ಹಂಸ ಹಾಡುವ ಹೊತ್ತು- ೫
ಹಂಸಗಾನದ ತನಿ......
ಅದೇ ಸಂಜೆ ಪುರಭವನದಲ್ಲಿ ಮೂರ್ತಿಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದರಲ್ಲಿ ಭಾಗವಹಿಸಿ, ಮನೆಗೆ ಮರಳಿದ ಮೇಲೆ, ರಾವ್ ರವರ ಮನವನ್ನು ಮೂರ್ತಿಯವರೇ ವ್ಯಾಪಿಸಿಕೊಂಡಿದ್ದರು. ಅಂದು ಬೆಳಿಗ್ಗೆ, ಮಿಲಿಂದ ಅವರನ್ನು ಕೇಳಿದ್ದ ಪ್ರಶ್ನೆಯನ್ನೇ ಮೆಲುಕು ಹಾಕುತ್ತಿದ್ದರು.
ಒಂದೆರಡು ವರ್ಷಗಳ ಕೆಳಗೆ ಮೂರ್ತಿ ಮತ್ತು ರಾವ್ ಇಬ್ಬರಿಗೂ ಪರಿಚಿತರಾಗಿದ್ದ, ಅವರ ಬಾಲ್ಯದ ಗೆಳೆಯರೂ ಆಗಿದ್ದ ಅನಂತ ಸ್ವಾಮಿ ಆಕಸ್ಮಿಕವೊಂದರಲ್ಲಿ ಮರಣಹೊಂದಿದ್ದಾಗ ಅವರಿಬ್ಬರೂ ಅವರ ಅಂತ್ಯ ದರ್ಶನವನ್ನು ಮಾಡಿಕೊಂಡು ಮೂರ್ತಿಯವರ ಮನೆಗೆ ಬಂದು ಮಾತುಕತೆಯಾಡುತ್ತಿದ್ದಾಗ ಅವರ ಚರ್ಚೆ ಮರಣದ ಬಗ್ಗೆ ಹೊರಳಿತ್ತು.
"ಮುರಳೀ, ಅನಂತ ಸ್ವಾಮಿಯ ಅಣ್ಣ ಕೃಷ್ಣಸ್ವಾಮಿಯವರನ್ನು ಗಮನಿಸಿದೆಯಾ ...?" ಎಂದು ಮೂರ್ತಿ ಕೇಳಿದರು.
"ಹಾಂ, ನೋಡಿದೆ. ಪಾಪ, ತಮ್ಮನನ್ನು ಕಳೆದುಕೊಂಡು ಬಹಳ ಸಂಕಟಪಡುತ್ತಿದ್ದರು......"
"ಕೃಷ್ಣಸ್ವಾಮಿಯವರು ಜನಮತ ಪತ್ರಿಕೆಯಲ್ಲಿ ಒಂದು ಅಂಕಣವನ್ನು ಬರೆಯುವುದು ನಿನಗೂ ಗೊತ್ತಿದೆಯಲ್ಲ. ನಾನು ಅವರ ಕೆಲವು ಲೇಖನಗಳನ್ನೋದಿದ್ದೇನೆ. ನೀನಂತೂ ಅವರ ಅಪರ ಅಭಿಮಾನಿ. ಅವರ ಅಂಕಣವನ್ನು ತಪ್ಪದೇ ಓದುತ್ತಿರುತ್ತೀಯಾ. ಅವರ ಒಂದು ಲೇಖನದಲ್ಲಿ ಕಿಸಾಗೋತಮಿಯ ಪ್ರಸಂಗವನ್ನು ವಿಶ್ಲೇಷಿಸುತ್ತಾ, ಸಾವು ಅನಿವಾರ್ಯವೆಂಬುದನ್ನು ತಿಳಿದೂ ಕೂಡ ಸಾವು ಎದುರಾದಾಗ ಮನುಷ್ಯ ಅದೆಷ್ಟು ಕಂಗೆಡುತ್ತಾನೆ ಎಂದು ಬರೆದು, ಸಾವನ್ನು ಸಮಚಿತ್ತದಿಂದ ಎದುರಿಸುವ ಮನೋಭಾವ ನಾವು ಬೆಳೆಸಿಕೊಳ್ಳಬೇಕು ಎಂದು ಬರೆದಿದ್ದರು. ಆ ರೀತಿ ಬರೆದ ಅವರೇ ಇಂದು ದಿಕ್ಕೆಟ್ಟವರಂತೆ ವರ್ತಿಸುತ್ತಿದ್ದರು.." ಎಂದು ಆಕ್ಷೇಪಿಸುವ ದನಿಯಲ್ಲಿ ನುಡಿದರು ಮೂರ್ತಿ.
"ಒಂದು ವೇಳೆ ಅವರ ತಮ್ಮನ ಸಾವು ಸಹಜವಾದ ಸಾವಾಗಿದ್ದರೆ ಅವರು ಸಂಕಟಪಡುತ್ತಿರಲಿಲ್ಲವೇನೋ ಹೀಗೆ ಆಕಸ್ಮಿಕವಾಗಿ ಕಣ್ಮರೆಯಾದಾಗ ಸಂಕಟವಾಗುವುದು ಸಹಜ ತಾನೇ.....?"
"ಅಂದರೆ, ಒಂದು ವೇಳೆ ಅವರ ತಮ್ಮ ಯಾವುದೋ ಕಾಯಿಲೆಯಿಂದ ತೀರಿಕೊಂಡಿದ್ದರೆ ಅವರಿಗೆ ಸಂಕಟವಾಗುತ್ತಿರಲಿಲ್ಲ ಎಂದೇ .......?"
" ಹಾಗಲ್ಲ, ಸಾವಿನ ಕಾರಣಕ್ಕಿಂತಲೂ, ಇನ್ನೂ ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪಿದ್ದಕ್ಕೆ ಅವರಿಗೆ ನೋವಾಗಿರಬೇಕು......."
"ಮಧ್ಯಮ ವಯಸ್ಸಿನವರೆಗೂ ಬಾಳಿ, ಬಾಳಿನಲ್ಲಿ ಕಾಣಬಹುದಾದ್ದರಲ್ಲಿ ಸಾಕಷ್ಟನ್ನು ಕಂಡು ಸಾವನ್ನಪ್ಪಿದ ಅವರ ಸೋದರನ ಮರಣವೇ ಅವರಿಗೆ ಅಷ್ಟು ವೇದನೆಯನ್ನುಂಟು ಮಾಡಿದರೆ, ಇನ್ನೂ ಜಗತ್ತೇನೆಂದು ತಿಳಿಯುವ ಮುನ್ನವೇ ಕಣ್ಣುಮುಚ್ಚಿದ ತನ್ನ ಕಂದನ ಸಾವಿಗೆ ಶೋಕಿಸಿದ ಕಿಸಾಗೋತಮಿಯ ಶೋಕವನ್ನು ಉದಾಹರಿಸುವ ಔಚಿತ್ಯವೇನು.?."
"ನೋಡು ಮೂರ್ತಿ, ನೀನು ಎಲ್ಲವನ್ನೂ ತೀರ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡುತ್ತೀ.........ನಾವು ಬೊಂಬೆಗಳಲ್ಲ, ರೋಬೋಗಳಲ್ಲ, ಮಾನವರು, ಸಂವೇದನಾಶೀಲರು....."
"ಇರಬಹುದು. ನನಗೆ ಏಕೆ ಹೀಗನಿಸಿತು ಗೊತ್ತಾ ? ಆಧ್ಯಾತ್ಮವೆಲ್ಲವೂ ಭಾರತೀಯರ ಸೊತ್ತು, ಪಾಶ್ಚಿಮಾತ್ಯರೆಲ್ಲರೂ ಮೆಟೀರಿಯಲಿಸ್ಟ್ ಎನ್ನುವ ಮನೋಭಾವ ಸಾಮಾನ್ಯವಾಗಿದೆ. ಕೆಲವು ವರ್ಷಗಳ ಹಿಂದೆ, ಆಧುನಿಕ ವೈದ್ಯಶಾಸ್ತ್ರದಲ್ಲಿ ಬಹು ದೊಡ್ಡ ಹೆಸರಾದ ಸರ್ ವಿಲಿಯಮ್ ಆಸ್ಲರ್ ಅವರ ಬಗ್ಗೆ ಓದುತ್ತಿದ್ದೆ. ಹತ್ತೊಂಭತ್ತನೇ ಶತಮಾನದಲ್ಲಿ ಅತಿ ಪ್ರಸಿದ್ಧರಾಗಿದ್ದ ಕೆನಡಾದ ವೈದ್ಯರವರು. ತಮ್ಮ ವೃತ್ತಿಯಲ್ಲಿ ಅವರು ತೋರುತ್ತಿದ್ದ ಶಿಸ್ತು ಮತ್ತು ನಿಷ್ಠೆಯನ್ನು ತಮ್ಮ ವೈಯುಕ್ತಿಕ ಜೀವನದಲ್ಲಿಯೂ ತೋರಿದವರು. ಇತ್ತೀಚಿನ ದಿನಗಳಲ್ಲಿ, ಹೋಲಿಸ್ಟಿಕ್ ಕೇರ್ ಎನ್ನುವ ಪದವನ್ನು ಬಳಸುವುದು ಒಂದು ಫ್ಯಾಶನ್ ಎನಿಸಿಬಿಟ್ಟಿದೆ. ಹೋಲಿಸ್ಟಿಕ್ ಕೇರ್ ಹೇಗೆ ಕೊಡಬಹುದೆಂದು ಯಾರೊಬ್ಬರೂ ಸ್ಪಷ್ಟವಾಗಿ ತಿಳಿಸದಿದ್ದರೂ ಅದರ ಬಗ್ಗೆ ಭಾಷಣ ಬಿಗಿಯುವವರು ಮಾತ್ರ ಕಮ್ಮಿ ಏನಿಲ್ಲ. ಆದರೆ ಸರ್ ಆಸ್ಲರ್ ಅವರು ತಮ್ಮ ನಡತೆಯಲ್ಲಿ ಇದನ್ನು ತೋರಿಸಿಕೊಟ್ಟಿದ್ದರು. ಅವರ ರೋಗಿಯೊಬ್ಬ ಮರಣ ಶಯ್ಯೆಯಲ್ಲಿ ಇದ್ದಾಗ,ಆ ರೋಗಿಯ ಬದಿಯಲ್ಲಿ ನಿಂತು ಪವಿತ್ರ ಗ್ರಂಥ ಪಠಣವನ್ನು ಮಾಡಿದ್ದರಂತೆ. ಅಂದರೆ, ಒಬ್ಬ ಪಾದ್ರಿ ಮಾಡಬೇಕಾಗಿದ್ದ ಕೆಲಸವನ್ನೂ ಅವರೇ ಮಾಡಿದ್ದರಂತೆ . ಅವರದೇ ಅಂತಿಮ ಕಾಲ ಹತ್ತಿರವಾದಾಗ ಮತ್ತು ತಮ್ಮ ಮರಣ ಸನ್ನಿಹಿತವಾಗಿದೆ ಎಂದು ತಿಳಿದಾಗ ಅವರು ಎಲ್ಲಾ ಔಷಧೋಪಚಾರಗಳನ್ನು ನಿಲ್ಲಿಸಿ, ತಮಗೆ ಪ್ರಿಯವಾದ ಕಾವ್ಯದ ವಾಚನವನ್ನು ಕೇಳುತ್ತಾ ತಮ್ಮ ಅಂತಿಮ ಸಮಯಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದರಂತೆ” ಎಂದು ಹೇಳುತ್ತಿದ್ದ ಮೂರ್ತಿಯವರ ಜೊತೆಗೆ ತಮ್ಮ ಸಹಮತಿಯನ್ನು ಸೂಚಿಸುವಂತೆ,
"ಹಾಗೆ ನೋಡಿದರೆ, ಲಿವಿಂಗ್ ವಿಲ್ ನ್ನು ಆರಂಭಿಸಿದ್ದು ಕೂಡ ಅಮೆರಿಕನ್ ಲಾಯರ್ ಲೂಯಿ ಕುಟ್ನರ್ ತಾನೇ ? ಲಿವಿಂಗ್ ವಿಲ್ ನ ಹಿಂದಿರುವ ಉದ್ದೇಶ ಕೂಡ ಮೆಟೀರಿಯಲಿಸ್ಟ್ ಗಳಿಂದ ನೀರೀಕ್ಷಿಸುವಂತಹುದಲ್ಲ" ಎಂದು ಮುರಳಿ ಹೇಳಿದರು.
"ನಿಜ. ಸರ್ ವಿಲಿಯಂ ಆಸ್ಲರ್ ಅವರ ಬಗ್ಗೆ ಓದುತ್ತಿದ್ದಾಗಲೇ ನನಗೆ ಥ್ಯಾನಟಾಲಜಿ ಎಂಬ ಶಾಸ್ತ್ರದ ಬಗ್ಗೆ ತಿಳಿದದ್ದು........"
"ಥ್ಯಾನಟಾಲಜಿ......ಅಂದರೆ ....ಮರಣಕ್ಕೆ ಸಂಬಂಧಪಟ್ಟದ್ದೇ ...." ಎಂದು ಕೇಳಿದರು ರಾವ್.
"ನಿನಗೆ ಥ್ಯಾನಟಾಲಜಿ ಬಗ್ಗೆ ಗೊತ್ತೇ.....?"
"ಉಹುಂ, ಥ್ಯಾನಟೋಸ್ ಎಂಬುದು ಗ್ರೀಕ್ ಮೃತ್ಯುದೇವತೆಯ ಹೆಸರೆಂಬುದು ತಿಳಿದಿತ್ತು. ಹಾಗಾಗಿ, ಇದು ಮರಣಕ್ಕೆ ಸಂಬಂಧವಿರಬಹುದೆಂದು ಊಹಿಸಿದೆ ಅಷ್ಟೇ..."
"ನಿಜ. ಥ್ಯಾನಟಾಲಜಿ ಎಂದರೆ ಮೃತ್ಯುಶಾಸ್ತ್ರ ಎಂದೇ ಹೇಳಬಹುದು. ಸರ್ ಆಸ್ಲರ್ ಅವರಿಗೆ ಇದರಲ್ಲಿ ವಿಶೇಷ ಆಸಕ್ತಿಯಿತ್ತಂತೆ...ತಮ್ಮ ನಂಬಿಕೆಗಳಿಗೆ ನಿಷ್ಠರಾಗಿ ಅದರಂತೆಯೇ ಬಾಳಿದ ಅವರ ಮೇಲೆ ನನಗೆ ಅಪಾರ ಅಭಿಮಾನ....." ಎಂದರು ಮೂರ್ತಿ.
"ಮಹಾಭಾರತದ ಯಕ್ಷಪ್ರಶ್ನೆ ಸಂದರ್ಭದಲ್ಲಿ, ಈ ವಿಶ್ವದಲ್ಲಿ ಅತ್ಯಂತ ಆಶ್ಚರ್ಯಕರವಾದ ವಿಷಯ ಯಾವುದು ಎಂದು ಯಕ್ಷ ಕೇಳುವ ಪ್ರಶ್ನೆಗೆ ಧರ್ಮರಾಯ ಕೊಡುವ ಉತ್ತರ ಬಹಳ ಸೂಕ್ತವಾಗಿದೆ. ಪ್ರತಿ ದಿನವೂ ತನ್ನವರೂ ಸೇರಿದಂತೆ ಯಾರಾದರೊಬ್ಬರ ಮರಣವನ್ನು ಗಮನಿಸಿದ ಮೇಲೂ ಒಬ್ಬ ವ್ಯಕ್ತಿ ತಾನು ಮಾತ್ರ ಈ ನಿಯಮಕ್ಕೆ ಹೊರತೇನೋ ಎಂದು ವರ್ತಿಸುವುದು ಅತ್ಯಂತ ಆಶ್ಚರ್ಯಕರ ಸಂಗತಿ ....."
"ಖಂಡಿತಾ, ನಾನದನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ಮುರಳೀ, ನಿನಗೆ ನೆನಪಿದೆಯೇ, ನಾವು ಪಿ.ಯು.ಸಿ ಯಲ್ಲಿದ್ದಾಗ ನಮಗೆ ಪು.ತಿ.ನ ರವರ ಒಂದು ಬರಹ ಸಂಗ್ರಹ..... ...ರಾಮಾಚಾರಿಯ ನೆನಪುಗಳು ಅಥವಾ....ರಾಮಾಚಾರಿಯ ಕನಸುಗಳು ಎಂದೋ ಅದರ ಹೆಸರು....ನಮಗೆ ನಾನ್ ಡಿಟೇಲ್ಡ್ ಪಠ್ಯವಾಗಿತ್ತು. ಅದರಲ್ಲಿಯ ಒಂದು ಬರಹ, ಸುಬ್ಬರಾಯರು ತಮ್ಮ ಮಗನ ಪದ್ಯವನ್ನು ಓದಿ ವಿಮರ್ಶಿಸಿದ್ದು....ಅದು ನನಗೆ ತುಂಬಾ ಮೆಚ್ಚುಗೆಯಾಗಿತ್ತು. ಅದರಲ್ಲಿ ಒಬ್ಬ ವೃದ್ಧರು ಸಾವು ಸಮೀಪ ಸುಳಿದಾಗ, ಓ, ಸಾವೇ, ಬಂದೆಯಾ, ನಿನಗಾಗಿ ಕಾತುರದಿಂದ ಕಾಯುತ್ತಿದ್ದೆ. ನೀನು ಬಂದು ನನ್ನ ಬಾಳಿಗೆ ಒಂದು ಅರ್ಥ ತಂದೆ ಎಂದು ಬಹಳ ಸಂಭ್ರಮದಿಂದ ಹೇಳುತ್ತಾರೆ. ಆ ವಯಸ್ಸಿನಲ್ಲಿ ಅದನ್ನೋದುವಾಗಲೆಲ್ಲಾ ನಾನು ಬಹಳ ಭಾವುಕನಾಗುತ್ತಿದ್ದೆ. ಆದರೆ ಈಗ ವಸ್ತುಸ್ಥಿತಿಯನ್ನು ಗಮನಿಸಿದಾಗ, ಆ ಪ್ರಸಂಗ ಒಂದು ಕೇವಲ ಕವಿಸಮಯದಂತೆ ಕಾಣುತ್ತದೆ. ನಿಜ ಜೀವನದಲ್ಲಿ ಅಂತಹ ಪ್ರಸಂಗಗಳನ್ನು ಕಾಣುವುದು ಅಪರೂಪವೇ......"
"ಆ ರೀತಿ ಮನೋಭಾವ ನಮ್ಮಲ್ಲಿರದೇ ಇರುವುದು ನಮ್ಮ ಒಳ್ಳೆಯದಕ್ಕೇ ಎನಿಸುತ್ತದೆ ನನಗೆ. ಇಲ್ಲದೇ ಹೋದಲ್ಲಿ ಪ್ರತಿಯೊಂದು ಸಾವನ್ನು ಕಂಡಾಗಲೂ ನಮ್ಮ ಸಾವಿನ ನೆನಪಾಗಿ
ಜೀವನೋತ್ಸಾಹವನ್ನೇ ಕಳೆದುಕೊಳ್ಳುತ್ತಿದ್ದೆವೋ ಏನೋ....ಕಹಿನೆನಪುಗಳನ್ನು ಕ್ರಮೇಣ ಮರೆಸಬಲ್ಲ ಒಂದು ವ್ಯವಸ್ಥೆಯಿರುವುದರಿಂದಲೇ ನಮಗೆ ಜೀವನ ಸಹ್ಯವಾಗುತ್ತದೆ. ಅದರ ಜೊತೆಗೆ ಮುಂಬರುವ ಸಾವಿನ ನೆನಪು ನಮ್ಮ ಪಕ್ಕೆಯನ್ನು ಸದಾ ತಿವಿಯುತ್ತಿದ್ದರೆ ನಾವು ನೆಮ್ಮೆದಿಯಿಂದ ಬದುಕಲು ಸಾಧ್ಯವೇ "
"ನೀನು ಹೇಳುವುದರಲ್ಲೂ ಅರ್ಥವಿದೆ. ನಮ್ಮ ಉಳಿವಿಗೆ ಅದೆಷ್ಟೇ ಎಡರುತೊಡರುಗಳು ಬಂದರೂ ಅವುಗಳನ್ನು ಜಯಿಸಿ ಜೀವಿಸಬೇಕೆಂಬ ಒತ್ತಾಸೆಯೇ ನಮ್ಮ ಜೀವನಕ್ಕೆ ಚೈತನ್ಯ ನೀಡುವ ಶಕ್ತಿ. "to survive against all odds is the basic instinct in all of us and that is fundamental to the survival of the species and for evolution" ಈ ದೃಷ್ಟಿಯಲ್ಲಿ ನೋಡುವಾಗ, ಚಿಕ್ಕ ವಯಸ್ಸಿನಲ್ಲೇ ಅತ್ಮಹತ್ಯೆಗೆ ಪ್ರಯತ್ನಿಸುವವರನ್ನು ಕಂಡಾಗ, ಅವರ ಆತ್ಮಹತ್ಯೆಯ ಪ್ರಯತ್ನಕ್ಕೆ ಅವರೆಷ್ಟೇ ಸಮರ್ಥನೆ ನೀಡಿದರೂ ಅದು ಅಸ್ವಾಭಾವಿಕ ಮತ್ತು ಮಾನವ ಸಹಜ ವರ್ತನೆಯಲ್ಲವೆನಿಸುತ್ತದೆ...ಅಂದಹಾಗೆ...ಈ ಒಣ ಚರ್ಚೆಯಲ್ಲಿ ನಿನಗೆ ನೀರು ಕೂಡ ಕೊಡಲಿಲ್ಲ. ಸ್ವಲ್ಪ ತಾಳು. ವೈದೇಹಿ ಮತ್ತು ಸರೋಜಮ್ಮ ಇಬ್ಬರೂ ಮನೆಯಲ್ಲಿಲ್ಲ. ನನ್ನ ಕಾಫಿಯ ರುಚಿ ನೋಡುವಿಯಂತೆ......." ಎಂದು ಅಡುಗೆ ಮನೆಗೆ ಹೋಗಿ, ಹದಿನೈದು ನಿಮಿಷಗಳಲ್ಲಿ ಹಬೆಯಾಡುತ್ತಿದ್ದ ಘಮಘಮಿಸುವ ಕಾಫಿಯ ಬಟ್ಟಲುಗಳನ್ನು ತಂದು, ಮುರಳಿಯವರಿಗೆ ಒಂದು ಕಪ್ ಕೊಟ್ಟು ತಾವೂ ಗುಟುಕರಿಸಲಾರಂಭಿಸಿದರು.
"ಮುರಳಿ, ನಾನು ಎಮ್.ಬಿ.ಬಿ.ಎಸ್ ಮುಗಿಸಿದ ನಂತರ ಒಂದು ಪ್ರಖ್ಯಾತ ನರ್ಸಿಂಗ್ ಹೋಮ್ ನಲ್ಲಿ ಡ್ಯೂಟಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದೆ. ಎರಡು ವರ್ಷಗಳ ಕಾಲ ಸತತವಾಗಿ ಐ.ಸಿ.ಯು ನಲ್ಲಿ ಕೆಲಸ ಮಾಡಿದೆ. ನನ್ನ ಜೀವನದಲ್ಲಿಯೇ ಅತ್ಯಂತ ಮಾನಸಿಕ ಒತ್ತಡವನ್ನು ಅನುಭವಿಸಿದ್ದು ಆ ಎರಡು ವರ್ಷಗಳು. ಪ್ರತಿದಿನವೂ ಸಾವಿನ ಸಾನ್ನಿಧ್ಯದಲ್ಲಿ ಕೆಲಸ ಮಾಡಬೇಕಿತ್ತು. ಸಾವಿನ ವಿಶ್ವರೂಪವನ್ನು ನೋಡಬೇಕೆಂದರೆ ಐ.ಸಿ.ಯು ನಲ್ಲಿ ಕೆಲಸ ಮಾಡಬೇಕು. ಒಂದೆರಡು ಅನುಭವಗಳನ್ನು ಹೇಳುತ್ತೇನೆ ಕೇಳು. ಅದೊಂದು ದಿನ ಸಂಜೆ ಆರು ಗಂಟೆಗೆ ಸುಮಾರು ನಲವತ್ತೈದು ವರ್ಷ ಪ್ರಾಯದ ಅಸ್ಥಮಾದ ತೀವ್ರಾವಸ್ಥೆಯಲ್ಲಿದ್ದ ಒಬ್ಬ ರೋಗಿಯನ್ನು ದಾಖಲು ಮಾಡಿದರು. ಅವರಿಗೆ ಆಕ್ಸಿಜೆನ್ ವ್ಯವಸ್ಥೆ ಮಾಡಿ, ಮುಂದಿನ ಉಪಚಾರಕ್ಕೆ ಅಣಿಯಾಗುತ್ತಿದ್ದೆ. ಆ ರೋಗಿಯ ಪಕ್ಕದಲ್ಲಿಯೇ ಆತನ ಪತ್ನಿ ಮತ್ತು ಸುಮಾರು ಇಪ್ಪತ್ತು ವರ್ಷ ಪ್ರಾಯದ ಆತನ ಮಗ ತುಂಬಾ ಆತಂಕಪಟ್ಟುಕೊಂಡು ನಿಂತಿದ್ದರು. ಅಸ್ಥಮಾ ಆ ಅವಸ್ಥೆಯನ್ನು ತಲುಪಿದಾಗ ಉಪಚಾರ ಕಷ್ಟವೆಂಬುದನ್ನು ತಿಳಿದಿದ್ದ ಅವರಿಬ್ಬರಿಗೂ ಆತಂಕವಾಗಿದ್ದು ಸಹಜವೇ ಅಗಿತ್ತು. ಆಸ್ಥಮಾ ಉಪಚಾರದಲ್ಲಿ ನೆಬುಲೈಸರ್ ಎಂಬ ಒಂದು ಹೊಸ ಬಗೆಯ ಉಪಕರಣ ಅದೇ ತಾನೇ ಬಳಕೆಗೆ ಬಂದಿತ್ತು. ನಮ್ಮ ಐ.ಸಿ.ಯು ಗೆ ಅದನ್ನು ಕೆಲವೇ ದಿನಗಳ ಹಿಂದೆ ತರಿಸಿದ್ದೆವು. ಅದರ ಬಗ್ಗೆ ಅವರಿಗೆ ತಿಳಿಸಿ, ನೆಬುಲೈಸರ್ ನಿಂದ ಅವರಿಗೆ ಬೇಗ ಉಪಶಮನ ದೊರೆಯುತ್ತದೆ ಎಂದು ಅವರಿಗೆ ಭರವಸೆ ನೀಡಿ ಅವರನ್ನು ಸಮಾಧಾನ
ಪಡಿಸಿದೆ. ಅದರಂತೆಯೇ ಆ ರೋಗಿಗೆ ನೆಬುಲೈಸರ್ ಕೊಟ್ಟ ಹತ್ತು ಹದಿನೈದು ನಿಮಿಷಗಳಲ್ಲಿಯೇ ಸಾಕಷ್ಟು ನಿರಾಳವಾಗಿ ನಿರಾಯಾಸವಾಗಿ ಉಸಿರಾಡುವಂತಾಯಿತು. ನನ್ನ ಡ್ಯೂಟಿ ಎಂಟು ಗಂಟೆಗೆ ಮುಗಿಯುವುದಿತ್ತು. ಅಷ್ಟು ಹೊತ್ತಿಗೇ ಆ ರೋಗಿ ನಗುನಗುತ್ತಾ ತನ್ನ ಮಡದಿ ಮಗನೊಡನೆ ಮಾತನಾಡುತ್ತಿರುವುದನ್ನು ನೋಡಿ ನೆಮ್ಮದಿಯಿಂದ ಮನೆಗೆ ಹೋದೆ. ಮರುದಿನ ಬೆಳಿಗ್ಗೆ ಎಂಟು ಗಂಟೆಗೆ ಡ್ಯೂಟಿಗೆ ಹಾಜರಾಗಿ, ಆ ರೋಗಿಯ ಹಾಸಿಗೆಯ ಬಳಿ ಹೋದಾಗ, ಆ ರೋಗಿ ಬಹಳ ಗಂಭೀರಾವಸ್ಥೆಯಲ್ಲಿದ್ದುದು ಕಂಡು ಅಚ್ಚರಿಯಾಯಿತು. ಆ ರೋಗಿಯ ಕಣ್ಣುಗಳಲ್ಲಿ ಕಣ್ಣೀರಿನ ಕೋಡಿ ಹರಿಯುತ್ತಿತ್ತು. ಐ.ಸಿ.ಯು ನರ್ಸ್ ಬಳಿ ವಿಚಾರಿಸಿದಾಗ, ದಿಗ್ಮೂಢನಾದೆ. ಹಿಂದಿನ ದಿನ ಆ ರೋಗಿಗೆ ಲಘು ಆಹಾರವನ್ನು ಉಣಿಸಿ ಅವನ ಮಡದಿ ಮತ್ತು ಮಗ ಸ್ಕೂಟರ್ ನಲ್ಲಿ ಮನೆಗೆ ಹಿಂತಿರುಗುತ್ತಿದ್ದರಂತೆ. ರಸ್ತೆಯಲ್ಲಿ ನೀರು ತುಂಬಿದ ಒಂದು ಹೊಂಡದ ಮೇಲೆ ಸ್ಕೂಟರ್ ನಡೆಸಿದಾಗ, ಹಿಂದಿನ ಸೀಟಿನಲ್ಲಿ ಕುಳಿತಿದ್ದ ಅವನ ತಾಯಿ ಆಯ ತಪ್ಪಿ ಕೆಳಕ್ಕೆ ಬಿದ್ದು, ರಸ್ತೆ ಬದಿಯ ಬಂಡೆಯೊಂದಕ್ಕೆ ತಲೆಯಪ್ಪಳಿಸಿ ಸ್ಥಳದಲ್ಲಿಯೇ ಅಸು ನೀಗಿದ್ದರಂತೆ. ಆ ರೋಗಿಯ ಪ್ರಾಣವೇ ಆಗಬೇಕೆಂದಿಲ್ಲ, ಅವನ ಮನೆಯ ಯಾರಾದರೊಬ್ಬರ ಪ್ರಾಣ ತನ್ನಿ ಎಂದು ತನ್ನ ದೂತರಿಗೆ ಹೇಳಿಕಳಿಸಿದ್ದನೇನೋ ಆ ಯಮರಾಜ ! " ಎಂದು ವ್ಯಂಗ್ಯವಾಗಿಯೇ ಹೇಳಿದರು.
ಮೂರ್ತಿಯವರ ಮನೋವ್ಯಾಪಾರವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದ ಮುರಳಿಯವರಿಗೆ ಮೂರ್ತಿಯವರ ವ್ಯಂಗ್ಯದ ಹಿಂದಿನ ಅಪಾರ ಯಾತನೆಯೂ ಅರ್ಥವಾಗಿತ್ತು. ತಮ್ಮ ಮುಖದಲ್ಲಿಯೇ ಮೂರ್ತಿಯವರ ಮಾತಿಗೆ ಸೂಕ್ತ ಪ್ರತಿಕ್ರಿಯೆಯನ್ನು ತೋರಿಸಿ, ಮುಂದೆ ಅವರು ಹೇಳಲಿರುವುದನ್ನು ಉತ್ಸುಕತೆಯಿಂದ ಕೇಳುತ್ತಿದ್ದರು.
"ಇನ್ನೊಂದು ಸಂದರ್ಭ. ಸುಮಾರು ಎಂಭತ್ತು ವರ್ಷ ವಯಸ್ಸಿನ, ಹಲವಾರು ಗಂಭೀರ ಕಾಯಿಲೆಗಳಿಗೆ ತುತ್ತಾಗಿ, ಜರ್ಝರಿತರಾಗಿದ್ದ ಕ್ರೈಸ್ತ ವ್ಯಕ್ತಿಯೊಬ್ಬರು ದಾಖಲಾಗಿದ್ದರು. ಅವರ ಬಳಿ ಹೋದಾಗಲೆಲ್ಲಾ ಅವರ ಪಕ್ಕದಲ್ಲಿಯೇ ಇದ್ದುಕೊಂಡು ಅವರ ಅಗತ್ಯಗಳನ್ನು ನೋಡಿಕೊಳ್ಳುತ್ತಿದ್ದ, ಅವರಿಗಿಂತಲೂ ಸುಮಾರು ಹತ್ತು ಹದಿನೈದು ವರ್ಷ ಚಿಕ್ಕವರಾದ ಅವರ ಪತ್ನಿಯವರದು ಒಂದೇ ರಾಗ.......ಡಾಕ್ಟ್ರೇ, ಇವರ ಪರಿಸ್ಥಿತಿಯ ಬಗ್ಗೆ ನಮಗೆಲ್ಲಾ ಚೆನ್ನಾಗಿಯೇ ತಿಳಿದಿದೆ. ಅವರು ಗುಣಮುಖರಾಗುತ್ತಾರೆಂಬ ಆಸೆಯನ್ನೂ ನಾವಿಟ್ಟುಕೊಂಡಿಲ್ಲ. ಆದರೆ, ಮುಂದಿನ ತಿಂಗಳ ಮೊದಲ ವಾರದಲ್ಲಿ ನಮ್ಮ ಮೊಮ್ಮಗಳ ಮದುವೆ ನಿಶ್ಚಯವಾಗಿದೆ ಅಲ್ಲಿಯವರೆಗೂ ನೀವು ಅವರನ್ನು ಕಾಪಾಡಬೇಕು ಎಂದು ಕೇಳಿಕೊಳ್ಳುತ್ತಿದ್ದರು. ಒಂದೆರಡು ದಿನಗಳಲ್ಲಿ ಅವರ ಪ್ರಕೃತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದ್ದರಿಂದ ಅವರನ್ನು ಐ.ಸಿ.ಯು ನಿಂದ ವಾರ್ಡಿಗೆ ಸ್ಥಳಾಂತರಿಸಿದೆವು. ಹಾಗಾಗಿ ಮುಂದಿನ ಕೆಲವು ದಿನ ಅವರ ಬಗ್ಗೆ ಏನೂ ತಿಳಿಯಲಿಲ್ಲ. ಅಂದು ನಾನು ಮನೆಯಿಂದ ಹೊರಟು, ನಮ್ಮ ಆಸ್ಪತ್ರೆಯ ಪಕ್ಕದಲ್ಲಿಯೇ ಇದ್ದ ಚರ್ಚ್ ಮುಂದೆ ಹಾದು ಹೋಗುವಾಗ, ಆ ರೋಗಿಯ ಕುಟುಂಬದವರು ಚರ್ಚ್ ನಿಂದ ಹೊರಬರುತ್ತಿದ್ದರು. ನಾನು ಅವರ ಮಗನತ್ತ ಪರಿಚಯದ ಮುಗುಳ್ನಗೆ ಬೀರಿದಾಗ ಅವರು ನನ್ನ ಗುರುತು ಹಿಡಿದು... ಇದೀಗ ತಾನೇ ಅಂತಿಮ ಕಾರ್ಯಗಳು ಮುಗಿದವು ಡಾಕ್ಟ್ರೇ ಎಂದರು.... ಪಾಪ, ತುಂಬಾ ಹಿಂಸೆ ಅನುಭವಿಸುತ್ತಿದ್ದರು....ಎಂದು ನಾನು ಸಹಾನುಭೂತಿಯಿಂದ ನುಡಿದೆ. ಅವರ ಮುಖದ ಮೇಲೆ
ಗೊಂದಲ ಕಾಣಿಸಿತು...... ಇಲ್ಲ ಡಾಕ್ಟ್ರೇ ಹೆಚ್ಚೇನೂ ನರಳಲಿಲ್ಲ. ಎದೆ ನೋವು ಎಂದು ಹೇಳಿದ ಒಂದರ್ಧ ಗಂಟೆಯಲ್ಲಿಯೇ ತೀರಿಕೊಂಡರು......ಎಂದು ಅವರು ಹೇಳಿದಾಗ ನನ್ನಲ್ಲಿ ಗೊಂದಲವುಂಟಾಯಿತು. ಅದನ್ನು ಗಮನಿಸಿದ ಅವರು...... ಓಹ್ ನೀವು ನನ್ನ ತಂದೆಯ ಬಗ್ಗೆ ಹೇಳುತ್ತಿದ್ದೀರಾ ? ಅವರೀಗ ಪರವಾಗಿಲ್ಲ. ಇನ್ನೂ ಆಸ್ಪತ್ರೆಯಲ್ಲಿಯೇ ಇದ್ದಾರೆ. ನಾನು ಹೇಳುತ್ತಿದ್ದುದು ನನ್ನ ತಾಯಿಯ ಬಗ್ಗೆ . ನಿನ್ನೆ ರಾತ್ರಿ ಅವರು ತೀರಿಕೊಂಡರು ಎಂದಾಗ ಸಾವಿನ ಸುದ್ದಿಗಳಿಗೆ ಮರಗಟ್ಟಿ ಹೋಗಿದ್ದ ನಾನೂ ಕೂಡ ಗರಬಡಿದವನಂತಾದೆ"
ಮೂರ್ತಿಯವರು ಮಾತು ನಿಲ್ಲಿಸಿ ಅಂದಿನ ತಮ್ಮ ಮನೋಸ್ಥಿತಿಯನ್ನುಮತ್ತೊಮ್ಮೆ
ಅನುಭವಿಸುತ್ತಿರುವವರಂತೆ ಕಾಣುತ್ತಿದ್ದರು.
ಮೂರ್ತಿಯವರ ಭಾವನೆಗಳಿಗೆ ಸ್ಪಂದಿಸಿ ತಮ್ಮ ಮನದಲ್ಲಿಯೇ ಮಂಥನ ನಡೆಸುತ್ತಿದ್ದ ಮುರಳಿಯವರು, ಸ್ವಲ್ಪ ಸಮಯ ಮೌನವಾಗಿದ್ದು, ಬಳಿಕ,
"ಮೂರ್ತಿ, ಬಹಳ ದಿನಗಳಿಂದ ನಿನ್ನನ್ನು ಒಂದು ಪ್ರಶ್ನೆ ಕೇಳಬೇಕೆಂದಿದ್ದೆ. ಇಂದಿನ ನಮ್ಮ ಚರ್ಚೆ ಅದೇ ವಿಷಯವಾಗಿರುವುದರಿಂದ ಕೇಳುತ್ತಿದ್ದೇನೆ. ನಾವೆಲ್ಲಾ, ಅಂದರೆ, ನಾವು ಮಾನವರೆಲ್ಲಾ ಒಂದೇ ಬಗೆಯ ದೇಹ ರಚನೆ ಹೊಂದಿದ್ದರೂ ನಮ್ಮ ಅಂತ್ಯವೇಕೆ ಭಿನ್ನವಾಗಿರುತ್ತದೆ ? ಒಬ್ಬರು ಕ್ಷಯರೋಗಕ್ಕೆ ಬಲಿಯಾಗಿ ಇನ್ನೊಬ್ಬರು ಮಲೇರಿಯಾಕ್ಕೆ ಬಲಿಯಾಗಿ ಸಾವನ್ನಪ್ಪುವುದರಲ್ಲಿ ಆಶ್ಚರ್ಯವೇನಿಲ್ಲ..... ಅಂದರೆ.... ಸೋಂಕು ರೋಗಗಳ ಸಂದರ್ಭದಲ್ಲಿ ನನಗೇನೂ ವಿಶೇಷತೆ ಕಾಣುತ್ತಿಲ್ಲ. ಅವುಗಳನ್ನು ಹೊರತು ಪಡಿಸಿ, ಕೆಲವರು ಹೃದಯ ದೌರ್ಬಲ್ಯದಿಂದ, ಇನ್ನೂ ಕೆಲವರು ಯಕೃತ್ತಿನ ತೊಂದರೆಯಿಂದ ....ಮೂತ್ರಪಿಂಡಗಳ ವೈಫಲ್ಯದಿಂದ.....ಹೀಗೆ ಬಗೆ ಬಗೆಯ ಕಾರಣಗಳಿಂದ ಅಂತ್ಯಕಾಣುವುದೇಕೆ...?" ಎಂದು ಕೇಳಿದರು.
"ಒಳ್ಳೇ ಪ್ರಶ್ನೇನೇ......ಬಹಳಷ್ಟು ಸಂದರ್ಭಗಳಲ್ಲಿ ಇದಕ್ಕೆ ಕಾರಣ ಸ್ಪಷ್ಟವಾಗಿಯೇ ಇರುತ್ತದೆ. ಮದ್ಯಪಾನದ ವ್ಯಸನವಿರುವ ವ್ಯಕ್ತಿ ಯಕೃತ್ತಿನ ತೊಂದರೆಗೊಳಗಾಗುವುದು, ಧೂಮಪಾನದ ಚಟವಿರುವ ಇನ್ನೊಬ್ಬ ವ್ಯಕ್ತಿ ಶ್ವಾಸಕೋಶಗಳ ತೊಂದರೆಗೊಳಗಾಗುವುದು ಅರ್ಥವಾಗುವಂತಹ ವಿಷಯಗಳೇ. ಆದರೆ, ಒಂದೇ ಕುಟುಂಬಕ್ಕೆ ಸೇರಿದ್ದರೂ, ಅದರ ಸದಸ್ಯರೆಲ್ಲರೂ ವಿವಿಧ ಕಾರಣಗಳಿಂದ ಅಂತ್ಯ ಕಾಣುವುದಕ್ಕೆ ಮುಖ್ಯ ಕಾರಣ, ಅವರ ಜೀವಕೋಶಗಳಲ್ಲಿರುವ ಜೀನ್ಸ್ ಅಥವಾ ತಳಿವಾಹಕಗಳು. ಮೇಲ್ನೋಟಕ್ಕೆ ಒಂದು ಕುಟುಂಬಕ್ಕೆ ಸೇರಿದ ಎಲ್ಲರ ಜೀವಕೋಶಗಳಲ್ಲಿರುವ ಕ್ರೋಮೋಸೋಮ್ಸ್ ಅಥವಾ ವರ್ಣತಂತುಗಳು ಒಂದೇ ತರಹ ಕಂಡುಬಂದರೂ, ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವುಗಳಲ್ಲಿರುವ ವ್ಯತ್ಯಾಸ ಸ್ಪಷ್ಟವಾಗುತ್ತದೆ. ನಮ್ಮ ದೇಹವೊಂದನ್ನು ಸಂಕೀರ್ಣ ಯಂತ್ರವೊಂದಕ್ಕೆ ಹೋಲಿಸಿದರೆ, ಯಂತ್ರವೊಂದರಲ್ಲಿ ವಿವಿಧ ಭಾಗಗಳಿರುವಂತೆ, ನಮ್ಮ ದೇಹದ ಒಟ್ಟಾರೆ ಕಾರ್ಯವನ್ನು ನೋಡಿಕೊಳ್ಳಲು, ನರಮಂಡಲದ ವ್ಯವಸ್ಥೆ, ರಕ್ತಪರಿಚಲನಾ ವ್ಯವಸ್ಥೆ , ಜೀರ್ಣಾಂಗ ವ್ಯವಸ್ಥೆ ಯಂತಹ ಹಲವಾರು ವ್ಯವಸ್ಥೆಗಳಿರುತ್ತವೆ. ಇವೆಲ್ಲವುಗಳ ಕಾರ್ಯ ಕ್ಷಮತೆ ಏಕರೂಪವಾಗಿರುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿ ಪಡೆದುಕೊಂಡು ಬಂದಿರುವ ತಳಿವಾಹಕಗಳನ್ನಾಧರಿಸಿ, ಅವುಗಳ ಕಾರ್ಯ ಕ್ಷಮತೆಯಲ್ಲಿ ವ್ಯತ್ಯಾಸವಿರುತ್ತದೆ. ಹೀಗಾಗಿ, ಒಂದೇ ಕುಟುಂಬದ ಒಬ್ಬ ವ್ಯಕ್ತಿಯಲ್ಲಿ ಹೃದಯಕ್ಕೆ ಸಂಬಂಧಿಸಿದಂತಗ ತಳಿವಾಹಕಗಳು ದೋಷಪೂರಿತವಾಗಿದ್ದಲ್ಲಿ, ಅವನ ಸಾವು ಹೃದಯಾಘಾತದಿಂದಾಗಬಹುದು, ಅಂತೆಯೇ ಅವನ ಮೂತ್ರಪಿಂಡಗಳ ಕಾರ್ಯಕ್ಕೆ ಸಂಬಂಧಪಟ್ಟಂತಹ ತಳಿವಾಹಕಗಳು ದೋಷಪೂರಿತವಾಗಿದ್ದಲ್ಲಿ ಅವನ ಮರಣ ಮೂತ್ರಪಿಂಡಗಳ ವೈಫಲ್ಯದಿಂದಾಗಬಹುದು. ನಮ್ಮ ರಕ್ತ ನಾಳಗಳಗಳಲ್ಲಿ ರಕ್ತ ಪರಿಚಲನೆಗೆ ತಡೆಯೊಡ್ಡುವಂತಹ ಅಥೆರೋಸ್ಲಿರೋಸಿಸ್ ಎನ್ನುವ ಒಂದು ಬಗೆಯ ದೋಷ ನಮ್ಮ ಹುಟ್ಟಿನಿಂದಲೇ ಆರಂಭಗೊಂಡು ಕ್ರಮೇಣ
ಉಲ್ಪಣಗೊಂಡು ಮುಂದೊಂದು ದಿನ ಹೃದಾಯಾಘಾತಕ್ಕೋ ಮಿದುಳಿನ ಆಘಾತಕ್ಕೋ ಎಡೆ ಮಾಡಿಕೊಡಬಹುದು. ಅದನ್ನು ನಮ್ಮ ದೇಹದಲ್ಲಿ ಅಳವಡಿಸಲಾಗಿರುವ ಒಂದು ಟೈಮ್ ಬಾಂಬ್ ಎಂದೇ ಕರೆಯಬಹುದು. ಎಂದು ಆ ಟೈಮ್ ಬಾಂಬ ಸ್ಫೋಟಿಸುತ್ತದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ........." ಎಂದು ತಮ್ಮ ಮಾತನ್ನು ಒಂದೆರಡು ಕ್ಷಣ ನಿಲ್ಲಿಸಿ, ಏನನ್ನೋ ಧೀರ್ಘವಾಗಿ ತುಲನೆ ಮಾಡಿ,
"ಮುರಳಿ, ಈ ಟೈಮ್ ಬಾಂಬ್ ಸ್ಫೋಟಿಸುವ ಸಮಯವನ್ನು ಮೊದಲೇ ತಿಳಿಯಬಹುದಾದರೆ ಹೇಗೆ ?.........." ಎಂದು ಕೇಳಿದರು.
"ಅಂದರೆ, ನಮ್ಮ ಸಾವು ಎಂದು ಸಂಭವಿಸುತ್ತದೆ ಎಂದು ತಿಳಿದರೆ ಹೇಗೆ ಎಂದೇ ...?"
"ಹೌದು, ನಮ್ಮ ಅಂತಿಮ ದಿನವನ್ನು ಹೇಗೋ ತಿಳಿಯಬಲ್ಲೆವೆಂದಾದರೆ ಹೇಗೆ .......ಅಂತಹುದೊಂದು ಅವಿಷ್ಕಾರ ಸಾಧ್ಯವಾಗುವುದಾದರೆ ನಿನ್ನ ಅಭಿಪ್ರಾಯವೇನು....?"
ಮುರಳಿಯವರಿಗೆ ಇದಕ್ಕೆ ತಟ್ಟನೇ ಉತ್ತರಕೊಡಲಾಗಲಿಲ್ಲ. ಸ್ವಲ್ಪ ಹೊತ್ತು ತಮ್ಮ ಮನಸ್ಸಿನಲ್ಲಿಯೇ ಅಳೆದೂ ತೂಗಿ,
"ಇದೊಂದು ವಿಚಿತ್ರ ಪ್ರಶ್ನೆ. ಇದು ನಿಗೂಢವಾಗಿದ್ದರೆ ಒಳಿತೆಂದೇ ಆ ವಿಧಾತನ ಅಭಿಪ್ರಾಯವಿರಬೇಕು. ಹಾಗಾಗಿಯೇ ನಮಗೆ ಅದನ್ನು ತಿಳಿಯಲು ಸಾಧ್ಯವಾಗಿಲ್ಲ. ಬಹುಶಃ ಮುಂದೆಯೂ ಸಾಧ್ಯವಾಗಲಿಕ್ಕಿಲ್ಲ......" ಎಂದುತ್ತರಿಸಿದರು.
" ಹೇಗೋ ಸಾಧ್ಯವಾಯಿತು ಎಂದಿಟ್ಟುಕೋ.......ಆಗ ...?"
ಮತ್ತೆರಡು ಕ್ಷಣ ಯೋಚಿಸಿದ ಬಳಿಕ,
"ನನಗೇನೋ ನಮ್ಮ ಅಂತ್ಯದ ಬಗ್ಗೆ ತಿಳಿಯದೇ ಇದ್ದರೆ ಒಳಿತೆನಿಸುತ್ತದೆ ...." ಎಂದರು.
ಮೂರ್ತಿಯವರ ಮುಖದಲ್ಲಿ ಯಾವುದೋ ಅಸ್ಪಷ್ಟ ಭಾವ ಒಂದು ಕ್ಷಣ ಮೂಡಿ ಮರೆಯಾಯಿತು. ನಾನು ಹೇಳಿದ್ದರಿಂದ ಮೂರ್ತಿಗೆ ನಿರಾಸೆಯಾಯಿತೇ ಎಂದು ಮುರಳಿ ಯೋಚಿಸಿದರು.
ತಮ್ಮ ಅಂದಿನ ಚರ್ಚೆ ಜ್ಞಾಪಕಕ್ಕೆ ಬಂದಾಗ, ಮೂರ್ತಿಯವರಿಗೆ ಏಕೆ ನಿರಾಸೆಯಾಗಿತ್ತೆಂದು ಮುರಳಿಯವರಿಗೆ ಈಗ ತಿಳಿದುಬಂದಿತ್ತು.
………ಮುಂದುವರಿಯುತ್ತದೆ
Comments
ಉ: ಹಂಸ ಹಾಡುವ ಹೊತ್ತು- ೫
In reply to ಉ: ಹಂಸ ಹಾಡುವ ಹೊತ್ತು- ೫ by partha1059
ಉ: ಹಂಸ ಹಾಡುವ ಹೊತ್ತು- ೫
ಉ: ಹಂಸ ಹಾಡುವ ಹೊತ್ತು- ೫
In reply to ಉ: ಹಂಸ ಹಾಡುವ ಹೊತ್ತು- ೫ by ksraghavendranavada
ಉ: ಹಂಸ ಹಾಡುವ ಹೊತ್ತು- ೫