ಸ್ವಾಮಿ ಶ್ರೀ ಸಹಜಾನಂದಜೀ ಮಹಾರಾಜ್

ಸ್ವಾಮಿ ಶ್ರೀ ಸಹಜಾನಂದಜೀ ಮಹಾರಾಜ್

ಬರಹ

ಪ.ಪೂ. ಶ್ರೀ ಶ್ರೀ ಸಹಜಾನಂದಜೀ ಮಹಾರಾಜ್

ಪೂಜ್ಯರ ಪೂರ್ವಾಶ್ರಮದ ಹೆಸರು- ಶ್ರೀ ನಾರಾಯಣಸ್ವಾಮಿ. ಇವರು ಬೆಂಗಳೂರಿನ ಹೆಚ್ ಎ ಎಲ್ ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಅಧ್ಯಾತ್ಮ ವಿಚಾರದಲ್ಲಿ ಬಹಳವಾದ ಆಸಕ್ತಿಯಿದ್ದಿತು. ತ್ಯಾಗರಾಜನಗರದಲ್ಲಿರುವ ದತ್ತಮಂದಿರಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಅಲ್ಲಿ ಪೂಜ್ಯ ಸಂಕಣ್ಣಾರ್ಯರ ಸಂಪರ್ಕ ಸಿಕ್ಕಿತು. ಅಲ್ಲಿಗೆ ಕನಕಪುರ ತಾಲ್ಲೂಕಿನ ದೊಡ್ಡಮುದವಾಡಿ ಗ್ರಾಮದ ಶಾನುಭೋಗರು ಹಾಗೂ ಶಿಕ್ಷಕರಾಗಿದ್ದ ಶ್ರೀಯುತ ಸೀತಾರಾಮಯ್ಯನವರು ಬರುತ್ತಿದ್ದರು. ಅವರೊಡನೆ ಪೂಜ್ಯರು ಆಧ್ಯಾತ್ಮಿಕ ವಿಚಾರಗಳ ಬಗೆಗೆ ಚರ್ಚೆ, ವಿಚಾರ ವಿನಿಮಯ ಮಾಡುತ್ತಿದ್ದರು. ಆಗಾಗ್ಗೆ ದೊಡ್ಡಮುದವಾಡಿ ಗ್ರಾಮಕ್ಕೂ ಭೇಟಿ ನೀಡುತ್ತಿದ್ದರು. ಆ ವೇಳೆಗೆ ಆ ಗ್ರಾಮದಲ್ಲಿ ಊರಹೊರಗಿನ ತಮ್ಮ ಜಮೀನಿನಲ್ಲಿ ಶ್ರೀ ಸೀತಾರಾಮಯ್ಯನವರು ಬಂಡೆಯೊಂದರ ಮೇಲೆ ಕುಳಿತಿರುವ ದತ್ತನ ವಿಗ್ರಹವೊಂದನ್ನು ಸ್ಥಾಪಿಸಿದ್ದರು. ಬರುಬರುತ್ತಾ ಪೂಜ್ಯರಿಗೆ ಆ ದತ್ತಮಂದಿರದ ಸೆಳೆತ ಹೆಚ್ಚಾಯಿತು. ಮುಂದೆ ಅವರು ತಮ್ಮ ಸೇವೆಯಿಂದ ನಿವೃತ್ತರಾಗುತ್ತಿದ್ದಂತೆಯೇ ದತ್ತನ ಸೇವೆಗೈಯಲು ದೊಡ್ಡಮುದವಾಡಿ ಗ್ರಾಮಕ್ಕೆ ತಮ್ಮ ಪತ್ನಿಯೊಂದಿಗೆ ಬರುತ್ತಿದ್ದರು. ಒಮ್ಮೆ ದತ್ತಜಯಂತಿ ಸಮಯದಲ್ಲಿ ಬಂದಿದ್ದಾಗ ಅವರ ಪತ್ನಿ ಅಲ್ಲಿಯೇ ದತ್ತಪಾದ ಸೇರಿದರು. ಶ್ರೀಯುತರು ಅದನ್ನೇ ದತ್ತನ ಆದೇಶವೆಂದು ಬಗೆದು ತಾವು ದತ್ತಮಂದಿರದಲ್ಲೇ ಇದ್ದುಕೊಂಡು ದತ್ತನ ಸೇವೆ ಮಾಡಲಾರಂಭಿಸಿದರು. ಆಗ ಅಲ್ಲಿ ದತ್ತಮೂರ್ತಿಯನ್ನು ಸ್ಥಾಪಿಸಿದ್ದ ಸ್ಥಳದ ಸುತ್ತ ಒಂದು ಗರ್ಭಗುಡಿ ಇದ್ದದ್ದು ಬಿಟ್ಟರೆ ಬೇರಾವ ಸೌಕರ್ಯವೂ ಇರಲಿಲ್ಲ. ಆದರೂ ಅವರು ಅಲ್ಲಿಯೇ ನೆಲೆಸಿ ಭಿಕ್ಷೆಗಾಗಿ ಮಾತ್ರ ಊರೊಳಕ್ಕೆ ಶ್ರೀ ಸೀತಾರಾಮಯ್ಯನವರ ಮನೆಗೆ ತೆರಳುತ್ತಿದ್ದರು. ಯಾರಾದರೂ ಇದೇನು ಇಲ್ಲಿ ನೀವು ಒಬ್ಬರೇ ಇದ್ದೀರಲ್ಲಾ? ಎಂದು ಕೇಳಿದರೆ ``ಒಬ್ಬನೇ ಎಲ್ಲಿದ್ದೀನಿ? ದತ್ತ ಜೊತೆಗಿದ್ದಾನಲ್ಲಾ?'' ಎನ್ನುತ್ತಿದ್ದರು. ಅವರು ಹೆಚ್ಚಾಗಿ ಮಾತನ್ನಾಡುತ್ತಿರಲಿಲ್ಲ. ಅವರದು ಒಂದುರೀತಿಯ ದಿವ್ಯಮೌನ ಎಂದೇ ಹೇಳಬೇಕು. ಅವರದು ಅತೀವವಾದ ವೈರಾಗ್ಯ. ಅವರಿಗೆ ಮಾರ್ಗದರ್ಶಕರೂ ಗುರುಗಳೂ ಆಗಿದ್ದ ಶ್ರೀ ಸೀತಾರಾಮಯ್ಯನವರು ಸ್ವಾಮಿ ಚಿದಾನಂದರಿಂದ ಉಪದೇಶವನ್ನು ಪಡೆದು ಅವರಿಂದಲೇ ``ಸದಾನಂದ'' ಎಂಬ ನಾಮಧೇಯವನ್ನೂ ಪಡೆದಿದ್ದರು. ಪೂಜ್ಯರು ಸ್ವಾಮಿ ಸದಾನಂದರಿಂದ ದತ್ತ ನಾಮೋಪದೇಶವನ್ನು ಪಡೆದು ಮೇಲುಕೋಟೆಗೆ ತೆರಳಿ ದೀಕ್ಷಾಬದ್ದರಾಗಿ ಗುರುಗಳು ನೀಡಿದ್ದ ``ಸಹಜಾನಂದ'' ಎಂಬ ನಾಮಧೇಯದೊಂದಿಗೆ ಹಿಂತಿರುಗಿ ದೊಡ್ಡಮುದವಾಡಿಯ ದತ್ತಮಂದಿರಕ್ಕೆ ಬಂದು ನೆಲೆಸಿದರು. ನಂತರ ತಮ್ಮ ಜೀವಿತಾವಧಿಯನ್ನೆಲ್ಲಾ ಅಲ್ಲಿಯೇ ದತ್ತಸೇವೆ ಮಾಡುತ್ತಾ ಕಳೆದರು (ಅಲ್ಲ - ಕೂಡಿಸಿಕೊಂಡರು). ಅವರದು ಅತೀವ ಪ್ರೇಮಸ್ವಭಾವವಾಗಿತ್ತು. ಅವರ ಸಂಪರ್ಕಕ್ಕೆ ಬಂದ ಭಕ್ತರಿಗೆಲ್ಲಾ ಅದೇನೋ ಒಮ್ಮೆಲೇ ಮನಃಶಾಂತಿ ದೊರೆಯುತ್ತಿತ್ತು. ಅವರ ಪ್ರೇಮಪೂರಿತ ನುಡಿಗಳಿಂದ ಅವರ ಮನದ ದುಗುಡವೆಲ್ಲಾ ಅಳಿದು ಅವರ ಸಮಸ್ಯೆಗಳಿಗೆಲ್ಲಾ ಸಮಾಧಾನ ದೊರೆಯುತ್ತಿತ್ತು. ಜ್ಯೋತಿಷ್ಯ ವಿಚಾರದಲ್ಲಿಯೂ ಪೂಜ್ಯರದು ಎತ್ತಿದ ಕೈ. ಪೂಜ್ಯರ ಸಮಾಧಿಯು ದತ್ತಮಂದಿರದ ಪಕ್ಕದಲ್ಲಿಯೇ ತಮ್ಮ ಗುರುವರ್ಯರಾಗಿದ್ದ ಸ್ವಾಮಿ ಸದಾನಂದರ ಸಮಾಧಿಯ ಪಕ್ಕದಲ್ಲಿಯೇ ಇದೆ. ಪೂಜ್ಯರು ಚೈತನ್ಯರೂಪರಾಗಿ ಇಂದಿಗೂ ಅಲ್ಲಿಗೆ ಬರುವ ಭಕ್ತರಿಗೆ ತಮ್ಮ ದಿವ್ಯ ಆಶೀರ್ವಾದ ಮಾಡಿ ಕೃಪೆಗೈಯುತ್ತಿದ್ದಾರೆ.
ಅವರ ಬಗೆಗೆ ಸಂಪೂರ್ಣ ಮಾಹಿತಿಗಾಗಿ ಪ.ಪೂ. ಮಾತಾ ಅಮೃತಮಯೀ ಸ್ವಾಮಿನಿಯವರು ಬರೆದಿರುವ ``ಸಹಜಾನಂದ ಶುಭಸ್ಮೃತಿಗಳು'' ಎಂಬ ಹೊತ್ತಿಗೆಯನ್ನು ಓದಬಹುದಾಗಿದೆ.

ಸೂಚನೆ: ಸಂಪದದಲ್ಲಿ ಈ ಆಶ್ರಮದ ಬಗೆಗೆ ಇರುವ ಇತರ ಲೇಖನ/ಚಿತ್ರಗಳನ್ನೂ ದಯಮಾಡಿ ನೋಡಿ.

ಚಿತ್ರಕೃಪೆ: ಶ್ರೀ ರವಿ, ಎಂ.ಎನ್, ಭದ್ರಾವತಿ.