ಹಗ್ಗದ ಮೇಲಿನ ನಡಿಗೆ
ಕೆನಡಾ, ಮೆಕ್ಸಿಕೋ ಮತ್ತು ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಮೂಲಕ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ದಾಳ ಉರುಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕೆನಡಾ ಕೂಡ ಅಮೇರಿಕಾದ ವಸ್ತುಗಳ ಮೇಲೆ ಅಷ್ಟೇ ಕಠಿಣವಾದ ತೆರಿಗೆ ವಿಧಿಸುವ ಮೂಲಕ ತಿರುಗೇಟು ನೀಡಿದೆ. ಈ ತೆರಿಗೆ ಸಮರ ಮತ್ತಷ್ಟು ರಾಷ್ಟ್ರಗಳನ್ನು ವ್ಯಾಪಿಸಿಕೊಳ್ಳುವ ಸಾಧ್ಯತೆ ಇರುವುದರಿಂದ, ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ ಹೇಗಿರಬಹುದು ಎಂದು ಎಲ್ಲರಲ್ಲಿ ಆತಂಕ ಮೂಡಿದೆ. ಭಾರತದ ವಸ್ತುಗಳ ಮೇಲೆ ತೆರಿಗೆ ಏರಿಕೆಯ ಕ್ರಮಕ್ಕೆ ಟ್ರಂಪ್ ಇನ್ನೂ ಮುಂದಾಗಿಲ್ಲ. ಆದರೂ ತನ್ನ ಆರ್ಥಿಕ ಹಿತಾಸಕ್ತಿ ಕಾಯ್ದುಕೊಳ್ಳುವುದರ ಜತೆಗೆ ಅಮೇರಿಕದಂತಹ ಪ್ರಮುಖ ರಾಷ್ಟ್ರದೊಂದಿಗೆ ವ್ಯಾಪಾರ ಸಂಬಂಧ ಹದಗೆಡದಂತೆ ಎಚ್ಚರ ವಹಿಸುವ ‘ಹಗ್ಗದ ಮೇಲಿನ ನಡಿಗೆ’ಗೆ ಭಾರತ ಸಿದ್ಧವಾಗಬೇಕಾಗಿದೆ. ‘ಅಮೇರಿಕದ ಹಿತ ಕಾಯುವುದಕ್ಕೆ ನನ್ನ ಮೊದಲ ಆದ್ಯತೆ’ ಎಂದು ಈಗಾಗಲೇ ಘೋಷಿಸಿರುವ ಟ್ರಂಪ್, ಅದಕ್ಕೆ ಪೂರಕವಾಗಿ ಹಲವು ಕಾರ್ಯಾದೇಶಗಳಿಗೆ ಸಹಿ ಹಾಕಿದ್ದಾರೆ. ಕೆನಡಾ ಮತ್ತು ಮೆಕ್ಸಿಕೋದಿಂದ ಆಮದಾಗುವ ವಸ್ತುಗಳ ಮೇಲೆ ಶೇ. ೨೫ರಷ್ಟು ಮತ್ತು ಚೀನಾದಿಂದ ಆಮದಾಗುವ ವಸ್ತುಗಳ ಮೇಲೆ ಶೇ. ೧೦ರಷ್ಟು ಹೆಚ್ಚುವರಿ ತೆರಿಗೆಯನ್ನು ಟ್ರಂಪ್ ವಿಧಿಸಿದ್ದಾರೆ. ಅಮೇರಿಕದ ಒಟ್ಟು ಆಮದಿನ ಶೇ. ೪೦ರಷ್ಟು ಪಾಲು ಈ ರಾಷ್ಟ್ರಗಳದ್ದೇ ಇದೆ. ಅಕ್ರಮ ವಲಸೆ. ವಿಷಕಾರಿ ಪೆಂಟಾನಿಲ್ ನಂತಹ ಡ್ರಗ್ಸ್ ಸಾಗಣಿಗೆ ಈ ರಾಷ್ಟ್ರಗಳು ಉತ್ತರದಾಯಿ ಆಗಿರಬೇಕೆಂಬುದು ಟ್ರಂಪ್ ಬಯಕೆ. ಈ ಎರಡು ಸಮಸ್ಯೆಗಳೇ ಈಗ ಅಮೇರಿಕಕ್ಕೆ ದೊಡ್ದ ತಲೆ ನೋವು. ಇದನ್ನೆಲ್ಲ ನಿಲ್ಲಿಸುವುದಾಗಿ ಹಿಂದೆ ಅವು ವಾಗ್ದಾನ ಮಾಡಿದ್ದವು. ಆದರೆ ಅದರಂತೆ ನಡೆದುಕೊಳ್ಳಲಿಲ್ಲ ಎಂಬ ಭಾವನೆಯಿಂದ ಟ್ರಂಪ್ ಭಾರಿ ತೆರಿಗೆ ಹೇರಿಕೆಯ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಹಿಂದೆ ಹಲವು ಬಾರಿ ಭಾರತವನ್ನು ‘ಭಾರಿ ತೆರಿಗೆಯ ರಾಷ್ಟ್ರ’ (ಟ್ಯಾರಿಫ್ ಕಿಂಗ್) ಎಂದು ಟ್ರಂಪ್ ಜರಿದಿದ್ದರೂ, ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಕೃತ್ಯಕ್ಕೆ ಇನ್ನೂ ಕೈಹಾಕಿಲ್ಲ. ಈ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೇರಿಕ ಪ್ರವಾಸ ಕೈಗೊಳ್ಳಲಿದ್ದು, ಆಗ ನಡೆಯುವ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಮಾತನಾಡಿದರಾಯಿತು ಎಂದು ಟ್ರಂಪ್ ಸದ್ಯಕ್ಕೆ ಸುಮ್ಮನಿರಬಹುದು. ಹಾಗೆ ನೋಡಿದರೆ, ಚೀನಾದ ವಸ್ತುಗಳ ಮೇಲೆ ಟ್ರಂಪ್ ಹೆಚ್ಚಿನ ತೆರಿಗೆ ವಿಧಿಸಿರುವುದು ಪರೋಕ್ಷವಾಗಿ ಭಾರತಕ್ಕೆ ವರ. ಅಂತಾರಾಷ್ಟ್ರೀಯ ಮಾರುಕಟ್ತೆಯಲ್ಲಿ ಭಾರತದ ವಸ್ತುಗಳಿಗೆ ತೀವ್ರ ಸ್ಪರ್ಧೆ ನೀಡುತ್ತಿದ್ದುದೇ ಚೀನಾದ ವಸ್ತುಗಳು. ಏಕೆಂದರೆ ಅವುಗಳ ಬೆಲೆ ತೀರಾ ಕಡಿಮೆ. ಟ್ರಂಪ್ ಮೊದಲು ಅಧ್ಯಕ್ಷರಾಗಿದ್ದಾಗಲೂ ಚೀನಾ ಮೇಲೆ ತೆರಿಗೆ ಸಮರ ಸಾರಿದ್ದರು. ಅದರಿಂದಾಗಿ ೨೦೧೭ರಿಂದ ೨೦೨೩ರವರೆಗೆ ಭಾರತದ ಉದ್ಯಮ ವಲಯಕ್ಕೆ ಸಾಕಷ್ಟು ಲಾಭವಾಯಿತು ಎಂದು ಆಕ್ಸ್ ಫರ್ಡ್ ಎಕಾನಾಮಿಕ್ಸ್ ನ ವಿಶ್ಲೇಷಣೆ ಹೇಳುತ್ತದೆ.
ಅಮೇರಿಕದಿಂದ ಭಾರತಕ್ಕೆ ಬರುತ್ತಿರುವ ವಸ್ತುಗಳ ಮೇಲಿನ ತೆರಿಗೆಯನ್ನು ಭಾರತ ಈಗಾಗಲೇ ಇಳಿಸಿದೆ. ೧೬೦೦ ಸಿಸಿಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರವಾಹನಗಳು, ಉಪಗ್ರಹಸಂಬಂಧಿ ಪರಿಕರಗಳು ಸೇರಿದಂತೆ ಹಲವು ವಸ್ತುಗಳ ಮೇಲೆ ೨೦೨೫-೨೬ರ ಕೇಂದ್ರ ಬಜೆಟ್ ನಲ್ಲಿ ತೆರಿಗೆಯನ್ನು ಇಳಿಸಲಾಗಿದೆ. ಭಾರತದ ಮೇಲೆ ಟ್ರಂಪ್ ತೆರಿಗೆಯ ಹೊರೆ ಹಾಕದಿರಲಿ ಎಂಬುದೇ ಈ ಕ್ರಮದ ಹಿಂದಿರುವ ಆಶಯವಾಗಿದೆ. ಇದನ್ನೇ ಮುಂದುವರೆಸಿ, ಭಾರತ-ಅಮೇರಿಕ ವ್ಯಾಪಾರ ಸಂಬಂಧಗಳು ಗಟ್ಟಿಯಾಗಿರುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಕೇಂದ್ರ ಸರಕಾರದ ಮೇಲಿದೆ. ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ತಾಂಡವವಾಡುತ್ತಿರುವ ಈ ಕಾಲಘಟ್ಟದಲ್ಲಿ ತನ್ನ ನೀತಿ -ನಿಲುವುಗಳನ್ನು ಭಾರತ ಅತ್ಯಂತ ಎಚ್ಚರಿಕೆಯಿಂದ ನಿರ್ಧರಿಸಬೇಕಾಗಿದೆ. ಆ ಮೂಲಕ ಭಾರತೀಯರ ಹಿತವನ್ನು ಕಾಪಾಡಬೇಕಾಗಿದೆ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೪-೦೨-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ