ಸ್ವಾಭಿಮಾನದ ಗೋರಟಾ ಸ್ಮಾರಕ
ಆಗಸ್ಟ್ ೧೫ರಂದು ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ಹೈದರಾಬಾದ್ ಕರ್ನಾಟಕಕ್ಕೆ ಆ ಭಾಗ್ಯ ಇನ್ನೂ ಸಿಕ್ಕಿರಲಿಲ್ಲ. ಅತ್ತ ದೆಹಲಿಯಲ್ಲಿ ಕೆಲವರಿಗೆ ಪೂರ್ಣ ಸ್ವರಾಜ್ಯಕ್ಕಿಂತ ಯೂನಿಯನ್ ಜಾಕ್ ಅನ್ನು ಇಳಿಸಿ ತ್ರಿವರ್ಣವನ್ನು ಹಾರಿಸುವ ಉಮೇದು ಇತ್ತೇ ಹೊರತು, ದೇಶದ ಮೂಲೆಯಲ್ಲಿನ್ನೂ ಬ್ರಿಟೀಷರಿಗಿಂತ ಕರಾಳ ದಿನಗಳನ್ನು ಜನ ಅನುಭವಿಸುತ್ತಿದ್ದಾರೆ ಎಂಬುದರ ಅರಿವೂ ಇರಲಿಲ್ಲ. ಆಡಳಿತ ಹಸ್ತಾಂತರದ ವೈಭವದಲ್ಲಿ ಒಂದೆಡೆ ವಿಭಜನೆಯ ದಳ್ಳುರಿ, ವಲಸಿಗರ ಸಮಸ್ಯೆಗಳು, ಇನ್ನೊಂದೆಡೆ ದೇಶದೊಳಗೇ ದೇಶವಾಗಿದ್ದ ಅನೇಕ ಸಂಸ್ಥಾನಗಳು, ಅದರಲ್ಲೊಂದು ಹೈದರಾಬಾದಿನ ನಿಜಾಮನ ದುರಾಡಳಿತ.
ಅಂಥ ಮತಾಂಧನೂ, ದುರುಳನೂ ಆಗಿದ್ದ ನಿಜಾಮನ ಕ್ರೌರ್ಯಕ್ಕೆ ಸಮಸ್ತ ಹಿಂದು ಸಮಾಜ ಮಂಡಿಯೂರಿದ್ದಾಗ ಗೋರಟಾ ಎಂಬ ಪುಟ್ಟ ಗ್ರಾಮದ ಜನ ನಿಜಾಮನ ಕ್ರೂರಿ ಸೈನಿಕ ಪಡೆ ರಜಾಕಾರರ ವಿರುದ್ಧ ತಿರುಗಿ ನಿಂತರು. ಇಡೀ ಊರು ಹೋರಾಟಗಾರರ ಕೇಂದ್ರವಾಯಿತು. ಹೆಂಗಸರು ಮಕ್ಕಳೂ ಶಸ್ತ್ರ ಹಿಡಿದರು. ತನ್ನ ಮತವೇ ಮುಂದೊಂದು ದಿನ ಜಗತ್ತನ್ನಾಳುತ್ತದೆ ಎಂಬ ಗುಂಗಿನಲ್ಲಿದ್ದ ನಿಜಾಮ ಮತ್ತು ರಜಾಕಾರರಿಗೆ ಗೋರಟಾದ ಸ್ವಾಭಿಮಾನ ಆಕ್ರೋಶವನ್ನುಂಟುಮಾಡಿತ್ತು. ರಜಾಕಾರರು ಇಡೀ ಗ್ರಾಮವನ್ನು ಮುತ್ತಿಗೆ ಹಾಕಿದರು. ಆದರೆ ಹಗಲು ರಾತ್ರಿಯೆನ್ನದೆ ಗ್ರಾಮಸ್ಥರು ರಜಾಕಾರರನ್ನು ಎದುರಿಸಿದರು. ಯಾವಾಗ ರಜಾಕಾರರ ಕೈ ಮೇಲಾಗುತ್ತಾ ಬಂತೋ ಆಗ ಅವರ ಮತೀಯ ಅಸಹನೆ ಮತ್ತು ಕ್ರೌರ್ಯ ಎಚ್ಚೆತ್ತಿತು. ಇಡೀ ಗ್ರಾಮಕ್ಕೆ ಬೆಂಕಿ ಇಡಲಾಯಿತು. ಕಣ್ಣಿಗೆ ಬಿದ್ದವರನ್ನು ಮನಸೋ ಇಚ್ಛೆ ತರಿಯಲಾಯಿತು. ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಯಿತು. ಪುಟ್ಟ ಮಕ್ಕಳನ್ನೂ ಬಿಡದೇ ಇಡೀ ಗ್ರಾಮವನ್ನೇ ಖಾಲಿ ಮಾಡಲಾಯಿತು. ಗೋರಟಾ ಸ್ಮಶಾನವಾಯಿತು.
ಮುಂದೆ ಸರ್ದಾರ್ ಪಟೇಲರ ಇಚ್ಛಾಶಕ್ತಿಯಿಂದ ನಿಜಾಮ ಶರಣಾದ ಮತ್ತು ಹೈದರಾಬಾದ್ ಕರ್ನಾಟಕಕ್ಕೆ ಮುಕ್ತಿ ಸಿಕ್ಕಿತು. ಆದರೆ ಗೋರಟಾ ಗ್ರಾಮದ ಸ್ವಾಭಿಮಾನವನ್ನು ಆಳುವವರು ಮರೆಯುತ್ತಾ ಬಂದರು. ಎಂಟು ವರ್ಷಗಳ ಹಿಂದೆ ಭಾರತೀಯ ಜನತಾ ಪಾರ್ಟಿಯು ಯುವ ಮೋರ್ಚಾದ ತಂಡ ಆ ಸ್ವಾಭಿಮಾನವನ್ನು ಮರಳಿ ಮುನ್ನಲೆಗೆ ತರಬೇಕೆಂದು ಸಂಕಲ್ಪಿಸಿತು. ಅದಕ್ಕೂ ಸ್ವಾತಂತ್ರ್ಯ ಹೋರಾಟದ ಪೇಟೆಂಟ್ ಪಡೆದವರಿಂದ ಅಡ್ಡಿಗಳು ಎದುರಾದವು. ಆಗ ತಾನೇ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಗೋರಟಾ ಸ್ಮಾರಕದ ಶಂಕುಸ್ಥಾಪನೆಯನ್ನೂ ಮಾಡಿದ್ದರು. ಮುಂದೆ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಸ್ಮಾರಕ ನಿರ್ಮಾಣ ನೆನೆಗುದಿಗೆ ಬಿತ್ತು. ಆದರೆ ಆ ತಂಡ ಆ ನೆನಪನ್ನು ಮರೆಯದೆ ಮತ್ತೆ ಕೈಗೆತ್ತಿಕೊಂಡಿತು. ಅತ್ತ ಅಮಿತ್ ಶಾ ಮಂತ್ರಿಯಾಗಿ ಅದೇ ಸ್ಮಾರಕದ ಉದ್ಘಾಟನೆಯನ್ನು ಮಾಡಿದ್ದಾರೆ. ಗೋರಟಾದಲ್ಲಿ ಸರ್ದಾರ್ ಪಟೇಲರ ಪುತ್ಠಳಿಯ ನಿರ್ಮಾಣವಾಗಿದೆ.
ಈ ಸಂಗತಿ ಹಲವು ಸಂದೇಶಗಳನ್ನು ಕೊಡುತ್ತದೆ. ಒಂದು ರಾಜಕೀಯ ಪಕ್ಷಕ್ಕೆ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಹೊಣೆಗಾರಿಕೆಯೂ ಇದೆ ಎಂಬುದನ್ನು ಈ ಘಟನೆ ಸಾರುತ್ತದೆ. ದೇಶವನ್ನು ಒಗ್ಗೂಡಿಸಿದವರು ನೆಲ ಮತ್ತು ಭಾಷೆಗೆ ಅತೀತರು ಎಂಬುದನ್ನು ಹೇಳುತ್ತದೆ. ಗೋರಟಾದ ಹೋರಾಟಗಾರರನ್ನು ದೇಶ ನೆನೆಯದೆ ಸ್ವಾತಂತ್ರ್ಯದ ಅಮೃತಮಹೋತ್ಸವವೂ ಅಪೂರ್ಣ ಎಂಬುದನ್ನು ಸಾರುತ್ತದೆ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೨೭-೦೩-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ