ಸ್ವ-ನಿಯಂತ್ರಣದಿಂದ ಯಶಸ್ಸು ಸಾಧ್ಯ.

ಸ್ವ-ನಿಯಂತ್ರಣದಿಂದ ಯಶಸ್ಸು ಸಾಧ್ಯ.

ನೀವೊಂದು ಕಂಪೆನಿಯ ಬಾಸ್ ಆಗಿರುತ್ತೀರಿ. ನಿಮ್ಮ ಕಂಪೆನಿಯೂ ಲಾಭದಾಯಕವಾಗಿ ನಡೆಯುತ್ತಿದೆ. ಸ್ವಂತ ಮನೆ, ಸ್ವಂತ ಕಚೇರಿ, ನಿಮಗೊಂದು, ನಿಮ್ಮ ಹೆಂಡತಿಗೊಂದು ಕಾರು, ಸುಂದರವಾದ ಇಬ್ಬರು ಮಕ್ಕಳು. ಆನಂದ ಸಾಗರವಾದ ಸಂಸಾರವಿದ್ದರೂ ಜೀವನದಲ್ಲಿ ನಿಮಗೆ ಏನೋ ಅಸಹನೆ. ಮನೆಯಲ್ಲಿ ಹೆಂಡತಿ-ಮಕ್ಕಳು, ಕೆಲಸದವರು, ಕಚೇರಿಯಲ್ಲಿ ಸಿಬ್ಬಂದಿಯವರಿಗೆ ಬೈಯುವುದೇ ನಿಮ್ಮ ಕೆಲಸ. ಪ್ರತೀ ದಿನ ಯಾರಿಗಾದರೂ ಗದರದೇ ಇದ್ದರೆ ನಿಮ್ಮ ದಿನ ಸಾಗುವುದೇ ಇಲ್ಲ ಅಂತಹ ಪರಿಸ್ಥಿತಿ. “ನಮ್ಮ ಬಾಸ್, ಕೋಪ ಮಾಡಿಕೊಳ್ಳದೇ ಇದ್ದರೆ ಬಂಗಾರದಂತಹ ಜನ” ಎನ್ನೋ ಮಾತು ನಿಮಗೆ ಮಾತ್ರವಲ್ಲ ಎಲ್ಲಾ ಶೀಘ್ರ ಕೋಪಿಷ್ಟರಿಗೆ ಅನ್ವಯ. ನಿಮ್ಮ ಈ ಗುಣದಿಂದ ಎಲ್ಲರ ಎದುರು ನಿಮ್ಮ ಹೆಂಡತಿಗೆ ಮುಜುಗರ. ಕೋಪ ಇಳಿದ ಮೇಲೆ ನಿಮಗೂ ನಿಮ್ಮ ಮೇಲೆಯೇ ಬೇಸರ.

ಹೀಗಿರುವಾಗ ಒಂದು ದಿನ ಬೆಳಿಗ್ಗೆ ನಿಮಗೆ ಪತ್ರಿಕೆಯೊಂದನ್ನು ಓದುವಾಗ ಅದರಲ್ಲಿ ಲೇಖನವೊಂದು ಕಾಣಿಸುತ್ತದೆ. ಆ ಲೇಖನದ ಹೀರೋ ಚೇತನ್ ಎಂದು ಇಟ್ಟುಕೊಳ್ಳಿ. ಆ ಪತ್ರಿಕೆಯಲ್ಲಿ ಇರೋದನ್ನು ಹಾಗೇ ಓದಿಕೊಳ್ಳುತ್ತಾ ಹೋದಾಗ ಕಂಡದ್ದು-

“ವೆಲ್ ಡನ್ ಎನ್ನುವ ಒಂದು ಕಂಪೆನಿಯಲ್ಲಿ ಚೇತನ್ ಎನ್ನುವ ಮ್ಯಾನೇಜರ್ ಇದ್ದ. ತನ್ನ ಆಫೀಸಿನಲ್ಲಿ ಪ್ರತಿಯೊಂದು ಸಣ್ಣ ವಿಚಾರಕ್ಕೂ ಯಾವಾಗಲೂ ಕೋಪಿಸಿಕೊಳ್ಳುವುದು, ರೇಗಾಡುವುದು, ಬೈಯುತ್ತಾ ಕೂಗಾಡುವುದು, ತೆಗಳುವುದು, ಸಣ್ಣ ಸಮಸ್ಯೆಗೂ ವಿಚಿತ್ರವಾಗಿ ಪ್ರತಿಕ್ರಿಯೆ ನೀಡುವುದು ಆತನ ಹುಟ್ಟುಗುಣವಾಗಿತ್ತು. ಇದರಿಂದಾಗಿ ಕೆಲಸಗಾರರೆಲ್ಲರೂ ಆತನನ್ನು ‘ಸೈಕೋ ಮ್ಯಾನೇಜರ್’ ಎಂದೇ ಕರೆಯುತ್ತಿದ್ದರು. ಒಂದು ದಿನ ಇದ್ದಕ್ಕಿದ್ದಂತೆ ಚೇತನ್ ತೀರಾ ಬದಲಾದದ್ದು ಕಂಪೆನಿಯ ಕೆಲಸಗಾರರ ಗಮನಕ್ಕೆ ಬಂತು.

ಒಂದು ದಿನ ತನ್ನ ಕಚೇರಿಯ ಸ್ಟಾಫ್ ಒಬ್ಬಳು, ಸರ್, ನಾನಿವತ್ತು ಆಫೀಸಿಗೆ ತುಸು ತಡ ಆಗಿ ಬರುತ್ತೇನೆ ಎಂದು ಫೋನ್ ಮಾಡಿ ಹೇಳಿದಾಗ ಚೇತನ್, ಸರಿಯಮ್ಮಾ, ಆದರೆ ತೀರ ತಡಮಾಡಬೇಡ ಎಂದು ಹೇಳಿದ. ಕಚೇರಿಯ ಸಹಾಯಕ ಪ್ರಬಂಧಕ ಜಾನ್, ಸರ್ ಈ ತಿಂಗಳು ನಮ್ಮ ಕಂಪನಿಯ ಗುರಿ ನೀವು ಕಳೆದೆಲ್ಲಾ ತಿಂಗಳುಗಳಿಗೆ ಹೋಲಿಸಿದಾಗ ತೀರಾ ಕಡಿಮೆಯಾಗಿದೆ ಎಂದು ಭಯದಿಂದ ಹೇಳಿದಾಗ, ಪರ್ವಾಗಿಲ್ಲ ಬಿಡು, ನೀನು ನಮ್ಮೆಲ್ಲಾ ಸ್ಟಾಫ್ ಗಳನ್ನು ಒಟ್ಟು ಸೇರಿಸಿ ಮೀಟಿಂಗ್ ನ್ನು ಮಾಡು. ಹೊಸತಾದ ಕಾರ್ಯಯೋಜನೆಯ ಮೂಲಕ ಸಾಧನೆಯ ಕಡೆಗೆ ಸಾಗೋಣ ಎಂದು ಹೇಳಿದ. ಇದನ್ನು ಕೇಳಿದ ಜಾನ್ ಇದು ಕನಸು ನನಸೋ ಎಂದುಕೊಂಡ. ತನ್ನ ಡ್ರೈವರ್., ಸರ್ ನಮ್ಮ ಕಾರ್ ಗೋಡೆಗೆ ತಾಗಿ ತುಸು ಜಖಂಗೊಂಡಿದೆ ಎಂದು ಅಳುಕಿನಿಂದ ಹೇಳಿದಾಗ, ಸರಿ ಈಗಲೇ ಕಾರನ್ನು ವರ್ಕ್ ಶಾಪಿಗೆ ತೆಗೆದುಕೊಂಡು ಹೋಗಿ ಸರಿಪಡಿಸಿ ಬಾ ಎಂದು ಚೇತನ್ ಹೇಳಿದಾಗ ಡ್ರೈವರ್ ನ ಬೇಸರ ಹೊರಟುಹೋಗಿ ಅಚ್ಚರಿ ಪಟ್ಟುಕೊಂಡ. ಈ ಎಲ್ಲಾ ಬದಲಾವಣೆಗಳನ್ನು ಮ್ಯಾನೇಜರ್ ಚೇತನ್ ನಲ್ಲಿ ನೋಡಿದ ಕಂಪನಿಯ ಸ್ಟಾಫ್ ಗಳೆಲ್ಲರಿಗೂ ಚಿಂತೆ ಪ್ರಾರಂಭವಾಯಿತು. ನಮ್ಮ ಮ್ಯಾನೇಜರ್ ಗೆ ಏನಾಗಿದೆ? ಎಲ್ಲಾದರೂ ವೈದ್ಯರ ಬಳಿ ಕೌನ್ಸಿಲಿಂಗ್ ಮಾಡಿಸಿಕೊಂಡು ಹೀಗೆ ಡಲ್ ಆಗಿರಬಹುದೇ ಎಂದೆಲ್ಲಾ ಯೋಚಿಸತೊಡಗಿದರು. ಕುತೂಹಲದಿಂದ ಸ್ಟಾಫ್ ಗಳೆಲ್ಲರೂ ಮ್ಯಾನೇಜರ್ ನನ್ನು ಕೇಳಿದಾಗ ಆತ ಕೊಟ್ಟ ಉತ್ತರ ಕೇಳಿ ಎಲ್ಲರೂ ಶಾಕ್ ಗೆ ಒಳಗಾದರು.

ಚೇತನ್ ಕೊಟ್ಟ ಉತ್ತರ ಹೀಗಿತ್ತು, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವ ಮತ್ತು ಜೀವನಕ್ಕೆ ತಾನೇ ಖುದ್ದು ಜವಾಬ್ದಾರಿ ಆಗಿದ್ದಾನೆ ಎನ್ನುವ ವಿಚಾರ ತಿಳಿಯಲು ನನಗಿಷ್ಟು ಸಮಯ ಬೇಕಾಯಿತು. ಎಲ್ಲರ ಮೇಲೆ ನಾನು ಮಾಡಿಕೊಳ್ಳುವ ಸಿಟ್ಟು., ಬೇಸರ, ನೋವು, ಕಿರಿಕಿರಿ, ಅಸಮಧಾನ, ಭಯ, ಚಿಂತೆ, ಆತಂಕ ಮತ್ತು ನನ್ನ ಧೈರ್ಯ ಇವು ಯಾವುವೂ ನಾನು ಎದುರಿಸುವ ಸಮಸ್ಯೆಯನ್ನು ಪರಿಹರಿಸವು, ಬದಲಿಗೆ ಇವು ನನ್ನ ಸಮಸ್ಯೆಯನ್ನು ಹೆಚ್ಚಿಸುತ್ತವೆ ಎನ್ನುವುದು ನನಗೆ ತಿಳಿದದ್ದೇ ಈಗ. ನನ್ನ ಆಫೀಸಿನ ಎಲ್ಲರೂ ಮಾಡುವ ಸರಿ ಮತ್ತು ತಪ್ಪು ಕೆಲಸಗಳಿಗೆ ನಾನೇ ಜವಾಬ್ದಾರನಾಗಿ ನನ್ನ ಆಫೀಸಿನ ಎಲ್ಲರನ್ನೂ ಖುಷಿಯಾಗಿ ಇರಿಸುವುದು ನನ್ನ ವ್ಯಾಪ್ತಿಯಲ್ಲಿ ಇಲ್ಲ. ಆದ್ದರಿಂದ ನಾನು ಶಾಂತ ಭಾವದಿಂದ ಇದ್ದು ಅವರವರ ಸಮಸ್ಯೆಗಳಿಗೆ ಅವರವರೇ ಆಯಾ ಸಂದರ್ಭಗಳಲ್ಲಿ ಒಳ್ಳೆಯ ಪರಿಹಾರವನ್ನು ಕಂಡುಕೊಳ್ಳಲು ಬಿಡಲು ನಿರ್ಧರಿಸಿದೆ.

ಎಲ್ಲಾ ಅಧ್ಯಯನಗಳೂ, ವ್ಯಕ್ತಿಯು ತನ್ನನ್ನು ತಾನು ಮಾತ್ರ ನಿಯಂತ್ರಣ ಮಾಡಿಕೊಳ್ಳಬಹುದೇ ಹೊರತು ಇತರರನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಹೇಳುತ್ತದೆ. ಜಗತ್ತಿನ ಪ್ರತಿಯೊಂದು ಜೀವರಾಶಿಯೂ ತನಗೆ ಎಷ್ಟೇ ದೊಡ್ಡ ಸಮಸ್ಯೆ ಬಂದರೂ ಆ ಸಮಸ್ಯೆ ಯಾ ಸವಾಲಿನ ವಿರುದ್ಧ ಹೋರಾಡುವ ಚೈತನ್ಯವನ್ನು ತನ್ನ ಹುಟ್ಟಿನಲ್ಲಿ ಪಡೆದಿರುತ್ತದೆ. ನಿಮಗೆ ಬಂದಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿದು ಸಂತಸದಿಂದ ಇರುವುದು ನಿಮಗೆ ಬಿಟ್ಟದ್ದು. ನೀವು ಕೇಳಿದರೆ ಮಾತ್ರ ಕೇವಲ ನಾನು ಸಲಹೆಯನ್ನು ಕೊಡಬಲ್ಲೆ. ಅದನ್ನು ಸರಿಯಾಗಿ ಪಾಲಿಸುವುದು ಯಾ ಬಿಡುವುದು ನಿಮಗೆ ಬಿಟ್ಟದ್ದು.”

ಚೇತನ್ ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಂಡಿರುವಾಗ ನನಗೇಕೆ ಸಾಧ್ಯವಿಲ್ಲ ಎಂದು ನಾವು ಆಲೋಚನೆ ಮಾಡಿಕೊಳ್ಳಬೇಕಾಗಿದೆ. ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ. ಕೂಡಲೇ ಅಲ್ಲದಿದ್ದರೂ ಕಾಲ ಕಳೆದಂತೆ ಸಮಸ್ಯೆ ಪರಿಹಾರವಾಗುತ್ತಲೇ ಹೋಗುತ್ತದೆ. ಇದು ಪ್ರಕೃತಿಯ ಸಹಜ ನಿಯಮ. ಇದನ್ನು ಅರಿತಿರುವ ನೀವು ಇನ್ನಾದರೂ ತಾಳ್ಮೆಯಿಂದ ಮನೆಯಲ್ಲಿ, ಕಚೇರಿಯಲ್ಲಿ ಕಾರ್ಯ ನಿರ್ವಹಿಸುವುದು ಒಳಿತು. ಏಕೆಂದರೆ ಕೋಪದಿಂದ ಕತ್ತರಿಸಿಕೊಂಡ ಮೂಗು ಮತ್ತೆ ಚಿಗುರುವುದಿಲ್ಲ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ