ಹಣತೆಯೊಂದಿಗೆ ಹಾಡೋಣ ಬನ್ನಿ...
ನೆಟ್ಟಗೆ ನಡೆದರೆ ಹಣೆ ಬಡಿಯುವ
ಈ ಹೊಸ್ತಿಲಿಂದಷ್ಟೇ ಬೆಳಗಿಲ್ಲ
ಬೋಳಾದ ಬೆಟ್ಟ ಮೊದಲು
ಹಸಿರಾದ ಕಾಲದಿಂದಲೂ
ದೀಪ ಬೆಳಗಿಸಿಕೊಂಡು
ನಿಮಗೆಂದೇ ಕಾದಿದೆ
ಬರಲಿ ಮಕ್ಕಳು ಬೆಳಕ ಹರಡಲೆಂದು
ಕಾದಿದ್ದಾಳೆ ಅಮ್ಮ ದೀಪ ಹಚ್ಚಿ ಇಂದು
ಇಂದು ಅಂದು ಮುಂದೆಂದು
ಇದೇ ನೆಲದಲ್ಲಿ ರೋಮಿಯೋ ಜೂಲಿಯಟ್ ಅತ್ತು
ದೇವದಾಸ್ ಪಾರ್ವತಿ
ಕಣ್ಣು ಬಿರಿದು ರಕ್ತ ಸುರಿಸಿ
ಸತ್ತುಹೋಗಿದ್ದಾರೆ ಬೆಳಕಿಲ್ಲದೆ
ನೋವಿನಲ್ಲಿ ಬದುಕಿ
ಮತ್ತೆ ಮತ್ತೆ ಸತ್ತು ಅಲ್ಲಲ್ಲಿ ಇಣುಕಿ
ಅಂದಿನಿಂದ, ಮೊನ್ನೆ ಮೊನ್ನೆ
ಪುಟಾಣಿ ಮಲಾಲ ರಕ್ತವನ್ನು
ಕೋವಿಯ ಬಾಯಿ
ನುಂಗಿದಾಗಿಂದಲೂ
ಬೆಳಕನ್ನು ಹರಡಿಕೊಂಡು
ಸಂಧಾನಕ್ಕಾಗಿ ದಾರಿ ತೋರಿದೆ
ಮೊನ್ನೆ ಬೀದಿಪಡಸಾಲೆಯಲ್ಲಿ ಕುಳಿತು
ಕಣ್ಣಲ್ಲೇ ಪ್ರೇಮವರಳಿಸಿ
ರಾತ್ರೋ ರಾತ್ರಿ ಓಡಿಹೋಗಿ
ಹುಣಸೇಮರದಲ್ಲಿ ತೂಗಿ
ಲೋಕದ ನೋವಿಗೆ ಬಾಗಿ
ನೊಂದ ಕೆಳಬೀದಿ ಮಾಚ
ಮೇಲ್ಬೀದಿ ರಂಗಿಗೆ
ಅಮ್ಮ ಮಡಿಲ ತುಂಬ
ದೀಪ ಸುರಿದಿದ್ದಾಳೆ
ಮನೆ ಮುಟ್ಟುವವರೆಗು
ಹಂಚಿದ್ದಳು ಎಲ್ಲರಿಗೂ ಎಣ್ಣೆಯೊಂದಿಗೆ
ಜಗಗರ್ಭದಲ್ಲಿ ಅದಾರೋ ಕಂಪಿಸಿದಾಗೆದ್ದ
ಸುನಾಮಿಯಲೆಗಳ ಮೇಲೆ
ರಾಮ, ರಹೀಮ, ಏಸು ಹಚ್ಚಿಟ್ಟಿದ್ದ
ದೀಪಗಳೇಕೋ
ಅಲ್ಲೋಲ ಕಲ್ಲೋಲಗೊಂಡು
ಅಲ್ಲಲ್ಲಿ ಮುರುಟಿಬಿದ್ದಿವೆ
ಅಂದಿನ ಬುದ್ಧನಿಂದಿನ ಮುಕುಂದ
ಮುಂದಿನೆಮ್ಮ ಮಕ್ಕಳೊಳ ರಕ್ತ
ಬಣ್ಣ ಕೆಂಪು ಲೋಕ ವಿಧಿತ
ಹೊಸ್ತಿಲ ಮೇಲೆ ಬೆಳಕಿದ ಹಣೆತೆಗಳು
ದೇವರ ಮನೆಗೆ ದಾರಿ ತೋರಿವೆ
ಬನ್ನಿ ಒಳಗೆ
ಹಚ್ಚಿಕೊಂಡು ಹೋಗಿ ದೀವಿಗೆ
ದೀಪದ ಬೆಳಕಲ್ಲೆನ್ನ ಕಣ್ಣ ನೋಡಿ
ನಿಮ್ಮದೇ ಬಿಂಬ
ನೀವೂ ನನ್ನ ಹೊತ್ತ ಕಂಬ
ಬಾಗಿಲ ಮುಂದೆ ಬೋರಲಾಗಿ ಕುಳಿತು
ಬರುವವರಿಗೆ
ಕತ್ತಲಾಗಬೇಡಿ, ದಯವಿಟ್ಟು