ಸ್ವಾಮಿ ವಿವೇಕಾನಂದರ ಕಥಾಸಂಚಯ
ಧರ್ಮ, ನೈತಿಕತೆ ಮತ್ತು ತತ್ವಗಳನ್ನು, ಅವುಗಳ ಸೂಕ್ಷ್ಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಕತೆಗಳು ಮತ್ತು ಉಪಮೆಗಳು ಅತ್ಯಾವಶ್ಯಕ. ಉಪನಿಷತ್ತುಗಳಲ್ಲಿ ಬುದ್ಧ ಅವರಂತಹ ಬೋಧಕರ ಬೋಧನೆಗಳಲ್ಲಿ ಸುಂದರವಾದ ಕತೆಗಳು, ಉಪಕತೆಗಳು ಹೇರಳ. ಇವುಗಳಲ್ಲಿ ಸರಳ ಭಾಷೆಗಳಲ್ಲಿ ಅತಿ ಸಾಮಾನ್ಯ ಘಟನೆಗಳ ಮೂಲಕ ಜನಸಾಮಾನ್ಯರಿಗೂ ಅರ್ಥವಾಗುವಂತೆ ಉದಾತ್ತ ತತ್ವಗಳನ್ನು ತಿಳಿಸಲಾಗಿದೆ.
ವಿಶ್ವದ ಶ್ರೇಷ್ಠ ಕತೆಗಾರರಾದ ಸ್ವಾಮಿ ವಿವೇಕಾನಂದರ ಪ್ರವಚನಗಳಲ್ಲಿ ಇಂತಹ ಕತೆಗಳು ವಿಪುಲ. ತಮ್ಮ ಗುರುಗಳಿಂದ ಕಲಿತ ವಿಚಾರಗಳನ್ನು ಮತ್ತು ತಮ್ಮ ವೇಧಾಶಕ್ತಿಯಿಂದ ಗಳಿಸಿದ್ದ ಜ್ನಾನವನ್ನು ಕೇಳುಗರೊಂದಿಗೆ ಹಂಚಿಕೊಳ್ಳುವಾಗ ನೂರಾರು ಕತೆಗಳನ್ನು ಅವರು ಪರಿಣಾಮಕಾರಿಯಾಗಿ ಬಳಸಿದ್ದಾರೆ. ಸಪ್ಪೆ ಎನಿಸುವಂತಹ ಕತೆಗಳನ್ನೂ ಮಾರ್ಮಿಕವಾಗಿ ನಿರೂಪಿಸುವುದರಲ್ಲಿ ಸ್ವಾಮಿ ವಿವೇಕಾನಂದರು ಅಪ್ರತಿಮರು. ಭಾರತೀಯ ಪರಂಪರೆಯ ಕತೆಗಳನ್ನು ವಿದೇಶೀಯರೂ ಮೆಚ್ಚುವಂತೆ ಸಾದರಪಡಿಸಿದ್ದು ಅವರ ಹೆಚ್ಚುಗಾರಿಕೆ.
ಸ್ವಾಮಿ ವಿವೇಕಾನಂದರು ನವಭಾರತ ನಿರ್ಮಾಣದ ಮೂಲಪುರುಷ. ನಿದ್ದೆಯಲ್ಲಿದ್ದ ಭಾರತೀಯರನ್ನು ಬಡಿದೆಬ್ಬಿಸಲಿಕ್ಕಾಗಿ, ನಮ್ಮ ಸಾವಿರಾರು ವರುಷಗಳ ಶ್ರೇಷ್ಠ ಪರಂಪರೆಯ ಬಗ್ಗೆ ಅಭಿಮಾನ ಮೂಡಿಸಲಿಕ್ಕಾಗಿ ಅವರು ಕ್ರಾಂತಿಕಾರಿ ವಿಚಾರಗಳನ್ನು ಹರಿಯಬಿಟ್ಟರು. ತಮ್ಮ ವಿಚಾರಮಂಡನೆಗೆ ಪೂರಕವಾಗಿ ಉಪನಿಷತ್ತುಗಳು, ಪುರಾಣಗಳು, ರಾಮಾಯಣ, ಮಹಾಭಾರತ, ಜನಪದ ಕತೆಗಳು, ರಾಜಮನೆತನದ ಮತ್ತು ವೀರಪುರುಷರ ಜೀವನಗಾಥೆಗಳು, ಪಾಶ್ಚಾತ್ಯ ಸಾಹಿತ್ಯದ ಕತೆಗಳು - ಈ ಮೊದಲಾದ ಆಕರಗಳಿಂದ ತಮ್ಮ ತತ್ತ್ವ ನಿರೂಪಣೆಗೆ ಹೊಂದುವ ಕತೆಗಳನ್ನು ಆಯ್ದು ಪ್ರಸ್ತುತಪಡಿಸಿದರು. ಈ ಪುಸ್ತಕದ ಕೆಲವು ಕತೆಗಳು ಅವರೇ ರೂಪಿಸಿದ ಕತೆಗಳು ಎನ್ನಬಹುದು.
ಸ್ವಾಮಿ ವಿವೇಕಾನಂದರು ಜನಜಾಗೃತಿ, ಶಿಕ್ಷಣ ಪದ್ಧತಿ, ಮಹಿಳಾ ಶಿಕ್ಷಣ, ಮಹಿಳೆಯರ ಸಬಲೀಕರಣ, ಸಮಾಜ ಸೇವೆ, ಭಾರತದ ಪರಂಪರೆ, ಸಾಮಾಜಿಕ ಲೋಪದೋಷಗಳು, ಪಾಶ್ಚಾತ್ಯರ ಬದುಕಿನ ವೈರುಧ್ಯಗಳು, ಯುವಜನಾಂಗದ ಸೋಮಾರಿತನ, ರಾಷ್ಟ್ರನಿರ್ಮಾಣಕ್ಕೆ ಕೈಜೋಡಿಸಬೇಕಾದ ಅಗತ್ಯ, ದೇವರು, ಧರ್ಮ, ಭಕ್ತಿ, ಮುಕ್ತಿ, ಆತ್ಮ - ಇಂತಹ ಹತ್ತುಹಲವು ವಿಷಯಗಳ ಬಗ್ಗೆ ಹೊಸ ಹೊಳಹುಗಳನ್ನು, ತೀಕ್ಷ್ಣ ಒಳನೋಟಗಳನ್ನು ನೀಡಿದವರು. ಇವೆಲ್ಲ ವಿಷಯಗಳು ಚಿಂತಕರ ಮನದಲ್ಲಿ ಬೇರು ಬಿಡುವಂತಾಗಲು ಅವರು ಕತೆಗಳನ್ನು ಪರಿಣಾಮಕಾರಿಯಾಗಿ ಬಳಸಿದರು.
ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಕೆ. ಅನಂತರಾಮು ಅವರು ಶ್ರೀ ರಾಮಕೃಷ್ಣ ಆಶ್ರಮದ "ವಿವೇಕ ಪ್ರಭ” ಪತ್ರಿಕೆಯಲ್ಲಿ “ಸ್ವಾಮಿ ವಿವೇಕಾನಂದರು ನಿರೂಪಿಸಿದ ನೀತಿಕತೆಗಳು” ಎಂಬ ಶೀರ್ಷಿಕೆಯಲ್ಲಿ ಈ ಕತೆಗಳನ್ನು ಧಾರಾವಾಹಿಯಾಗಿ ಪ್ರಕಟಿಸಿದರು. ಅವುಗಳ ಮೊದಲ ಸಂಪುಟವಾದ ಇದರಲ್ಲಿ ೧೨೦ ಕತೆಗಳಿವೆ (ಮೊದಲ ಮುದ್ರಣ ೨೦೧೭). ಎರಡನೆಯ ಸಂಪುಟ “ಸ್ವಾಮಿ ವಿವೇಕಾನಂದರ ಕಥಾಮಂಜರಿ” ೨೦೧೯ರಲ್ಲಿ ಪ್ರಕಟವಾಗಿದ್ದು, ಅದರಲ್ಲಿ ೧೩೦ ಕತೆಗಳಿವೆ. ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ತಿಳಿಯಬೇಕೆಂದು ಬಯಸುವ ಎಲ್ಲರೂ ಓದಲೇ ಬೇಕಾದ ಪುಸ್ತಕವಿದು.