗಬೇಕೆಂದು ಹೇಳಿ ಪ್ರೋತ್ಸಾಹಿಸಿದ ಪರಿಣಾಮವಾಗಿ, ಸ್ವಾಮಿ ವಿವೇಕಾನಂದರು ಜಗತ್ಪ್ರಸಿದ್ಧರಾದರು. ಸ್ವಾತಂತ್ರ್ಯದ ಹಿಂದಿನ ಕಥೆ, ಘಟನೆಗಳು, ಪಾಲ್ಗೊಂಡ ಮಹಿಳೆಯರು ಇವರೆಲ್ಲರ ಬಗ್ಗೆ ಬರೆಯುತ್ತಾ ಹೋದರೆ ಸಾಕಷ್ಟಿದೆ. ಎಲ್ಲಾಮಾತೆಯರಿಗೂ ನಮೋ ನಮಃ.

-ರತ್ನಾ ಕೆ.ಭಟ್, ತಲಂಜೇರಿ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ