ಹಣೆ ಬರಹ
"ರೀ ಇವತ್ತು ಹೊರಗೆಲ್ಲೂ ಹೋಗಬೇಡಿ, ನಿಮ್ಮ ಭವಿಷ್ಯದಲ್ಲಿ ಅವಗಡ ಅಂತ ಬರೆದಿದೆ" ಎಂದಳು ಮಡದಿ ಪೇಪರಿನಲ್ಲಿ ಪತಿರಾಯರ ಭವಿಷ್ಯ ನೋಡುತ್ತಾ."ಸುಮ್ಮನೆ ಅದೆಲ್ಲ, ನನಗದರಲ್ಲೆಲ್ಲಾ ನಂಬಿಕೆಯಿಲ್ಲ ಬಿಡು. ಏನಿಲ್ಲ ಅವರಿಗೆ ದುಡ್ಡು ಸಿಗತ್ತೆ ಅಂತ ಏನೆಲ್ಲಾ ಬರೀತಾರೆ ಅಷ್ಟೇ, ಹಾಗೆಲ್ಲಾ ಆಗುವದಿದ್ದರೆ ಆಗಿಯೇ ಬಿಡತ್ತೆ ಹಣೆ ಬರಹ ಅಳಿಸುವರ್ಯಾರು?" ಎಂದರು ಪತಿರಾಯ ರಾಮ ರಾಯರು.
"ಆದರೂ ಜಾಗೃತೆಯಾಗಿ ಇರೋದ್ರಲ್ಲಿ ನಿಮ್ದೇನು ಹೋಗುತ್ತೆ?" ಸರಿ ಕಣೇ ಹಾಗೇ ಇರ್ತೀನಿ ಸಮಾಧಾನವಾಯ್ತಾ?"
ರಾಯರು ಹೆಂಡತಿಯ ಸಮಾಧಾನಕ್ಕಾಗಿ ಸ್ಕೂಟರ್ ಸರ್ವೀಸ್ಸಿಗೆ ಕೊಟ್ಟರು. ಆಫ಼ೀಸಿಗೆ ಸುಳ್ಳು ಹೇಳಿ ರಜೆ ಹಾಕಿದರು.
ಮನೆಯಲ್ಲಿಯೇ ಟೈಮ್ ಪಾಸ್ ಮಾಡಿದ್ದರು.
ಸಂಜೆ ಏಳೂವರೆಗೆ ಸರ್ವೀಸ್ಸಿನವನಿಂದ ಫೋನ್ ಬಂತು
"ಬೇಗ ಬನ್ನಿ ಸಾರ್ ನಾನು ಮನೆಗೆ ಬೇಗ ಹೋಗ ಬೇಕಿದೆ"
ಮನೆಯಿಂದ ಬರೇ ಒಂದೂವರೆ ಕಿ ಮೀ ಅಷ್ಟೇ. ಆದ್ರೂ ಬಸ್ಸು ಹತ್ತಿದರು. ಹತ್ತಿದ ಮೇಲೆ ನೆನಪಾಯ್ತು. ಸರ್ವೀಸಿನವನ ಅಂಗಡಿಯಿರುವಲ್ಲಿ ಬಸ್ಸು ನಿಲ್ಲಲ್ಲ, ಸ್ವಲ್ಪ ಮುಂದೆ ನಿಲ್ಲುತ್ತೆ, ಆದರೇನು, ಅಲ್ಲೇ ಸ್ವಲ್ಪ ಹಿಂದೆ ಒಂದು ತಡೆಯುಬ್ಬು ಬರುತ್ತೆ ( ರೋಡ್ ಹಂಪ್) ಹೇಗಿದ್ದರೂ ಬಸ್ ನವ ಅಲ್ಲಿ ನಿಧಾನ ಮಾಡಿಯೇ ಮಾಡ್ತಾನೆ ಅಲ್ಲಿಯೇ ಇಳಿದರಾಯ್ತು.
ಅವರ ಆಲೋಚನೆ ಮುಗಿಯುವುದರಲ್ಲಿ ತಡೆಯುಬ್ಬು ಬಂತು ಗಾಡಿ ನಿಧಾನವಾದದ್ದೂ ಆಯ್ತು, ಆದರೆ ರಾಯರು ಇಳಿಯುವ ಯೋಚನೆ ಮಡಿದ್ದು ನಿಧಾನ ವಾಯ್ತು, ರಾಯರು ಕೆಳಗಿಳಿಯುವ ಹೊತ್ತಿಗೆ ಬಸ್ ವೇಗ ಪಡೆದುಕೊಂಡಾಗಿತ್ತು.
ಭವಿಷ್ಯವಾಣಿ ನಿಜವಾಯ್ತು.