ಹಂದಿ ಜ್ವರ ತೋರಿಸಿದ ಒಂದು ರಾತ್ರಿ ಭಾಗ ೧

ಹಂದಿ ಜ್ವರ ತೋರಿಸಿದ ಒಂದು ರಾತ್ರಿ ಭಾಗ ೧

ಬರಹ

                ನಿತ್ರಾಣಿಯಾಗಿ ಕುಸಿದುಹೋಗುವಂತಿದ್ದ ನನ್ನ ಗಂಡನನ್ನು ವಾರ್ಡ್ ಗೆ ಶಿಫ್ಟ್ ಮಾಡಲು ಹೇಳಿ ನನ್ನ ಕಡೆ ತಿರುಗಿ ಡಾಕ್ಟರ್ ತಿರುಗಿ ಗಂಭೀರವಾಗಿ ನುಡಿದರು "we are suspecting H1N1. we don't wait for the test results but start the treatment now".


               ೫ ದಿನಗಳ ಆಸ್ಪತ್ರೆ ವಾಸದ ನಂತರ ಮನೆಗೆ ಬಂದು ಇನ್ನೂ ಆಯಾಸ, ದಣಿವು ಪೂರ್ತಿ ಹೋಗಿಲ್ಲದ ನನ್ನ ಪತಿಯನ್ನು ಅವರ ತಾಯಿಗೆ ಅರ್ಥಾತ್ ನನ್ನ ಅತ್ತೆಗೆ ಒಪ್ಪಿಸಿ ನಾನು ನನ್ನ ಒಂದುವರೆ ವರ್ಷದ ಮಗಳನ್ನು ಅವಳ ಅಪ್ಪನಿಂದ ದೂರ ಇಡುವ ಕಾಯಕದಲ್ಲಿ ನಿರತಳಾದೆ. ೫ ದಿನ ಒಬ್ಬಳೇ ನನ್ನ ಪತಿಯನ್ನು ಆಸ್ಪತ್ರೆಯಲ್ಲಿ ನೋಡಿಕೊಂಡದ್ದು ಕಷ್ಟವಾಗಲಿಲ್ಲ, ಆದರೆ ಅಷ್ಟು ದಿನ ಬಿಟ್ಟಿದ್ದ ಅಪ್ಪನನ್ನು ಕಣ್ಣ ಮುಂದೆ ತಂದು ಅಲ್ಲಿ ಹೋಗದಂತೆ ಮಗಳನ್ನು ತಡೆಯುವುದು ನಮ್ಮ ಮೂರು ಜನಕ್ಕೂ ಹೆಚ್ಚು ಕಮ್ಮಿ ಅಸಾಧ್ಯವಾಯ್ತು. ರವಿ ( ನನ್ನ ಪತಿ)ಮನೆಗೆ ಬಂದ ಎರಡನೆಯ ದಿನ ಮಗಳಿಗೆ ಮೂಗು ಸೋರಲಾರಂಭಿಸಿತು. ಅದೇ ದಿನ ಸಂಜೆ ಕೆಮ್ಮತೊಡಗಿದ ಮಗು ನಿಲ್ಲಿಸಿದ್ದು...ಇರಲಿ ಮುಂದೆ ಹೇಳುತ್ತೇನೆ. ಆ ರಾತ್ರಿ ಮಗುವಿಗೆ ಜ್ವರ. ಜ್ವರ ಅಂದರೆ ಮೈ ಕಾದ ಕಾವಲಿ. ಪಕ್ಕ ಮಲಗಿದ್ದ ನನಗೆ ಅದರ ಮೈ ಶಾಖಕ್ಕೆ ಸೆಖೆಯಾಗತೊಡಗಿತು ಅಷ್ಟರ ಮಟ್ಟಿಗೆ. ಅರ್ಧ ರಾತ್ರಿಯಲ್ಲೇ ಎದ್ದು ಓಷಧಿ ಕುಡಿಸಿದೆ. ಅದು ನೀಳ ಉಸಿರು ತೆಗೆದುಕೊಳ್ಳುತ್ತಾ ಮಲಗಿದ್ದನ್ನು ನೋಡುತ್ತಾ ಮಲಗಿದೆ. ಕಣ್ಣು ಹತ್ತಲಿಲ್ಲ. ನನಗೆ ೧೦೦ ಪ್ರತಿಶತ ಗೊತ್ತಿತ್ತು ಇದು ಅವರಪ್ಪ ಕೊಟ್ಟ ಹಂದಿಜ್ವರವೇ ಎಂದು. ಇನ್ನೊಂದು ಚಿಂತೆ. ತುಂಬಾ ಭಾವುಕನಾದ ಮತ್ತು ಪ್ರಸ್ತುತ ಸ್ಥಿತಿಯಲ್ಲಿ ತುಂಬಾ ನಿತ್ರಾಣಿಯಾಗಿರುವ ರವಿ ಇದರಿಂದ ಮತ್ತೆಲ್ಲಿ ಆರೋಗ್ಯ ಕೆಡಿಸಿಕೊಳ್ಳುತ್ತಾನೋ ಎನ್ನುವುದು.


               ಮಗುವನ್ನು ಸದಾ ನೋಡುವ ಡಾಕ್ಟರು ಸಿಗುವುದು ಸಂಜೆ. ಇಡೀ ಮನೆ ಗಿಲಕಿಯಂತೆ ಗಲಗಲ ಮಾಡುತ್ತಿದ್ದ ನನ್ನ ಪುಟ್ಟ ಭೂತ ಬೆಳಿಗ್ಗೆ ಯೆಲ್ಲಾ ಬಸಳೆ ಸೊಪ್ಪಿನಂತೆ ಹಾಕಿದಲ್ಲಿ ಮಲಗಿತ್ತು. ನಿದ್ದೆ ಮಾಡಲಾಗುತ್ತಿರಲಿಲ್ಲ, ನಿರಂತರವಾದ ಕೆಮ್ಮು. ಏಳಲಾಗುತ್ತಿರಲಿಲ್ಲ, ಅಸಾಧ್ಯವಾದ ಸುಸ್ತು. ಕಾದುಹೋಗುವಂಥ, ಯಾವ ಕ್ರೋಸಿನ್, ಕಾಲ್ಪಾಲ್ ಗೂ ಬಗ್ಗದ ಕೆಂಡದಂಥ ಜ್ವರ. ಅಷ್ಟು ದೀರ್ಘವಾದ ಬೆಳಿಗ್ಗೆ ನನ್ನ ಜೀವನದಲ್ಲೇ ಬಂದಿರಲಿಲ್ಲ. ರವಿಗೆ ಓಷಧಿ ಕೊಡಲು ರೂಮಿಗೆ ಹೋಗುವಾಗೆಲ್ಲಾ ಯೋಚಿಸಿ ಯಾವುದಾದರೂ ಹಾಡನ್ನು ನೆನಪಿಸಿಕೊಂಡು ಅದನ್ನು ಗುನುಗುತ್ತಾ ಹೋಗಿ ಕೊಡುತ್ತಿದ್ದೆ. ಅವನು ಅದನ್ನು ನುಂಗಿ ಹೇಗಿದೆ ಮಗು ಅನ್ನುತ್ತಿದ್ದ, ನಾನು ಸ್ವಲ್ಪ ಜ್ವರ ಇದೆ ನೋಡಣ ಇನ್ನೇನು ಸಂಜೆ ಹೋಗ್ತೀನಲ್ಲ ಡಾಕ್ಟರ್ ಹತ್ರ ಅಂತಿದ್ದೆ ಅವನೊಂದು ನಿಟ್ಟುಸಿರು ಬಿಟ್ಟು ಹೊರಳಿ ಮಲಗುತ್ತಿದ್ದ. ಅಂತೂ ಇಂತೂ ಸಂಜೆಯಾಯಿತು ೬.೩೦ಗೆ ಷಾಪ್‘ನಲ್ಲಿದ್ದೆವು ನಮ್ಮನ್ನೇ ಮೊದಲು ಕಳಿಸಿದರು ಒಳಗೆ. ಡಾಕ್ಟರ್ ನಿರಂತರವಾಗಿ ಕೆಮ್ಮುತ್ತಿದ್ದ ಮಗುವನ್ನು ದಿವ್ಯವಾದ ಗಮನವಿಟ್ಟು ನೋಡಿದರು, ಎತ್ತಿಕೊಳ್ಳಿ ಮಗುವನ್ನು ಎಂದರು ಮಗು ನನ್ನ ಮಡಿಲು ಸೇರಿದ ಮೇಲೆ ನಿಧಾನವಾಗಿ ಆದರೆ ಸ್ಪಷ್ಟವಾಗಿ ನುಡಿದರು "ಇದು ಕೆಟಗರಿ ಬಿ ಹೆಚ್೧ ಎನ್೧ (ಅಂದರೆ ರವಿಗೆ ಬಂದಿದ್ದಕ್ಕಿಂತ ಗಂಭೀರವಾದ ಹಂತದ್ದು ) ತಕ್ಷಣ್ ಮಾತ್ರೆ ಶುರು ಮಾಡಿ, ಮಣಿಪಾಲ್ ಆಸ್ಪತ್ರೆಯಲ್ಲಿ ಮಾತ್ರೆ ಸಿಗುತ್ತದೆ ಅಥವಾ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ನಲ್ಲಿ ಸಿಗುತ್ತದೆ. ಏನೂ ಯೋಚಿಸಬೇಡಿ ಎಲ್ಲ ಸರಿಹೋಗುತ್ತದೆ" ಮಗನ ಸ್ಥಿತಿ ನೋಡಿ ನೊಂದಿದ್ದ ನನ್ನತ್ತೆ ಇದನ್ನ ಕೇಳಿ ಧರೆಗಿಳಿದುಹೋದರು. ಅವರ ಮನಸ್ಸು ಕುಸಿದು ಹೋದ ಸದ್ದು ಪಕ್ಕದಲ್ಲೇ ಇದ್ದ ನನ್ನ ಮನಸ್ಸಿಗಲ್ಲದೇ ಇನ್ನಾರಿಗೆ ಕೇಳಿಸಬೇಕು. ಪ್ರೀತಿಸುವುದೊಂದನ್ನೇ ತಿಳಿದ ಜೀವ ಅದು. ಸರಿ ಹೊರಗೆ ಬಂದು ಅವರಿಬ್ಬರನ್ನೂ ಮನೆಗೆ ಕಳಿಸಿ ನಾನು ಆಟೊದಲ್ಲಿ ಮಣಿಪಾಲ್ ಆಸ್ಪತ್ರೆಗೆ ಬಂದೆ. ಚೀಟಿ ನೋಡಿ ಓಷಧಾಲಯದವರೆಂದರು, ಇದು ಇಲ್ಲೆಲ್ಲೂ ಸಿಗಲ್ಲ ಮೇಡಂ, ನೀವು ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ಗೇ ಹೋಗಬೇಕು. ಅಷ್ಟು ಹೊತ್ತಿಗೆ ರಾತ್ರಿ ೮ ಗಂಟೆ, ಮಳೆ ಶುರುವಾಯಿತು. ರವಿಗೆ ಫೋನ್ ಮಾಡಿ ಹೇಳಿದೆ. ಅಲ್ಲಗೆ ಮಣಿಪಾಲ್ ಆಸ್ಪತ್ರೆಯಿಂದ ಒಂದು ೧೫ ಕಿ.ಮೀ ಗಳಿರಬಹುದು, ನನ್ನೊಬ್ಬಳನ್ನೇ ಕಳಿಸಲು ಹೆದರಿದ ರವಿ ರಾತ್ರಿ ಮಳೆಯಲ್ಲಿ ಕಾರು ತೊಗೊಂಡು ಬಂದ. ಹೊರಟೆವು ರಾಜೀವ್ ಗಾಂಧಿ ಇನ್ಸ್ಟಿಟ್ಯೂಟಿಗೆ..