ಹಣದ ಹೊಳೆಯಲ್ಲಿ ಕೊಚ್ಚಿಹೋಗುತ್ತಿರುವ ಕ್ರಿಕೆಟಿಗರು!

ಹಣದ ಹೊಳೆಯಲ್ಲಿ ಕೊಚ್ಚಿಹೋಗುತ್ತಿರುವ ಕ್ರಿಕೆಟಿಗರು!

ಯಾವಾಗ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್ IPL) ಎಂಬ ಟಿ-ಟ್ವೆಂಟಿ ಕ್ರಿಕೆಟ್ ಆಟದ ಪ್ರಕಾರ ಪ್ರಾರಂಭವಾಯಿತೋ ಕ್ರಿಕೆಟಿಗರ ಜೀವನದಲ್ಲಿ ಹಣದ ಹೊಳೆಯೇ ಹರಿಯಲು ಪ್ರಾರಂಭವಾಗಿದೆ. ವರ್ಷದಲ್ಲಿ ಎರಡು ತಿಂಗಳು ಆಟವಾಡಿದರೆ ಸಾಕು, ಕೋಟಿಗಟ್ಟಲೆ ಹಣ ಬಾಚಿಕೊಳ್ಳಬಹುದು ಎಂಬುವುದು ಸಾಬೀತಾಗಿದೆ. ವಿಶ್ವದಲ್ಲೇ ಬಿಸಿಸಿಐ (ಭಾರತೀಯ ಕ್ರಿಕೆಟ್ ಬೋರ್ಡ್) ಅತ್ಯಂತ ಶ್ರೀಮಂತ ಸಂಸ್ಥೆಗಳಲ್ಲಿ ಒಂದು. ಇದರ ಮೂಲಕ ಆಯೋಜನೆಯಾಗುವ ಈ ಐಪಿಎಲ್ ಆಟಕ್ಕೆ ಸೇರಿಕೊಳ್ಳಲು ವಿದೇಶಿ ಆಟಗಾರರು ಸೇರಿದಂತೆ ದೇಶೀಯ ಆಟಗಾರರು ತುದಿಗಾಲಿನಲ್ಲಿ ನಿಂತುಕೊಂಡಿರುತ್ತಾರೆ.

೧೯೮೩ರ ಕ್ರಿಕೆಟ್ ವಿಶ್ವಕಪ್ ಅನ್ನು ಭಾರತ ಗೆದ್ದುಕೊಂಡಾಗ ಆ ತಂಡದಲ್ಲಿದ್ದವರಿಗೇ ತಮ್ಮ ಜಯದ ಬಗ್ಗೆ ನಂಬಿಕೆಯಾಗಿರಲಿಲ್ಲ. ಆ ಸಮಯದಲ್ಲಿ ಭಾರತೀಯ ಕ್ರಿಕೆಟ್ ಬೋರ್ಡ್ ನಲ್ಲಿ ಹಣವಿರಲಿಲ್ಲ. ಆಗ ಆಟಗಾರರಿಗೆ ಸಿಗುತ್ತಿದ್ದ ದಿನ ಭತ್ಯೆ ಕೇವಲ ೨೫೦ ರೂಪಾಯಿಗಳು. ಭಾರತ ತಂಡ ವಿಶ್ವ ಕಪ್ ಗೆದ್ದು ಭಾರತಕ್ಕೆ ಮರಳಿದಾಗ ಅವರಿಗೆ ಬಿಸಿಸಿಐ ಯಾವುದೇ ಬಹುಮಾನವನ್ನು ಘೋಷಿಸುವ ಪರಿಸ್ಥಿತಿಯಲ್ಲಿರಲಿಲ್ಲ. ಕೊನೆಗೆ ಬಿಸಿಸಿಐನ ರಾಜ್ ಸಿಂಗ್ ಡುಂಗರ್ ಪುರ್ ತಮ್ಮ ಗೆಳತಿಯಾದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಮನವಿ ಮಾಡಿ, ಅವರಿಂದ ಒಂದು ಸಂಗೀತ ಕಾರ್ಯಕ್ರಮ ಏರ್ಪಡಿಸಿ ಹಣವನ್ನು ಸಂಗ್ರಹಿಸಬೇಕಾಯಿತು. ಈ ರೀತಿ ಸಂಗ್ರಹವಾದ ಹಣದಲ್ಲಿ ತಲಾ ಒಂದೊಂದು ಲಕ್ಷವನ್ನು ಆಟಗಾರರಿಗೆ ಬಹುಮಾನ ರೂಪದಲ್ಲಿ ನೀಡಲಾಯಿತು.

ಆ ಸಮಯದಲ್ಲಿ ಕ್ರಿಕೆಟ್ ಆಟವಾಡುವುದೆಂದರೆ ಬಹಳ ದುಬಾರಿ ವೃತ್ತಿ ಅಥವಾ ಹವ್ಯಾಸವೇ ಆಗಿತ್ತು. ಆಟಗಾರರಿಗೆ ಸರಿಯಾದ ವೇತನ, ಭತ್ಯೆಗಳು ಸಿಗದೇ ಇದ್ದ ಕಾರಣ ನಿವೃತ್ತಿ ಹೊಂದಿದ ಆಟಗಾರರು ಬಹಳ ಕಷ್ಟದಲ್ಲೇ ಜೀವನ ಸಾಗಿಸಬೇಕಾಗುತ್ತಿತ್ತು. ೭೦, ೮೦ರ ದಶಕದಲ್ಲಿ ಆಟವಾಡಿದ ಆಟಗಾರರ ಕಷ್ಟವನ್ನು ಗಮನಿಸಿ ೯೦ರ ದಶಕದಲ್ಲಿ ಆ ಆಟಗಾರರಿಗಾಗಿ ಪ್ರಾಯೋಜಿತ (ಬೆನಿಫಿಟ್ ಪಂದ್ಯಗಳು) ಪಂದ್ಯಾವಳಿಗಳನ್ನು ನಡೆಸುತ್ತಿದ್ದರು. ಹೀಗೆ ಸಂಗ್ರಹವಾದ ಹಣವನ್ನು ಸಂಕಷ್ಟದಲ್ಲಿದ್ದ ಆಟಗಾರರಿಗೆ ನೀಡುವ ಪರಿಪಾಠವಿತ್ತು. 

ಕ್ರಮೇಣ ಬಿಸಿಸಿಐಯಲ್ಲಿ ಹಣ ಹರಿದಾಡತೊಡಗಿತು. ಈಗಂತೂ ರಣಜಿ, ಇರಾನಿ ಟ್ರೋಫಿ ಆಟವಾಡಲು ಮನಸ್ಸು ಮಾಡದ ಕ್ರೀಡಾಪಟುಗಳು ಐಪಿಎಲ್ ನಲ್ಲಿ ಆಡಲು ಹಾತೊರೆಯುತ್ತಿದ್ದಾರೆ. ಇದಕ್ಕೆ ಕಾರಣ ಅಲ್ಲಿ ಸಿಗುವ ಹಣ. ಒಬ್ಬೊಬ್ಬ ಆಟಗಾರನೂ ಕೋಟ್ಯಾಂತರ ರೂಪಾಯಿಗೆ ಹರಾಜಾಗುತ್ತಾನೆ. ಕಳೆದ ಶನಿವಾರ ಮತ್ತು ಭಾನುವಾರ (ಫೆ. ೧೨,೧೩) ಬೆಂಗಳೂರಿನಲ್ಲಿ ಜರುಗಿದ ಹರಾಜು ಪ್ರಕ್ರಿಯೆಯನ್ನು ಗಮನಿಸಿದಾಗ ಇನ್ನು ಭವಿಷ್ಯದಲ್ಲಿ ರಾಷ್ಟ್ರೀಯ ಪಂದ್ಯದಲ್ಲಿ ಆಟವಾಡಲು ಆಟಗಾರರೇ ಸಿಗಲಾರರು ಎನ್ನುವ ಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಸರಿಯಾಗಿ ನಾಲ್ಕೈದು ಪಂದ್ಯಗಳನ್ನೂ ಆಡದ ವ್ಯಕ್ತಿ ಎರಡು ಕೋಟಿಗೆ ಹರಾಜಾಗುತ್ತಾನೆ. ಕೇವಲ ೫೦ ಲಕ್ಷ ಮೂಲ ಬೆಲೆ ಇದ್ದ ಆಟಗಾರ ಏಳೆಂಟು ಕೋಟಿಗೆ ಬೆಲೆ ಬಾಳುತ್ತಾನೆ. ಉತ್ತಮವಾಗಿ ಆಟವಾಡಿದ ಆಟಗಾರನೊಬ್ಬನನ್ನು ಖರೀದಿಸುವವರೇ ಇರುವುದಿಲ್ಲ. ಹೇಗ್ಯಾಕೆ?

ಕಳೆದ ವರ್ಷದವರೆಗೆ ೮ ತಂಡಗಳು ಐಪಿಎಲ್ ನಲ್ಲಿ ಭಾಗವಹಿಸುತ್ತಿದ್ದವು. ಈ ವರ್ಷ ಇನ್ನೆರಡು ತಂಡಗಳ ಸೇರ್ಪಡೆಯಿಂದಾಗಿ ಒಟ್ಟು ತಂಡಗಳ ಸಂಖ್ಯೆ ಹತ್ತಕ್ಕೇರಿದೆ. ಪಂಜಾಬ್, ಕೋಲ್ಕತ್ತಾ, ಚೆನ್ನೈ, ಮುಂಬೈ, ಹೈದರಾಬಾದ್, ಗುಜರಾತ್, ಬೆಂಗಳೂರು, ಲಕ್ನೋ, ರಾಜಸ್ಥಾನ್ ಮತ್ತು ಡೆಲ್ಲಿ. ಈ ಫ್ರಾಂಚೆಸಿಗಳ ಮಾಲಕರು ನಿಸ್ಸಂಶಯವಾಗಿ ಕೋಟ್ಯಾಧೀಶರೇ ಆಗಿರುತ್ತಾರೆ. ಅವರ ಯೋಜನೆಗಳು ಮತ್ತು ಲೆಕ್ಕಾಚಾರಗಳು ನಿಗೂಢ. ಯಾವ ಆಟಗಾರನನ್ನು ಯಾಕಾಗಿ ಖರೀದಿಸುತ್ತಾರೆ ಎನ್ನುವ ಬಗ್ಗೆ ಅವರದ್ದೇ ಆದ ‘ಹಿಡನ್ ಅಜೆಂಡಾ’ ಇರಬಹುದು. ಅಚ್ಚರಿಯ ಸಂಗತಿಯೆಂದರೆ ೧೦ಲಕ್ಷ ಮೂಲ ಬೆಲೆ ಹೊಂದಿದ, ಇನ್ನೂ ಭಾರತೀಯ ತಂಡದಲ್ಲಿ ಆಡದ ‘ಅನ್ ಕ್ಯಾಪ್ಡ್ ಆಟಗಾರ' ಇಲ್ಲಿ ಕೋಟಿ ರೂಪಾಯಿಗೆ ಹರಾಜಾಗುತ್ತಾನೆ. ಪ್ರತಿಯೊಂದು ತಂಡಕ್ಕೆ ೯೦ ಕೋಟಿಗಳಷ್ಟು ಹಣವನ್ನು ವ್ಯಯಿಸುವ ಅವಕಾಶ ಇತ್ತು.

ಹೀಗೆ ತನ್ನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಮೊತ್ತ ದೊರೆತ ಆಟಗಾರ ಆಟದತ್ತ ಗಮನ ಹರಿಸದೇ ಹಣದತ್ತಲೇ ಮುಖ ಮಾಡತೊಡಗುತ್ತಾನೆ. ಕ್ರಮೇಣ ಅವನಿಗೆ ಸಿಗುವ ಜಾಹೀರಾತುಗಳು ಅವನನ್ನು ಆಟದಿಂದ ವಿಮುಖನನ್ನಾಗಿಸುತ್ತದೆ. ಹೀಗಾಗಿ ಎಷ್ಟೊಂದು ಆಟಗಾರರು ಬಂದಷ್ಟೇ ವೇಗದಲ್ಲಿ ನೇಪಥ್ಯಕ್ಕೆ ಸರಿದು ಹೋಗಿದ್ದಾರೆ ಗೊತ್ತೇ? ಇದೇ ಭಾರತೀಯ ಕ್ರಿಕೆಟ್ ನ ಭವಿಷ್ಯವನ್ನು ಇನ್ನಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗಬಹುದು. ಏಕೆಂದರೆ ಆಟವಾಡಿ ಗಳಿಸುವುದಕ್ಕಿಂತಲೂ ಅಧಿಕ ಮೊತ್ತವನ್ನು ಆಟವಾಡದೇ ಗಳಿಸುವ ಸಾಧ್ಯತೆ ಇರುವುದು ಐಪಿಎಲ್ ನಲ್ಲಿ. ಕೋಟಿ ರೂಪಾಯಿ ನೀಡಿ ಖರೀದಿಸಿದ ಆಟಗಾರನೊಬ್ಬನನ್ನು ಒಂದೂ ಪಂದ್ಯದಲ್ಲಿ ಆಟವಾಡಿಸದೇ ಇರುವುದೂ ಕಳೆದ ವರ್ಷಗಳಲ್ಲಿ ನಡೆದಿದೆ.  ವರ್ಷದಲ್ಲಿ ಎರಡು ತಿಂಗಳು ಮಾತ್ರ ನಡೆಯುವ ಈ ಆಟವು ಆಟಗಾರರನ್ನು ಹುಚ್ಚು ಹಣದ ಹೊಳೆಯಲ್ಲಿ ಕೊಚ್ಚಿ ಹೋಗುವಂತೆ ಮಾಡಿದೆ. 

ನೀವು ಬೇಕಾದರೆ ಗಮನಿಸಿ, ಈಗೀಗ ರಾಷ್ಟ್ರೀಯ ತಂಡದಲ್ಲಿ ಆಡುವ ಬಹುತೇಕ ಆಟಗಾರರಿಗೆ ಯಾವುದೇ ಬದ್ಧತೆ ಇಲ್ಲ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದೇನೆ. ಉತ್ತಮ ಪ್ರದರ್ಶನ ನೀಡಬೇಕು, ದೇಶಕ್ಕಾಗಿ ಪಂದ್ಯವನ್ನು ಗೆಲ್ಲಬೇಕು ಎನ್ನುವ ಯಾವುದೇ ಆಸೆ ಅವರಿಗಿಲ್ಲ. ಕೆಲವು ಆಟಗಾರ ಆಟವನ್ನು ನೋಡುವಾಗ ಯಾಕಾದರೂ ಆಯ್ಕೆಗಾರರು ನಮ್ಮನ್ನು ಆಯ್ಕೆ ಮಾಡಿದ್ದಾರೋ ಎನ್ನುವ ಗೊಂದಲದಲ್ಲಿದ್ದಾರೆ ಅನಿಸುತ್ತೆ. ಏಕೆಂದರೆ ಐಪಿಎಲ್ ನಲ್ಲಿ ಆಟವಾಡುವ ಮುಖಾಂತರ ಅವರು ಹಣದ ರುಚಿಯನ್ನು ಸವಿದು ಆಗಿದೆ. ಹಣದ ಹೊಳೆಯಲ್ಲಿ ಮಿಂದಾಗಿದೆ. ಇನ್ನೇನು ಬೇಕು ಆಟಗಾರರಿಗೆ. ಹಿಂದೆಲ್ಲಾ ಒಬ್ಬ ಆಟಗಾರ ಆತನ ಕ್ರಿಕೆಟ್ ಜೀವನದಲ್ಲಿ ದುಡಿದಷ್ಟು ಹಣವನ್ನು ಈಗ ಒಬ್ಬ ಆಟಗಾರ ಒಂದೇ ಸೀಸನ್ ನಲ್ಲಿ ದುಡಿಯುತ್ತಾನೆ. ಅದರ ಜೊತೆಗೆ ಜಾಹೀರಾತು ಮೂಲಕವೂ ಹಣ ಬರುತ್ತದೆ. ಇದೆಲ್ಲಾ ಆಟಗಾರನ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದೇ ಆದರೆ ದೇಶದ ಬಗ್ಗೆ ಯೋಚನೆ ಮಾಡಿದಾಗ...? ಹೀಗೆಲ್ಲಾ ಅನಾಯಾಸವಾಗಿ ಹಣ ಸಿಕ್ಕ ನಂತರ ಆಟದ ಮೇಲೆ ಗಮನವಿರುವುದಾದರೂ ಹೇಗೆ? 

ಈಗೀಗ ಟೆಸ್ಟ್ ಪಂದ್ಯಗಳು ಮೂರೇ ದಿನಕ್ಕೆ ಮುಗಿಯುತ್ತವೆ. ಕ್ರೀಸಿನಲ್ಲಿ ನೆಲಕಚ್ಚಿ ಆಡುವ ಆಟಗಾರರೇ ಇಲ್ಲ. ಈಗಂತೂ ಟೆಸ್ಟ್ ಡ್ರಾ ಆಗುವುದು ಬಹುಷಃ ಮಳೆ ಬಂದು ಆಟ ರದ್ದು ಆದ ಸಂದರ್ಭದಲ್ಲಿ ಮಾತ್ರ ಎಂದು ತೋರುತ್ತದೆ. ಮೊದಲು ಟೆಸ್ಟ್ ಆಟಗಾರನೊಬ್ಬ ಎರಡು ದಿನ ಬೇಕಾದರೂ ಕ್ರೀಸಿನಲ್ಲಿ ನಿಂತು ಆಟವಾಡುತ್ತಿದ್ದ. ಈಗ ಅಂತಹ ಆಟಗಾರರೇ ಕಾಣೆಯಾಗಿದ್ದಾರೆ. ಏಕೆಂದರೆ ಮೂರು ಗಂಟೆಯಲ್ಲಿ ಮುಗಿದು ಹೋಗುವ ಟಿ-ಟ್ವೆಂಟಿ ಪಂದ್ಯಗಳು ಅವರಿಗೆ ಹಣದ ರುಚಿಯನ್ನು ತೋರಿಸಿದೆ. 

ಮುಂದಿನ ದಿನಗಳಲ್ಲಿ ಐಪಿಎಲ್ ನಲ್ಲಿ ಆಡದ ಆಟಗಾರರನ್ನು ಮಾತ್ರ ರಾಷ್ಟ್ರೀಯ ತಂಡಕ್ಕೆ ಸೇರಿಸಿ ಕೊಳ್ಳಬೇಕಾಗಬಹುದೇನೋ? ಇಂಗ್ಲೆಂಡ್ ನಲ್ಲಿ ಹಿಂದೆಲ್ಲಾ ಇದೇ ರೀತಿಯ ಪರಿಸ್ಥಿತಿ ಇತ್ತು. ಅಲ್ಲಿನ ಆಟಗಾರರಿಗೆ ಕೌಂಟಿ ತಂಡಗಳಲ್ಲಿ ಆಡಲು ಮಾತ್ರ ಆಸಕ್ತಿ. ಕೌಂಟಿ ತಂಡದಲ್ಲಿ ಆಡಲು ಅವರು ರಾಷ್ಟ್ರೀಯ ತಂಡದಲ್ಲಿ ಆಟವಾಡಲು ಸಿಗುತ್ತಿದ್ದ ಅವಕಾಶವನ್ನೂ ತೊರೆಯಲು ಸಿದ್ಧರಿದ್ದರು. ಹಲವಾರು ಉತ್ತಮ ದರ್ಜೆಯ ಆಟಗಾರರು ಕೇವಲ ಕೌಂಟಿಯಲ್ಲಿ ಮಾತ್ರ ಆಟವಾಡುತ್ತಿದ್ದರು. ನಮ್ಮಲ್ಲೂ ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಬರಬಹುದೇನೋ? 

ಐಪಿಎಲ್ ಪಂದ್ಯಾಟ ಓರ್ವ ಆಟಗಾರನ ಭವಿಷ್ಯದ ಭದ್ರತೆಯ ದೃಷ್ಟಿಯಿಂದ ಒಳ್ಳೆಯದೇ. ಬಹಳಷ್ಟು ಆಟಗಾರರು ಬಡತನದ ಹಿನ್ನಲೆಯಿಂದಲೇ ಬಂದವರಾಗಿರುತ್ತಾರೆ. ಅವರಿಗೆ ಈ ಹಣಕಾಸಿನ ಭದ್ರತೆ ಜೀವನದಲ್ಲಿ ಇನ್ನಷ್ಟು ಸಾಧಿಸಲು ದಾರಿದೀಪವಾಗಬೇಕು. ಹೇಗೂ ಹಣ ಸಿಗುತ್ತದೆಯಲ್ಲಾ, ಮತ್ತೆ ಯಾಕೆ ಇನ್ನೂ ಚೆನ್ನಾಗಿ ಆಡಬೇಕು. ಹೇಗೂ ಕೋಟ್ಯಾಂತರ ರೂಪಾಯಿಗಳ ಜಾಹೀರಾತು ಇದೆ. ನಿವೃತ್ತಿಯ ನಂತರ ಕೋಚಿಂಗ್, ವೀಕ್ಷಕ ವಿವರಣೆ (ಕಮೆಂಟರಿ) ಹೀಗೆಲ್ಲಾ ಹಲವಾರು ದಾರಿಗಳು ಇವೆ. ಮತ್ತೆ ಯಾಕೆ ನೈಜ ಆಟ? ಎಂಬ ಮನಸ್ಥಿತಿಯಿಂದ ಹೊರ ಬರಬೇಕು. ತಂಡ ಗೆಲ್ಲಲು ನಮ್ಮಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡಬೇಕು. ಆಟದಲ್ಲಿ ಸೋಲು-ಗೆಲುವು ಇದ್ದದ್ದೇ. ಆದರೆ ಆಟದ ಕೊನೆಗೆ ಗೆಲುವಿಗಾಗಿ ನಾವು ಶೇಕಡಾ ೧೦೦ರಷ್ಟು ಪ್ರಯತ್ನ ಮಾಡಿದ್ದೇವೆ ಎಂಬ ಆತ್ಮ ತೃಪ್ತಿ ಇರಬೇಕು. ನಾವು ಬೇರೆ ದೇಶದ ಜೊತೆ ಆಟವಾಡುವಾಗ ದೇಶವನ್ನು ಪ್ರತಿನಿಧಿಸುತ್ತಿದ್ದೇವೆ ಎಂಬ ಹೆಮ್ಮೆ ನಮ್ಮಲ್ಲಿರಬೇಕು. 

ಚಿತ್ರ ಕೃಪೆ: ಅಂತರ್ಜಾಲ ತಾಣ