ಹಗರಣ : ಸಚಿವರ ತಲೆದಂಡ

ಹಗರಣ : ಸಚಿವರ ತಲೆದಂಡ

ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಸಚಿವರ ತಲೆದಂಡಕ್ಕೆ ಒತ್ತಾಯಿಸುತ್ತಿದ್ದ ರಾಜ್ಯ ಕಾಂಗ್ರೆಸ್ ಈಗ ತನ್ನ ಸರಕಾರದಲ್ಲಿ ಭಷ್ಟಾಚಾರದ ಕಾರಣಕ್ಕಾಗಿಯೇ ಸಚಿವರ ತಲೆದಂಡ ಪಡೆಯುವಂತಾಗಿದೆ. ಅದೂ ಅಧಿಕಾರಕ್ಕೇರಿದ ಕೇವಲ ಒಂದು ವರ್ಷದಲ್ಲಿಯೇ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕಾಗಿ ಬಂದಿದೆ. ಇದರೊಂದಿಗೆ ಸಿದ್ಧರಾಮಯ್ಯ ಸರಕಾರದ ಮೊದಲ ವಿಕೆಟ್ ಉರುಳಿದೆ.

ವಾಲ್ಮೀಕಿ ನಿಗಮದ ಲೆಕ್ಕ ಅಧೀಕ್ಷಕ ಪಿ.ಚಂದ್ರಶೇಖರನ್ ಮೇ ೨೫ರಂದು ಆತ್ಮಹತ್ಯೆ ಮಾಡಿಕೊಳ್ಳುವುದರೊಂದಿಗೆ ನಿಗಮದಲ್ಲಿ ನಡೆದಿರುವ ಅವ್ಯವಹಾರ ಬೆಳಕಿಗೆ ಬಂದಿತ್ತು. ತಮ್ಮ ಡೆತ್ ನೋಟ್ ನಲ್ಲಿ ಚಂದ್ರಶೇಖರನ್ ಅವರು ಸಚಿವರ ಮೌಖಿಕ ಆದೇಶದ ಮೇರೆಗೆ ಕೋಟ್ಯಾಂತರ ರೂಪಾಯಿಗಳನ್ನು ಬೇನಾಮಿ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬುದಾಗಿ ಬರೆದಿಟ್ಟಿದ್ದರು. ಅದರ ಜತೆಗೇ ಹಗರಣದಲ್ಲಿ ಪಾಲುದಾರರಾಗಿರುವ ಇನ್ನಿತರ ಕೆಲವು ಅಧಿಕಾರಿಗಳ ಹೆಸರುಗಳನ್ನು ಬರೆದಿದ್ದರು. ಈ ಬೆಳವಣಿಗೆಯ ಬೆನ್ನಿಗೇ ಸಚಿವರು ರಾಜೀನಾಮೆ ನೀಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಆದರೆ ಸಚಿವರು ರಾಜೀನಾಮೆ ನೀಡಲು ಮುಂದಾಗಿರಲಿಲ್ಲ ಹಾಗೂ ಸರಕಾರ ಕೂಡಾ ಅವರ ರಾಜೀನಾಮೆ ಪಡೆಯುವ ಗೋಜಿಗೆ ಹೋಗಿರಲಿಲ್ಲ. ಆದರೆ ಪ್ರತಿಪಕ್ಷಗಳಿಂದ ಹಾಗೂ ಮಾಧ್ಯಮಗಳಿಂದ ಒತ್ತಡ ಹೆಚ್ಚಾದ ಬಳಿಕವಷ್ಟೇ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ.

ಸಚಿವರು ರಾಜೀನಾಮೆ ನೀಡಿದ ಮಾತ್ರಕ್ಕೆ ಈ ಹಗರಣ ತಾರ್ಕಿಕ ಅಂತ್ಯ ಕಂಡಂತಲ್ಲ. ಇನ್ನೂ ಯಾರೆಲ್ಲ ಪಾತ್ರ ವಹಿಸಿದ್ದಾರೆ ಎಂಬ ಬಗ್ಗೆಯೂ ತನಿಖೆಯಾಗಬೇಕಿದೆ. ಹಗರಣದ ಹಣ ಎಲ್ಲಿಗೆ ಹೋಯಿತು? ಯಾವ ಉದ್ದೇಶಕ್ಕೆ ಬಳಕೆಯಾಯಿತು ಎಂಬುದೂ ತಿಳಿಯಬೇಕಾಗಿದೆ. ಕಾಂಗ್ರೆಸ್ಸಿನ ಚುನಾವಣಾ ವೆಚ್ಚಕ್ಕಾಗಿ ಈ ಹಣವು ಬಳಕೆಯಾಗಿರುವ ಸಾಧ್ಯತೆಗಳೂ ಇವೆಯೆಂದು ಹಲವು ಮೂಲಗಳು ಆರೋಪಿಸುತ್ತಿರುವುದರಿಂದ ಈ ಕುರಿತ ಸತ್ಯಾಸತ್ಯತೆ ಬೆಳಕಿಗೆ ಬರಬೇಕಿದೆ. ಈಗಾಗಲೇ ವಿಶೇಷ ತನಿಖಾ ದಳವು (ಎಸ್ ಐ ಟಿ) ಈ ಹಗರಣದ ತನಿಖೆ ನಡೆಸುತ್ತಿದೆ. ಬ್ಯಾಂಕಿನ ಕೆಲವು ಅಧಿಕಾರಿಗಳ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ. ಬೆಂಗಳೂರಿನ ಯೂನಿಯನ್ ಬ್ಯಾಂಕ್ ಅಧಿಕಾರಿಗಳು ದೂರು ದಾಖಲಿಸಿದನ್ವಯ ಸಿಬಿಐ ಕೂಡಾ ಎಫ್ ಐ ಆರ್ ದಾಖಲಿಸಿದೆ. ಈ ನಿಟ್ಟಿನಲ್ಲಿ ಎಸ್ ಐ ಟಿ ಮಾತ್ರವಲ್ಲದೆ ಸಿ ಬಿ ಐ ನಿಂದಲೂ ಸಮಗ್ರ ತನಿಖೆ ನಡೆಯ ಬೇಕಾದುದು ಅಗತ್ಯವಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೮-೦೬-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ