ಸ್ವಾಮಿ ಜಗದಾತ್ಮಾನಂದ, ’ ಬದುಕಲು ಕಲಿಯಿರಿ ’-ಪ್ರತಿಚಿಂತಕನನ್ನೂ ಕಾಡುವ ಗಹನವಾದ ಸಂಗತಿಗಳು !
ಸಾರಸಂಗ್ರಹ: ಡಾ| 'ಜೀವಿ' ಕುಲಕರ್ಣಿ.
ಇಂತಹ ಅತ್ಯುತ್ತಮ ಲೇಖನದ ಲಾಭವನ್ನು ಕನ್ನಡದ ಜನತೆ, ಪಡೆಯುವುದು ಅತ್ಯಾವಶ್ಯಕ. ’ಜೀವಿ’ ಯವರ ಕ್ಷಮೆಬೇಡಿ, ಅದನ್ನು ಇಲ್ಲಿ ಪುನಃ ಪ್ರಕಟಿಸಲು ಧೈರ್ಯಮಾಡಿದ್ದೇನೆ. ಇದು’ ದಟ್ಸ್ ಕನ್ನಡ ಇ-ಪತ್ರಿಕೆಯ ಕೊಡುಗೆ.
ಚಿಂತೆಯಿಲ್ಲದವರು ಯಾರು? ವ್ಯಕ್ತಿಯಿಂದ ಹಿಡಿದು ಒಂದು ರಾಷ್ಟ್ರದ ಚಿಂತೆಯ ಬಗ್ಗೆ ಇಲ್ಲಿ ಒಳನೋಟಗಳಿವೆ. ಸಂಸ್ಕೃತದಲ್ಲಿಯ ಸುಭಾಷಿತದ ಪ್ರಕಾರ `ಚಿತಾ' ಮತ್ತು `ಚಿಂತಾ' ಇವುಗಳಲ್ಲಿ ಬಿಂದುಮಾತ್ರ ಭೇದವಿದೆ. ಚಿತೆ ದೇಹವನ್ನು ಮಾತ್ರ ಸುಡುತ್ತದೆ ಆದರೆ ಚಿಂತೆ ದೇಹವನ್ನೂ ಮನವನ್ನೂ ಸುಡುತ್ತದೆ. ನಮ್ಮ ಮನವನ್ನು ಹಾಳುಮಾಡುವ `ಚಿಂತೆ, ಆಕ್ರೋಶ, ಭಯ, ಉದ್ವೇಗ' ಇವೆಲ್ಲಕ್ಕೂ ಸೇರಿ `ಚಿಂಕ್ರೋಭ' ಎಂಬ ಪದವನ್ನು ಸ್ವಾಮಿಗಳು ಇಲ್ಲಿ ಪ್ರಯೋಗಿಸುತ್ತಾರೆ.
ಅಧ್ಯಾಯ ಮೂರು: ಚಿಂತೆಯ ಚಿತೆಯಿಂದ ಪಾರಾಗಿ
"ಚಿಂಕ್ರೋಭ(=ಚಿಂತಾಕ್ರೋಶಭಯೋದ್ವೇಗವು) ನಿಮ್ಮ ರಕ್ತಸಂಚಾರ ಜೀರ್ಣಾಂಗವ್ಯೂಹ ಹಾಗೂ ನರಮಂಡಲಗಳ ಮೇಲೆ ತನ್ನ ಮಾರಕ ಪ್ರಭಾವವನ್ನುಂಟುಮಾಡಿ ನಿಮ್ಮ ಆರೋಗ್ಯವನ್ನು ಹದಗೆಡಿಸೀತು. ಕಠಿಣ ಪರಿಶ್ರಮದಿಂದ ಯಾರೂ ಸತ್ತುದನ್ನು ನಾನರಿಯೆ. ಆದರೆ ಚಿಂಕ್ರೋಭದಿಂದ ಕಂಗಾಲಾಗಿ ಸತ್ತುಹೋದವರು ಹಲವು ಮಂದಿ.''
-ಡಾ| ಚಾರ್ಲ್ಸ್ ಮೇಯೋ
"ಕ್ರೋಧಾದ್ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿ ವಿಭ್ರಮಃ |
ಸ್ಮೃತಿಭ್ರಂಶಾದ್ಬುದ್ಧಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿ ||''
-ಭಗವದ್ಗೀತಾ
ಸ್ವಾಮಿ ಜಗದಾತ್ಮಾನಂದರು ತಮ್ಮ ಪರಿಣತ ಪ್ರಜ್ಞೆ, ಅಪಾರ ಓದು ಹಾಗೂ ಅನುಭವದ ಪರಿಪಾಕವನ್ನು ಈ ಅಧ್ಯಾಯದಲ್ಲಿ ಎರಕಹೊಯ್ದಿದ್ದಾರೆ.
ಚಿಂತೆಯಿಲ್ಲದವರು ಯಾರು? ವ್ಯಕ್ತಿಯಿಂದ ಹಿಡಿದು ಒಂದು ರಾಷ್ಟ್ರದ ಚಿಂತೆಯ ಬಗ್ಗೆ ಇಲ್ಲಿ ಒಳನೋಟಗಳಿವೆ. ಸಂಸ್ಕೃತದಲ್ಲಿಯ ಸುಭಾಷಿತದ ಪ್ರಕಾರ `ಚಿತಾ' ಮತ್ತು `ಚಿಂತಾ' ಇವುಗಳಲ್ಲಿ ಬಿಂದುಮಾತ್ರ ಭೇದವಿದೆ. ಚಿತೆ ದೇಹವನ್ನು ಮಾತ್ರ ಸುಡುತ್ತದೆ ಆದರೆ ಚಿಂತೆ ದೇಹವನ್ನೂ ಮನವನ್ನೂ ಸುಡುತ್ತದೆ. ನಮ್ಮ ಮನವನ್ನು ಹಾಳುಮಾಡುವ 'ಚಿಂತೆ, ಆಕ್ರೋಶ, ಭಯ, ಉದ್ವೇಗ' ಇವೆಲ್ಲಕ್ಕೂ ಸೇರಿ 'ಚಿಂಕ್ರೋಭ' ಎಂಬ ಪದವನ್ನು ಸ್ವಾಮಿಗಳು ಇಲ್ಲಿ ಪ್ರಯೋಗಿಸುತ್ತಾರೆ. ಮನುಷ್ಯನ ಅಧಃಪತನದ ಮೆಟ್ಟಿಲುಗಳನ್ನು ಭಗವದ್ಗೀತೆ ಹೇಳುತ್ತದೆ. 'ಕ್ರೋಧದಿಂದ ಸಮ್ಮೋಹ, ಸಮ್ಮೋಹದಿಂದ ಸ್ಮೃತಿವಿಭ್ರಮ, ಸ್ಮೃತಿವಿಭ್ರಮದಿಂದ ಬುದ್ಧಿನಾಶ, ಬುದ್ಧಿನಾಶದಿಂದ ಸರ್ವನಾಶ'. 'ಕಾಮ, ಕ್ರೋಧ, ಮತ್ತು ಲೋಭ' ಇವು ಮೂರು ನರಕದ ಬಾಗಿಲುಗಳು ಎಂದೂ ಗೀತೆ ಸಾರುತ್ತದೆ.
ಕಾರ್ಯಭಾರ, ತಲೆಭಾರವಾದಾಗ, ಚಿಂತೆ ಬೆಂತರವಾಗಿ ಕಾಡುತ್ತದೆ. `ಚಿಂತೆಯನ್ನು ದೂರಕ್ಕೆಸೆಯಲಾರದ ವ್ಯಾಪಾರೋದ್ಯಮಿಗಳು ಯೌವನದಲ್ಲೇ ಸಾವನ್ನಪ್ಪುತ್ತಾರೆ' ಎಂದು ಅರ್ಥಗರ್ಭಿತವಾಗಿ ಡಾ| ಅಲೆಕ್ಸಿಸ್ ಕೆರೆಲ್ ನುಡಿದಿದ್ದಾರೆ.
ಹೊಟ್ಟೆಹುಣ್ಣಿನ ರೋಗಕ್ಕೆ ಕಾರಣ ಮಾನಸಿಕ ಚಿಂತೆ, ಭಯೋದ್ವೇಗ ಎಂದು ಮೇಯೋ ಕ್ಲಿನಿಕ್‌ನ ಡಾ| ಅಲ್ವಾರಿಸ್ ಹೇಳಿದ್ದಾರೆ. ನಾವು ರಿಲ್ಯಾಕ್ಸ್ ಆಗಲು ಕಲಿಯದಿದ್ದರೆ ಮಾನಸಿಕ ಒತ್ತಡದಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. 'ರೋಗಕ್ಕೆ ಮದ್ದು ಕೊಡುವುದರ ಜೊತೆಗೆ ರೋಗಿಯನ್ನು ಮುದ್ದಿನಿಂದ(ಅಕ್ಕರೆಯಿಂದ) ನೋಡಿದರೆ ಚಿಕಿತ್ಸೆ ಬೇಗ ಫಲಕಾರಿ ಆಗುತ್ತದೆ' ಎಂದು ಪ್ಲೇಟೋ ಹೇಳಿದ್ದಾನೆ.
ಕತ್ತಿನ ಹಿಂಭಾಗದ ಬೇನೆ, ಗಂಟಲಿನ ಗಡ್ಡೆಯ ಅನುಭವ, ಹೊಟ್ಟೆಯ ಹುಣ್ಣಿನ ನೋವು, ಗಾಲ್ ಬ್ಲ್ಯಾಡರ್ ನೋವು, ವಾಯು ತೊಂದರೆ, ತಲೆತಿರುಗುವುದು, ತಲೆನೋವು, ಬಳಲಿಕೆ -ಇವೆಲ್ಲಕ್ಕೆ ನೂರಕ್ಕೆ ೫೦ರಿಂದ ೯೦ ರಷ್ಟು ಮಾನಸಿಕ ಕಾರಣ ಇವೆ ಎಂಬುದನ್ನು ಪ್ರಾಯೋಗಿಕವಾಗಿ ಕಂಡಿದ್ದಾರೆ.
ಕ್ರೋಧ ಬಹಳ ದೊಡ್ಡ ಮಾರಕ ಅಸ್ತ್ರವಾಗಿದೆ. ಅದರಿಂದ ರಕ್ತದೊತ್ತಡ ಹೆಚ್ಚುತ್ತದೆ, ಮಿದುಳಿನಲ್ಲಿ ರಕ್ತಸ್ರಾವ ಆಗಬಹುದು, ಹೃದಯನಾಳ ಸಂಕುಚಿತಗೊಳ್ಳಬಹುದು, ಹೃದಯದಕ್ರಿಯೆ ನಿಂತು ಮರಣ ಕೂಡ ಸಂಭವಿಸಬಹುದು.
'ಸಿಟ್ಟು ನಿಮ್ಮ ಮಿದುಳನ್ನು ಪ್ರವೇಶಿಸುವ ಮೊದಲು, ನಿಮ್ಮ ಬುದ್ಧಿಯನ್ನು ತಲೆಬುರುಡೆಯಿಂದ ಹೊರಗೆ ಹಾಕಿ, ತಿರುಗಿ ಅದು ಒಳಗೆ ಬರದಂತೆ ತಲೆಯ ಎಲ್ಲ ಬಾಗಿಲುಗಳನ್ನು ಮುಚ್ಚಿಬಿಡುತ್ತದೆ' ಎಂದು ಪ್ಲುಟಾರ್ಕ ಹೇಳಿದ್ದಾನೆ.
'ಉತ್ತಮರ ಕೋಪ ಒಂದು ಕ್ಷಣಕಾಲ ಇರುತ್ತದೆ. ಮಧ್ಯಮರ ಕೋಪ ಎರಡುಗಂಟೆಯ ತನಕ ಇರುತ್ತದೆ. ಅಧಮರು ದಿನವಿಡೀ ಕೋಪಗೊಂಡರೆ, ದುರಾತ್ಮರು ಜೀವನಪರ್ಯಂತ ಕೋಪವನ್ನು ಉಳಿಸಿಕೊಳ್ಳುತ್ತಾರೆ.' ಎಂಬ ನುಡಿ ಮಾರ್ಮಿಕವಾಗಿದೆ.
ಸ್ವಾಮಿ ವಿವೇಕಾನಂದರು ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಇಬ್ಬರು ಆಂಗ್ಲರು ಅವರ ಸನ್ಯಾಸಿ ಉಡುಗೆ ಗೇಲಿಮಾಡಿ ಆಡಿಕೊಂಡರಂತೆ. ನಿಲ್ದಾಣದಲ್ಲಿ ಟಿಕೆಟ್ ಕಲೆಕ್ಟರ್‌ನೊಂದಿಗೆ ಸ್ವಾಮಿಜಿ ನಿರರ್ಗಳವಾಗಿ ಇಂಗ್ಲೀಷಿನಲ್ಲಿ ಮಾತಾಡುವುದನ್ನು ಕೇಳಿದಾಗ ಆಂಗ್ಲರಿಗೆ ನಾಚಿಕೆಯಾಯಿತು. ಸ್ವಾಮೀಜಿಗೆ ಇಂಗ್ಲೀಷು ಬಂದೂ ಕೋಪಗೊಳ್ಳಲಿಲ್ಲವೇಕೆ? ಎಂದು ಆಂಗ್ಲರು ಕೇಳಿದಾಗ ಸ್ವಾಮೀಜಿ ಉತ್ತರಿಸಿದರು,' ಅಜ್ಞಾನಿಗಳ ಮೇಲೆ ಸಿಟ್ಟಾಗಿ ನಾನು ನನ್ನ ಶಕ್ತಿ ಹಾಗೂ ಶಾಂತಿ ಏಕೆ ಕೆಡಿಸಿಕೊಳ್ಳಲಿ?' ಎಂದು.
ಗೌತುಮ ಬುದ್ಧ 'ಅಂಗುತ್ತರನಿಕಾಯ'ದಲ್ಲಿ ಬೌದ್ಧಭಿಕ್ಷುಗಳಿಗೆ ಐದು ಮಹತ್ವದ ಮಾತು ಹೇಳಿದ:
1) ವೃದ್ಧಾಪ್ಯ ಬಂದೇ ಬರುವದು,
2) ರೋಗರುಜಿನ ಬರುವದಿಲ್ಲವೆಂದು ಹೇಳಲಾಗದು,
3) ಒಂದು ದಿನ ಮರಣ ಬರುವುದು ನಿಶ್ಚಿತ,
4) ಪ್ರತಿ ಪ್ರೀತಿಯ ವಸ್ತುವೂ ಬದಲಾವಣೆ ಹೊಂದುತ್ತದೆ,
5) ಒಳಿತು ಕೆಡಕು ಕರ್ಮಫಲ ತಾನೇ ಉಣಬೇಕು.
ಈ ಐದನ್ನು ಗಮನಕ್ಕೆ ತಂದಾಗ 'ಅಹಂ' ಹಾಗೂ 'ಮಮಕಾರ' ಕಡಿಮೆ ಆಗಿ ದಿವ್ಯಪಥದಲ್ಲಿ ನಡೆಯಲು ಅನುಕೂಲವಾಗುವುದು ಎಂದಿದ್ದ.
ಮನಸ್ಸಿನಲ್ಲಿ ಅಗಾಧ ಶಕ್ತಿಯಿದೆ. ತಾಳ್ಮೆ, ಪ್ರೀತಿ, ಕರುಣೆ, ದಾನಬುದ್ಧಿ, ನಿಸ್ವಾರ್ಥ ಸೇವಾಭಾವ ಇವು ರಚನಾತ್ಮಕ ಭಾವನೆಗಳು. ಇವನ್ನು ಬೆಳೆಸಿಕೊಂಡರೆ ಉತ್ಸಾಹ ಹಾಗೂ ಆರೋಗ್ಯಕರ ಚಟವಟಿಕೆಗಳಿಗೆ ಕಾರಣವಾಗುತ್ತವೆ. ಇದರಿಂದ ಸಂತೋಷ, ತೃಪ್ತಿ ಹಾಗೂ ಸೃಜನಶೀಲ ಪ್ರವೃತ್ತಿಗಳು ಎಚ್ಚರಗೊಳ್ಳುತ್ತವೆ.
ಪ್ರಸನ್ನತೆ, ಶಾಂತತೆ, ಧೈರ್ಯ, ಆತ್ಮವಿಶ್ವಾಸ, ದೃಢನಿಶ್ಚಯ- ಇವೇ ಮೊದಲಾದ ಭಾವನೆಗಳು ಆರೋಗ್ಯಕರ ಟಾನಿಕ್‌ನಂತೆ ಕೆಲಸಮಾಡುತ್ತವೆ. ಮನುಷ್ಯನ ಬಂಧನಕ್ಕೂ ಅವನ ಮೋಕ್ಷಕ್ಕೂ ಅವನ ಮನಸ್ಸೇ ಕಾರಣ. ಮನಸ್ಸಿನಲ್ಲಿ ಉದಿಸುವ 'ಯೋಚನೆ' ಎಂಬ ದ್ರವ್ಯದಿಂದ ವಿಷವನ್ನು ತಯಾರಿಸಬಹುದು, ಅಮೃತವನ್ನೂ ತಯಾರಿಸಬಹುದು. ಶ್ರದ್ಧೆಯಿಂದ ಶ್ರಮಿಸಿದರೆ ವಿಷವನ್ನು ಅಮೃತಗೊಳಿಸಬಹುದು.
ಕಾಯಿಲೆಯನ್ನು ಓಡಿಸುವ ಸರಳ, ಸರ್ವಕಾಲಿಕ, ಪುರಾತನ ಸೂತ್ರಗಳ ಬಗ್ಗೆ ಹೇಳುತ್ತಾರೆ.
1) ಜೀವಿಗಳಲ್ಲಿ ದಯೆ, ಅನುಕಂಪ, ಸಹಾನುಭೂತಿ,
2) ನಿಃಸ್ವಾರ್ಥತೆ, ಕಾರ್ಯತತ್ಪರತೆ ಮತ್ತು ವಿಶಾಲ ಮನೋಭಾವ,
3) ಬಿಗುಮಾನ ತೊರೆದು ನಗುವನ್ನು ಹೊರಸೂಸುವ ಗುಣ,
4) ಪರೋಪಕಾರ, ಸಹಕಾರ, ಉದಾರಗುಣ ಮೈಗೂಡಿಸಿಕೊಳ್ಳುವುದು,
5) ತನ್ನಂತೆ ಇತರರು ಎಂಬ ವಿಶ್ವಬಂಧುತ್ವ ಭಾವ,
6) ತಾಳ್ಮೆ (ತಾಳಿದವ ಬಾಳಿಯಾನು),
7) `ಮಾತು ಕಡಿಮೆ, ಜಾಸ್ತಿ ದುಡಿಮೆ' ತತ್ವದ ಅನುಷ್ಠಾನ,
8) ಪೂರ್ವಾಪರ ವಿಮರ್ಶೆ, ವಿವೇಕ,
9) ದಿನನಿತ್ಯದ ಪ್ರಾರ್ಥನೆ.
ಮನೋಬಲವೇ ಮಹಾಬಲ ಎಂದು ಅರಿಯುವುದು. ಯೋಗಾಸನ ಹಾಗೂ ವಿಪಶ್ಶನಾಗಳಿಂದ ರೋಗನಿವಾರಣೆ. ಯಮ( ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ) ಹಾಗೂ ನಿಯಮ( ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರಪ್ರಣಿಧಾನ) ಇವುಗಳ ಆಚರಣೆ.
ಮನುಷ್ಯನನ್ನು ಮೆಚ್ಚಿಸುವುದು ಬೇಡ, ಭಗವಂತನನ್ನು ಮೆಚ್ಚಿಸಲು ಕೆಲಸ ಮಾಡಿರಿ. ಶ್ರದ್ಧೆಯಿಂದಲೇ ಸಿದ್ಧಿ ಎಂದು ನಂಬಿ ಬಾಳಬೇಕು. ಶ್ರದ್ಧೆಯೇ ಭಯವನ್ನು ನಿವಾರಿಸುವ ಅಸ್ತ್ರ.
ಭಯದಿಂದ ಸಂಶಯ, ಸಂಶಯದಿಂದ ಕೋಪ, ಕೋಪದಿಂದ ಹಿಂಸೆ, ಹಿಂಸೆಯಿಂದ ಸರ್ವನಾಶಕ ದುರಂತ. 'ನಿನ್ನನ್ನು ನೀನು ಸರಿಪಡಿಸಿಕೊಂಡರೆ ಜಗತ್ತಿನಲ್ಲಿ ಒಬ್ಬ ಮೂರ್ಖ ಕಡಿಮೆಯಾದಂತೆ' ಎಂಬ ಕಾರ್ಲೈಲನ ನುಡಿಯಲ್ಲಿ ಎಂಥ ಸತ್ಯ ಅಡಗಿದೆ.
ಬೆಚ್ಚಿದರೆ ಬೆದರಿಕೆ. ಭಯದಿಂದ ದೂರ ಇರಲು ಪ್ರಯತ್ನಿಸಬೇಕು. ದೇವರ ಭಯವೇ ಜ್ಞಾನದ ಆರಂಭ ಎನ್ನುತ್ತಾರೆ. ವಿಷ್ಣುಸಹಸ್ರನಾಮದಲ್ಲಿ ದೇವರಿಗೆ `ಭಯಕೃತ್, ಭಯನಾಶನಃ' ಎಂದು ಸ್ತುತಿಸುತ್ತಾರೆ.
'ಸುಸಂಸ್ಕೃತ ಸಜ್ಜನ ಗೃಹಕ್ಕೆ ಸಮಾನವಾದ ಶಾಲೆ ಇನ್ನೊಂದಿಲ್ಲ. ಸತ್ಯಸಂಧರೂ, ಗುಣವಂತರೂ ಆದ ತಂದೆತಾಯಂದಿರಿಗೆ ಸಮಾನನಾದ ಅಧ್ಯಾಪಕರು ಇನ್ನಿಲ್ಲ.' ಎಂದರು ಗಾಂಧೀಜಿ.
'ನಿರ್ಭೀತಿಯ ಚಾಂಪಿಯನ್ ಭೀತಿಯಿಂದ ಸತ್ತ' ಎಂಬ ಕಥೆ ಮಾರ್ಮಿಕವಾಗಿದೆ. ವೈಜ್ಞಾನಿಕ ಮನೋವೃತ್ತಿಯುಳ್ಳ ಒಬ್ಬ ತರುಣ ಗೆಳೆಯರೊಡನೆ ಪಂದ್ಯ ಕಟ್ಟುತ್ತಾನೆ. ಅಮಾವಾಸ್ಯೆಯ ರಾತ್ರಿ ಶ್ಮಶಾನಕ್ಕೆ ಹೋಗಿ ಅಲ್ಲಿ ಒಂದು ಗೂಟನೆಟ್ಟು ಬರುವುದಾಗಿ. ಇದು ಅವನ ನಿರ್ಭೀತಿಯ ಮನಕ್ಕೆ ಸಾಕ್ಷಿಯಾಗಲಿತ್ತು. ಆದರೆ ಅವನು ಗೂಟನೆಟ್ಟು ಮರಳಿ ಬರುವಾಗ ಅವನ ಉತ್ತರೀಯ ಯಾರೋ ಬಲವಾಗಿ ಎಳೆದಂತಾಯಿತು. ಭೀತಿಗೊಂಡು ನೆಲಕ್ಕೆ ಬಿದ್ದು ಸತ್ತೇಹೋದ. ಆದರೆ ಅವನು ತನ್ನ ಉತ್ತರೀಯಕ್ಕೆ ತಾನೇ ಗೂಟ ತಾಗಿಸಿದ್ದನ್ನು ಮರೆತ. ಅದು ತಿಳಿದಿದ್ದರೆ ಅವನು ಸಾಯುತ್ತಿರಲಿಲ್ಲ.
ಭಯ ದೂರಗೊಳಿಸುವುದು ಅಭ್ಯಾಸದಿಂದ ಸಾಧ್ಯ. 'ಚಿಂತೆ, ಸಂತೋಷ, ಸಿಟ್ಟು, ಶಾಂತತೆ - ಇವು ಹೇಗೆ ಮನಸ್ಸಿನ ಸ್ವಭಾವವೋ, ಹಾಗೆಯೇ ಭಯವು ಕೂಡಾ ಮನಸ್ಸಿನ ಒಂದು ಸ್ವಭಾವ. ಅದನ್ನು ಅಭ್ಯಾಸದಿಂದ ತೆಗೆದುಹಾಕಬೇಕು.
ನಾವು ಹಣದ ವ್ಯವಹಾರವನ್ನು ಹೇಗೆ ಮಾಡಬೇಕೆಂಬುದನ್ನು ಗಾಂಧೀಜಿಯವರಿಂದ ಕಲಿಯಬೇಕು. ಅವರು ಸೆರೆಮನೆಯಲ್ಲಿದ್ದಾಗ ಸರಕಾರ ಅವರಿಗೆ ಪ್ರತಿ ತಿಂಗಳು ಖರ್ಚಿಗೆ 200 ರೂಪಾಯಿ ಕೊಡುತ್ತಿತ್ತಂತೆ. ಅವರು ೩೫ ರೂಪಾಯಿ ಖರ್ಚು ಮಾಡಿ ಉಳಿದ ಹಣ ಮರಳಿ ಕೊಡುತ್ತಿದ್ದರಂತೆ.'ಹಣವನ್ನು ಹೇಗೆ ಸಂಪಾದಿಸಬೇಕೆಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅದನ್ನು ಹೇಗೆ ವೆಚ್ಚಮಾಡಬೇಕೆಂಬುದು ಲಕ್ಷದಲ್ಲಿ ಒಬ್ಬನಿಗೂ ಸರಿಯಾಗಿ ತಿಳಿದಿಲ್ಲ' ಎಂಬ ಅಮೂಲ್ಯ ಹೇಳಿಕೆಯೆಡೆ ನಮ್ಮ ಗಮನ ಸೆಳೆಯುತ್ತಾರೆ.
ಜನಪ್ರಿಯ ಮುಂದಾಳು, ಅರ್ಥಶಾಸ್ತ್ರಜ್ಞ, ಪ್ರಸಿದ್ಧ ಬ್ಯಾಂಕರ್ ಆದ ಗಣ್ಯರೊಬ್ಬರು ಯುವಕರಿಗೆ ಆರ್ಥಿಕ ಯಶಸ್ಸಿನ ರಹಸ್ಯ ಹೇಳಿದ್ದರಂತೆ:
1) ನೀವು ಗಳಿಸಲು ಸಾಧ್ಯವಾದುದಕ್ಕಿಂತ ಹೆಚ್ಚು ವೆಚ್ಚ ಮಾಡಬೇಡಿರಿ.
2) ನಿಮಗೆ ಸಾಲವಿದ್ದರೆ ಅದನ್ನು ಮೊದಲು ತೀರಿಸಿರಿ.
3) ಯಾವಾಗಲೂ ಸಾಲದಿಂದ ದೂರವಿರಲು ಪ್ರಯತ್ನಿಸಿರಿ. `ಮತ್ತೆ ಕೊಟ್ಟರಾದೀತು' ಎಂಬ ವ್ಯಾಪಾರಿಗಳ ಮಾತಿಗೆ ಮರುಳಾಗದಿರಿ.
4) ಅವಶ್ಯಕವೆಂದು ಖಚಿತವಾದುದಕ್ಕೆ ಮಾತ್ರ ವೆಚ್ಚಮಾಡಿರಿ.
5) ಇದ್ದುದರಲ್ಲಿ ಸ್ವಲ್ಪವಾದರೂ ಉಳಿಸುವ, ಉಳಿಸಿದ್ದನ್ನು ಬೆಳೆಸುವ ಕಲೆಯನ್ನು ಕಲಿಯಿರಿ.
ಫ್ರಾನ್ಸಿಸ್ ಬೇಕನ್ ಹೇಳಿದ್ದ: ' ಹಣ ಒಳ್ಳೆಯ ಸೇವಕನಾಗಬಹುದು. ದುಷ್ಟ ಯಜಮಾನನೂ ಆಗಬಹುದು. ಹಣ ನಿಮ್ಮ ಸೇವಕನಾಗಲಿ, (ಆದರೆ) ನೀವು ಅದರ ದಾಸರಾಗಬೇಡಿ.'
ಗೆಲುವಿನ ಗುಟ್ಟಿನ ಬಗ್ಗೆ ಬರೆಯುತ್ತಾರೆ. 'ತಾಳ್ಮೆ, ಸಹನೆ, ಪ್ರಾಮಾಣಿಕತೆ' ಇವುಗಳ ತ್ರಿಕರಣ ಸಾಂಗತ್ಯ ಅವಶ್ಯ ಎನ್ನುತ್ತಾರೆ.
ಗೌತಮ ಬುದ್ಧ ಮನುಷ್ಯರನ್ನು ಅವರ ಆಸಕ್ತಿ, ಗಮನ, ಪರಿಸರ ಇವುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಾಲ್ಕು ವಿಭಾಗ ವಿಂಗಡಿಸಿದ್ದನಂತೆ:
1) ಕತ್ತಲೆಯಿಂದ ಕತ್ತಲೆಗೆ ಹೋಗುವವರು.
2) ಬೆಳಕಿನಿಂದ ಕತ್ತಲೆಗೆ ಹೋಗುವವರು.
3) ಕತ್ತಲೆಯಿಂದ ಬೆಳಕಿನೆಡೆ ಹೋಗುವವರು.
4) ಬೆಳಕಿನಿಂದ ಬೆಳಕಿನೆಡೆಗೆ ಹೋಗುವವರು.
ಜೀವನದಲ್ಲಿ ಶ್ರದ್ಧೆ ಬಹಳ ಮಹತ್ವದ್ದು. ದೀರ್ಘ ಕಾಲದ ಸಾಧನೆ, ಭಜನೆ, ನಿಷ್ಠೆಯ ಪ್ರಾರ್ಥನೆ, ಸತ್ಸಂಗ, ಸದ್ಗ್ರಂಥಗಳ ಅಭ್ಯಾಸ ಹಾಗೂ ಸ್ವಾನುಭವದಿಂದ ಶ್ರದ್ಧೆ ದೃಢವಾಗುತ್ತದೆ. 'ಶ್ರದ್ಧಾರಹಿತ ಪ್ರಾರ್ಥನೆ ಅಂಚೆಚೀಟಿಯಿಲ್ಲದ ಪತ್ರದಂತೆ, ಭಕ್ತಿರಹಿತ ಪ್ರಾರ್ಥನೆ ವಿಳಾಸ ಬರೆಯದ ಪತ್ರದಂತೆ, ಶ್ರದ್ಧೆ-ಭಕ್ತಿ ಸಹಿತವಾಗಿ ವ್ಯಾಕುಲತೆಯಿಂದ ಮಾಡಿದ ಪ್ರಾರ್ಥನೆ ಟೆಲಿಗ್ರಾಂ ಕೊಟ್ಟಂತೆ.' ಎನ್ನುತ್ತಾರೆ.
'ಭಾರತದಲ್ಲಿ ಧರ್ಮವು ವೈಜ್ಞಾನಿಕ ಮನೋವೃತ್ತಿಗೆ ವಿರೋಧಿಯಗಿಲ್ಲ' ಎಂಬ ಮಾತನ್ನು ಸಮರ್ಥಿಸುತ್ತ `ಶ್ರದ್ಧೆಯೇ ಇಂದಿನ ರೋಗಗಳಿಗೆ ಸಿದ್ಧೌಷಧಿ' ಎನ್ನುತ್ತಾರೆ. ಭಾರತದ ಇಂದಿನ ಸಾಮಾಜಿಕ, ರಾಜಕೀಯ, ಹಾಗೂ ಸಾಂಸ್ಕೃತಿಕ ಸ್ಥಿತಿಗತಿಗಳ ಬಗ್ಗೆ ವಿವರವಾಗಿ ವಿವೇಚಿಸಿ, ದೇಶಕ್ಕೊದಗಿದ ಚಿಂತೆಯ ಮೂಲವನ್ನು ಶೋಧಿಸುತ್ತಾರೆ. "ನಮ್ಮ ಧರ್ಮ ಸಂಸ್ಕೃತಿಗಳಲ್ಲಿ ಹುದುಗಿದ್ದ ಅಮೋಘ ಭಾವನೆಗಳನ್ನು ಶತಮಾನಗಳಿಂದ ಆ ಭಾವನೆಗಳ ಪರಿಚಯವೇ ಆಗಿರದ ಹಿಂದುಳಿದ ಜನರಿಗೆ ತಿಳಿಸಿಕೊಡುವುದಿರಲಿ, 'ಧರ್ಮಕರ್ಮ ಎಂದೇ ನಾವು ಕೆಟ್ಟೆವು, ಅದು ಮೋಸ, ಮೂಢನಂಬಿಕೆ, ಶೋಷಣೆ' ಎಂಬಂಥ ಪ್ರಚಾರವೇ ನಮ್ಮ ಮುಖಂಡರಿಂದ ನಡೆದುದು ಎಂಥ ವಿಪರ್ಯಾಸ ಹಾಗೂ ದುರಂತ!'' ಎನ್ನುತ್ತಾರೆ.
'ಮನುಷ್ಯನ ಪರಿಪೂರ್ಣ ಅಭ್ಯುದಯಕ್ಕೆ, ಸಮಾಜ ಕಲ್ಯಾಣಕ್ಕೆ ಭಾರತೀಯ ದೃಷ್ಟಿಕೋನ ಅತ್ಯಂತ ಅವಶ್ಯಕ' ಎಂಬ ಪ್ರಸಿದ್ಧ ಆಂಗ್ಲ ಇತಿಹಾಸಜ್ಞ ಅರ್ನಾಲ್ಡ ಟೊಯನ್ಬಿಯ ಮಾತನ್ನು ನೆನೆದು, ನಾಗರಿಕತೆಯ ಹೆಸರಿನಲ್ಲಿ ನಮ್ಮ ಮುಂದಾಳುಗಳು ಅನಾಗರಿಕವಾಗಿ ನಡೆಯುತ್ತಿದ್ದುದರ ಕಡೆಗೆ ನಮ್ಮ ಲಕ್ಷ್ಯ ಸೆಳೆಯುತ್ತಾರೆ. ವಿದ್ಯೆಯ ವ್ಯಾಪಾರ, ಕಾಳಸಂತೆ, ಭ್ರಷ್ಟಾಚಾರ ತಾಂಡವ ನಡೆಸಿದ ಚಿತ್ರಣ ಕೊಡುತ್ತಾರೆ. ಇಂದಿನ ನೈತಿಕ ಅಧಃಪತನಕ್ಕೆ ಹೊಣೆಯಾರು ಎಂದು ಕೇಳುತ್ತಾರೆ. ಗಂಧೀಜಿ, ವಿವೇಕಾನಂದರ ಮಾತುಗಳನ್ನು ಹಿತವಚನಗಳನ್ನು ಉದ್ಧರಿಸಿ ಇಂದಿಗೂ ಅವು ಹೇಗೆ ಪ್ರಸ್ತುತವಾಗಿವೆ ಎಂಬುದನ್ನು ತೋರಿಸುತ್ತಾರೆ.
ಸ್ವಾಮಿ ವಿವೇಕಾನಂದರ ಅಮೃತ ಸಂದೇಶ ಹೇಗಿದೆ ನೋಡಿ: ` ಚೆದುರಿಹೋಗಿರುವ ಅಧ್ಯಾತ್ಮಿಕ ಶಕ್ತಿಯನ್ನು ಸಂಗ್ರಹಿಸುವುದೇ ಭರತಖಂಡದ ರಾಷ್ಟ್ರೀಯ ಏಕತೆಯ ರಹಸ್ಯ. ನಮ್ಮ ಆತ್ಮೋದ್ಧಾರ ಆಗಬೇಕಿದ್ದರೆ ನಮ್ಮನಮ್ಮಲ್ಲೆ ಕಾದಾಡುವುದನ್ನು ನಾವು ಮರೆಯಬೇಕಾಗಿದೆ.'... `ಜನಸಮೂಹದ ಧಾರ್ಮಿಕ ಭಾವನೆಗಳಿಗೆ ಹಿಂಸೆ ಮಾಡದೆ ಅವರನ್ನು ಮೇಲಕ್ಕೊಯ್ಯಬೇಕು' ಎನ್ನುತ್ತಾರೆ.
ಚಿತೆ ಮತ್ತು ಚಿಂತೆ ಇವುಗಳಲ್ಲಿ ಬಿಂದು ಮಾತ್ರ ವ್ಯತ್ಯಾಸವಿದೆ ನೋಡಿ.
ಚಿತೆ ದೇಹವನ್ನು ಸುಟ್ಟರೆ, ಚಿಂತೆ ದೇಹವನ್ನೂ ಮನವನ್ನೂ ಸುಡುತ್ತದೆ.
ಚಂದ್ರನಂತೆ ಬೆಳಗುವ ಶಾಂತ ಮನಕ್ಕೆ ರಾಹುವಾಗಿ ಕಾಡುವುದು ಚಿಂತೆ.
ಹೆಚ್ಚಿನ ಕಾಯಿಲೆಗಳ ಮೂಲವೇ ಚಿಂತೆ, ಸುಖದ ನಿಜ ಶತ್ರುವೇ ಚಿಂತೆ.
'ಚಿಂತಿ ಯಾಕ ಮಾಡತೀದಿ ಚಿನ್ಮಯನಿದ್ದಾನೆ' ಎಂದು ಹಾಡಿ ದಾಸರು ನಿಶ್ಚಿಂತರಾದರು.
(`ಜೀವಿ' ವಚನ 55-1)
Tags: ವಿವೇಕ ಪ್ರಕಾಶನ, ಸ್ವಾಮಿ ಜಗದಾತ್ಮಾನಂದ, ಬದುಕಲು ಕಲಿಯಿರಿ, ಡಾ.ಎ.ಚಂದ್ರಶೇಖರ ಉಡುಪ, ಕು.ಶಿ.ಹರಿದಾಸ ಭಟ್ಟ, gv kulkarni.