ಸ್ವಾಮಿ ವಿವೇಕಾನಂದರು ನಿಮಗೆ ಗೊತ್ತೇ?

ಸ್ವಾಮಿ ವಿವೇಕಾನಂದರು ನಿಮಗೆ ಗೊತ್ತೇ?

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ : ನಿತಿನ್ ಅಗರ್ ವಾಲ್, ಕನ್ನಡಕ್ಕೆ: ಬೆ.ಗೋ. ರಮೇಶ್
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ. ೧೧೦.೦೦, ಮುದ್ರಣ: ಎಪ್ರಿಲ್ ೨೦೨೪

ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಬಗ್ಗೆ ಸಾವಿರಾರು ಕೃತಿಗಳು ಹೊರಬಂದಿವೆ. ನಿತಿನ್ ಅಗರ್ ವಾಲ್ ಅವರು ಆಂಗ್ಲಭಾಷೆಯಲ್ಲಿ ಬರೆದ ಪುಸ್ತಕವೊಂದು ‘ಸ್ವಾಮಿ ವಿವೇಕಾನಂದರು ನಿಮಗೆ ಗೊತ್ತೇ?’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಗೊಂಡಿದೆ. ಅನುವಾದ ಮಾಡಿದವರು ಖ್ಯಾತ ಲೇಖಕರಾದ ಬೆ. ಗೋ. ರಮೇಶ್ ಅವರು. ಈ ಕೃತಿಯು ಮಕ್ಕಳಿಗೆ ಬಹಳ ಉಪಯುಕ್ತವಾಗಿದೆ. ಇದಕ್ಕೆ ಬಳಸಿದ ಅಕ್ಷರಗಳ ಆಕಾರ ದೊಡ್ಡದಾಗಿದ್ದು, ಪುಟ ಪುಟಗಳಲ್ಲೂ ರೇಖಾ ಚಿತ್ರಗಳಿವೆ. ಮಕ್ಕಳಿಗೆ ಓದಿ ಮನನ ಮಾಡಲು ಸುಲಭವಾಗಿದೆ. 

‘ಸ್ವಾಮಿ ವಿವೇಕಾನಂದ ಯಾರು?’ ಎನ್ನುವ ಅಧ್ಯಾಯದಿಂದ ಪ್ರಾರಂಭವಾಗುವ ಈ ಕೃತಿಯು ವಿವೇಕಾನಂದರ ಜನ್ಮ, ಬಾಲ್ಯ, ಪರಿವಾರದ ಬಗ್ಗೆ ವಿವರವಾಗಿ ತಿಳಿಸುತ್ತದೆ. ‘ಶಿಷ್ಯರ ತರಬೇತಿ’ ಎಂಬ ಅಧ್ಯಾಯದಲ್ಲಿ ವಿವೇಕಾನಂದರ ಹಾಗೂ ರಾಮಕೃಷ್ಣ ಪರಮಹಂಸರ ಭೇಟಿ, ಪರಮಹಂಸರನ್ನು ಗುರುಗಳಾಗಿ ಸ್ವೀಕರಿಸಿದ ಭಾವ, ವಿವೇಕಾನಂದರ ಮನಸ್ಸಿನಲ್ಲಿದ್ದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡಿದ ರಾಮಕೃಷ್ಣರ ಬಗ್ಗೆ ವಿವರಗಳಿವೆ. ರಾಮಕೃಷ್ಣರಿಂದ ದೀಕ್ಷೆಯನ್ನು ಸ್ವೀಕರಿಸಿ ಓರ್ವ ತಿರುಗಾಡುವ ಸನ್ಯಾಸಿಯಾಗಿ ವಿವೇಕಾನಂದರು ಭೇಟಿ ನೀಡಿದ ಸ್ಥಳಗಳು, ಅಮೇರಿಕಾ ಭೇಟಿ ಮತ್ತು ಅಲ್ಲಿ ಅವರು ನೀಡಿದ ಜಗತ್ ವಿಖ್ಯಾತ ಭಾಷಣ ಬಗ್ಗೆ ವಿವರಗಳನ್ನು ನೀಡುವ ಅಧ್ಯಾಯಗಳಿವೆ. 

ಭಾರತಕ್ಕೆ ಮರಳಿದಾಗ ಅವರಿಗೆ ನೀಡಿದ ಅದ್ಭುತ ಸ್ವಾಗತ, ರಾಮಕೃಷ್ಣ ಮಿಶನ್ ಸ್ಥಾಪನೆ ಮತ್ತು ವಿವೇಕಾನಂದರ ಕೊನೆಯ ದಿನಗಳ ಬಗ್ಗೆ ವಿವರಗಳಿವೆ. ಪ್ರತೀ ಅಧ್ಯಾಯಕ್ಕೂ ಮೊದಲು ವಿವೇಕಾನಂದರ ದಿವ್ಯ ಸಂದೇಶವಾಣಿಗಳಿವೆ. ವಿವೇಕಾನಂದರು ವಿಶೇಷವಾಗಿ ಮಹಿಳೆಯರನ್ನು ಗೌರವಿಸುವ, ಗೌರವಾದರಗಳಿಂದ ಕಾಣುವ ವರ್ತನೆಯನ್ನು ಬೆಳೆಸಿಕೊಂಡಿದ್ದರು. ೪೦ ವರ್ಷ ಮೀರಿ ಒಂದು ದಿನವೂ ತಾವು ಜೀವಿಸುವುದಿಲ್ಲ ಎಂದು ವಿವೇಕಾನಂದರು ಭವಿಷ್ಯ ನುಡಿದಿದ್ದರು. ಅದರಂತೆ ಅವರು ೩೯ನೇ ವಯಸ್ಸಿನಲ್ಲಿ ನಿಧನರಾದರು. ಇವರ ಜೀವನ ಚರಿತ್ರೆಯ ಈ ಕೃತಿ ಮಾಹಿತಿಯಿಂದ ತುಂಬಿಕೊಂಡಿದೆ ಮತ್ತು ಸಮರ್ಥಿಸುವಂತಹ ಸಚಿತ್ರ ವಿವರಣೆಯ ಮೂಲಕ ಉಲ್ಲಾಸವನ್ನುಂಟು ಮಾಡುತ್ತದೆ. ೧೩೩ ಪುಟಗಳ ಈ ಕೃತಿಯ ಕೊನೆಯ ಪುಟಗಳಲ್ಲಿ ಸ್ವಾಮಿ ವಿವೇಕಾನಂದರ ಸಂಕ್ಷಿಪ್ತ ಮಾಹಿತಿ, ಕಾಲರೇಖೆ, ರಸ ಪ್ರಶ್ನೆಗಳನ್ನು ನೀಡಲಾಗಿದೆ.