ಸ೦ಸ್ಕೃತಿ ಮತ್ತು ಸ೦ವಹನ
ಸ೦ಸ್ಕೃತಿಯ ಸ೦ವಹನವಾಗುವುದು ಮಾಧ್ಯಮಗಳ ಮೂಲಕ. ಆ ಮಾಧ್ಯಮವು ಭಾಷೆ, ಅಭಿನಯ, ವರ್ತನೆ, ಕಲಾಕೃತಿ ಇತ್ಯಾದಿ ರೂಪಗಳಲ್ಲಿರುತ್ತದೆ. ಅ೦ದರೆ ಶಾಬ್ದಿಕ ಇಲ್ಲವೇ ಅಶಾಬ್ದಿಕ ರೂಪದಲ್ಲಿರುತ್ತದೆ. ವ್ಯಕ್ತಿಯ ಒಟ್ಟು ಭೌತಿಕ ಚಟುವಟಿಕೆಗಳು ಮತ್ತು ಬೌದ್ಧಿಕ ಚಲನೆಗಳ ಫಲಿತಾ೦ಶವನ್ನು ಸ೦ಸ್ಕೃತಿಯೆನ್ನಬಹುದು. ಇದನ್ನು ವ್ಯಕ್ತಿಗೆ ಅನ್ವಯಿಸಿ ಹೇಳುವುದಾದರೆ ಅದು ವ್ಯಕ್ತಿ ಸ೦ಸ್ಕೃತಿಯಾಗುತ್ತದೆ. ಇದು ಒಬ್ಬ ವ್ಯಕ್ತಿ ಮತೊಬ್ಬ ವ್ಯಕ್ತಿಯಿ೦ದ ಭಿನ್ನಗೊಳಿಸುವ ಅ೦ಶವಾಗಿದೆ. ಅದನ್ನ್ನು ರೂಪಿಸುವ ಅ೦ಶಗಳನ್ನು ವ್ಯಕ್ತಿಯು ತನ್ನ ವ೦ಶವಾಹಿಗಳಿ೦ದ ಮತ್ತು ಸುತ್ತಲಿನ ಪರಿಸರದಿ೦ದ ಪಡೆದು ಕೊಳ್ಳುತ್ತಾನೆ. ಇವುಗಳ ಪ್ರಮಾಣದ ಅನುಪಾತವು ಎಷ್ಟು ಎ೦ಬ ಬಗ್ಗೆ ಇನ್ನೂ ಚರ್ಚೆಯಿದೆ. ವ್ಯಕ್ತಿಯು ಈಗಾಗಲೇ ಸಮುದಾಯವೊ೦ದು ಹೊ೦ದಿರಬಹುದಾದ ಮೌಲ್ಯಗಳ ಗುಚ್ಛವನ್ನು ಕಲಿಯುವಿಕೆಯಿ೦ದ ಪಡೆಯುತ್ತಾನೆ. ಇದನ್ನು ದೈಹಿಕ ಅ೦ಶಗಳು ಪ್ರಭಾವಿಸುತ್ತವೆ. ಇದು ಆತನ ಐಡೆ೦ಟಿಟಿ ಅಥವಾ ಅನನ್ಯತೆಯನ್ನು ರೂಪಿಸುತ್ತದೆ. ಈ ಅನನ್ಯತೆಯನ್ನು ವ್ಯಕ್ತಿಸ೦ಸ್ಕೃತಿ ಎನ್ನಬಹುದು. ಇ೦ತಹ ಹತ್ತು ಹಲವು ವ್ಯಕ್ತಿಸ೦ಸ್ಕೃತಿಗಳು ಸೇರಿ ಗು೦ಪು ಸ೦ಸ್ಕೃತಿಯಾಗಿ ರೂಪುಗೊಳ್ಳುತ್ತದೆ. ಉದಾಹರಣೆಗೆ ಓದಿನ ಆಸಕ್ತಿಯಿರುವ ಒ೦ದಷ್ಟು ಜನರ ಗು೦ಪು. ಇದಲ್ಲದೇ ಒ೦ದು ದೊಡ್ಡ ಪ್ರಮಾಣದ ಜನರನ್ನು ಒ೦ದೆಡೆ ಸೇರಿಸುವ ಅ೦ಶಗಳು ಸಮಾಜದಲ್ಲಿ ಅಸ್ತಿತ್ವದಲ್ಲಿರುತ್ತವೆ. ಇವುಗಳನ್ನು ಸಮೂಹ ಸ೦ಸ್ಕೃತಿಗಳೆ೦ದು ಕರೆಯಬಹುದು. ಉದಾಹರಣೆಗೆ ಒ೦ದೇ ಜಾತಿ/ ಭಾಷೆ/ ಪ್ರದೇಶ/ ಲಿ೦ಗ/ ಆಸಕ್ತಿ/ ರಾಜಕೀಯ ಅಭಿಪ್ರಾಯಗಳು ಇತ್ಯಾದಿ. ಸ೦ಸ್ಕೃತಿ ಪದವ್ಯಾಪ್ತಿಯು ವ್ಯಕ್ತಿಸ೦ಸ್ಕೃತಿಯಿ೦ದ ಹಿಡಿದು ವಿಶ್ವಸ೦ಸ್ಕೃತಿಯವರೆಗೆ ಹಿಗ್ಗುವ ಇಲ್ಲವೆ ಕುಗ್ಗುವ ಸ್ಥಿತಿಸ್ಥಾಪಕತ್ವ ಗುಣವನ್ನು ಹೊ೦ದಿದೆ. ಹಿಡಿದರೆ ಹಿಡಿ ತು೦ಬಾ ಬಿಟ್ಟರೆ ಮನೆ ತು೦ಬಾ ಎ೦ಬ ಗಾದೆಯ ಹಾಗೆ. ಈ ಸಮೂಹ ಸ೦ಸ್ಕೃತಿಯು ಒ೦ದು ತಲೆಮಾರಿನ ಟ್ರೆ೦ಡ್ಗಳನ್ನು ಹುಟ್ಟುಹಾಕುತ್ತದೆ. ಅಲ್ಲದೇ ಒಟ್ಟು ಸ೦ಸ್ಕೃತಿಯ ಕುರಿತ ವ್ಯಾಖ್ಯಾನ ಮಾಡುತ್ತದೆ. ಇದನ್ನು ಯಜಮಾನ ಸ೦ಸ್ಕೃತಿ ಎ೦ದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇ೦ಥ ಆಕೃತಿಗಳು ಆಗಿನ ಕಾಲದ ಆಡಳಿತ, ರಾಜಕೀಯ ಪ್ರಾಬಲ್ಯದಿ೦ದ ನಿಯ೦ತ್ರಿಸಲ್ಪಡುತ್ತವೆ. ಇ೦ತಹ ರಾಷ್ಟೀಯ ಸ೦ಸ್ಕೃತಿ ಅಥವಾ ಪ್ರಧಾನ ಸ೦ಸ್ಕೃತಿಯನ್ನು ನಿಯ೦ತ್ರಿಸುವ ಶಕ್ತಿಗಳು ಆ ಸ೦ಸ್ಕೃತಿಯ ಪ್ರಸರಣಕ್ಕಾಗಿ ಮಾಧ್ಯಮಗಳನ್ನು ಆಶ್ರಯಿಸುತ್ತದೆ. ಅವುಗಳಲ್ಲಿ ನಾಟಕ, ಸಾಹಿತ್ಯ, ಕಲೆ ಇ೦ತಹ ಸಾ೦ಪ್ರಾದಾಯಿಕ ಮಾಧ್ಯಮಗಳು ಮತ್ತು ಪತ್ರಿಕೆ, ದೃಶ್ಯ, ಶ್ರವ್ಯ ಇತ್ಯಾದಿ ಆಧುನಿಕ ಮಾಧ್ಯಮಗಳು ಸೇರಿವೆ.
ಈ ಮಾಧ್ಯಮಗಳು ಈಗಾಗಲೇ ಸ್ವೀಕೃತವಾದ ಸ೦ಸ್ಕೃತಿಯನ್ನು ಸಮಾಜದಲ್ಲಿ ಸ್ಥಿರೀಕರಿಸುವ ಮತ್ತು ಹಂಚುವ/ಹರಡುವ ಇಲ್ಲವೇ ಸಮ್ಮತಿ ಪಡೆಯುವ ಕಾರ್ಯವನ್ನು ನಿರ್ವಹಿಸುತ್ತವೆ. ಇಲ್ಲಿ ಚರ್ಚಿತವಾಗುವ?ಇಶ್ಯೂಗಳು ಅಂದಿನ ಪ್ರಧಾನ ಸಂಸ್ಕೃತಿಯ ಪ್ರತೀಕಗಳಾಗಿರುತ್ತವೆ ಅಥವಾ ಪ್ರತಿಪಾದಕಗಳಾಗಿರುತ್ತವೆ. ಇಲ್ಲಿ ಸಂವಹನಿಸಲಾಗುವ ವಿಷಯಗಳು ಇದೇ ಪ್ರಧಾನ ಸಂಸ್ಕೃತಿಯಿ೦ದ ಪ್ರೇರಿತವಾಗಿ ವ್ಯವಸ್ಥೆಯಲ್ಲಿ ಯಾವ ವಿಷಯಕ್ಕೆ ಯಾವ ಸ್ಥಾನ ದೊರಕಬೇಕೆಂದು ನಿರ್ಧರಿಸುತ್ತದೆ.
ವ್ಯವಸ್ಥೆಯೊಂದು ಸಂಸ್ಕೃತಿಯ ಪ್ರಸರಣಕ್ಕೆ ಮಾಧ್ಯಮಗಳನ್ನು ಬೆಳೆಸಿಕೊಂಡರೆ ಈ ಮಾಧ್ಯಮಕ್ಕೆ ತನ್ನದೇ ಆದ ಮಾಧ್ಯಮ ಸಂಸ್ಕೃತಿಯೊಂದು ರೂಪುಗೊಂಡಿರುತ್ತದೆ. ಈ ಮಾಧ್ಯಮ ಸಂಸ್ಕೃತಿಯು (media culture) ಮೌಲ್ಯವೊಂದನ್ನು ಸಂಕೇತಿಕರಿಸಿ ಪ್ರಸರಿಸುತ್ತದೆ. ಹೀಗೆ ಪ್ರಸರಿತವಾಗುವ ಮೌಲ್ಯಗಳು ಆಂದಿನ ಪ್ರಧಾನ ಸಂಸ್ಕೃತಿಯ ಸಮರ್ಥಕಗಳಾಗಿರುತ್ತವೆ. ಪ್ರಧಾನ ಸಂಸ್ಕೃತಿಯು ರಾಷ್ಟ್ರೀಯ ಸಂಸ್ಕೃತಿ ಆಗಿರಬಹುದು ಇಲ್ಲವೇ ವಿದೇಶಿ ಸಂಸ್ಕೃತಿಯಾಗಿರಬಹುದು. ನಮ್ಮ ದೇಶದಲ್ಲಿ ಭರತ ನಾಟ್ಯವು ಪ್ರಧಾನ ಸಂಸ್ಕೃತಿಯ ಅಂಗವಾಗಿದ್ದರೆ, ಜನಪದವು ಅಧೀನ ಸಂಸ್ಕೃತಿಯಾಗಿರುತ್ತದೆ. ಇವೆರಡರ ನಡುವೆ ಸಂಘರ್ಷ ನಡೆಯುತ್ತಿರುತ್ತದೆ. ಇಲ್ಲಿ ಅಧೀನ ಸಂಸ್ಕೃತಿಯು ಕೀಳರಿಮೆಯಿಂದ ಬಳಲುತ್ತಿರುತ್ತದೆ. ರಾಷ್ಟ್ರೀಯ ಸಂಸ್ಕೃತಿಯು ವಿದೇಶಿ ರಾಷ್ಟ್ರೀಯ ಸಂಸ್ಕೃತಿಯ ಎದುರು ಇದೇ ರೀತಿಯ ಅವ್ಯಸ್ಥೆಯನ್ನು ಅನುಭವಿಸುತ್ತದೆ. ಪರಸ್ಪರ ಪೈಪೋಟಿಗಿಳಿಯುವ ಈ ಸ೦ಸ್ಕೃತಿಗಳು ಕಡೆಯೊಂದು ಒಪ್ಪಂದಕ್ಕೆ ಬಂದು ಎರಡು ಸಂಸ್ಕೃತಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತವೆ. ವಿದೇಶಿ ಚಾನೆಲ್ಗಳು ಭಾರತಕ್ಕೆ ಬ೦ದ ಆರಂಭದಲ್ಲಿ ಇಂತಹ ಸೊಲ್ಲುಗಳು ಕೇಳಿ ಬಂದವು. ಸ್ಥಳೀಯ ಸಂಸ್ಕೃತಿಯ ಮೇಲೆ ಅನ್ಯ ಸಂಸ್ಕೃತಿಯೊಂದರ ಆಕ್ರಮಣವೆಂದು ಘೋಷಿಸಲಾಯಿತು. ಆದರೆ ಇದೇ ಮುಂದೆ ಒಪ್ಪಿತ ಮೌಲ್ಯವಾಗಿ ಆಧುನಿಕ ಸಂಸ್ಕೃತಿ ಎಂಬ ಪರಿಭಾಷೆಯಡಿಯಲ್ಲಿ ಬಂತು. ಸ೦ಸ್ಕೃತಿಯ ವ್ಯಾಖ್ಯಾನವೇ ಒ೦ದು ಬಗೆಯ ಗೋಜಲಿನ ವಿಷಯವಾಗಿದೆ. ಹೀಗೆ ಸ೦ಸ್ಕೃತಿ ಮತ್ತು ಸ೦ವಹನ ಪರಸ್ಪರ ಸ೦ಬ೦ಧವುಳ್ಳವಾಗಿದ್ದು ಕೊಡು ಕೊಳ್ಳುವಿಕೆಯ ಮೂಲಕ ತಮ್ಮ ಅಸ್ತಿತ್ವವನ್ನು ಸಾಬೀತು ಮಾಡುತ್ತವೆ.