ಸ್ವಾತಿ..

ಸ್ವಾತಿ..

ಕವನ

ವರುಷವೈದು ತುಂಬಿತ್ತು ಎನಗೆ
ನೀ ಭುವಿಗೆ ಬಂದಾಗ,
ನಿನ್ನ ಮೆಲು ದನಿಯ ಆ ಅಳು
ಮರೆಸಿತ್ತು ಎಲ್ಲಾ ತಳಮಳವ..

ಕಳೆದಿದ್ದೆ ನವಮಾಸಗಳ ಅಮ್ಮನ ಮಡಿಲಲ್ಲಿ
ಕೇಳುತಾ ನಿನ್ನ ಪುಟ್ಟ ಎದೆಯ ಬಡಿತವ..
ಮನದೊಳಗೆ ಮೂಡಿತ್ತೊಂದು ಸಣ್ಣ ಅಳುಕು-
ನೀ ಬಂದ ನಂತರ ಎನಗುಂಟೆ ಈ ಜಾಗ?

ಅಭದ್ರತೆಯ ತೂಗುಗತ್ತಿಯಡಿಯಲ್ಲೇ
ಸವೆಸಿದ್ದೆ ಆ ಹಾದಿಯನ್ನು..
ಅಮ್ಮನ ಪ್ರತೀ ಮುತ್ತಿನ ಕೊನೆಗೊಂದು
ಪ್ರಶ್ನಾರ್ಥಕ‌ ಭಾವ ಹೊತ್ತು- ಇದೇ ಕಡೆಯದಾದರೆ?

ಇವೆಲ್ಲಕ್ಕೂ ಉತ್ತರವಿತ್ತಿತು ಆ ದಿನ-
ನೀ ಜನ್ಮ ತಾಳಿದ ದಿನ..
ಅಂದು ಕಂಡಿತು ಅಮ್ಮನ ಕಣ್ಣಲ್ಲೊಂದು ಮಿಂಚು
ಅಪ್ಪನ ಮುಗುಳ್ನಗೆ ಬೀರುವ ತುಟಿಯಂಚು!

ನಾನೂ ಸಂಭ್ರಮಿಸಿದೆ, ಸಿಹಿ ಹಂಚಿದೆ
ಮನದಾಳದಲ್ಲಿ ಮೌನವಾಗಿ ರೋದಿಸಿದೆ-
ಇನ್ನು ನನ್ನ ಕೇಳೋರ್ಯಾರು, ಮುದ್ದಿಸೋರ್ಯಾರು?
ಮನದಿ ಪ್ರಶ್ನೆಗಳು ನೂರಾರು!

ಇದ್ಯಾವುದರ ಪರಿವೆ ಇಲ್ಲದ
ಮುದ್ದು ಕಂದಮ್ಮ ನೀನು..
ನಮ್ಮನೆಗೆ, ಮನಕೆ ಬಂದ
ಪುಟಾಣಿ ಅರಸಿ ನೀನು..!!

ಮೆಲ್ಲಮೆಲ್ಲನೆ ಸೆಳೆದೆ ನನ್ನ,
ನಿನ್ನ ಮುಗ್ಧತೆಯೆಂಬ ಕುಣಿಕೆ ಹಾಕಿ!
ನನ್ನ ಗೊಂದಲಮಯ ಮನದೊಳಗೆ
ಸ್ವಾತಿ ಮುತ್ತಿನ ತಂಪು ಮಳೆಗರೆದೆ!

ನಿನ್ನ ಜಾಗ್ರತೆಯಿಂದ ಎತ್ತಿಕೊಂಡು
ನಯವಾದ ಕೆನ್ನೆಗೊಂದು ಹೂಮುತ್ತನಿಟ್ಟೆ,
ಹಾಗೇ ಎದೆಗಾನಿಸಿ ಹಿಡಿದು
ನನ್ನದೇ ಕುಡಿಯೆಂದುಕೊಂಡೆ!

ನಿನ್ನ ನಗುವಲ್ಲಿ ನನ್ನ ಸಂತಸ ಕಂಡೆ,
ನೀ ಅತ್ತಾಗ ನಾನೂ ಅತ್ತೆ!
ನಿನ್ನಾಟಕ್ಕೆ ನಾ ಜೊತೆಯಾದೆ,
ನೀ ತಪ್ಪು ಮಾಡಲು ನಾ ಪೆಟ್ಟು ತಿಂದೆ!


ನನ್ನ ಹೆಜ್ಜೆ ಮೇಲೆ ನಿನ್ನ ಪುಟ್ಟ ಪಾದವಿಟ್ಟೆ,
ಪುಟಪುಟನೆ ಓಡಿ ಎನ್ನ ದಾಟಿ ನಡೆದೆ!
ನೂರೆಂಟು ಪ್ರಶ್ನೆ ಕೇಳಿ ನನ್ನ ತಲೆ ಕೊರೆದು,
ಕೊನೆಗೊಂದು ಕಳ್ಳ ನಗು ಬೀರಿ ಓಡಿಬಿಟ್ಟೆ!

ನೀ ಬೆಳೆದೆ, ಜೊತೆಗೆ ನನ್ನನೂ ಬೆಳೆಸಿದೆ,
ಪ್ರತೀ ಕ್ಷಣಕೂ ವೈಶಿಷ್ಟ್ಯ ತುಂಬಿದೆ..
ನನ್ನ ಬಾಲ್ಯದ ನೆನಪುಗಳ ಜತನದಿಂದಿರಿಸುವೆ
ಏಕೆಂದರೆ ಅಲ್ಲೆಲ್ಲಾ ನಿಂದೇ ಛಾಪು!

ಇಂದು ನನ್ನೆತ್ತರಕ್ಕೆ ಬೆಳೆದು ನಿಂತ
ಕಿಶೋರಿಯ ಕಂಗಳಲಿ ಭರವಸೆಯ ಬೆಳಕು!
ಸ್ನಿಗ್ಧ ಚೆಲುವಿನ ಮಂದಹಾಸ,
ಆತ್ಮವಿಶ್ವಾಸ ಸೂಸುವ ವ್ಯಕ್ತಿತ್ವ!


ಅಂದು ಕಂಬನಿ ತರಿಸಿದ ಪೋರಿ
ಇಂದು ನನ್ನ ಕಣ್ಮಣಿ!
ನಗುತಿರು ಕಂದಾ ನೀ ಹೀಗೇ-
ಇಂದೂ, ಮುಂದೂ, ಎಂದೆಂದೂ..!!
-ಶ್ವೇತಾ ಸೂರ್ಯ‌ಕಾಂತ್

Comments

Submitted by Shwetha Suryakanth Sat, 01/05/2013 - 21:09

In reply to by K.VISHANTH RAO

ಅಣ್ಣ, ಬಹಳ‌ ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ.. ಆದರೆ ನೀನು ಕ್ಷಮಿಸುವಿ ಎಂದು ಈ ಪುಟ್ಟಿಗೆ ಗೊತ್ತು..!! ನಿನ್ನ ಪ್ರೋತ್ಸಾಹವಿಲ್ಲದೆ ಇದ್ಯಾವುದೂ ಖಂಡಿತಾ ಸಾಧ್ಯವಾಗುತ್ತಿರಲಿಲ್ಲ.. ಹಾಗಾಗಿ ಈ ಕವನ‌ ನಿನಗೇ ಅರ್ಪಿತ‌...