ಹಂಬಲ ಹಣತೆ (4) ಬುಗ್ಗೆ

ಹಂಬಲ ಹಣತೆ (4) ಬುಗ್ಗೆ

ಕವನ

ಚಿಮ್ಮುತ ನೆಗೆಯುವೆ,
ನೆಗೆಯುತ ಚಿಮ್ಮುವೆ,
ತುಂಬಿದ ಪಗಲೊಡನೋಕುಳಿ ಯಾಡುವೆ!
ಹಾರುತಲೇಳುವೆ,
ಏಳುತ ಬೀಳುವೆ-
ತಿಂಗಳ ಬೆಳಕಲಿ ನಲಿದುಲಿದಾಡುವೆ !
 
ಪಗಲಿರುಳೆನ್ನದೆ,
ಅಳಿವುಳಿವೆನ್ನದೆ,
ಏರುತಲೇರುತಲೇರುತಲಿರಯವೆ!
ಸಗ್ಗವ ಸೇರಲು
ನುಗ್ಗುತ ಬುಗ್ಗೆಯೆ
ಏರುತಲೇರುತಲೇರುತಲಿರುವೆ!
 
ಬಿತ್ತುವೆ ಬೆಳೆಯುವೆ,
ಸುತ್ತುವೆ ಸುಳಿಯುವೆ,
ಎತ್ತಲು ಮುತ್ತನು ಚಲ್ಲುತಲಿರುವೆ!
ಮೆರೆಯುವೆ ಮೊರೆಯುವೆ,
ಗುರಿಯನು ತೊರೆಯುವೆ-
ಮತ್ತದೋ - ಏರುತಲೇರುತಲಿರುವೆ!
ಆವುದು ತಗ್ಗಿಸ
ದಾವೇಗವು ತಾ,
ತುಂಬಿಹುದಾಗಳು ಬುಗ್ಗೆಯೆ ನಿನ್ನೊಳು!
 
ಭಾವಿಸೆ ಬಗೆಬಗೆ
ಯಾಗುವೆ- ಆದರು
ಎಂದಿನ ತೆರದೊಳೆ ನೀನಿರುತಿರುವೆ!
ಗೆಲುವಿನ ಬುಗ್ಗೆಯೆ,
ಚೆಲುವಿನ ಸುಗ್ಗಿಯೆ,
ನಿನ್ನಂತೆನ್ನೆದೆ ಹಾರುತಲಿರಲೀ!
ಏಳಿನ ಬೀಳಿನ
ಬಾಳನು ಬಗೆಯದೆ,
ನನ್ನಿಯೊಳೇರುತಲೇರುತಲಿರಲೀ!
 
 
ಜೇಮ್ಸ್ ರುಸ್ಸೆಲ್ ಲೋವೆಲ್ (1819-1881) ರಚಿಸಿದ 'ದ ಫೌಂಟೇನ್' ಎಂಬ ಕವಿತೆಯ ಭಾವಾನುವಾದ.