ಹಣದುಬ್ಬರ ಕಡಿವಾಣಕ್ಕೆ ಆರ್ ಬಿ ಐ ಹೆಜ್ಜೆ

ಹಣದುಬ್ಬರ ಕಡಿವಾಣಕ್ಕೆ ಆರ್ ಬಿ ಐ ಹೆಜ್ಜೆ

ಹಣದುಬ್ಬರ ಮತ್ತು ಬೆಲೆ ಏರಿಕೆಗೆ ಕಡಿವಾಣ ಹಾಕಲು ಸಾಲದ ಮೇಲಿನ ಬಡ್ಡಿದರವನ್ನು ರಿಸರ್ವ್ ಬ್ಯಾಂಕ್ ಹೆಚ್ಚಿಸಿದೆ. ಇದರಿಂದ ನಗದು ಚಲಾವಣೆ ಕಡಿಮೆಯಾಗಲಿದೆ. ಸಾಲ ಪಡೆಯುವವರಿಗೆ ಹೆಚ್ಚಿನ ಹೊರೆ ಬೀಳಲಿದೆ. ಬ್ಯಾಂಕ್ ನಲ್ಲಿ ಠೇವಣಿ ಇಡುವವರಿಗೆ ಹೆಚ್ಚಿನ ಬಡ್ಡಿ ದರ ಲಭಿಸಲಿದೆ. ಇದು ಸರಳವಾಗಿ ಹೇಳುವ ಮಾತು. ಆದರೆ ಜಾಗತಿಕ ಮಟ್ಟದಲ್ಲಿ ಇದು ವಿಶಾಲವಾದ ಅರ್ಥ ಪಡೆಯಲಿದೆ. ಇದಕ್ಕೆ ನಾವು ಎರಡು ವರ್ಷಗಳ ಹಿಂದಿನ ಕಾಲಕ್ಕೆ ಹೋಗಬೇಕು. ಆಗ ಕೊರೊನಾ ಸೋಂಕು ಬಂದಿತ್ತು. ಎಲ್ಲ ಕಡೆ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿತ್ತು. ಕಾಲ ಕ್ರಮೇಣ ಕೊರೊನಾ ತಾಂಡವ ನೃತ್ಯ ಕಡಿಮೆಯಾಗಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಅಧಿಕಗೊಂಡಿತು. ಸೋಂಕು ನಿಯಂತ್ರಣಕ್ಕೆ ಬಂದಿತು. ಜನ ಮನೆಯಿಂದ ಹೊರಬಂದು ವ್ಯಾಪಾರ-ವ್ಯವಹಾರದಲ್ಲಿ ತೊಡಗಿಕೊಂಡರು. ಜನರ ಕೈಯಲ್ಲಿ ನಾಲ್ಕು ಕಾಸು ಉಳಿಯುವಂತಾಯಿತು. ಕೊರೊನಾ ಕಾಲದಲ್ಲಿ ರಿಜರ್ವ್ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಿತು. ಅಲ್ಲದೆ ರಾಜ್ಯ ಸರ್ಕಾರಗಳಿಗೆ ನೀಡುವ ಸಾಲದ ಮೊತ್ತವನ್ನು ಹೆಚ್ಚಿಸಿತು. ಬಡ್ಡಿದರವನ್ನು ಎರಡು ವರ್ಷ ಬದಲಿಸಲು ಹೋಗಲಿಲ್ಲ. ಇದರಿಂದ ಆರ್ಥಿಕ ಚಟುವಟಿಕೆ ನಿಧಾನವಾಗಿ ಅಧಿಕಗೊಂಡಿತು. ಕೊರೊನಾ ಹೋಯಿತು ಎಂದು ಹೇಳುವ ವೇಳೆಗೆ ರಷ್ಯಾ-ಉಕ್ರೇನ್ ಯುದ್ಧ ಆರಂಭವಾಯಿತು. ಇದರಿಂದ ಮತ್ತೊಂದು ಸಂದಿಗ್ಧ ಪರಿಸ್ಥಿತಿ ತಲೆದೋರಿತು. ಪೆಟ್ರೋಲ್-ಡೀಸೆಲ್ ಮತ್ತಿತರ ಇಂಧನ ಹಾಗೂ ಆಹಾರ ಪದಾರ್ಥಗಳ ಕೊರತೆ ಹೆಚ್ಚಾಯಿತು. ಇವುಗಳ ಬಳಕೆ ಏನೂ ಕಡಿಮೆಯಾಗಲಿಲ್ಲ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯವಾಯಿತು. ಒಂದು ಕಡೆ ಬೆಲೆ ಏರಿಕೆ ಮತ್ತೊಂದು ಕಡೆ ಕೊರತೆ ಎರಡೂ ಆರ್ಥಿಕ ಪರಿಸ್ಥಿತಿಯನ್ನು ಬಿಕ್ಕಟ್ಟಿಗೆ ತಂದಿತು. ಇಂಥ ಸಂದರ್ಭದಲ್ಲಿ ಸರ್ಕಾರ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸುವುದು ಸೂಕ್ತ ಎಂದು ಐ ಎಂ ಎಫ್ ಕೂಡ ಸಲಹೆ ನೀಡಿತು. ಅಮೇರಿಕ ಕೂಡ ಸಾಲದ ಮೇಲಿನ ಬಡ್ಡಿ ದರವನ್ನು  ಹೆಚ್ಚಿಸಲು ತೀರ್ಮಾನಿಸಿತು. ಈ ಪರಿಸ್ಥಿತಿಯನ್ನು ಪರಿಶೀಲಿಸಿದ ಆರ್ ಬಿ ಐ ಮಧ್ಯಪ್ರವೇಶಿಸಿ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸಿತು. ಇದರಿಂದ ಬೆಲೆ ಏರಿಕೆ ಮತ್ತು ಹಣದುಬ್ಬರ ಕೂಡ ಇಳಿಮುಖಗೊಳ್ಳುವುದು ಎಂಬುದು ನಿರೀಕ್ಷೆ.

ಆದರೆ ಸಾಲ ಪಡೆಯುವುದು ಅನಿವಾರ್ಯವಾದವರಿಗೆ ಇದು ಅನಗತ್ಯ ಹೊರೆ ಎಂಬುದರಲ್ಲಿ ಸಂದೇಹವಿಲ್ಲ. ದೀರ್ಘಕಾಲಿಕ ಸಾಲ ಪಡೆಯುವವರಿಗೆ ಇದು ಕೂಡಲೇ ಅನ್ವಯಿಸುವುದಿಲ್ಲ ಎಂದು ಹೇಳುವವರೂ ಇದ್ದಾರೆ. ಆದರೆ ಒಂದಂತೂ ಸ್ಪಷ್ಟ. ಕಡಿಮೆ ಬಡ್ದಿ ದರ ಇದೆ ಎಂದು ಸಾಲ ಪಡೆದು ಅನಗತ್ಯ ವೆಚ್ಚ ಮಾಡುವವರ ಸಂಖ್ಯೆ ಕಡಿಮೆಯಾಗಲಿದೆ. ಜನರ ಕೈಯಲ್ಲಿ ಹೆಚ್ಚು ನಗದು ಇಲ್ಲದಂತೆ ಇದು ಮಾಡುತ್ತದೆ. ಹಣದುಬ್ಬರ ಕೆಲವರಿಗೆ ಅನುಕೂಲ ಮತ್ತೆ ಕೆಲವರಿಗೆ ಅನನುಕೂಲ. ಆಸ್ತಿ ಮಾರಾಟ ಮಾಡುವವರಿಗೆ ಹಣದುಬ್ಬರದಿಂದ ಹೆಚ್ಚಿನ ಹಣ ಬರುತ್ತದೆ. ಆಸ್ತಿ ಖರೀದಿ ಮಾಡುವವರು ಹೆಚ್ಚಿನ ಹಣ ನೀಡಬೇಕಾಗುತ್ತದೆ. ಸರ್ಕಾರದ ದೃಷ್ಟಿಯಲ್ಲಿ ಹಣದುಬ್ಬರ ಕಡಿಮೆ ಇದ್ದಲ್ಲಿ ಒಳ್ಳೆಯದು. ಯೋಜನೆಗಳಿಗೆ ಹೆಚ್ಚಿನ ಹಣ ನೀಡುವ ಸಮಸ್ಯೆ ಬರುವುದಿಲ್ಲ. ಅಲ್ಲದೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದಲ್ಲಿರುತ್ತದೆ.

ಸರ್ಕಾರದ ಮೇಲೆ ಜನ ಕೆಂಡ ಕಾರುವುದು ಕಡಿಮೆಯಾಗುತ್ತದೆ. ಈ ದೃಷ್ಟಿಯಿಂದ ಪರೋಕ್ಷವಾಗಿ ಜನರ ಕೈಯಲ್ಲಿ ಹೆಚ್ಚು ಹಣ ಇಲ್ಲದಂತೆ ಮಾಡಲು ಸಾಲದ ಮೇಲಿನ ಬಡ್ಡಿ ದರ ಹೆಚ್ಚಿಸಿದೆ. ಆದರೆ ಕೈಗಾರಿಕೆಗಳಿಗೆ ಬೇಕಾದ ಬಂಡವಾಳ ಹರಿದು ಬರುವುದಕ್ಕೆ ಕಷ್ಟವಾಗಲಿದೆ. ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಇಂಧನ ಬೆಲೆ ಅಂತಾರಾಷ್ಟ್ರೀಯ  ಮಟ್ಟದಲ್ಲಿ ಇಳಿಯುವುದು ಕಷ್ಟ. ಸರ್ಕಾರ ತನ್ನ ತೆರಿಗೆ ಪ್ರಮಾಣ ಕಡಿಮೆ ಮಾಡಬೇಕೆಂಬ ಬೇಡಿಕೆ ಇದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಅದು ಕಷ್ಟದ ಸಲಹೆ. ಹೀಗಾಗಿ ಸರ್ಕಾರ ಜನರ ಕೈಯಲ್ಲಿ ಕಡಿಮೆ ಹಣ ಇರುವಂತೆ ಮಾಡಲು ಬಯಸಿದೆ. ಇದರಿಂದ ಹಿಂದಿನಿಂದಲೂ ವ್ಯಾಪಾರ-ವಹಿವಾಟಿನಲ್ಲಿ ಇರುವವರಿಗೆ ಹೆಚ್ಚಿನ ಪೈಪೋಟಿ ಇಲ್ಲದೆ ಭಾಗವಹಿಸಲು ಸಾಧ್ಯವಿದೆ. ಹೀಗಾಗಿ ಆರ್ಥಿಕ ಚಟುವಟಿಕೆ ಅಧಿಕಗೊಳ್ಳಲಿದೆ ಎಂದು ಆರ್ಥಿಕ ತಜ್ಞರು ನಿರೀಕ್ಷಿಸಿದ್ದಾರೆ. ಆರ್ಥಿಕ ಚಟುವಟಿಕೆಯಲ್ಲಿ ಸರ್ಕಾರ ಕೈಗೊಳ್ಳುವ ಕ್ರಮಗಳು ಕೆಲವರಿಗೆ ಸಿಹಿ ತಂದರೆ ಕೆಲವರಿಗೆ ಕಹಿ ತರುತ್ತದೆ. ಆರ್ಥಿಕ ರಂಗದಲ್ಲಿ ಇವೆರಡೂ ಸಹಜ. ಒಟ್ಟಾರೆ ಸಮಾಜಕ್ಕೆ ಅನುಕೂಲವಾಗುವುದು ಮುಖ್ಯ. ಆರ್ಥಿಕ ಶಿಸ್ತು ಕಾಪಾಡುವುದು ಬಹಳ ಮುಖ್ಯ. ಆರ್ ಬಿ ಐ ಪ್ರಮುಖ ಕೆಲಸ ಹಣದುಬ್ಬರ ಮತ್ತು ಬೆಲೆ ಏರಿಕೆ ನಿಯಂತ್ರಣ. ಆ ಕೆಲಸವನ್ನು ಸಾಲದ ಮೇಲಿನ ಬಡ್ಡಿ ದರ ಏರಿಕೆ ಮೂಲಕ ಕೈಗೊಂಡಿದೆ.

-ಕೃಪೆ: ಸಂಯುಕ್ತ ಕರ್ನಾಟಕ, ಸಂಪಾದಕೀಯ, ದಿ: ೦೬-೦೫-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ