ಸ್ವಾಮಿ ಮತ್ತು ಅವನ ಸ್ನೇಹಿತರು
ಸ್ವಾಮಿ ಮತ್ತು ಅವನ ಸ್ನೇಹಿತರು ಖ್ಯಾತ ಸಾಹಿತಿ ಆರ್.ಕೆ.ನಾರಾಯಣ್ ಅವರ ಮಾಲ್ಗುಡಿ ಡೇಸ್ ಎಂಬ ಕಥಾ ಸಂಕಲನದ ಒಂದು ಕಥಾ ಭಾಗ. ಕನ್ನಡದ ಖ್ಯಾತ ನಟ, ನಿರ್ದೇಶಕ ಶಂಕರ್ ನಾಗ್ ಈ ಕಥೆಗಳನ್ನು ಕಿರುತೆರೆಗೆ ಧಾರವಾಹಿ ರೂಪದಲ್ಲಿ ತಂದಿದ್ದು ಎಲ್ಲರಿಗೂ ತಿಳಿದ ವಿಷಯ. ಹಿಂದಿಯಲ್ಲಿ ಬಹಳ ಹಿಂದೆ ಪ್ರಸಾರವಾದ ಮಾಲ್ಗುಡಿ ಡೇಸ್ ಈಗ ಮತ್ತೆ ಕನ್ನಡಕ್ಕೆ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.
ಸ್ವಾಮಿ ಮತ್ತು ಅವನ ಸ್ನೇಹಿತರು ಎಂಬ ಕಥೆಯು ಸ್ವಾಮಿನಾಥನ್ ಎಂಬ ೧೦ ವರ್ಷದ ಮುಗ್ಧ ಬಾಲಕನ ಸುತ್ತ ತಿರುಗುತ್ತದೆ. ಖಡಕ್ ಆಗಿರುವ ಅಪ್ಪ, ಎರಡನೇ ಮಗುವಿನ ಪಾಲನೆಯಲ್ಲೇ ಬಿಸಿಯಾಗಿರುವ ಅಮ್ಮ, ಜೀವಕ್ಕಿಂತ ಜಾಸ್ತಿ ಪ್ರೀತಿಸುವ ಅಜ್ಜಿ. ಶಾಲೆಯ ಮೇಷ್ಟುಗಳು, ಅವರು ನೀಡುವ ಹೋಮ್ ವರ್ಕ್ ಹೀಗೆ ಸ್ವಾಮಿ ತನ್ನ ಜೀವನ ಕಳೆಯುತ್ತಿರುತ್ತಾನೆ.
ಆಗ ಅವನ ಶಾಲೆಗೆ ಪ್ರವೇಶ ಪಡೆಯುವ ರಾಜಂ ಎಂಬ ಹುಡುಗನ ಬಗ್ಗೆ ಮೊದ ಮೊದಲು ಸ್ವಾಮಿ ಮತ್ತು ಅವನ ಗೆಳೆಯ ಮಣಿಗೆ ಹೆದರಿಕೆಯಾಗುತ್ತೆ. ಆದರೆ ದಿನ ಕಳೆದಂತೆ ರಾಜಂ ಪೋಲೀಸ್ ಆಫೀಸರ್ ಓರ್ವನ ಮಗನಾದರೂ ಇವರೊಂದಿಗೆ ಒಬ್ಬನಾಗಿ ಬಿಡುತ್ತಾನೆ. ಸ್ವಾಮಿ ಮತ್ತು ಗೆಳೆಯರು ಸೇರಿ ತಿರುಗಾಡಲು ಹೋಗುವುದು, ತಮ್ಮ ತಮ್ಮ ಮನೆಯಿಂದ ತಂದ ತಿಂಡಿಯನ್ನು ಹಂಚಿಕೊಂಡು ತಿನ್ನುವುದು ಇವೆಲ್ಲಾ ನಮ್ಮ ಬಾಲ್ಯವನ್ನು ನೆನಪಿಸುತ್ತವೆ.
ಸ್ವಾಮಿ ಅಗತ್ಯವಾಗಿ ಆಡಲೇ ಬೇಕಾದ ಕ್ರಿಕೆಟ್ ಪಂದ್ಯಾಟದ ದಿನ ಬಾರದೇ ಅನಿವಾರ್ಯವಾಗಿ ತಪ್ಪಿಸಿಕೊಳ್ಳುತ್ತಾನೆ. ಇದರಿಂದ ರಾಜಂಗೆ ಬಹಳ ಬೇಜಾರಾಗುತ್ತದೆ. ರಾಜಂನ ಬೇಸರವನ್ನು ಸರಿ ಪಡಿಸಲು ಸ್ವಾಮಿ ಬಹಳಷ್ಟು ಪ್ರಯತ್ನ ಪಡುತ್ತಾನೆ. ಆದರೆ ಸಫಲನಾಗುವುದಿಲ್ಲ. ಕಥೆಯ ಕೊನೆಯಲ್ಲಿ ರಾಜಂ ತಂದೆಗೆ ಬೇರೆ ಊರಿಗೆ ವರ್ಗಾವಣೆಯಾಗುತ್ತದೆ. ಇದರಿಂದ ಸ್ವಾಮಿ ಭಾರೀ ವ್ಯಥೆಗೆ ಒಳಗಾಗುತ್ತಾನೆ ಮತ್ತು ಕೊನೆಯ ಬಾರಿ ರಾಜಂ ಭೇಟಿಯಾಗಲು ರೈಲು ನಿಲ್ದಾಣಕ್ಕೆ ಬರುತ್ತಾನೆ. ರಾಜಂಗಾಗಿ ಒಂದು ಪುಟ್ಟ ಉಡುಗೊರೆಯನ್ನೂ ತಂದಿರುತ್ತಾನೆ. ಆದರೆ ಕೊಡಲು ಧೈರ್ಯ ಬಾರದೇ ಮಣಿಯ ಕೈಯಲ್ಲಿ ಕೊಟ್ಟು ರಾಜಂಗೆ ಕೊಡಿಸುತ್ತಾನೆ. ಹೀಗೆ ಹತ್ತು ಹಲವಾರು ಬಾಲ್ಯದ ನೆನಪುಗಳನ್ನು, ಆ ಸಮಯದ ಮುಗ್ದತೆಯನ್ನು ಈ ಕಥೆಯು ಅನಾವರಣಗೊಳಿಸುತ್ತದೆ.
ಆಂಗ್ಲ ಭಾಷೆಯಲ್ಲಿ ಆರ್.ಕೆ.ನಾರಾಯಣ್ ಬರೆದ ಕಥೆಯು ಕನ್ನಡಾನುವಾದ ಮಾಡುವಾಗ ತುಂಬಾ ತಪ್ಪುಗಳನ್ನು ಹೊಂದಿದೆ. ಕೆಲವು ಕ್ಲಿಷ್ಟಕರ ಪದಗಳೂ ನುಸುಳಿವೆ. ಭಾವಾನುವಾದದ ಬದಲು ಶಬ್ದಾನುವಾದ ಮಾಡಿದ್ದೇ ಈ ಆಭಾಸಕ್ಕೆ ಪ್ರಮುಖ ಕಾರಣ. ಉತ್ತಮ ಅನುವಾದವಿದ್ದಿದ್ದರೆ ಈ ಪುಸ್ತಕ ಇನ್ನಷ್ಟು ಓದಲು ಹಿತಕರವೆನಿಸುತ್ತಿತ್ತು ಎಂಬುವುದು ಸತ್ಯ. ಸುಮಾರು ೨೦೦ ಪುಟಗಳನ್ನು ಹೊಂದಿದ ಪುಸ್ತಕ ಅಲ್ಲಲ್ಲಿ ರೇಖಾಚಿತ್ರಗಳನ್ನು ಹೊಂದಿದೆ.