ಸ್ವಾಮಿ ಮತ್ತು ಅವನ ಸ್ನೇಹಿತರು

ಸ್ವಾಮಿ ಮತ್ತು ಅವನ ಸ್ನೇಹಿತರು

ಪುಸ್ತಕದ ಲೇಖಕ/ಕವಿಯ ಹೆಸರು
ಆರ್.ಕೆ. ನಾರಾಯಣ್
ಪ್ರಕಾಶಕರು
ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಪುಸ್ತಕದ ಬೆಲೆ
ರೂ.75/-

ಭಾರತೀಯ ಇಂಗ್ಲಿಷ್ ಸಾಹಿತ್ಯದ ಅಗ್ರ ಲೇಖಕರಲ್ಲಿ ಒಬ್ಬರಾದ ಆರ್.ಕೆ. ನಾರಾಯಣ್ ಅವರ ಜಗತ್ಪ್ರಸಿದ್ಧ ಕೃತಿ “ಸ್ವಾಮಿ ಮತ್ತು ಅವನ ಸ್ನೇಹಿತರು”. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಎಚ್.ವೈ. ಶಾರದಾ ಪ್ರಸಾದ್. 19 ಅಧ್ಯಾಯಗಳಿರುವ ಈ ಕೃತಿಗೆ ಚಂದದ ಚಿತ್ರಗಳನ್ನು ಬರೆದಿದ್ದಾರೆ ಮನೋಭೀರಾಮ್ ಚಕ್ರವರ್ತಿ.

ಈ ಕೃತಿಯನ್ನು ಓದುತ್ತಾ ಹೋದಂತೆ, 1950-70ರ ದಶಕಗಳಲ್ಲಿ ಭಾರತದ ಹಳ್ಳಿಗಳಲ್ಲಿ ಹಾಗೂ ಸಣ್ಣ ಪಟ್ಟಣಗಳಲ್ಲಿ ಹುಟ್ಟಿ ಬೆಳೆದ ಎಲ್ಲರಿಗೂ ತಮ್ಮ ಬಾಲ್ಯಕಾಲಕ್ಕೆ ಹೋದಂತೆ ಅನಿಸುತ್ತದೆ. ಅಂದಿನ ದಿನಗಳ ಗ್ರಾಮೀಣ ಭಾರತದ ಬದುಕನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ ಇಲ್ಲಿನ ಅಧ್ಯಾಯಗಳು. ಆ ಬದುಕನ್ನು ನೋಡುವುದು ಸ್ವಾಮಿ ಎಂಬ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯ ದೃಷ್ಟಿಯಿಂದ. ಅವನ ಮುಗ್ಧತೆ, ಪೆದ್ದುತನ, ಗೊಂದಲಗಳು, ತುಂಟಾಟಗಳು ಹಾಗೂ ಭಾವನೆಗಳು ಎಲ್ಲ ಅಧ್ಯಾಯಗಳಲ್ಲಿಯೂ ಸಮರ್ಥವಾಗಿ ಮೂಡಿ ಬಂದಿವೆ. ಒಬ್ಬ ಬಾಲಕನ ಕಣ್ಣಿನಿಂದಲೇ ಸುತ್ತಲಿನ ಜಗತ್ತನ್ನು ಆರ್. ಕೆ. ನಾರಾಯಣರು ಚಿತ್ರಿಸಿದ ಪರಿ ಕಂಡಾಗ ಅಚ್ಚರಿಯಾಗುತ್ತದೆ.

“ಮಾಲ್ಗುಡಿ ಡೇಸ್” ಎಂಬ ಹೆಸರಿನಲ್ಲಿ ಈ ಚಿತ್ರಕತೆಗಳ ಸರಣಿ ದೂರದರ್ಶನದಲ್ಲಿ ಪ್ರಸಾರವಾಗ ತೊಡಗಿದಾಗಲಂತೂ ಸ್ವಾಮಿ ಮತ್ತು ಅವನ ಗೆಳೆಯರು ಭಾರತದ ಉದ್ದಗಲದಲ್ಲಿ ಮನೆಮಾತಾದರು. “ಮಾಲ್ಗುಡಿ” ಎಂಬ ಹಳ್ಳಿಯೊಂದು ಭಾರತದ ಕರ್ನಾಟಕದಲ್ಲಿ ನಿಜಕ್ಕೂ ಇದೆಯೆಂದೇ ಹಲವರು ನಂಬಿದರು.

ಅನುವಾದಕರಾದ ಹೆಚ್.ವೈ. ಶಾರದಾಪ್ರಸಾದರು ಕೃತಿಯ ಪ್ರಸ್ತಾವನೆಯಲ್ಲಿ ಬರೆದ ಮಾತುಗಳು: “ಇಂದಿನ ಭಾರತೀಯ ಸಾಹಿತ್ಯದಲ್ಲಿ ಆರ್.ಕೆ. ನಾರಾಯಣರ ಹೆಸರು ಎದ್ದು ನಿಲ್ಲುವಂಥದು. ಅರವತ್ತು ವರ್ಷದಿಂದ ಅವರು ಬರೆಯುತ್ತಿರುವ ಕಾದಂಬರಿಗಳಲ್ಲಿ ಕಥೆಗಳಲ್ಲಿ ನಮ್ಮ ದೇಶದ ಸಾಮಾನ್ಯ ಜನರ ಮತ್ತು ಅನುದಿನದ ಜೀವನದ ಚಿತ್ರಣ ಎಷ್ಟು ನೈಜವಾಗಿ ಬಂದಿದೆಯೆಂದರೆ ಅವರು ಪರಭಾಷೆಯಲ್ಲಿ ಬರೆಯುತ್ತಿದ್ದಾರೆ ಎಂದು ಅನಿಸುವುದೇ ಇಲ್ಲ. ಅವರು ಕಲ್ಪಿಸಿದ ಮಾಲ್ಗುಡಿ ನಕ್ಷೆಯ ಮೇಲಿರುವ ಊರುಗಳಿಗಿಂತ ಸತ್ಯವಾದ್ದು, ಸಜೀವವಾದ್ದು.

“ಸ್ವಾಮಿ ಎಂಡ್ ಫ್ರೆಂಡ್ಸ್” ಎಂಬುದು ಅವರ ಮೊದಮೊದಲ ಪುಸ್ತಕಗಳಲ್ಲಿ ಒಂದು. ಅದು ಪ್ರಕಟವಾದೊಡನೆಯೇ ಕ್ಲಾಸಿಕ್ ಪಟ್ಟ ಪಡೆಯಿತು. ಅದು ಹೊರಬಿದ್ದ ಹೊಸದರಲ್ಲಿಯೇ, ಅದನ್ನು ಕನ್ನಡಕ್ಕೆ ಹಾಕುವ ಸುಯೋಗ ನನಗೆ ಸಿಕ್ಕಿತು. ಮೈಸೂರಲ್ಲಿ ಅವರ ಪಕ್ಕದ ಮನೆಯಲ್ಲಿಯೇ ವಾಸಿಸುತ್ತಿದ್ದ ಮತ್ತು ಅವರ ತಮ್ಮಂದಿರ ಸಹಪಾಠಿಯಾದ ಕಿರಿಯನಿಗೆ ಪ್ರೋತ್ಸಾಹ ಕೊಡೋಣ ಎಂದು ಆ ಅನುವಾದ ಕೈಗೊಳ್ಳುವ ಅವಕಾಶ ಅವರು ನನಗೆ ಕೊಟ್ಟಿರಬೇಕು. ಮಾಲ್ಗುಡಿ ತಮಿಳು ಸೀಮೆಯಲ್ಲಿತ್ತು ಎನಿಸಿದರೂ ನಾರಾಯಣರ ಕಾದಂಬರಿಗಳಲ್ಲಿ ಚಿತ್ರಿಸಿರುವ ಬದುಕು ಬಹುಮಟ್ಟಿಗೆ ಹಳೆ ಮೈಸೂರಿನ ಬದುಕು. ಸ್ವಾಮಿ ಆಡುತ್ತಿದ್ದ ಮಾತು, ಆಟ ನನ್ನ ಸುತ್ತಿನ ಮಾತು, ಆಟ ಎಂದೆನಿಸಿತು ನನಗೆ. ಖುಷಿಯಾಗಿ ಅನುವಾದಿಸಿದೆ. ಶ್ರಮವೆನಿಸಲಿಲ್ಲ. ತಾಯಿನುಡಿಯಿಂದ ಇಂಗ್ಲಿಷಿಗೆ ಹೋಗಿದ್ದುದನ್ನು ಮತ್ತೆ ತಾಯಿನುಡಿಗೆ ಒಪ್ಪಿಸುತ್ತಿದ್ದೇನೆ ಎಂಬ ಭಾವನೆ ಬಂತು. …. ಲೂಯಿ ಕೇರಾಲ್-ನ ಆಲಿಸ್ ಇದ್ದಂತೆ, ಮಾರ್ಕ್ ಟ್ವೆನನ ಟಾಮ್ ಸಾಯರ್ ಇದ್ದಂತೆ, ಕಿಪ್ಲಿಂಗ್-ನ ಕಿಮ್ ಇದ್ದಂತೆ ನಾರಾಯಣರ ಸ್ವಾಮಿಯೂ ಒಬ್ಬ ಚಿರಂಜೀವಿ. ಪ್ರತಿ ತಲೆಮಾರಿನ ಮಕ್ಕಳಿಗೂ ಒಡನಾಡಿ….”

ಮೂರನೆಯ ಅಧ್ಯಾಯ “ಸ್ವಾಮಿಯ ಅಜ್ಜಿ”ಯಲ್ಲಿರುವ “ಅಜ್ಜಿ ಮತ್ತು ಸ್ವಾಮಿ”ಯ ಸಂವಾದಗಳು ಮನೆಯಲ್ಲೊಬ್ಬ ಅಜ್ಜಿ ಇದ್ದರೆ ಮೊಮ್ಮಕ್ಕಳಿಗೆ ಆಕೆ ಹೇಗೆ ಆತ್ಮಸಂಗಾತಿ ಆಗುತ್ತಾಳೆ ಎಂಬುದನ್ನು ಚಿತ್ರಿಸುತ್ತವೆ. ಜೊತೆಗೆ, ಅದರ ಒಂದು ಪಾರಾ “ವಾರಾಂತ್ಯ”ದ ಬಗ್ಗೆ ಶಾಲಾ ಮಕ್ಕಳ ಕನಸುಕಲ್ಪನೆಗಳೇನು ಎಂಬುದನ್ನು ಹೀಗೆ ವಿವರಿಸುತ್ತವೆ: “ಶನಿವಾರ ಮಧ್ಯಾಹ್ನ. ಶನಿವಾರ ಭಾನುವಾರ ಬರುವುದು ಎಷ್ಟೊಂದು ಅಪರೂಪ! ಅಂಥಾದ್ದರಲ್ಲಿ ಆ ದಿನವೆಲ್ಲ ಮನೆಯಲ್ಲೇ ಇದ್ದುಕೊಂಡು ಅಮ್ಮನ ಕೈಲೊ ಅಜ್ಜೀ ಕೈಲೊ ಮಾತನಾಡುವುದು, ಇಲ್ಲದೆ ಹೋದರೆ ಲೆಕ್ಕ ಮಾಡುವುದು - ಹೀಗೆ ಕಾಲ ಪೋಲು ಮಾಡುವುದು ಸರಿಯಲ್ಲವೆಂದು ಸ್ವಾಮಿಯ ಅಭಿಪ್ರಾಯ. ಮಧ್ಯಾಹ್ನ ಮನೆಯಲ್ಲಿ ಇದ್ದು ಲೆಕ್ಕ ಮಾಡಬೇಕೆ ಹೊರತು ಅಲ್ಲಿ ಇಲ್ಲಿ ಅಳೆಯಲು ಹೋಗಕೂಡದು ಎಂದು ಅಪ್ಪ ಕಟ್ಟಪ್ಪಣೆ ಮಾಡಿದ್ದರು. ಆದರೆ ಆ ಅಪ್ಪಣೆಯ ಹಾಗೆ ನಡೆದುಕೊಂಡವರಾರು?”

ಕೊನೆಯ ಅಧ್ಯಾಯ “ಉಡುಗೊರೆ”. ಪೊಲೀಸ್ ಸೂಪರಿಂಟೆಂಡೆಂಟ್ ಅವರ ಮಗ ರಾಜಂ ಸ್ವಾಮಿಯ ಜೀವದ ಗೆಳೆಯ.  ತಂದೆಗೆ ತಿರುಚಿನಾಪಳ್ಳಿಗೆ ವರ್ಗವಾದ ಕಾರಣ ರಾಜಂನ ಕುಟುಂಬ ಮಾಲ್ಗುಡಿಯಿಂದ ರೈಲಿನಲ್ಲಿ ಮುಂಜಾನೆ ಹೊರಡುತ್ತದೆ. ರಾಜಂಗೆ ಏನು ಉಡುಗೊರೆ ಕೊಡಬೇಕೆಂಬ ಚಿಂತೆಯಲ್ಲಿ ಸ್ವಾಮಿ ರಾತ್ರಿಯೆಲ್ಲ ನಿದ್ದೆಗೆಟ್ಟಿದ್ದ. ಕೊನೆಗೊಂದು ಆಂಡರ್-ಸನ್ ಬರೆದ ಕತೆಗಳ ಪುಸ್ತಕವನ್ನು ತನ್ನ ನೆನಪಿಗಾಗಿ ಉಡುಗೊರೆ ಕೊಡಲು ರೈಲು ನಿಲ್ದಾಣಕ್ಕೆ ತಂದಿದ್ದ. ವಿದಾಯದ ಮುಂಚಿನ ದಿನಗಳ ವಿವರಗಳು ಮತ್ತು ವಿದಾಯದ ಕ್ಷಣಗಳ ಚಿತ್ರಣ ಓದುತ್ತಿದ್ದಂತೆ ನಮ್ಮ ಕಣ್ಣುಗಳು ಮಂಜಾಗುತ್ತವೆ. ಅದು ಆರ್.ಕೆ. ನಾರಾಯಣರ ಪ್ರತಿಭೆ ಮತ್ತು ಸಶಕ್ತ ಬರವಣಿಗೆಯ ಪುರಾವೆ.