ಹಂಬಲ
ಎಲ್ಲಿಹೋದವೋ ದಿನಗಳೆಲ್ಲಿ ಹೋದವೋ?
ಎಲ್ಲಿ ಹೋದವೋ ದಿನಗಳೆಲ್ಲಿಹೋದವೋ
ಇರುವೆ ಸಾಲ ಕಂಡು ಕುಣಿವ
ಗುಬ್ಬಿಗೂಡನರಸಿ ಬರುವ
ಹಸಿರ ಬಯಲ ಹಿಮದಮಣಿಯ
ಒರೆಸಿ ಹರುಷಪಡುವ ದಿನಗಳೆಲ್ಲಿ ಹೋದವೋ?
ಯಾವ ಮರದಲೆಂತ ಹಣ್ಣು
ಯಾವ ಹಕ್ಕಿಗೆಂಥ ಬಣ್ಣ
ಯಾವ ಗಿಡಕದೆಂಥ ಹೂ
ಹಣ್ಣು ಬಣ್ಣ ಎಂದ ದಿನಗಳೆಲ್ಲಿ ಹೋದವೋ?
ಮಳೆಯ ನೀರ ಹೊನಲಿನಲಿ
ದೋಣಿಬಿಟ್ಟು ನೋಡಿ ನಲಿವ
ದುಂಬಿಗಳ ಬಾಲಕೆಲ್ಲ ಬಾಳೆನಾರ ಬಿಗಿದು ಬಿಡುವ
ಬೇಲಿಹಾರಿ ಮರವನೇರಿ
ಕೋತಿಗೆ ಸವಾಲು ಹೋಡೆವ
ಚಿಂತೆ ಕಂತೆಯಿರದ ದಿನಗಳೆಲ್ಲಿ ಹೋದವೋ?
ಹಸುರ ಚಿಗುರ ಪೀಪಿಯೂದಿ
ಹಕ್ಕಿದನಿಯ ಹಾಡಿದ
ಕಲ್ಲತೇದು ಬಣ್ಣ ಬಳಿದು
ರಾಮಾಯಣ ಮಾಡಿದ
ಬೆಳದಿಂಗಳ ರಾತ್ರಿಯಲ್ಲಿ ಚಂದ್ರನ ಕೆಳೆ ಮಾಡಿದ
ಬುಗುರಿಯಂತೆ ತಿರುಗಿ ನಿಲಲು
ಜಗವೆ ತಿರುಗಿದಂತೆ ತಿಳಿದು
ಭಯದಿ ಕಣ್ಣ ಮುಚ್ಚಿಕೊಳಲು
ಆಯತಪ್ಪಿ ಉರುಳಿಕೊಂಡು
ನಕ್ಕುನಲಿದು ಬಳೆದ ದಿನಗಳೆಲ್ಲಿಹೋದವೋ
ಈಗಲೀಗ ತಿಳಿದ ನಿಜವು
ಚಂದ್ರನೊಂದು ಮಣ್ಣ ಮುದ್ದೆ
ಎಣಿಸಿ ನಲಿದ ಚಿಕ್ಕೆಗಳೋ
ಭಗ್ಗನುರಿವ ಕೆಂಡದುಂಡೆ
ಗಿರಗಿರನೆ ತಿರುಗುವುದು
ನಾ ನಿಲಲೂ ಜಗಮುಗಿಲು
ಏನಿದೆಂಥ ಚೋದ್ಯವೋ !
ಏನು ಅಂತರಾರ್ಥವೋ
ಮಕ್ಕಳಾಟವಾಡಲಾರೆ
ಛೇಡಿಸುವುದು ಹಿರಿತನ
ಹಿರಿತನದಲಿ ಬೀಗಲಾರೆ
ಕೈಬೀಸಿದೆ ಎಳೆತನ
ಏನಿದೆಂಥ ನಿಯಮವೋ
ಬದುಕ ಬಸಿರ ವ್ಯಂಗ್ಯವೋ
ಬಾಳನದಿಯ ಹೊಯ್ಲಿನಲ್ಲಿ
ಕೊರೆದುಹೋಗೆ ಬಾಲ್ಯವು
ಉಳಿದುಹೋದೆ ತೊರೆಯ ಬಂಡೆ
ತೇಲ- ಮಳುಗಲಾಗದೆ
ಪಾದಮಟ್ಟ ನೀರಿನಲ್ಲಿ
ಈಜಲೆಂತೊ ತಿಳಿಯದೆ.