ಹಕೂನ ಮಟಾಟ
ನಾಗರಾಜ ವಸ್ತಾರೆ ಇವರು ಬರೆದ ವಿಭಿನ್ನ ಶೈಲಿಯ ಸಣ್ಣ ಕಥೆಗಳ, ಕವನಗಳ ಸಂಗ್ರಹವೇ ‘ಹಕೂನ ಮಟಾಟ' ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ಇವರನ್ನು ೨೦೦೨ರಲ್ಲಿ ದೇಶದ ಪ್ರತಿಭಾನ್ವಿತ ಹತ್ತು ಯುವ ವಿನ್ಯಾಸಕಾರರಲ್ಲಿ ಒಬ್ಬರು ಎಂದು ಗುರುತಿಸಿದ್ದರು. ಇವರು ಉತ್ತಮ ಕಥೆಗಾರರು. ಇವರ ಹಲವಾರು ಕಥೆ, ಕವನ ಹಾಗೂ ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿದೆ.
ನಾಗರಾಜ ವಸ್ತಾರೆ ತಮ್ಮ ಮುನ್ನುಡಿಯಾದ ‘ನಮಸ್ಕಾರ' ಇಲ್ಲಿ ಬರೆದಂತೆ “ನಾನು ಬರಹದಲ್ಲಿ ತೊಡಗಿದ್ದು ಈ ಉದ್ಧಾಮ ಊರಿನಲ್ಲೊಂದು ಆಕಸ್ಮಿಕವಷ್ಟೇ. ಇಲ್ಲಿರುವ ಮುಕ್ಕಾಲು ಕಥನಗಳು ಇಲ್ಲಿನ ಕ್ಷುದ್ರ ಚರಿತೆಗಳು ಮಾತ್ರ. ಇವು ಊರು ಕಟ್ಟುತ್ತಿದ್ದೇವೆಂದು ನನ್ನ ಪೀಳಿಗೆಗಿರುವ ಹುಂಬ ಭ್ರಮೆಯೇ ಇದ್ದಾವು. ಇವುಗಳಿಗೆ ಸಾಹಿತ್ಯದ ಚಾರಿತ್ರಿಕ ಹಿನ್ನಲೆಯಿಲ್ಲ. ಇವು ಪರಂಪರೆಯ ಮುಂದುವರಿಕೆಯೂ ಅಲ್ಲ. ಈ ಬರಹಗಳು ಸಂಭವಿಸಿದ್ದು ತಂತಾನೇ. ಸುಮ್ಮನೆ ಒಳಬದುಕಿನ ಆಕಸ್ಮಿಕದಿಂದ.”
“ಏಕಾಂತದ ನೋವಿಗೆ ಮಾತಾಗಲಿಕ್ಕೆ ಬರೆದವನು ನಾನು. ಮನಸ್ಸಿನ ಮಾತಿಗೆ ಧ್ವನಿಯಾಗಲಿಕ್ಕೆ ಬರೆದದ್ದು. ಅಂತಲೇ ಇವು ಕ್ಷುದ್ರ. ಊರು ಉದ್ಧಾಮ. ಇವನ್ನು ಸುಮ್ಮನೆ ಓದಿಕೊಳ್ಳಿ ಅಂತಷ್ಟೇ ಬಿನ್ನಹ.”
ಕಥೆಗಾರ ಕೆ.ಸತ್ಯನಾರಾಯಣ ಅವರು ಈ ಪುಸ್ತಕ ಹಾಗೂ ಲೇಖಕರ ಬಗ್ಗೆ ಕೊಂಚ ಬರೆದಿದ್ದಾರೆ. “ನಾಗರಾಜರ ಕತೆಗಳ ಧಾಟಿ ಮುಖ್ಯವಾಗಿ ತೋಡಿಕೊಳ್ಳುವಿಕೆಯ ಸ್ವರೂಪದ್ದು. ವೈಯಕ್ತಿಕ ಪ್ರಪಂಚ ಮತ್ತು ಸಾಮಾಜಿಕ ಜಗತ್ತು ಎರಡರಲ್ಲೂ ಏನೋ ಕಳೆದುಹೋಗಿದೆ, ಕಳೆದು ಹೋಗುತ್ತಿದೆ ಎಂಬ ವಿಷಾದಭಾವ ಇವರ ಎಲ್ಲ ಕತೆಗಳಲ್ಲಿ ಸ್ಥಾಯಿಯಾಗಿದೆ. ಅವರ ತೋಡಿಕೊಳ್ಳುವಿಕೆಯ ಹಿಂದಿರುವ ಈ ವಿಷಾದದಿಂದಾಗಿ ಬರವಣಿಗೆಗೆ ಪ್ರಾಮಾಣಿಕತೆ ಮತ್ತು ಕಲಕುವ ಗುಣ ಸಹಜವಾಗಿಯೇ ದಕ್ಕಿದೆ. ಆದರೆ ಕತೆಯೆನ್ನುವುದು ಕೊನೆಗೆ ಒಂದು ‘ರಚನೆ' ಮತ್ತು ‘ಕಟ್ಟುವಿಕೆ' ಕೊಡವಾದ್ದರಿಂದ ನಾಗರಾಜರು ಈ ಆಂಶದ ಬಗ್ಗೆ ಇನ್ನಷ್ಟು ಗಮನ ಕೊಡಬೇಕೆಂದು ನನ್ನ ಆಸೆ. “
“ನಾಗರಾಜರ ಕತೆಗಳ ಸಂದರ್ಭದಲ್ಲಿ ಮರೆಯದೆ ಪ್ರಸ್ತಾಪಿಸಬೇಕಾದ ಇನ್ನೊಂದು ಸಂಗತಿಯಿದೆ. ನಾವು ಕಳಚಿಕೊಂಡ, ಕಳಚಿಕೊಂಡಿದ್ದೇವೆಂದುಕೊಂಡ ಸಂಬಂಧಗಳೇ ನಮ್ಮನ್ನು ನಿರಂತರವಾಗಿ ಕಾಡುತ್ತಾ ಹೋಗುವ ರೀತಿಯನ್ನು ಅವರು ಮತ್ತೆ ಮತ್ತೆ ಎಂಬಂತೆ ವಿಷಾದದಿಂದ ಗಮನಿಸುತ್ತಲೇ ಹೋಗುತ್ತಾರೆ. ಪಾತ್ರಗಳ ಹೆಸರು ಬೇರೆ. ಕಥಾ ಸಂದರ್ಭ ಬೇರೆ. ಬಾಧಿಸುತ್ತಿರುವ ಸಂಗತಿ ಮಾತ್ರ ಅದೇ. ಯಾವ ಮನುಷ್ಯ ಸಂಬಂಧವೂ ಪೂರ್ಣವಲ್ಲ. ಅಪೂರ್ಣವೂ ಅಲ್ಲ. ಶಾಶ್ವತವೂ ಅಲ್ಲ. ತಾತ್ಕಾಲಿಕವೂ ಅಲ್ಲ. ಮನುಷ್ಯ ಸಂಬಂಧಗಳಲ್ಲೇ ಅಂತರ್ಗತವಾಗಿರುವ ಈ ದುರಂತ ನಾಗರಾಜರನ್ನು ನಿರಂತರವಾಗಿ ಕಾಡಿದೆ. ಇಂದಿನ ಕನ್ನಡ ಕಥನ ಸಂದರ್ಭದಲ್ಲಿ ಮನುಷ್ಯ - ಮನುಷ್ಯರ ನಡುವಿನ ಅಂತರ್ ಸಂಬಂಧಗಳು ಮತ್ತು ಅದರ ನೈತಿಕ ಸೂಕ್ಷ್ಮಗಳನ್ನು ಕುರಿತಂತೆ ನಾಗರಾಜರದ್ದೊಂದು ವಿಶಿಷ್ಟವಾದ ಒಂಟಿದ್ವನಿ.”
ನಾಗರಾಜರ ಕಥೆಗಳನ್ನು ಓದುತ್ತಾ ಓದುತ್ತಾ ಮೇಲಿನ ಮಾತುಗಳು ಎಷ್ಟು ನಿಜವಾಗಿವೆ ಎಂದು ಅನಿಸುತ್ತಾ ಹೋಗುತ್ತದೆ. ಕೆ. ಸತ್ಯನಾರಾಯಣ ಅವರು ನಾಗರಾಜರ ಕಥೆಗಳನ್ನೂ ಕೊಂಚ ವಿಮರ್ಶೆ ಮಾಡುತ್ತಾ ಸಾಗಿದ್ದಾರೆ. ಆದರೆ ಓದಿ ಆ ಕಥೆಗಳನ್ನು ಆಸ್ವಾದಿಸುವ ರುಚಿಯೇ ಬೇರೆ. ಈ ಸಂಕಲನದಲ್ಲಿ ಒಟ್ಟು ೨೬ ಕಥೆ ಹಾಗೂ ಕವನಗಳಿವೆ. ಸುಮಾರು ೧೫೦ ಪುಟಗಳ ಈ ಪುಸ್ತಕವನ್ನು ಶಾಂತಾ ಮಣಿಗೆ ಅರ್ಪಿಸಿದ್ದಾರೆ ಲೇಖಕರು.