ಹಕ್ಕಿ ಮೊಟ್ಟೆಗಳು ಮತ್ತು ಗಾಜಿನ ಗೋಲಿಗಳು

ಹಕ್ಕಿ ಮೊಟ್ಟೆಗಳು ಮತ್ತು ಗಾಜಿನ ಗೋಲಿಗಳು

ರಾಮ ಮತ್ತು ಶಾಮ ಅವಳಿಜವಳಿ ಮಕ್ಕಳು. ಅವರು ಜೊತೆಯಾಗಿ ಶಾಲೆಗೆ ಹೋಗುತ್ತಿದ್ದರು, ಜೊತೆಯಾಗಿ ಆಟವಾಡುತ್ತಿದ್ದರು, ಜೊತೆಯಾಗಿ ಹಾಡುತ್ತಿದ್ದರು, ಜೊತೆಯಾಗಿ ತಿರುಗಾಡಲು ಹೋಗುತ್ತಿದ್ದರು.

ಅವರ ಅಮ್ಮ ಅವರೇನು ಮಾಡಿದರೂ ಚಿಂತೆ ಮಾಡುತ್ತಿರಲಿಲ್ಲ. ಆದರೆ ಅವರು ಹಕ್ಕಿಗಳ ಗೂಡುಗಳಿಂದ ಮೊಟ್ಟೆಗಳನ್ನು ತರುವುದನ್ನು ಆಕೆಗೆ ಕಂಡರಾಗುತ್ತಿರಲಿಲ್ಲ. “ಮಕ್ಕಳೇ, ಇದು ಒಳ್ಳೆಯ ಅಭ್ಯಾಸವಲ್ಲ. ನಿಮಗೆ ಸ್ವಲ್ಪವೂ ಕರುಣೆಯಿಲ್ಲ. ಹಕ್ಕಿಗಳ ಮೊಟ್ಟೆಗಳಿಂದ ನಿಮಗೆ ಯಾವ ಪ್ರಯೋಜನವೂ ಇಲ್ಲ. ಸುಮ್ಮಸುಮ್ಮನೆ ಅವನ್ನು ಮನೆಗೆ ತರುತ್ತೀರಿ ಮತ್ತು ಹೊರಗೆ ಎಸೆಯುತ್ತೀರಿ. ಇದರಿಂದಾಗಿ ತಾಯಿ ಹಕ್ಕಿಗಳಿಗೆ ತುಂಬ ದುಃಖವಾಗುತ್ತದೆ. ಮೊಟ್ಟೆಗಳು ತಾಯಿಹಕ್ಕಿಗಳ ಸೊತ್ತು, ನಿಮ್ಮದಲ್ಲ. ಅವನ್ನು ಗೂಡಿನಿಂದ ತೆಗೆಯಬೇಡಿ" ಎಂದು ಅವಳು ಮತ್ತೆಮತ್ತೆ ಹೇಳುತ್ತಿದ್ದಳು.

ಆದರೆ, ರಾಮ ಮತ್ತು ಶಾಮ ಅಮ್ಮನ ಮಾತಿಗೆ ಕಿಂಚಿತ್ತೂ ಬೆಲೆ ಕೊಡಲಿಲ್ಲ. ಅದೊಂದು ದಿನ ಅವರ ಕೋಣೆಯಲ್ಲಿ ಗುಬ್ಬಿಯ ಕಂದು ಮೊಟ್ಟೆಗಳನ್ನು ಅಮ್ಮ ಕಂಡಳು. ಅವಳಿಗೆ ಬಹಳ ಸಂಕಟವಾಯಿತು. ಅವಳು ಮಕ್ಕಳನ್ನು ಕರೆದು ಹೇಳಿದಳು, “ನೀವು ಹೀಗೆ ಹಕ್ಕಿಗಳ ಮೊಟ್ಟೆಗಳನ್ನು ಕದಿಯುತ್ತಿದ್ದರೆ ಮುಂದೊಂದು ದಿನ ನಮ್ಮ ವಠಾರದಲ್ಲಿ ಹಕ್ಕಿಗಳೇ ಇರುವುದಿಲ್ಲ. ಈಗ ಕೇಳಿ, ನಿಮಗೆ ಚಂದದ ಗಾಜಿನ ಗೋಲಿಗಳನ್ನು ತಂದು ಕೊಡುತ್ತೇನೆ. ಆದರೆ ನೀವು ನನಗೆ ಮಾತು ಕೊಡಬೇಕು: ಇನ್ನು ಮುಂದೆ ಹಕ್ಕಿಗಳ ಮೊಟ್ಟೆಗಳನ್ನು ಕದಿಯುವುದಿಲ್ಲ ಎಂದು.”

ಗೋಲಿಗಳಲ್ಲಿ ಆಟವಾಡುವುದೆಂದರೆ ರಾಮ ಮತ್ತು ಶಾಮರಿಗೆ ಬಹಳ ಇಷ್ಟ. ಆದ್ದರಿಂದ ಅವರು ಅಮ್ಮನಿಗೆ ತಕ್ಷಣವೇ ಮಾತು ಕೊಟ್ಟರು. ಹಾಗಾಗಿ ಆ ದಿನ ಸಂಜೆ ಅವರ ಅಮ್ಮ ಅವರಿಗೆ ಎಂಟು ಚಂದದ ಗಾಜಿನ ಗೋಲಿಗಳನ್ನು ತಂದು ಕೊಟ್ಟಳು. ಹಣ್ಣಡಿಕೆ ಗಾತ್ರದ ಆ ಗೋಲಿಗಳ ಒಳಗೆ ಕೆಂಪು, ನೀಲಿ, ಹಸುರು ಮತ್ತು ಹಳದಿ ಬಣ್ಣದ ಗೆರೆಗಳಿದ್ದವು. ಸೂರ್ಯನ ಬೆಳಕಿನಲ್ಲಿ ಅವು ಮಿಂಚುತ್ತಿದ್ದವು. ರಾಮ ಮತ್ತು ಶಾಮ ಬಹಳ ಖುಷಿ ಪಟ್ಟರು. ತಮ್ಮ ಗೆಳೆಯರಿಗೆಲ್ಲ ಅವನ್ನು ತೋರಿಸಿದರು.

ಸ್ವಲ್ಪ ಸಮಯ ರಾಮ ಮತ್ತು ಶಾಮ ಅಮ್ಮನಿಗೆ ಕೊಟ್ಟ ಮಾತನ್ನು ಉಳಿಸಿಕೊಂಡರು. ಅದೊಂದು ದಿನ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಹಾದಿಯ ಪಕ್ಕದ ಪೊದೆಯಿಂದ ರಾಬಿನ್ ಹಕ್ಕಿಯೊಂದು ಹಾರಿ ಬರುವುದನ್ನು ರಾಮ ನೋಡಿದ. “ಏ ಶಾಮ, ಅಲ್ಲಿ ಅದರ ಗೂಡು ಇರಲೇ ಬೇಕು” ಎಂದ. ಅವರಿಬ್ಬರೂ ಹೋಗಿ ಹುಡುಕಿದಾಗ ಅವರಿಗೆ ಪಾಚಿ ಮತ್ತು ಒಣ ಎಲೆಗಳಿಂದ ಮಾಡಿದ್ದ ಗೂಡು ಕಾಣಿಸಿತು. ಅದರೊಳಗಿದ್ದವು ಕೆಂಪು-ಕಂದು ಬಣ್ಣದ ಮೂರು ಚಂದದ ಮೊಟ್ಟೆಗಳು.

ಆ ಮೊಟ್ಟೆಗಳನ್ನು ತೆಗೆಯಲು ರಾಮ ಕೈಚಾಚುತ್ತಿದ್ದಂತೆ, ಶಾಮ ಹೇಳಿದ, “ಅಮ್ಮನಿಗೆ ಮಾತು ಕೊಟ್ಟಿದ್ದೇವಲ್ಲ ಹಕ್ಕಿಗಳ ಮೊಟ್ಟೆ ತೆಗೆಯೋದಿಲ್ಲವೆಂದು.”

“ಹೇ, ನೋಡಲ್ಲಿ. ರಾಬಿನ್ ಹಕ್ಕಿ ಇಲ್ಲಿಗೇ ಹಾರಿ ಬರ್ತಿದೆ” ಎಂದು ಚೀರಿದ ಶಾಮ. ರಾಬಿನ್ ಹಕ್ಕಿಗೆ ಜೋರು ಸಿಟ್ಟು ಬಂದಿತ್ತು. ಇದೇ ಅವಳಿಜವಳಿ ಬಾಲಕರು ಅದು ಮೊದಲು ಇಟ್ಟ ಮೊಟ್ಟೆಗಳನ್ನು ಕದ್ದಿದ್ದರು; ಅನಂತರ ಅದು ಎರಡನೇ ಸಲ ಮೊಟ್ಟೆ ಇಟ್ಟಾಗಲೂ ಅವನ್ನು ಕದ್ದು ಒಯ್ದಿದ್ದರು. ಈಗ ಅದು ಮೂರನೇ ಸಲ ಮೊಟ್ಟೆಯಿಟ್ಟು, ಅವಕ್ಕೆ ಕಾವು ಕೊಟ್ಟು ಮರಿ ಮಾಡಬೇಕೆಂದು ಕನಸು ಕಾಣುತ್ತಿತ್ತು. ಆದರೆ ಈ ಬಾಲಕರು ಅದರ ಕನಸನ್ನೆಲ್ಲ ನುಚ್ಚುನೂರು ಮಾಡಿದ್ದರು.

ರಾಬಿನ್ ಹಕ್ಕಿ ಸಿಟ್ಟಿನಿಂದ ರಾಮನ ಮುಖದ ಕಡೆಗೇ ಹಾರಿ ಬಂತು. ಅನಂತರ, ಶಾಮನ ತಲೆಯ ಮೇಲೆ ರೆಕ್ಕೆ ಬಡಿಯುತ್ತಾ ಸುತ್ತು ಹೊಡೆಯಿತು. ಬಾಲಕರಿಬ್ಬರೂ ಹಕ್ಕಿಯ ಪಾಡು ನೋಡಿ ನಕ್ಕರು. "ತಲೆಕೆಟ್ಟ ಹಕ್ಕಿಯೇ, ನಿನ್ನ ಮೊಟ್ಟೆ ತೆಗೆಯಲು ಬಿಡೋದಿಲ್ಲವೇ? ನಾವು ನಿನ್ನ ಮೊಟ್ಟೆ ತೆಗೆದೇ ತೆಗೆಯುತ್ತೇವೆ” ಎಂದರು.

ರಾಮ ಮತ್ತು ಶಾಮ ರಾಬಿನ್ ಹಕ್ಕಿಯ ಗೂಡಿನಿಂದ ಮೂರೂ ಬೆಚ್ಚಗಿನ ಮೊಟ್ಟೆಗಳನ್ನು ತೆಗೆದು ಒಯ್ದರು. ತಾಯಿ ರಾಬಿನ್ ಹಕ್ಕಿಯ ಹೃದಯ ಒಡೆದೇ ಹೋಯಿತು. ಅದು ಕೋಪದಿಂದ ಅವರ ತಲೆಗಳ ಮೇಲೆ ಹಾರಾಡುತ್ತಾ ಜೋರು ಸದ್ದು ಮಾಡಿತು.
ಅಲ್ಲೇ ಹಾರಾಡುತ್ತಿದ್ದ ಎರಡು ಕಾಗೆಗಳು ಇದೇನು ಗದ್ದಲವೆಂದು ನೋಡಲು ಬಂದವು. ರಾಬಿನ್ ಹಕ್ಕಿ ದುಃಖದಿಂದ ತನ್ನ ಗೂಡಿನ ಅಂಚಿನಲ್ಲಿ ಕುಳಿತದ್ದನ್ನು ಕಂಡವು. ಆ ಬೇಸಗೆಯಲ್ಲಿ ಗುಟುಕು ಕೊಡುತ್ತಾ ಪ್ರೀತಿ ಮಾಡಲು ತನ್ನ ಪುಟ್ಟ ಮರಿಗಳು ಇರೋದಿಲ್ಲ ಎಂಬ ವೇದನೆಯಿಂದ ತಾಯಿ ರಾಬಿನ್ ಹಕ್ಕಿಯ ಹೃದಯ ಭಾರವಾಗಿತ್ತು.

ತಾಯಿ ರಾಬಿನ್ ಹಕ್ಕಿ ಹೇಳಿದ ನೋವಿನ ಕತೆಯನ್ನೆಲ್ಲ ಕಾಗೆಗಳು ಕೇಳಿದವು. “ಈ ಬಾಲಕರು ನಮ್ಮ ಗೂಡುಗಳಿಂದ ಮೊಟ್ಟೆ ಕದಿಯೋದನ್ನು ತಡೆಯಲಿಕ್ಕಾಗಿ ನಾವು ಏನಾದರೂ ಮಾಡಲೇ ಬೇಕು. ಅವರಲ್ಲಿ ಮೊಟ್ಟೆಗಳು ಇರೋದಿಲ್ಲವೇ? ನಾವು ಅಲ್ಲಿಗೆ ಹೋಗಿ ಅವರ ಮೊಟ್ಟೆಗಳನ್ನು ಯಾಕೆ ಕದಿಯಬಾರದು?” ಎಂದು ಕೇಳಿತೊಂದು ಕಾಗೆ. "ಹಾಗೇ ಮಾಡಿ, ಹಾಗೇ ಮಾಡಿ" ಎಂದಿತು ತಾಯಿ ರಾಬಿನ್ ಹಕ್ಕಿ.

ಕಾಗೆಗಳು ತಕ್ಷಣ ಅಲ್ಲಿಂದ ಹಾರಿ ಹೋದವು. ಬಾಲಕರು ಹೊಕ್ಕ ಮನೆಯ ಹತ್ತಿರ ಹಾರಿ ಬಂದವು. ಆ ಮನೆಯ ಚಾವಣಿಗೆ ಇಳಿದವು. ಅವುಗಳಿಗೆ ಬಾಲಕರು ತಮ್ಮ ಕೋಣೆಯಲ್ಲಿ ಮಾತನಾಡುತ್ತಿದ್ದದ್ದು ಕೇಳಿಸಿತು: "ನಾವು ಈ ಮೊಟ್ಟೆಗಳನ್ನು ಬಚ್ಚಿಡೋಣ. ಇವನ್ನು ನೋಡಿದರೆ ಅಮ್ಮನಿಗೆ ಬಹಳ ಬೇಸರವಾಗುತ್ತದೆ. ಯಾಕೆಂದರೆ, ನಾವಿನ್ನು ಹಕ್ಕಿ ಮೊಟ್ಟೆಗಳನ್ನು ತರೋದಿಲ್ಲವೆಂದು ಅಮ್ಮನಿಗೆ ಮಾತು ಕೊಟ್ಟಿದ್ದೇವೆ.”

ಬಾಲಕರ ಮಾತುಕತೆ ಮುಗಿಯುವ ತನಕ ಕಾಗೆಗಳು ಚಾವಣಿಯಲ್ಲೇ ಕಾದು ಕುಳಿತವು. ಅನಂತರ ಕಿಟಕಿಯ ಬಿಸಿಲ ಜಾಲರಿಯಲ್ಲಿ ಕುಳಿತವು. ತದನಂತರ, ಬಾಲಕರು ಕಾಣಿಸದಿದ್ದಾಗ ಅವರ ಕೋಣೆಯೊಳಗೆ ಹೋಗಿ ಅಲ್ಲೆಲ್ಲ ನಡೆದಾಡಿದವು.

ಆಗ ಅವುಗಳಿಗೆ ಎಂಟು “ಮೊಟ್ಟೆ"ಗಳು ಕಾಣಿಸಿದವು. “ಓ, ಇಲ್ಲಿವೆ ಬಾಲಕರ ಮೊಟ್ಟೆಗಳು - ದೊಡ್ಡ, ದುಂಡಗಿನ, ಹೊಳೆಯುವ ಮೊಟ್ಟೆಗಳು” ಎಂದಿತೊಂದು ಕಾಗೆ. ಇನ್ನೊಂದು ಕಾಗೆಯೂ ನೋಡಿತು - ಒಂದು ಪುಟ್ಟ ಪೆಟ್ಟಿಗೆಯಲ್ಲಿ ಹತ್ತಿಯಲ್ಲಿ ಎಂಟು ಚಂದದ ಮೊಟ್ಟೆಗಳನ್ನು ಜೋಡಿಸಿಡಲಾಗಿತ್ತು. ಅವಕ್ಕೇನು ಗೊತ್ತು ಅವು ಆಟದ ಗಾಜಿನ ಗೋಲಿಗಳೆಂದು!

"ಹತ್ತಿಯ ಗೂಡಿನಲ್ಲಿ ಇಟ್ಟಿದ್ದಾರೆ ನೋಡು ಮೊಟ್ಟೆಗಳನ್ನು. ಎಲ್ಲವನ್ನೂ ಇಲ್ಲಿಂದ ಒಯ್ದರೆ ಅವುಗಳಿಂದ ಮರಿಗಳು ಹುಟ್ಟೋದಿಲ್ಲ. ಆಗ ಮಾತ್ರ ಅವರಿಗೆ ತಾಯಿ ರಾಬಿನ್ ಹಕ್ಕಿಯ ನೋವು ಏನೆಂದು ಗೊತ್ತಾಗುತ್ತದೆ” ಎನ್ನುತ್ತಾ ಕಾಗೆಗಳು ಗಾಜಿನ ಗೋಲಿಗಳನ್ನು ಒಂದೊಂದಾಗಿ ಅಲ್ಲಿಂದ ಒಯ್ದವು. ಅವನ್ನು ಊರಿನ ಎತ್ತರ ಗೋಪುರದ ತುದಿಯಲ್ಲಿದ್ದ ತಮ್ಮ ಗೂಡಿನಲ್ಲಿ ಇಟ್ಟವು.

ಕಾಗೆಗಳು ಕೊನೆಯ ಎರಡು ಗಾಜಿನ ಗೋಲಿಗಳನ್ನು ತಮ್ಮ ಕೊಕ್ಕಿನಲ್ಲಿ ಕಚ್ಚಿಕೊಂಡು ಕೋಣೆಯಿಂದ ಹೊರಗೆ ಹಾರುತ್ತಿದ್ದಂತೆ, ಬಾಲಕರಿಬ್ಬರೂ ಮನೆಯ ಮಾಳಿಗೆಯ ತಮ್ಮ ಕೋಣೆಗೆ ಬಂದರು. “ಅಯ್ಯೋ, ಅಮ್ಮ ಬೇಗ ಇಲ್ಲಿಗೆ ಬಾ. ಕಾಗೆಗಳು ನಮ್ಮ ಗಾಜಿನ ಗೋಲಿಗಳನ್ನು ತಗೊಂಡು ಹಾರಿ ಹೋದವು. ನಮ್ಮ ಎಲ್ಲ ಗೋಲಿಗಳೂ ಹೋದವು” ಎಂದು ಚೀರಿದ ಶಾಮ.

ಮಕ್ಕಳ ಚೀರುವಿಕೆ ಕೇಳಿ ಅಮ್ಮ ಮಾಳಿಗೆಯ ಕೋಣೆಗೆ ಬಂದಳು. ಗಾಜಿನ ಗೋಲಿಗಳಿದ್ದ ಪೆಟ್ಟಿಗೆ ಖಾಲಿಯಾಗಿ ಇರೋದನ್ನು ಕಂಡಳು. ಮಕ್ಕಳು ಅಳುತ್ತಾ ಹೇಳಿದರು, "ಎರಡು ಕಾಗೆಗಳು ನಮ್ಮ ಎಲ್ಲ ಗೋಲಿಗಳನ್ನು ತಗೊಂಡು ಹಾರಿ ಹೋದವು."

“ಕಾಗೆಗಳಿಗೆ ಹೊಳೆಯುವ ವಸ್ತುಗಳೆಂದರೆ ಇಷ್ಟ. ಒಮ್ಮೆ ನನ್ನ ಬೆಳ್ಳಿ ಚಮಚವನ್ನೇ ಕಾಗೆ ಒಯ್ದಿತ್ತು” ಎಂದು ಸಮಾಧಾನ ಮಾಡಿದಳು ಅಮ್ಮ. “ಹಾಗಲ್ಲಮ್ಮಾ, ನಾವು ನಿನಗೆ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ನಾವು ಇವತ್ತು ರಾಬಿನ್ ಹಕ್ಕಿಯ ಮೂರು ಮೊಟ್ಟೆ ತಂದೆವು. ಅಲ್ಲಿವೆ ನೋಡು. ಆಗ ಈ ಕಾಗೆಗಳು ನಮ್ಮ ಹಿಂದೆಯೇ ಬಂದಿದ್ದವು" ಎಂದ ರಾಮ ಅಳುತ್ತಾ.

“ಮೊಟ್ಟೆಗಳನ್ನು ಕದಿಯೋದು ದೊಡ್ಡ ತಪ್ಪು. ನಿಮ್ಮ ಅಮ್ಮನಿಗೆ ಕೊಟ್ಟ ಮಾತು ಮುರಿಯೋದು ಇನ್ನೂ ದೊಡ್ಡ ತಪ್ಪು. ನನ್ನ ಪ್ರೀತಿಯ ಮಕ್ಕಳನ್ನು ನಾನು ನಂಬಿದೆ. ಅವರು ಹೀಗೆ ಮಾಡಿದರೆಂದರೆ …" ಎನ್ನುತ್ತಾ ಅಮ್ಮ ಮಾತು ನಿಲ್ಲಿಸಿ, ಮಾಳಿಗೆಯಿಂದ ಕೆಳಗೆ ಇಳಿದು ಹೋದಳು. ರಾಮ ಮತ್ತು ಶಾಮ “ನಮ್ಮಿಂದ ತಪ್ಪಾಯಿತಮ್ಮಾ. ಇನ್ನು ಯಾವತ್ತೂ ಹೀಗೆ ಮಾಡುವುದಿಲ್ಲ, ಅಮ್ಮಾ. ನೀನು ನಮ್ಮನ್ನು ನಂಬು" ಎನ್ನುತ್ತಾ ಅಮ್ಮನನ್ನು ಹಿಂಬಾಲಿಸಿದರು.

ಅಂತೂ ರಾಮ ಮತ್ತು ಶಾಮರನ್ನು ಅಮ್ಮ ಕ್ಷಮಿಸಿದಳು. ಆದರೆ, ಗೋಪುರದ ತುದಿಯ ಗೂಡಿನಲ್ಲಿ ಅವರ “ಮೊಟ್ಟೆ"ಗಳಿಂದ ಮರಿಗಳು ಹೊರ ಬರಲೇ ಇಲ್ಲ. 

ಚಿತ್ರ ಕೃಪೆ: "ದ ಟೆಡ್ಡಿ ಬೇರ್ಸ್ ಟೇಯ್ಲ್" ಪುಸ್ತಕ