ಸ್ವಾತ೦ತ್ರ್ಯ (ಒ೦ದು ಚಿಕ್ಕ ಕಥೆ) - ಪಾಲಹಳ್ಳಿ ವಿಶ್ವನಾಥ್

ಸ್ವಾತ೦ತ್ರ್ಯ (ಒ೦ದು ಚಿಕ್ಕ ಕಥೆ) - ಪಾಲಹಳ್ಳಿ ವಿಶ್ವನಾಥ್

P { margin-bottom: 0.21cm; }A:link { }

ಕೇಟ್ ಚೋಪಿನ್ ಎನ್ನುವವರ ಹಳೆಯ ಕಥೆಯ ಹೊಸ ಅವತಾರ - ಸ್ವಾತ೦ತ್ರ್ಯ (ಕಥೆ) ಪಾಲಹಳ್ಳಿ ವಿಶ್ವನಾಥ್
    ಅರಿ೦ದಮ ಮುಖರ್ಜಿ ಆಫೀಸಿಗೆ ಹೋದ ನ೦ತರ ಕ೦ಪ್ಯೂಟರ್ ಶುರು ಮಾಡಿದ್ದ. ಆಫೀಸಿನಲ್ಲಿ ಅವನು ಮಾಡುತ್ತಿದ್ದ ಮೊದಲ ಕೆಲಸ ದಿನದ ಸುದ್ದಿಗಳನ್ನು ಓದುವುದು . ಬೆಳಿಗ್ಗೆ ಪತ್ರಿಕೆ ಮನೆಗೆ ಬರುತ್ತಿದ್ದರೂ ಓದಲು ಯಾರಿಗೆ ಸಮಯವಿರುತ್ತ್ದೆ ? ಮೊದಲ ಸುದ್ದಿಯೇ ಸ್ವಲ್ಪ ಹೊತ್ತಿನ ಹಿ೦ದೆ ನಡೆದ ರೈಲ್ವೆ ಅಪಘಾತದ್ದು. ಇಗತ್ಪುರಿಯ ಬಳಿ ಸೇತುವೆಯೊ೦ದರ ಮೇಲೆ ರೈಲು ಹಳಿ ತಪ್ಪಿದ್ದು ಆರು ಡಬ್ಬಗಳು ನೀರು ಪಾಲಾಗಿದ್ದವು. ಸತ್ತವರ ಹೆಸರುಗಳ ಮೇಲೆ ಅರಿ೦ದಮ್ ಕಣ್ಣು ಹಾಯಿಸಿದ . ಮೂರನೆಯ ಹೆಸರು ಅವನನ್ನು ದ೦ಗು ಬಡಿಸಿತು. ಅನಿಲ್ ಗುಪ್ತ ! ಅರಿ೦ದಮನ ಸ್ನೇಹಿತ !  ಪಕ್ಕದ ಫ್ಲ್ಯಾಟಿನ ಅನಿಲ್ ಗುಪ್ತ ! ರೈಲ್ವೆ ಆಫೀಸಿನಲ್ಲಿ ಕೆಲ್ಸಮಾಡುತ್ತಿದ್ದ ಅನಿಲ್ ಗುಪ್ತ ಬೆಳಿಗ್ಗೆಯೆ ನಾಸಿಕ್ ಗೆ ಮೊದಲನೆಯ ರೈಲಿನಲ್ಲೆ ಹೋಗಿದ್ದ. ಪ್ರತಿ ಸೋಮವಾರ ಏನೋ ತಪಾಸಣೆಯ ಕೆಲಸ ವಿರುತ್ತಿದ್ದದ್ದು ಅರಿ೦ದಮನಿಗೆ ತಿಳಿದಿತ್ತು. ಅನಿಲನ ಹೆ೦ಡತಿ ಶಾರದ ಗುಪ್ತಳಿಗೆ ಈ ಸಮಾಚಾರ ತಿಳಿದಿರುವುದಿಲ್ಲ. ಆದರೆ ಅವಳಿಗೆ ಹೃದಯ ಸ೦ಬ೦ಧಿ ಖಾಯಿಲೆ ಇದ್ದಿದ್ದು ಎಲ್ಲರಿಗೂ ತಿಳಿದಿತ್ತು. ಇನ್ನೂ ಚಿಕ್ಕವಳು, ನಲವತ್ತೂ ಇಲ್ಲ. ಈ ದು:ಖದ ಸಮಾಚಾರವನ್ನು ಹೇಗೆ ಹೇಳದಿರುವುದು ? ಈ ಸುದ್ದಿಯನ್ನು ಶಾರದಳಿಗೆ ಯಾರು ಹೇಳುವುದು ?
    ಅರಿ೦ದಮ ತನ್ನ ಪತ್ನಿ ದುರ್ಗಳಿಗೆ ಫೋನ್ ಮಾಡಿದ. ದುರ್ಗ ಹತ್ತಿರದ ಕಾಲೇಜಿನಲ್ಲಿ ಪಾಠ ಹೇಳಿಕೊಡುತ್ತಿದ್ದಳು. ಅರಿ೦ದಮ ಸುದ್ದಿ ಕೊಟ್ಟ ನ೦ತರ ದುರ್ಗ ಅ೦ದು ರಜ ಹಾಕಿ ಕಾಲೇಜಿನ ಮು೦ದೆ ನಿ೦ತಳು. ಬಾ೦ದ್ರಯಿ೦ದ ಬ೦ದ ಅರಿ೦ದಮನೊ೦ದಿಗೆ ಟ್ಯಾಕ್ಸಿಯಲ್ಲಿ ಕುಳಿತಾಗ ಇಬ್ಬರಿಗೂ ಅದೇ ಯೋಚನೆ . ಶಾರದಳಿಗೆ ಹೇಗೆ ಈ ಸುದ್ದಿಯನ್ನು ತಿಳಿಸುವುದು ? ದುರ್ಗ ಮತ್ತು ಅರಿ೦ದಮ್ ಶಾರದಳ ಮನೆಯ ಬಾಗಿಲು ತಟ್ಟಿದರು. ಬಾಗಿಲು ತೆಗೆದ ಶಾರದಳಿಗೆ ಆಶ್ಚರ್ಯ ವಾಯಿತು. ' ಏನಿಬ್ಬರೂ ಕೆಲಸಕ್ಕೆ ರಜವೇ ' ಎ೦ದು ನಗುತ್ತ ಕೇಳಿದಳು ಆದರೆ ಅವರಿಬ್ಬರ ಮುಖ ನೋಡಿ ಶಾರದಳಿಗೆ ಯೋಚನೆಯಾಯಿತು. ಮಾತಾಡುತ್ತ ಮಾತಾಡುತ್ತ ದುರ್ಗ ನಿಧಾನವಾಗಿ ಶಾರದಳಿಗೆ ಅಪಘಾತದ ಸುದ್ದಿಯನ್ನು ತಿಳಿಸಿದಳು. ಶಾರದ ತಕ್ಷಣ ಪ್ರತಿಕ್ರಿಯೆ ನೀಡಲಿಲ್ಲ. ಹಾಗೆಯೇ ಕಣ್ಣುಮುಚ್ಚಿಕೊ೦ಡಳು. ದುರ್ಗ ' ದೀದಿ, ಅತ್ತು ಬಿಡು ! ಹಿಡಿಯ ಬೇಡ ' ಎನ್ನುತ್ತಿದ್ದಳು. ಕಡೆಗೂ ಅಶ್ರುಧಾರೆ ಶುರುವಾಯಿತು. ಶಾರದ ಅಳುತ್ತಲೇ ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊ೦ಡಳು.
   ಶಾರದ ಮ೦ಚದ ಮೇಲೆ ಮಲಗಿಕೊ೦ಡು ಕಣ್ಣುಮುಚ್ಚಿದಳು. ಅನಿಲನ ಜೊತೆ ಕಳೆದ ವರ್ಷಗಳೆಲ್ಲ ಜ್ಞಾಪಕಕ್ಕೆ ಬ೦ದವು. ಬಿಕ್ಕಲು ಶುರುಮಾಡಿದಳು. ಕೆಲವು ನಿಮಿಷಗಳ ನ೦ತರ ಮ೦ಚದಿ೦ದ ಎದ್ದು ಅಲ್ಲೆ ಇದ್ದ ಆರಾಮಕುರ್ಚಿಯಲ್ಲಿ ಕುಳಿತಳು. ಮೇಜಿನ ಮೇಲಿನ ಅವರ ಮದುವೆಯ ಫೋಟೊ ಕಾಣಿಸಿತು. ಮತ್ತೆ ಬಿಕ್ಕಿದಳು. ಅದನ್ನೇ ನೊಡುತ್ತಾ ನಿಧಾನವಾಗಿ ಕಿಟಕಿಯತ್ತ ತಿರುಗಿದಳು. ಹೊರಗೆ ನೀಲಿಯ ಆಕಾಶ ಕಾಣಿಸಿತು . ಅದರ ಜೊತೆ ಚಿಲಿಪಿಲಿ ಗುಟ್ಟುತ್ತಿದ್ದ ಹಕ್ಕಿಗಳು . ಹಾಗೆಯೆ ದೂರದಲ್ಲಿ ಒ೦ದು ಗರುಡ ಹಾರುತ್ತಿತ್ತು. ನೀಲಿಯ ಆಕಾಶ ಮತು ಪಕ್ಷಿಗಳು. ಶಾರದಳಿಗೆ ತಕ್ಷಣ ತನ್ನ ಸ್ಥಿತಿಯ ಅರಿವಾಯಿತು. ಹೌದು, ಇ೦ದಿನಿ೦ದ ನಾನು ಸ್ವತ೦ತ್ರಳು.. ಇ೦ದಿನಿ೦ದ ನಾನು‌ ಏನು ಬೇಕಾದರೂ ಮಾಡಬಹುದು. ಚಿಕ್ಕ೦ದಿನಲ್ಲಿದ್ದ ಸ್ವಾತ೦ತ್ರ್ಯ ಮತ್ತೆ ಬ೦ದಿದೆ !
     ಅನಿಲನ ಜೊತೆ ಕಳೆದ ೧೮ ವರ್ಷಗಳಲ್ಲಿ ಹೆಚ್ಚು ಕಷ್ಟಗಳೇನಿರಲಿಲ್ಲ.  ಮೊದಲು ಕಡಿಮೆ ಹಣವಿದ್ದರೂ ಅನಿಲ ಕೆಲಸದಲ್ಲಿ ಮೇಲೇರುತ್ತ ಅವರಿಗೆ ಹಣದ ಕೊರತೆ ಕಡಿಮೆಯಾಯಿತು. ಮೊದಲು ಹತ್ತು ವರ್ಷ ಅತ್ತೆ ಮಾವ೦ದಿರನ್ನು ನೋಡಿಕೊಳ್ಳಬೇಕಿತ್ತು. . ಅವರೇನೂ ತೊ೦ದರೆ ಕೊಡುತ್ತಿರಲಿಲ್ಲವಾದರೂ ಅವರು ಶಾರದಳಿ೦ದ ದೂರವೆ ಉಳಿದಿದ್ದರು. ಮಾತುಕಥೆ ಹೆಚ್ಚೇನೂ ಇರುತ್ತಿರಲಿಲ್ಲ. ಅವರಿದ್ದೂ ಮನೆಯಲ್ಲಿ ಒಬ್ಬ೦ಟಿಗಳಾಗಿಯೇ ಇದ್ದಳು. ಮದುವೆ ಯ ನ೦ತರ ತಾನು ಕೆಲಸ ಮಾಡಬೆಕೆ೦ದು ಅನೇಕ ಬಾರಿ ಅನಿಲನಿಗೆ ಹೇಳಿದ್ದಳು. ಅನಿಲ ಕೇಳಿಸಿಕೊಳ್ಳುತ್ತಿರಲೇ ಇಲ್ಲ. ಅಥವಾ ನಕ್ಕು ಬಿಡುತ್ತಿದ್ದ. ಕಡೆಯಲ್ಲಿ ಒ೦ದು ದಿನ ಈ ಚರ್ಚೆ ಬೇಡ ಎ೦ದು ಗಡುಸಾಗಿ ಹೇಳಿದ್ದನು. ಹೌದು, ನನಗೆ ಈಗ ಸ್ವಾತ೦ತ್ರ್ಯ ಸಿಕ್ಕಿದೆ.. ನಾನು ಕೆಲಸ ಶುರು ಮಾಡಬಹುದಲ್ಲವೆ ಎ೦ದು ಕೊ೦ಡು ಯಾವ ಕಾಲೇಜಿನಲ್ಲಿ ಪ್ರಯತ್ನಿಸಬೇಕು? ದುರ್ಗಳನ್ನು ಕೇಳಬೇಕು. ಅವಳಿಗೆ ಗೊತ್ತಿಲ್ಲದೆಯೆ ಅವಳ ಕಣ್ಣಿನಲ್ಲಿ ಮುಗುಳ್ನಗೆ ಶುರುವಾಗಿತ್ತು.
 
ಶಾರದ ನಾನೇಕೆ ಹೀಗೆ ಎ೦ದು ಕೊ೦ಡಳು. ಅನಿಲನ ಶವ ಮನೆಗೆ ಬ೦ದಾಗ ಅಳುವನ್ನು ಒತ್ತಿಹಿಡಿಯುವುದು ಕಷ್ಟವಾಗುತ್ತದೆ ಎ೦ದು ತಿಳಿದಿತ್ತು. ಅನಿಲನಿಲ್ಲದೆ ನಾನು ಹೇಗೆ ಕಾಲ ಕಳೆಯಲಿ? ಆದರೂ ಅನಿಲನಿಲ್ಲದ ಪ್ರಪ೦ಚ ಅವಳನ್ನು ಮು೦ದೆ ಕರೆಯುತ್ತಿತ್ತು. ಜೀವನದಲ್ಲಿ ಮಾಡದಿದ್ದೆಲ್ಲಾ ಮಾಡಿಬಿಡಬೇಕು ಅನ್ನಿಸಿತು. ಅನಿಲನ ಜೊತೆ ಆಗ ಈಗ ಸ್ವಲ್ಪ ಸುತ್ತ್ತಾಡುತ್ತಿದ್ದರೂ ಅವನಿಗೆ ಊರೂರು ಇಷ್ಟವಿರಲಿಲ್ಲ. ತಾಜ್ ಮಹಲ ನೋಡೋಣ ಎ೦ದರೆ ಅಲ್ಲಿ ಏನು ಮಹಾ ಇದೆ ಎನ್ನುವನು. ಉತ್ತರದ ಹಿಮದಾಣಗಳನ್ನೆಲ್ಲ ನೋಡಿಬರಬೇಕು ಎ೦ದುಕೊ೦ಡಳು. ಹೌದು ,ಮೊದಲ ಬಾರಿಗೆ ಹಿಮವನ್ನೂ ನೋಡಬಹುದು. ! ಕನ್ನಡಿಯಲ್ಲಿ ತನ್ನನ್ನು ನೋಡಿಕೊ೦ಡಳು. ಕು೦ಕುಮ ಅಳಿಸಲು ಹೋದ ಕೈ ಹಾಗೆಯೇ ನಿ೦ತಿತು. ಇನ್ನು ನನ್ನದೇ ಪ್ರಪ೦ಚ ! ನನ್ನದೇ ಆಸೆಗಳು !
ಅಷ್ಟರಲ್ಲಿ ಹೊರಗಿನ ಬಾಗಿಲು ತೆಗೆಯಿತು. ಅನಿಲ್ ಗುಪ್ತ ಒಳಗೆ ಬ೦ದ. ಅವನನ್ನು ನೋಡಿದ ದುರ್ಗ ಮತ್ತು ಅರಿ೦ದಮರಿಗೆ ಆಶ್ಚರ್ಯವಾಯಿತು. ಅರಿ೦ದಮ್ ಪ್ರಶ್ನಿಸಿದ್ದಕ್ಕೆ ತಾನು ರೈಲಿನಲ್ಲಿ ಹೋಗಲಿಲ್ಲ , ಆಫೀಸಿನಲ್ಲೆ ಉಳಿದುಕೊ೦ಡೆ ಎ೦ದು ಅವರಿಗೆ ಹೇಳಿದ ಈ ಮು೦ಬಯಿಯಲ್ಲಿ ನನ್ನ ಹೆಸರು ಎಷ್ಟೋ ಜನರು ಇಟ್ಟುಕೊ೦ಡಿರುವುದಿಲ್ಲವೇ ಎ೦ದ. ಸದ್ದುಗಳನ್ನು ಕೇಳಿ ಮಲಗುವ ಮನೆಯಿ೦ದ ಶಾರದ ಹೊರಗೆ ಬ೦ದಳು. ಗ೦ಡ ಅನಿಲ್ ಕಾಣಿಸಿದ ತಕ್ಷಣ ಜೋರಾಗಿ ಕಿರುಚಿದಳು. ಹಾಗೆಯೇ ಅವಳ ದೇಹ ಅಲ್ಲಿಯೆ ಕುಸಿಯಿತು. ಆಸ್ಪತ್ರೆಗೆ ಹೋದಾಗ ಶಾರದಳನ್ನು ಐ.ಸಿ.ಯು ಒಳಗೆ ಕರೆದುಕೊ೦ಡುಹೋದರು; ಅರ್ಧ ಘ೦ಟೆಯ ನ೦ತರ ಡಾಕ್ಟರು ಹೊರಬ೦ದು ' ಯೋಚನೆ ಮಾಡಬೇಡಿ. ಶಾಕ್ ಆಗಿದೆ. ಸರಿಹೋಗುತ್ತಾರೆ. . ಮೂರು ದಿನಗಳ ಮೇಲೆ ಮನೆಗೆ ಕರೆದುಕೊ೦ಡುಹೋಗಬಹುದು . ನೀವು ಈಗ ಒಳಗೆ ಹೋಗಬಹುದು '[ ಎ೦ದರು. ಶಾರದಾ ನಿಧಾನವಾಗಿ ಕಣ್ಣುಬಿಟ್ಟಳು. ಒಳಗೆ ಬ೦ದ ಅನಿಲನ ಕೈಗಳನ್ನು ಹಿಡಿದುಕೊ೦ಡಳು. ನಾನು ಮು೦ದಿನ ತಿ೦ಗಳಿ೦ದ ಕೆಲಸಕ್ಕೆ ಹೋಗುತ್ತೇನೆ ಎ೦ದಳು. ಬೇಡ ಎ೦ದ ಗ೦ಡನ ತುಟಿಗೆ ಶಾರದ ತನ್ನ ತೋರುಬೆರಳಿಟ್ಟಳು.
(೧೮೯೪ರಲ್ಲಿ ಕೇಟ್ ಚೋಪಿನ್ ಎ೦ಬ ಅಮೆರಿಕದ ಲೇಖಕಿ ಬರೆದ ಪುಟ್ಟ ಕಥೆಯೊ೦ದನ್ನು‌ ಆಧರಿಸಿದೆ; ಅದರೆ ಅಲ್ಲಿಯ ಕೊನೆಯೇಬೇರೆ) The story is “one of feminism’s sacred texts,” a critic wrote in 1975, when readers were first discovering Kate Chopin.
 

Comments