ಸ್ವೈಪ್ ರೈಟ್

ಸ್ವೈಪ್ ರೈಟ್

ಪುಸ್ತಕದ ಲೇಖಕ/ಕವಿಯ ಹೆಸರು
ರಂಜನಿ ರಾಘವನ್
ಪ್ರಕಾಶಕರು
ಬಹುರೂಪಿ ಪ್ರಕಾಶನ, ಸಂಜಯನಗರ, ಬೆಂಗಳೂರು.
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ: ೨೦೨೨

ರಂಜನಿ ರಾಘವನ್ ಅವರು ಮೂಲತಃ ಬೆಂಗಳೂರಿನವರು. ಬರಹಗಾರ್ತಿ, ನಟಿ, ಸೃಜನಶೀಲ ನಿರ್ದೇಶಕಿಯೂ ಆಗಿದ್ದಾರೆ. ಪ್ರಸ್ತುತ ಕಲರ್ಸ್ ಕನ್ನಡದ ‘ಕನ್ನಡತಿ’ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.

ರಂಜನಿ ರಾಘವನ್ ಅವರ ಚೊಚ್ಚಲ ಕಾದಂಬರಿ ‘ಸ್ವೈಪ್ ರೈಟ್’. ‘ನಿನ್ನ ಬೆರಳಂಚಲಿ ನಾನು’ ಎಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದೆ. ಕೃತಿಯಲ್ಲಿ ಕತೆಗಾರ ವಸುಧೇಂದ್ರ ಅವರ ಮುನ್ನುಡಿಯ ಮಾತುಗಳಿವೆ. ಅವರು ಹೇಳುವಂತೆ, ಬೆಂಗಳೂರಿನ ಯುವಜನತೆ ತನ್ನದೇ ಆದ ವಿಭಿನ್ನ ಪರಿಸರವನ್ನು ಕಟ್ಟಿಕೊಂಡಿದೆ. ದೊಡ್ಡ ಕನಸುಗಳು, ವೈಯಕ್ತಿಕ ಸ್ಪೇಸ್, ಡಿಜಿಟಲ್ ಸುನಾಮಿ, ಸರಸ-ವಿರಸ, ಸ್ವೈಪ್ ರೈಟ್, ಸ್ವೈಪ್ ಲೆಫ್ಟ್, ತ್ವರಿತ ಫಲಿತಾಂಶ, ತುಸು ಆದರ್ಶ, ದೂರದ ಕಾಡಿನ ಪ್ರೀತಿ, ಪ್ರಾಣಿದಯೆ, ಓಪನ್ ರಿಲೇಶನ್‌ಶಿಪ್ - ಹೀಗೆ. ಇವೆಗಳೆಲ್ಲವೂ ಮಾಂತ್ರಿಕನೊಬ್ಬ ಗಾಳಿಯಲ್ಲಿ ಐದಾರು ಚೆಂಡುಗಳನ್ನು ಎಸೆದು ನೆಲಕ್ಕೆ ಬೀಳದಂತೆ ಸಮತೋಲನ ಕಾಯ್ದುಕೊಳ್ಳಬೇಕಾದ ಒತ್ತಡದಲ್ಲಿ ಸಾಗುತ್ತಿರುತ್ತವೆ. ಯಾವುದೋ ಗಳಿಗೆಯಲ್ಲಿ ಅನಿರೀಕ್ಷಿತವೊಂದು ಸಂಭವಿಸಿ ಚೆಂಡುಗಳು ನೆಲಕ್ಕೆ ಬಿದ್ದಾಗ, ಯುವಜಗತ್ತು ಕಂಗಾಲಾಗಿ ಅಧೀರನಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆ ಸ್ಥಿತಿಯನ್ನು ಎದುರಿಸುವ ಒತ್ತಡದಲ್ಲಿಯೇ ಹರೆಯದವನೊಬ್ಬ ಪ್ರಬುದ್ಧನಾಗುತ್ತಾನೆ. ಅಂತಹ ಜಗತ್ತೊಂದನ್ನು, ಅದರದೇ ಆದ ಭಾಷೆ-ಭಾವ-ಧ್ವನಿಗಳ ಲಯದೊಂದಿಗೆ ಈ ಕಾದಂಬರಿಯಲ್ಲಿ ಲೇಖಕಿ ರಂಜನಿ ರಾಘವನ್ ನಮಗೆ ಕಟ್ಟಿಕೊಟ್ಟಿದ್ದಾರೆ. ಲೇಖಕಿಯು ಅಂತಹ ಬದುಕಿನ ಭಾಗವೇ ಆಗಿರುವುದರಿಂದ, ಈ ಕಾದಂಬರಿಯ ಸಹಜತೆಯ ನಡೆಯಲ್ಲಿ ಒಂಚೂರೂ ಲಯ ತಪ್ಪುವುದಿಲ್ಲ. ಹಿರಿಯ ಕತೆಗಾರರಿಗೆ ಯಾವತ್ತೂ ಸವಾಲೆನ್ನಿಸುವ ಆಧುನಿಕ ಹುಡುಗರ ಕಥನ ಇಲ್ಲಿ ನೀರು ಹರಿದಷ್ಟು ಸರಾಗವಾಗಿ ಚಲಿಸಿದೆ. ಮುಗ್ಧತೆಯನ್ನು ಕಳೆದುಕೊಳ್ಳದೆ ಬದುಕನ್ನು ಕಾಣುವ ಲೇಖಕಿಯ ಸ್ವಭಾವ, ಇಲ್ಲಿ ಕತೆಗೆ ತನ್ನದೇ ಆದ ಕೋಮಲ ಬೆಳದಿಂಗಳನ್ನು ಲೇಪಿಸಿದೆ. ಜಗತ್ತಿನ ಕಠೋರ ಬಿಸಿಲಿನ ಅರಿವೂ ಲೇಖಕಿಗಿರುವುದರಿಂದ, ಸಂಬಂಧಗಳ ಕಗ್ಗಂಟೊಂದನ್ನು ಎದುರಿಸುವ ಸನ್ನಿವೇಶವೂ ಈ ಕೃತಿಯಲ್ಲಿ ಗಾಢವಾಗಿ ಮೂಡಿಬಂದಿದೆ ಎಂದಿದ್ದಾರೆ. ೨೫೦ ಪುಟಗಳ ಈ ಕಾದಂಬರಿ ಸೊಗಸಾದ ಓದಿಗೆ ಸಹಾಯಕ.