ಸ್ವಾರ್ಥಕ್ಕೆ ಹಿಡಿದ ಕನ್ನಡಿ
ವರ್ಷಧಾರೆ ಸುರಿಯುತಿದೆ ನೋಡು ಗೆಳತಿ
ಹರ್ಷದಿಂದ ನಡೆದಾಡಲಾಗುತ್ತಿಲ್ಲ ನೋಡು ಗೆಳತಿ
ಎಂದಿನಂತಿಲ್ಲ ನೆರೆ ಏರಿದೆ ನೋಡು ಗೆಳತಿ
ರಾಜರಸ್ತೆಯಲಿ ದೋಣಿ ವಿಹಾರವದು ನೋಡು ಗೆಳತಿ
ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಹೇಳು ಗೆಳತಿ
ಮುಂಗೈ ಹಿಸುಕಿದರೂ ದಾರಿ ತೋಚದು ನೋಡು ಗೆಳತಿ
ಅಧಿಕಾರಿಗಳ ಸ್ವಾರ್ಥದ ಫಲವಿದು ನೋಡು ಗೆಳತಿ
ಗದಾಪ್ರಹಾರ ಬಡವರ ಮೇಲೆ ನೋಡು ಗೆಳತಿ
ಕಿಸೆ ತುಂಬಿಸುವುದೇ ಕಾಯಕ ನೋಡು ಗೆಳತಿ
ಆಸೆ ಹುಟ್ಟಿಸಿ ನಿರ್ಗತಿಕರೊಡನೆ ಚೆಲ್ಲಾಟ ಆಡುವರು ಗೆಳತಿ
ನಗರ ಪಾಲಿಕೆಯೊಳಗೆ ಇಲಿಹೆಗ್ಗಣಗಳು ಬೀಡುಬಿಟ್ಟಿವೆ ನೋಡು ಗೆಳತಿ
ಮಹತ್ತರ ಹೊಣೆಗಾರಿಕೆಯು ನೀರಲ್ಲಿ ಹೋಮವಾಯಿತು ನೋಡು ಗೆಳತಿ
ಜನ ಸಾಮಾನ್ಯರ ಬದುಕು ಮೂರಾಬಟ್ಟೆಯಾಯಿತು ನೋಡು ಗೆಳತಿ
ಮಾನಮುಚ್ಚಲು ವಸ್ತ್ರವೂ ಇಲ್ಲದಾಯಿತು ನೋಡು ಗೆಳತಿ
ಹೊಟ್ಟೆಗೆ ಹಿಟ್ಟಿಲ್ಲದೆ ನರಳುತಿಹರು ನೋಡು ಗೆಳತಿ
ಗಟ್ಟಿ ನೆಲೆಯಿಲ್ಲದೆ ಪರದಾಡುವಂತಾಯಿತು ನೋಡು ಗೆಳತಿ
ಎಲ್ಲೆಂದರಲ್ಲಿ ಅಗೆದು ಹೊಂಡಗುಂಡಿ ಮಾಡಿದುದ ನೋಡು ಗೆಳತಿ
ಬಲ್ಲೆಯಂತಾದ ಬವಣೆಯನು ಕೇಳುವವರಿಲ್ಲ ನೋಡು ಗೆಳತಿ
ದುರಸ್ತಿ ನಿರ್ಮಾಣ ನೆಪದಲ್ಲಿ ಶೇಕಡಾವಾರು ನುಂಗಿಯಾಯಿತು ಗೆಳತಿ
ಯಾರ ಆಸ್ತಿಯಾದರೂ ಇವರಿಗೇನು ಕನಿಕರ ಹೇಳು ಗೆಳತಿ
ಪ್ರಕೃತಿಯ ವಿಕಾರತೆ ಗೈದ ಶಾಪವೇನೋ ಗೆಳತಿ
ವಿಕೃತಿಯ ಇನ್ನಾದರೂ ಕೊನೆಗೊಳಿಸುವರೇ ಗೆಳತಿ
ಕಳೆದುಕೊಂಡುದ ಮರಳಿ ಪಡೆಯಲು ಕಷ್ಟವಿದೆ ಗೆಳತಿ
ಮಳೆರಾಯ ಆಟಾಟೋಪ ತೋರಿಸಬೇಡ ಬೇಡೋಣ ಗೆಳತಿ
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ