ಸ್ವಾಮಿ ವಿವೇಕಾನಂದ
ಸ್ವಾಮಿ ವಿವೇಕಾನಂದರ ಬಗ್ಗೆ ಸಾವಿರಾರು ಪುಸ್ತಕಗಳು ಹೊರಬಂದಿವೆ. ಅವರ ಭಾಷಣಗಳ ಬಗ್ಗೆ, ಜೀವನದ ಬಗ್ಗೆ, ಚಿಂತನೆಗಳ ಬಗ್ಗೆ ಹಲವಾರು ಮಂದಿ ಪ್ರಖ್ಯಾತ ಲೇಖಕರು ತಮ್ಮ ಕೃತಿಗಳನ್ನು ರಚನೆ ಮಾಡಿದ್ದಾರೆ. ಅಂತಹ ಒಂದು ಕೃತಿ ಡಾ. ಪ್ರಭು ಶಂಕರ ಇವರು ಬರೆದ ‘ಸ್ವಾಮಿ ವಿವೇಕಾನಂದ’.
ಲೇಖಕರು ತಮ್ಮ ಮುನ್ನುಡಿ ‘ಪ್ರವೇಶ' ದಲ್ಲಿ “ ಇದು ಒಂದು ದೊಡ್ಡ ಜೀವದ ಕತೆ. ಭರತಖಂಡಕ್ಕಾಗಿ ಎದೆಯ ರಕ್ತವನ್ನು ಬಸಿದ ಉಜ್ವಲ ದೇಶಭಕ್ತನ ಕತೆ. ಸನಾತನ ಧರ್ಮವನ್ನು ಸಿಂಹ ಗರ್ಜನೆಯಿಂದ ದೇಶ ವಿದೇಶಗಳಲ್ಲಿ ಸಾರಿದ ವೇದಾಂತ ಕೇಸರಿಯ ಕತೆ. ಆತ್ಮಾನುಭವದ ಆನಂದದಲ್ಲಿ ಹಗಲಿರುಳೂ ತನ್ಮಯರಾಗಿದ್ದೂ ಜಗತ್ತಿಗೆ ಆ ಅನುಭವವನ್ನು ಸೂರೆ ಚೆಲ್ಲಿದ ಮಹಾಯೋಗಿಯ ಕತೆ.
ಮೇಲಿನ ಮಾತುಗಳು ಯಾರನ್ನು ಕುರಿತವು ಎಂಬುದು ಎಲ್ಲರಿಗೂ ತಿಳಿದದ್ದೇ. ಏಕೆಂದರೆ ಸ್ವಾಮಿ ವಿವೇಕಾನಂದರಲ್ಲದೆ ಬೇರೆ ಯಾವ ಒಬ್ಬ ವ್ಯಕ್ತಿಯಲ್ಲೂ, ಅವರಿಗಿಂತ ಮೊದಲಾಗಲಿ ಅನಂತರವಾಗಲಿ, ಉಜ್ವಲ ದೇಶ ಪ್ರೇಮ, ಧರ್ಮ ಪ್ರಸಾರ ಮತ್ತು ಆತ್ಮಾನುಭೂತಿ ಈ ಮೂರು ಅಂತಹ ಪ್ರಮಾಣದಲ್ಲಿ ಮುಪ್ಪುರಿಗೊಂಡಿರಲಿಲ್ಲ.
ಸ್ವಾಮಿ ವಿವೇಕಾನಂದರ ಮೂರು ತೆರನ ಭಾವಚಿತ್ರಗಳನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಒಂದು ದೇಶಪ್ರೇಮಿಯ ಚಿತ್ರ. ಕಾವಿಯ ಬಟ್ಟೆಯನ್ನುಟ್ಟು, ಅದೇ ಬಣ್ಣದ ಬಟ್ಟೆಯನ್ನು ಹೊದೆದು ದಂಡವನ್ನು ಹಿಡಿದು ಧೀರ ನಿಲುವಿನಲ್ಲಿ ನಿಂತ ಬೋಳು ಮಂಡೆಯ ಭವ್ಯ ವ್ಯಕ್ತಿಯನ್ನು ಅಲ್ಲಿ ಕಾಣುತ್ತೇವೆ. ಸ್ವಾಮಿ ವಿವೇಕಾನಂದರು ತಮ್ಮ ತಾಯ್ನಾಡಿನ ಮೇಲಣ ಅಪಾರ ಪ್ರೇಮದಿಂದ, ಈ ದೇಶದ ಉದ್ದಗಲಗಳನ್ನು ಬರಿಗಾಲಿನಲ್ಲಿ ಸುತ್ತಿ ಅದರ ಹೃದಯ ಮಿಡಿತವನ್ನು ಅರಿತ ದಿನಗಳ ಚಿತ್ರ. ಎರಡನೆಯದು ತಲೆಗೆ ಪೇಟ ಸುತ್ತಿ ಕೈಕಟ್ಟಿ ವೇದಾಂತ ತತ್ವಗಳನ್ನು ಮೊಳಗಲು ನಿಂತ ಧೀರ ಭಂಗಿ. ಮೂರನೆಯದು ಕಮಲದ ದಳಗಳಂತಹ ತಮ್ಮ ಕಣ್ಣುಗಳನ್ನು ಮುಚ್ಚಿ ಸಾಕ್ಷಾತ್ ಶಿವನಂತೆ ಸಮಾಧಿಯಲ್ಲಿ ಮಗ್ನರಾಗಿ ಕುಳಿತ ಚಿತ್ರ. ಸ್ವಾಮಿ ವಿವೇಕಾನಂದರ ಬಹುಮುಖ ವ್ಯಕ್ತಿತ್ವಗಳಲ್ಲಿ ಅತ್ಯಂತ ಮುಖ್ಯವಾದ ಈ ಮೂರು ವ್ಯಕ್ತಿತ್ವಗಳನ್ನು ಆ ಮೂರೂ ಚಿತ್ರಗಳು ಎತ್ತಿ ತೋರಿಸುತ್ತವೆ.” ಎಂದಿದ್ದಾರೆ.
ಲೇಖಕರು ಹೇಳಿದುದರಲ್ಲಿ ಅತಿಶಯೋಕ್ತಿ ಏನಿಲ್ಲ. ಸ್ವಾಮಿ ವಿವೇಕಾನಂದರ ವ್ಯಕ್ತಿತ್ವವೇ ಅಂತಹದ್ದು. ವಿವೇಕಾನಂದರ ಜೀವನವನ್ನು ಈ ಪುಸ್ತಕದಲ್ಲಿ ೧೫ ಅಧ್ಯಾಯಗಳಲ್ಲಿ ವಿಂಗಡಿಸಿದ್ದಾರೆ. ಇದರಿಂದಾಗಿ ಓದಲೂ ಸರಾಗವಾಗುತ್ತದೆ. ಸುಮಾರು ೧೫೦ ಪುಟಗಳ ಈ ಪುಸ್ತಕವನ್ನು ಓದಿದರೆ ವಿವೇಕಾನಂದರ ಬದುಕಿನ ಬಹಳಷ್ಟು ಮಾಹಿತಿಗಳು ದೊರೆಯುತ್ತವೆ.