ಹಣ್ಣುತರಕಾರಿಗಳಲ್ಲಿ ಪೀಡೆನಾಶಕಕ್ಕೆ ಅಂಕುಶ

ಹಣ್ಣುತರಕಾರಿಗಳಲ್ಲಿ ಪೀಡೆನಾಶಕಕ್ಕೆ ಅಂಕುಶ

ಡೆಲ್ಲಿ ಮಾರುಕಟ್ಟೆಯಲ್ಲಿ ಮಾರುವ ಹಣ್ಣುತರಕಾರಿಗಳಲ್ಲಿ ಅಪಾಯಕಾರಿ ಮಟ್ಟದ ರಾಸಾಯನಿಕ ಪೀಡೆನಾಶಕ (ಪೆಸ್ಟಿಸೈಡ್)ಗಳ ಅಂಶಗಳಿವೆ ಎಂಬುದು ಪತ್ತೆಯಾದದ್ದು ೨೦೧೦ರಲ್ಲಿ. ಅದಾಗಿ ಎರಡು ವರುಷಗಳ ನಂತರ, ಈಗ ಕೇಂದ್ರ ಸರಕಾರವು ಪರಿಣತರ ಸಮಿತಿಯೊಂದನ್ನು ರಚಿಸಿದೆ - ಆಹಾರವಸ್ತುಗಳಲ್ಲಿ ಪೀಡೆನಾಶಕಗಳ ವಿಷಾಂಶ ನಿವಾರಣೆಗೆ ನೀತಿ ನಿರೂಪಣೆಗಾಗಿ.

ಡೆಲ್ಲಿ ಹೈಕೋರ್ಟಿನ ಆದೇಶದ ಅನುಸಾರ ಕೃಷಿ ಮಂತ್ರಾಲಯವು ೭ ಸದಸ್ಯರ ಸಮಿತಿಯೊಂದನ್ನು ಮಾರ್ಚ್ ೨೦೧೨ರಂದು ರಚಿಸಿದೆ. ಕೇಂದ್ರ ಪೀಡೆನಾಶಕ ಪ್ರಯೋಗಾಲಯದ ವೈದ್ಯಕೀಯ ವಿಷಶಾಸ್ತ್ರ ವಿಭಾಗದ ಸರಿತಾ ಭಲ್ಲಾ ಈ ಸಮಿತಿಯ ಮುಖ್ಯಸ್ಥರು. ಆಹಾರವಸ್ತುಗಳಲ್ಲಿ ನಿಗದಿತ ಅವಧಿಗೊಮ್ಮೆ ಪೀಡೆನಾಶಕಗಳ ವಿಷಾಂಶಗಳನ್ನು ಪತ್ತೆಮಾಡುವ ಬಗ್ಗೆ ನೀತಿ (ಪಾಲಿಸಿ) ನಿರೂಪಣೆ ಮಾಡಬೇಕೆಂದು ಸಮಿತಿಗೆ ಸೂಚಿಸಲಾಗಿದೆ. ಈ ನೀತಿಯು ಇಡೀ ದೇಶದಲ್ಲಿ ಜ್ಯಾರಿಯಾಗುತ್ತದೆ ಎಂದು ನಿರೀಕ್ಷೆ.

೨೦೧೦ರಲ್ಲಿ "ಕನ್‍ಸ್ಯೂಮರ್ ವಾಯ್ಸ್" ಎಂಬ ಡೆಲ್ಲಿಯ ಸರಕಾರೇತರ ಸಂಸ್ಥೆಯು ಪ್ರಕಟಿಸಿದ ವರದಿಯ ಆಧಾರದಿಂದ ಡೆಲ್ಲಿ ಹೈಕೋರ್ಟ್ ಈ ಪ್ರಕರಣವನ್ನು ತಾನಾಗಿಯೇ ಕೈಗೆತ್ತಿಕೊಂಡಿತ್ತು. ಆ ವರದಿಯ ಪ್ರಕಾರ, ಡೆಲ್ಲಿಯ ಮಾರುಕಟ್ಟೆಗಳಿಂದ ಖರೀದಿಸಿದ ೩೫ ಬಗೆಯ ಹಣ್ಣುತರಕಾರಿಗಳಲ್ಲಿ ನಿಷೇಧಿತ ಪೀಡೆನಾಶಕಗಳ ಅಂಶವು ಪ್ರಾಣಾಪಾಯದ ಮಟ್ಟದಲ್ಲಿತ್ತು. ಉದಾಹರಣೆಗೆ, ಹಣ್ಣುತರಕಾರಿಗಳಿಗೆ ರೈತರು ಸಿಂಪಡಿಸುವ ಪೀಡೆನಾಶಕಗಳ ಪ್ರಮಾಣವು, ಯುರೋಪಿನಲ್ಲಿ ಇದಕ್ಕಾಗಿ ನಿಗದಿಪಡಿಸಿದ ಪ್ರಮಾಣಗಳಿಗಿಂತ ೭೫೦ ಪಟ್ಟು ಅಧಿಕ! ಆ ಅಧ್ಯಯನದಲ್ಲಿ ಪತ್ತೆಯಾದ ಒಂದು ನಿಷೇಧಿತ ಪೀಡೆನಾಶಕ ಹೆಪ್ಟಾಕ್ಲೋರ್; ಇದು ಯಕೃತ್ತಿಗೆ ಹಾನಿಮಾಡಬಲ್ಲದು.

ಕನ್ಸೂಮರ್ ವಾಯ್ಸ್ ಸಂಸ್ಥೆಯ ಶಿಶಿರ್ ಘೋಷ್ ಹೀಗೆನ್ನುತ್ತಾರೆ, "ಪೀಡೆನಾಶಕಗಳನ್ನು ರೈತರು ಅಸಡ್ಡೆಯಿಂದ ಬಳಸುವುದನ್ನು ತಡೆಯಲು ಸರಕಾರಕ್ಕೆ ಇಷ್ಟವಿಲ್ಲ. ಇಲ್ಲವಾದರೆ, ಇದಕ್ಕಾಗಿ ನೀತಿ ನಿರೂಪಣೆ ಮಾಡಲಿಕ್ಕಾಗಿ ಸಮಿತಿ ರಚಿಸಲು ಎರಡು ವರುಷ ವಿಳಂಬ ಮಾಡಬೇಕಿತ್ತೇ?"

ಹೈದರಾಬಾದಿನ ರಾಷ್ಟ್ರೀಯ ಪೋಷಕಾಂಶ ಸಂಸ್ಥೆ (ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್) ಜನವರಿ ೨೦೧೨ರಲ್ಲಿ ನಡೆಸಿದ ಅಧ್ಯಯನದಲ್ಲಿಯೂ ಪೀಡೆನಾಶಕಗಳು ಪ್ರಾಣಕ್ಕೆ ಕಂಟಕವಾಗುವ ವಿಷಯ ಬಹಿರಂಗವಾಗಿದೆ. ಅಲ್ಲಿನ ರೈತ ಬಜಾರ್ ಮತ್ತು ದಾರಿಬದಿಯ ತರಕಾರಿ ವ್ಯಾಪಾರಿಗಳಿಂದ ಖರೀದಿಸಿದ ಹಣ್ಣುತರಕಾರಿಗಳೂ ವಿಷಮಯವಾಗಿದ್ದವು. ಅವುಗಳಲ್ಲಿ ಅಂತರಾಷ್ಟ್ರೀಯ ಗರಿಷ್ಠ ಶೇಷಾಂಶ ಮಟ್ಟ (ಮ್ಯಾಕ್ಸಿಮಂ ರೆಸಿಡುಯಲ್ ಲೆವೆಲ್)ಕ್ಕಿಂತ ಜಾಸ್ತಿ ಪ್ರಮಾಣದ ಪೀಡೆನಾಶಕಗಳು ಪತ್ತೆಯಾದವು. ಈ ಅಧ್ಯಯನದ ವರದಿಯು ಫುಡ್ ರೀಸರ್ಚ್ ಇಂಟರ್‍ನ್ಯಾಷನಲ್ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಬದನೆ, ಬೆಂಡೆ, ಟೊಮೆಟೊ, ಮೆಣಸು ಮತ್ತು ಹೂಕೋಸುಗಳನ್ನು ಅಧ್ಯಯನ ತಂಡದವರು ಪರೀಕ್ಷೆ ಮಾಡಿದ್ದರು. ಅತ್ಯಂತ ಜಾಸ್ತಿ ವಿಷಮಯವಾಗಿದ್ದ ಬೆಂಡೆಕಾಯಿಯಲ್ಲಿ ಆರ್ಗನೋಫೊಸ್ಪೇಟ್ ಗುಂಪಿನ ೧೮ ವಿಧದ ಪೀಡೆನಾಶಕಗಳ ವಿಷಾಂಶಗಳಿದ್ದವು!

ಮನುಷ್ಯರು, ಪ್ರಾಣಿಗಳು ಮತ್ತು ಕೀಟಗಳ ನರಮಂಡಲ ಕೆಲಸ ಮಾಡಬೇಕಾದರೆ ಒಂದು ಕಿಣ್ವ (ಎನ್‍ಜೈಮ್) ಅತ್ಯಗತ್ಯ. ಈ ಕಿಣ್ವವನ್ನು ಮುಂದೆಂದೂ ಸರಿಪಡಿಸಲಾಗದಂತೆ ಆರ್ಗನೋಫೊಸ್ಪೇಟ್ ನಿಷ್ಕ್ರಿಯಗೊಳಿಸುತ್ತದೆ. ಈ ಪೀಡೆನಾಶಕಗಳ ಸಂಪರ್ಕವು ದೀರ್ಘಕಾಲ ಇದ್ದರೆ, ಅದರಿಂದಾಗಿ ನರಮಂಡಲ ವಿಷಮಯವಾಗುತ್ತದೆ ಎಂದು ಅಧ್ಯಯನ ತಂಡದ ಮುಖ್ಯಸ್ಥರು ತಿಳಿಸಿದ್ದಾರೆ. ನಮ್ಮ ದೇಶದಲ್ಲಿ ಪೀಡೆನಾಶಕಗಳ ವಿವೇಚನಾರಹಿತ ಬಳಕೆಗೆ, ಈ ಬಗ್ಗೆ ನೀತಿ-ನಿಯಮ-ನಿಯಂತ್ರಣ ಇಲ್ಲದಿರುವುದೇ ಕಾರಣವಲ್ಲವೇ?