ಹಕ್ಕಿಗಳಿಗೆ ಮುನಿಸ್ಯಾಕೋ?

ಹಕ್ಕಿಗಳಿಗೆ ಮುನಿಸ್ಯಾಕೋ?

ಬರಹ

`ದಿ ಬರ್ಡ್ಸ್‌'

ಇವತ್ತಿನ ಹಾಲಿವುಡ್‌ ಹಾರರ್‌ ಸಿನಿಮಾಗಳನ್ನು ನೋಡಿದರೆ ಇರುವ ಅಲ್ಪಸ್ವಲ್ಪ `ಹಾರರ್‌' ಕಲ್ಪನೆಯೂ ಹಾರಿಹೋಗುತ್ತದೆ ಎಂಬ ಮಾತಿದೆ. ಚಿತ್ರವಿಚಿತ್ರ ಅಕರಾಳ ವಿಕರಾಳ ಮುಖಗಳ ಲಿವಿಂಗ್‌ ಡೆಡ್‌, ಜೀಪರ್ಸ್‌ ಕ್ರೀಪರ್ಸ್‌ನಂಥ ಕಲ್ಪನೆಗಳು ಒಂದು ಕಾಲದಲ್ಲಿ ಹಾಲಿವುಡ್‌ ಹಾರರ್‌ ಸಿನಿಮಾಗಳೆಂದರೆ ತುದಿಗಾಲಲ್ಲಿ ನಿಲ್ಲಿಸುವಂತಿದ್ದವು. ಆದರೆ ಇಂದಿನ ತಾಂತ್ರಿಕ ಯುಗದಲ್ಲಿ ತಂತ್ರಜ್ಞಾನಗಳ ಮೇಲಾಟವೇ ಹಾರರ್‌ ಆಗಿಬಿಟ್ಟಿದೆ. ರಿಲೀಫ್‌ಗೆ ಇರಲಿ ಅಂತಲೋ ಏನೋ, ಅದಕ್ಕೊಂದಿಷ್ಟು ಶೃಂಗಾರ ಭರಿತ ಒರಟು ಲೈಂಗಿಕತೆಯ ಲೇಪನವೂ ಆಗಿ ಹಾರರ್‌ ಅದೋ ಇದೋ ಎಂಬ ಗೊಂದಲಕ್ಕೂ ಪ್ರೇಕ್ಷಕ ಬೀಳಬೇಕಾಗುತ್ತದೆ. ಇಲ್ಲಿ ಬಳಕೆಯಾಗಿರುವ ತಾಂತ್ರಿಕತೆಯನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬಹುದೇ ಹೊರತು ಬೆಚ್ಚಿ ಬೀಳುವ ಅಥವಾ ಭಯಪಡುವ ಅಗತ್ಯವಿರುವುದಿಲ್ಲ!

ಅಕರಾಳ ವಿಕರಾಳ ಮುಖಗಳಿದ್ದರಷ್ಟೇ ಹಾರರ್‌ ಸಿನಿಮಾಗಳಾಗುತ್ತವೆ ಎಂಬ ಕಲ್ಪನೆಯನ್ನು ತುಸು ಪಕ್ಕಕ್ಕಿಟ್ಟು, ಅಲ್ಬರ್ಟ್‌ ಹಿಚ್‌ಕಾಕ್‌ ಅವರ `ದಿ ಬರ್ಡ್ಸ್‌' ಚಿತ್ರವನ್ನು ನೋಡಬೇಕು. ಮೇಲ್ನೋಟಕ್ಕೆ ಇದೊಂದು ಲವ್‌ ಸ್ಟೋರಿ. ಕನ್ನಡ ಸಿನಿಮಾಗಳ ಭಾಷೆಯಲ್ಲಿ ಹೇಳುವುದಾದರೆ ಮದರ್‌ ಸೆಂಟಿಮೆಂಟ್‌ ಕೂಡ ಇರುವ ಒಂದು `ಕೌಟುಂಬಿಕ' ಚಿತ್ರ (ಹಾಲಿವುಡ್‌ನ ಸಿದ್ಧ ಮಾದರಿ ಸೂತ್ರಗಳಲ್ಲಿ ತುಸು ಹೆಚ್ಚೇ ಬಳಕೆಯಾಗುವ `ಅಶ್ಲೀಲತೆ'ಯ ನೆರಳೂ ಈ ಚಿತ್ರದಲ್ಲಿಲ್ಲ ಎಂಬ ಮಾತಿನ ಹಿನ್ನೆಲೆಯಲ್ಲಿಯೇ ಈ `ಕೌಟುಂಬಿಕ' ಪದದ ವ್ಯಾಪ್ತಿಯನ್ನು ಗ್ರಹಿಸಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು). ಈ ಪ್ರೀತಿ, ಸೆಂಟಿಮೆಂಟ್‌ಗಳ ನಡುವೆ ಒಂದು ಹಂತದಲ್ಲಿ, ತಣ್ಣಗೆ, ಸುಮ್ಮನೆ ತಲೆಯ ಮೇಲೆ ಹಾರಾಡುವ ಪಕ್ಷಿಗಳು ಇದ್ದಕ್ಕಿದ್ದಂತೆ ಗುಂಪು ಗುಂಪಾಗಿ ಬಂದು ಮನುಷ್ಯರ ಮೇಲೆ ಆಕ್ರಮಣ ಮಾಡುತ್ತವೆ. ಮನುಷ್ಯರ ತಲೆ ಕಂಡಲ್ಲೆಲ್ಲ ಕುಕ್ಕಿ ಕುಕ್ಕಿ ಸಾಯಿಸತೊಡಗುತ್ತವೆ. ಕ್ರಮೇಣ ಆ ಹಕ್ಕಿಗಳೇ ಮನುಷ್ಯರ ಬೆನ್ನಿಗೆ ಬಿದ್ದ ಸಾವಿನ ಹಾಗೆ ಕಾಣಿಸತೊಡಗಿದಾಗ ಮಾತ್ರ ಪ್ರೇಕ್ಷಕ ಬೆಚ್ಚಿಬೀಳಬೇಕಾಗುತ್ತದೆ. ಈ ಪಕ್ಷಿಗಳ ಆಟಾಟೋಪ ಯಾವ ಹಾರರ್‌ ಸಿನಿಮಾಗಳಿಗೂ ಕಮ್ಮಿಯಿಲ್ಲ. ಇದಕ್ಕೆ ಒತ್ತು ನೀಡುವಂತೆ ಚಿತ್ರದಲ್ಲೇ ಬರುವ ಒಂದು ಕುಡುಕನ ಪಾತ್ರ ಪದೇ ಪದೇ ಕೂಗಿಕೊಳ್ಳುತ್ತದೆ: `ದಿಲ್‌ ಈಸ್‌ ಎಂಡ್‌ ಆಫ್‌ ದಿ ವರ್ಲ್ಡ್‌!'

***

`ದಿ ಬರ್ಡ್ಸ್‌' ಬಿಡುಗಡೆಯಾಗಿದ್ದು 1963ರಲ್ಲಿ. ಪೆಟ್‌ಶಾಪ್‌ನಲ್ಲಿ ನಾಯಕಿ ಮೆಲಾನಿ ಡೇನಿಯಲ್ಸ್‌ ಲವ್‌ ಬರ್ಡ್ಸ್‌ ಖರೀದಿಗೆ ಬರುವುದರೊಂದಿಗೆ ಚಿತ್ರದ ಆರಂಭ. ಅಲ್ಲಿ ನಾಯಕ, ವಿವಾಹಿತ ಮಿಚ್‌ ಬ್ರೆನ್ನರ್‌ ಆಕೆಯ ಕಣ್ಣಿಗೆ ಬೀಳುತ್ತಾನೆ. ಅವನನ್ನು ಸೆಳೆಯುವ ಸಲುವಾಗಿ ತಾನು ಸ್ಟೋರ್‌ ಅಸಿಸ್ಟೆಂಟ್‌ ಎಂದು ಹೇಳಿಕೊಳ್ಳುವ ಮೆಲಾನಿ ನಾಟಕ ಮಿಚ್‌ಗೆ ತಿಳಿದು, ಅವಳಿಗೆ ನಿರಾಸೆಯಾದರೂ, ಅವನನ್ನು ಮತ್ತೆ ಭೇಟಿಯಾಗುವ ಸಲುವಾಗಿ ಲವ್‌ ಬರ್ಡ್ಸ್‌ನ ಉಡುಗೊರೆಯೊಂದಿಗೆ ಅವನಿರುವ ಬೊಡೆಗಾ ಬೇ ಎಂಬಲ್ಲಿಗೆ ತೆರಳುತ್ತಾಳೆ. ಅಲ್ಲಿ ಒಂಟಿಯಾಗಿ ನದಿ ದಾಟಿ, ಲವ್‌ ಬರ್ಡ್‌ಗಳನ್ನು ಅವನಿಗೆ ಗೊತ್ತಾಗದಂತೆ ಅವನ ಮನೆಯಲ್ಲಿಟ್ಟು ಮತ್ತೆ ನದಿ ದಾಟಿ ವಾಪಾಸ್‌ ಬರುವಾಗ ಅಚಾನಕ್ಕಾಗಿ ಆಗಸದಲ್ಲಿ ಹಾರಾಡುತ್ತಿದ್ದ ಒಂದು ಹದ್ದು ಮೆಲಾನಿಯನ್ನು ಕುಕ್ಕುತ್ತದೆ.

ಈ ಅನಿರೀಕ್ಷಿತ ಘಟನೆಯಿಂದ ಆಘಾತಗೊಂಡ ಮೆಲಾನಿಯನ್ನು ಮಿಚ್‌ ಪಕ್ಕದ ರೆಸ್ಟೋರೆಂಟ್‌ ಒಂದಕ್ಕೆ ಕರೆದುಕೊಂಡು ಹೋಗಿ ಟ್ರೀಟ್‌ ಮಾಡುತ್ತಾನೆ. ಅದಾಗಲೇ ಅಲ್ಲಿ ಇಲ್ಲಿ ಹಕ್ಕಿಗಳು ಅಟ್ಯಾಕ್‌ ಮಾಡಿದ ಸುದ್ದಿ ಬರುತ್ತದೆ. ಆ ರೆಸ್ಟೋರೆಂಟ್‌ನ ಹೊರಗೆ ಕೂಡ ಹಕ್ಕಿಗಳು ಜಮಾಯಿಸತೊಡಗುತ್ತವೆ. ರೆಸ್ಟೋರೆಂಟ್‌ನಲ್ಲಿದ್ದ ಕೆಲವರು ಅಪರಿಚಿತ ಮೆಲಾನಿಯ ಕಾರಣದಿಂದಲೇ ಈ ಘಟನೆ ಸಂಭವಿಸುತ್ತಿದೆ ಎಂತಲೂ ದೂಷಿಸುತ್ತಾರೆ. ಹಕ್ಕಿಗಳ ದಾಳಿ ಉಗ್ರ ಸ್ವರೂಪ ತಳೆಯುತ್ತದೆ. ಕೆಲವರು ಸಾಯುತ್ತಾರೆ, ಹಲವರು ಗಾಯಗೊಳ್ಳುತ್ತಾರೆ. ಗಾಯಗೊಂಡ ಮೆಲಾನಿಯನ್ನು ಮಿಚ್‌ ಮನೆಗೆ ಕರೆತರುತ್ತಾನೆ.

ಮಿಚ್‌ ತಾಯಿಗೆ ಮೆಲಾನಿ ಇಷ್ಟವಾಗುವುದಿಲ್ಲ. ಆದರೂ ಸಹಿಸಿಕೊಳ್ಳುತ್ತಾಳೆ. ಕ್ರಮೇಣ ಹಕ್ಕಿಗಳ ದಾಳಿ ಇಮ್ಮಡಿಸುತ್ತದೆ. ಒಂದು ಸಲ ಮಿಚ್‌ನ ಮಗಳನ್ನು ಕರೆತರಲು ಶಾಲೆಗೆ ಹೋದ ಮೆಲಾನಿ ಮತ್ತು ಶಾಲಾ ಮಕ್ಕಳ ಮೇಲೆ ಹಕ್ಕಿಗಳು ದಾಳಿ ಮಾಡುತ್ತವೆ. ಮಿಚ್‌ನನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಆತನ ಗೆಳತಿಯೊಬ್ಬಳು ಹಕ್ಕಿಗಳ ದಾಳಿಗೆ ತುತ್ತಾಗಿ ಭೀಕರವಾಗಿ ಕೊಲೆಯಾಗುತ್ತಾಳೆ. ಹಕ್ಕಿಗಳಿಂದ ತಪ್ಪಿಸಿಕೊಳ್ಳಲು ಮಿಚ್‌, ಮೆಲಾನಿ, ತಾಯಿ ಮತ್ತು ಮಗಳು ಮನೆಯಲ್ಲೇ ಉಳಿಯುತ್ತಾರೆ. ಮನೆಗೆ ಬಾಗಿಲುಗಳು, ಕಿಟಕಿಗಳಿಗೆ ಸೂಕ್ತ ಬಂದೋಬಸ್ತ್‌ ಮಾಡಿದರೂ ಅವುಗಳನ್ನು ಕೊಕ್ಕಿನಿಂದ ಕುಕ್ಕಿ ಕುಕ್ಕಿ ಹಕ್ಕಿಗಳು ದಾಳಿ ಮಾಡಲೆತ್ನಿಸುತ್ತವೆ. ಈ ನಡುವೆ, ಮನೆಯ ಮಹಡಿ ಮೇಲೆ ಏನೋ ಸದ್ದಾಗುತ್ತಿದ್ದುದನ್ನು ನೋಡಲು ಹೋದ ಮೆಲಾನಿ ಮೇಲೆ ಹಕ್ಕಿಗಳು ಮತ್ತೆ ಮಾರಣಾಂತಿಕ ದಾಳಿ ಮಾಡುತ್ತವೆ. ಮಿಚ್‌ ಅವಳನ್ನು ರಕ್ಷಿಸುತ್ತಾನೆ.

ಕೊನೆಗೆ ಎಲ್ಲರೂ ಆ ಮನೆಯನ್ನೇ ತೊರೆಯುವ ನಿರ್ಧಾರಕ್ಕೆ ಬಂದು, ಹಕ್ಕಿಗಳ ಗಮನಕ್ಕೆ ಬಾರದಂತೆ ನಿಧಾನವಾಗಿ ಮನೆ ತೊರೆದು ಹೋಗುತ್ತಾರೆ. ಮಿಚ್‌ನ ತಾಯಿ ಮೆಲಾನಿಯನ್ನು ತನ್ನ ಸೊಸೆಯನ್ನಾಗಿ ಸ್ವೀಕರಿಸುತ್ತಾಳೆ.
ಒಂದೆಡೆ ಹಕ್ಕಿಗಳ ದಾಳಿ, ಇನ್ನೊಂದೆಡೆ ಬಲಿಯುತ್ತಿರುವ ಪ್ರೀತಿ, ಮತ್ತೊಂದೆಡೆ ಈ ಪ್ರೀತಿಯ ಬಗ್ಗೆ ಅಸಮಾಧಾನ- ಈ ಮೂರನ್ನೂ ಹಿಚ್‌ಕಾಕ್‌ ಬ್ಯಾಲೆನ್ಸ್‌ ಮಾಡುವ ರೀತಿಯನ್ನು ಮೆಚ್ಚಿಕೊಳ್ಳಬೇಕು. ಇಲ್ಲಿ ಹಕ್ಕಿಗಳೇ ಸಂಬಂಧಗಳನ್ನು ಬೆಸೆಯುತ್ತವೆ, ಒಡೆಯುತ್ತವೆ, ಮತ್ತೆ ಬೆಸೆಯುತ್ತವೆ.

ಇಡೀ ಚಿತ್ರದ ಶಕ್ತಿ ಇರುವುದು ಕಾಗೆ, ಹದ್ದು, ಪಾರಿವಾಳಗಳಂಥ ಪಕ್ಷಿಗಳನ್ನು ಬಳಸಿಕೊಂಡ ರೀತಿಯಲ್ಲಿ. ಮಿಚ್‌ನ ಮಗಳನ್ನು ಶಾಲೆಯಿಂದ ಕರೆತರಲು ಹೋದ ಮೆಲಾನಿ ಶಾಲೆಯ ಹೊರಗೆ ಒಂದೆಡೆ ಕುಳಿತುಕೊಂಡಾಗ, ಅವಳ ಗಮನಕ್ಕೆ ಬಾರದಂತೆ ಪಕ್ಕದ ಎಲೆಕ್ಟ್ರಿಕ್‌ ಪೋಲ್‌ ಮೇಲೆ ಒಂದೊಂದೇ ಹಕ್ಕಿಗಳು ಬಂದು ನೂರಾರು ಸಂಖ್ಯೆಯಲ್ಲಿ ಸೇರಿಕೊಳ್ಳುತ್ತವೆ. ಇದ್ಯಾವುದರ ಪರಿವೆಯೇ ಇಲ್ಲದಂತೆ ಶಾಲೆಯ ಒಳಗೆ ಮಕ್ಕಳು ಸುಂದರ ಹಾಡೊಂದನ್ನು ಹಾಡುತ್ತಿದ್ದಾರೆ. ಹೊರಗಡೆ ಮುಂದೆ ಘಟಿಸಬಹುದಾದ ಅನಾಹುತಕ್ಕೆ ಹಕ್ಕಿಗಳು ಸಿದ್ಧವಾಗುತ್ತಿವೆ- ಚಿತ್ರದ ಅತೀ ಇಷ್ಟವಾಗುವ ಅಪೂರ್ವ ಸನ್ನಿವೇಶಗಳಲ್ಲಿ ಇದೂ ಒಂದು. ಹಾಗೆಯೇ ಮನೆಯ ಬಾಗಿಲು, ಕಿಟಕಿಗಳನ್ನು ಹಕ್ಕಿಗಳು ಕೊಕ್ಕಿನಿಂದ ಕುಕ್ಕಿ ಒಡೆದು ದಾಳಿ ಮಾಡುವ ಸನ್ನಿವೇಶಗಳಿಗೆ ಭಯದ ಪರಾಕಾಷ್ಠೆಯನ್ನೇ ತಲುಪಿಸಿಬಿಡುವ ಸಾಮರ್ಥ್ಯವಿದೆ. ಕೊನೆಯ ದೃಶ್ಯವನ್ನಂತೂ ಉಸಿರು ಬಿಗಿಹಿಡಿದು ನೋಡಬೇಕು. ಶೆಡ್‌ನಲ್ಲಿರುವ ತನ್ನ ಕಾರನ್ನು ಹೊರತರಲು ಹೊರಡುವ ಮಿಚ್‌ ಮನೆ ಮುಂದೆ ಲಕ್ಷಾಂತರ ಪಕ್ಷಿಗಳು ಕೂತಿವೆ! ಆ ಮೌನವನ್ನು ಭೇದಿಸದೆ ಮಿಚ್‌ ಮನೆಯಿಂದ ಹೊರಬಂದು, ಕಾರನ್ನು ಹೊರತೆಗೆದು, ಉಳಿದವರನ್ನೂ ಜೊತೆಗೆ ಕರೆದುಕೊಂಡು ಹೋಗುವವರೆಗಿನ ಹದಿನೈದು ನಿಮಿಷಗಳ ಕಾಲ ಹಕ್ಕಿಗಳ ಗುಟುರು, ರೆಕ್ಕೆ ಬಡಿಯುವ ಸದ್ದು ಬಿಟ್ಟರೆ ನೀರವ ವೌನ. ಮೌನವನ್ನೂ ಭಯ ಹುಟ್ಟಿಸುವ ಮಾರ್ಗವನ್ನಾಗಿ ಈ ಚಿತ್ರ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದೆ.

ಇಂಥ ಹಲವು ದೃಶ್ಯಗಳು ಚಿತ್ರದಲ್ಲಿವೆ. ಹಾಗೆ ನೋಡಿದರೆ, ಯಾವುದೇ ಅಡ್ವಾನ್ಸ್ಡ್‌ ಟೆಕ್ನಾಲಜಿಯಾಗಲೀ, ಗ್ರಾಫಿಕ್ಸ್‌ನ ಗಿಮಿಕ್‌ ಆಗಲೀ ಅಭಿವೃದ್ಧಿ ಕಾಣದ ಕಾಲವದು. ಹಾಗಿದ್ದರೂ ದಾಳಿ ಮಾಡುವ ಪಕ್ಷಿಗಳು ಮತ್ತು ಅದನ್ನು ಸೆರೆಹಿಡಿದಿರುವ ರೀತಿ ಅದ್ಭುತ. ಅಷ್ಟೊಂದು ನೈಜ ಪಕ್ಷಿಗಳನ್ನು ಹಾಗೆ ಒಂದೆಡೆ ಸೇರಿಸಿದ್ದೊಂದು ಸಾಹಸವೇ. ಇದಕ್ಕೆ ಹಿನ್ನೆಲೆಯಲ್ಲೂ ಈಗಿನ ಹಾಗೆ ಕಿವಿಗಡಚಿಕ್ಕುವ ಸಂಗೀತವಿಲ್ಲ. ಇಡೀ ಚಿತ್ರದಲ್ಲಿ ಪಕ್ಷಿಗಳ ಕಲರವ, ಕೂಗು, ರೆಕ್ಕೆ ಬಡಿಯುವ ಪಟ ಪಟ ಸದ್ದು- ಇವಿಷ್ಟೇ ಸಂಗೀತ. ಮೊದ ಮೊದಲು ಸುಮಧುರವಾಗಿ ಕೇಳಿಸುವ ಈ ಸದ್ದುಗಳು ಕೊನೆ ಕೊನೆಗೇ ತೀರಾ ಭಯ ಹುಟ್ಟಿಸುವ ಮಟ್ಟಕ್ಕೆ ಹೋಗುತ್ತವೆ ಎಂದರೆ, ಇಡೀ ಚಿತ್ರ ನೀಡುವ ಒಟ್ಟಾರೆ ಪರಿಣಾಮದ ಹಿಂದೆ ಈ ಸದ್ದುಗಳ ಮಹತ್ವವನ್ನು ಅರಿಯಬಹುದು.

ಇಷ್ಟಕ್ಕೂ ಇದ್ದಕ್ಕಿದ್ದಂತೆಯೇ ಈ ಪಕ್ಷಿಗಳು ಮನುಷ್ಯರ ಮೇಲೆ ದ್ವೇಷ ಸಾಧಿಸಲು ಹೊರಟವರಂತೆ ವರ್ತಿಸುವುದಾದರೂ ಏತಕ್ಕೆ? ಇದಕ್ಕೆ ಚಿತ್ರದಲ್ಲಿ ಸ್ಪಷ್ಟ ಉತ್ತರವಿಲ್ಲ. ಒಂದು ವರದಿಯ ಪ್ರಕಾರ, ತನ್ನ ಮೂಲ ಸ್ಕ್ರಿಪ್ಟ್‌ನಲ್ಲಿ ಅದಕ್ಕೊಂದು ಉತ್ತರ ಹೇಳಲು ಹೊರಟ ಹಿಚ್‌ಕಾಕ್‌ ಕೊನೆಗೆ ಅದನ್ನು ಹೇಳದೇ ಹಾಗೇ ಬಿಟ್ಟಿದ್ದಾನೆ; ಹಾಗೆ ಉತ್ತರ ಹೇಳಿದರೆ ಚಿತ್ರದ ಒಟ್ಟಾರೆ ಅಂದ ಕೆಡಬಹುದು ಎಂಬ ಕಾರಣಕ್ಕೆ. ಹಾಗಾಗಿ ಚಿತ್ರ ನೋಡುವ ಪ್ರೇಕ್ಷಕನ ಊಹೆಯಲ್ಲಿ ಈ ಪ್ರಶ್ನೆಗೆ ಉತ್ತರವಿದೆ. ಒಂದು ಊಹೆಯ ಪ್ರಕಾರ, `ಲವ್‌ ಬರ್ಡ್ಸ್‌'ಗೂ ಈ ಪಕ್ಷಿಗಳ ದಾಳಿಗೂ ಏನೋ ಸಂಬಂಧವಿದೆ. ಇನ್ನೊಂದು ವಾದವೆಂದರೆ, ಮನುಷ್ಯ ಪ್ರಕೃತಿಯ ಮೇಲೆ ನಡೆಸುತ್ತಿರುವ ದೌರ್ಜನ್ಯಕ್ಕೆ ಪ್ರತಿಯಾಗಿ ಪ್ರಕೃತಿ ಮುನಿಸಿಕೊಂಡು ಈ ರೀತಿ ಸೇಡು ತೀರಿಸಿಕೊಳ್ಳುತ್ತಿದೆ. ಈ ಎರಡೂ ವಾದಗಳು ಸಮಂಜಸವಲ್ಲ ಎಂದು ವಾದಿಸುವ ಮತ್ತೊಂದು ಗುಂಪಿನವರು ಹೇಳುವುದು: ಮನುಷ್ಯ ಸಂಬಂಧಗಳ ನಡುವೆ ಬಿರುಕು ಕಾಣಿಸಿಕೊಂಡ ಸಂದರ್ಭಗಳಲ್ಲೆಲ್ಲ ಪಕ್ಷಿಗಳು ದಾಳಿ ಮಾಡುತ್ತವೆ.

ಊಹೆಗಳು, ವಾದಗಳು ಬೇರೆ ಬೇರೆಯಾದರೂ ಅವೆಲ್ಲ ಒಟ್ಟಾರೆ ಈ ಚಿತ್ರ ಬೀರಬಹುದಾದ ಪರಿಣಾಮದ ಮೇಲಂತೂ ದುಷ್ಪರಿಣಾಮ ಬೀರುವುದಿಲ್ಲ. ನೋಡುವ ಸಹನೆ ಇದ್ದರೆ, ಕೊನೇ ಪಕ್ಷ ಮನರಂಜನೆಯ ದೃಷ್ಟಿಯಿಂದ ನೋಡಿದರೂ ಇದೊಂದು ಅತ್ಯುತ್ತಮ ಚಿತ್ರವೇ ಆಗುತ್ತದೆ.

-ಸುರೇಶ್‌ ಕೆ.