ಹಂಬಲ ಹಣತೆ (3) ಸಂಗಾತಿ

ಹಂಬಲ ಹಣತೆ (3) ಸಂಗಾತಿ

ಕವನ

ಬಾಳಿಗೆ ಬರಿಶೂನ್ಯವೆ ಕೊನೆಯಾದರು,
        ಜಡತೆಯ ಸಹಿಸದು ಜೀವಿತವು!
ಕಾಲವ ಸೋಲಿಪ ವೇಗದ ಭಾವವು,
        ಅಡಗಿದೆ ಜಂಜಡ ಜೀವಿತದಿ!
 
ನಿನ್ನೆಯ ನಾಳೆಯ ಹಂತವ ತುಳಿಯುತ
        ವೇಗದೊಳೇರಿದೆ ವೆಂದಿರಲು_
ನನ್ನಿಯ ಇಂದಿನ ದಿನಕೇ-ಸೊನ್ನೆಯು
        ಆಗುತ-ಇಳಿವುದು ನಮ್ಮಾಯು!
 
ಎಲರನು ಬೆರತಿಹ ಸೌರಭ, ಬರುತಿದೆ
        ಬೇರಾಗದೆ ಆಗಳು ಒಂದಾಗಿ,
ಬಲವನು ತನುವಿಗೆ ಬೆರೆಸಿದ ಒಲುಮೆಯು
        ಬಾರದೆ ಜೀವಕೆ ಜೊತೆಯಾಗಿ?
 
ಬಾಳುವೆ ಮಠದಲ್ಲಿ, ತಾಳ್ಮೆಯ ಪಾಠವು
        ಕಡು ಕಠಿಣ, ಕಾಲವೊ ಕಿರಿದು-!
ಮೂಲಾಕ್ಷರಗಳ ಪಠಿಸುವ ವೇಳೆಗೆ,
        ಆಗಲೆ, ಕಡೆಗಂಟೆಯರವವು!
 
ನಮ್ಮಯ ಬದುಕಿನ ಶಾಲೆಯ, ಹೊತ್ತುಗೆ
        ಯಲ್ಲಿಹ, ತೊಡಕಿನ ಹಾಳೆಗಳ-
ಸುಮ್ಮನೆ ತಿರುಹುತ ಕರುಣವ ಕೈಯೊಂ
        ದಲ್ಲಿದೆ ತಿದ್ದುತ ಬಾಳುಗಳ!
 
ಇಂತೀ ಬವಣೆಗಳ ಗಣಿತ ಪಾಠವ
        ಕಲಿಯಲು ಬಂದಿಹ ಸಹಪಾಠೀ-!
ಎಂತೀಯೆಡೆ ನಾನಿಹೆ, ಒಲಿಯದೆನೀ,
        ನೆಲೆಗೆಲುವಿನ ಚೆಲು ಸಂಗಾತೀ!