ಹಣ್ಣು ತರಕಾರಿಗಳ ಕಟಾವು, ಸಾಗಾಟ ಮತ್ತು ತೂಕದಲ್ಲಿ ಎಚ್ಚರ ಅಗತ್ಯ

ಹಣ್ಣು ತರಕಾರಿಗಳ ಕಟಾವು, ಸಾಗಾಟ ಮತ್ತು ತೂಕದಲ್ಲಿ ಎಚ್ಚರ ಅಗತ್ಯ

ಕೃಷಿಕರು ತಾವು ಬೆಳೆದ ಉತ್ಪನ್ನವನ್ನು ಮಾರುಕಟ್ಟೆಗೆ ಸಾಗಾಣಿಕೆ ಮಾಡಿ ಮಾರಾಟ ಮಾಡುವಾಗ ಕಳೆದುಕೊಳ್ಳುವ ತೂಕ ನಷ್ಟ ಶೇ. ೫ ರಿಂದ ೧೦.  ಕಾರಣ ಸರಿಯಾದ ಸಮಯದಲ್ಲಿ ಕಟಾವು ಮತ್ತು ಸಾಗಾಣಿಕೆ  ಮಾಡದೆ ಇರುವುದು. ಸಾಮಾನ್ಯವಾಗಿ ಕೃಷಿಕರು ತಮ್ಮ ಉತ್ಪನ್ನವನ್ನು ಕಟಾವು ಮಾಡುವುದು ಹೊತ್ತು ಏರಿದ ನಂತರ. ೯ ಗಂಟೆಗೆ ಕೆಲಸದವರು ಬಂದರೆ, ಅವರು ಸುಧಾರಿಸಿಕೊಂಡು ಬಿಸಿಲು ನೆತ್ತಿಗೇರುತ್ತಿರುವಾಗ ಕೆಲಸ ಪ್ರಾರಂಭವಾಗಿ ಸಂಜೆ ೫ ಗಂಟೆ ತನಕ ಕೆಲಸ ಮಾಡುತ್ತಾರೆ. ಕಟಾವು ಮಾಡಿ ತಂದು ರಸ್ತೆ ಅನುಕೂಲವಿರುವ ಕಡೆ ಪೇರಿಸಿಟ್ಟು ಅದಕ್ಕೆ ಬಿಸಿಲು ಬೀಳುವುದಿದ್ದರೆ ಪ್ಲಾಸ್ಟಿಕ್ ಮುಚ್ಚುತ್ತಾರೆ. ಗೊನೆ ಕಟಾವು ಮಾಡುವಾಗಲೂ ಗೊನೆ ಬುಡವನ್ನು ಹೆಣಿಗೆಯ ಹತ್ತಿರದಿಂದಲೇ ಕತ್ತರಿಸುತ್ತಾರೆ. ಲೋಡು ಮಾಡುವಾಗ, ಮೇಲಕ್ಕೆ ಎಸೆಯುವುದು, ವಾಹನದಲ್ಲಿ ಯಾವುದೇ ಮೆತ್ತೆ ಹಾಸು ಇಲ್ಲದೇ ಹೇರುವುದು ಮಾಡುತ್ತಾರೆ. ಬೆಳೆಸಿದವನಿಗೆ ಮಾರಿ ಅದರ ಹಣ ಪಡೆಯಬೇಕೆಂಬ ತರಾತುರಿ. ಕೆಲಸದವನಿಗೆ ಬೇಗ ಕೆಲಸ ಮುಗಿಸಿ ಸಂಬಳ ಪಡೆಯುವ ತರಾತುರಿ.  ಇಬ್ಬರ ಆಲೋಚನೆಗಳೂ ಸರಿಯೇ. ಆದರೆ ಈ ರೀತಿ ಮಾಡುವುದರಿಂದ ಕೃಷಿ ಉತ್ಪನ್ನಗಳ ಗುಣಮಟ್ಟ ಕಡಿಮೆಯಾಗುತ್ತದೆ, ಜೊತೆಗೆ ತೂಕವೂ ಕಡಿಮೆಯಾಗುತ್ತದೆ.

ಯಾವುದೇ ಕೃಷಿ ಉತ್ಪನ್ನವಿದ್ದರೂ ಅದನ್ನು ನಾಜೂಕಾಗಿ ಹಿಡಿದಾಡಿ ನೋಟ ಕೆಡದ ಸ್ಥಿತಿಯಲ್ಲಿ ಮಾರಾಟ ಮಾಡಿದರೆ ಆ ಬೆಳೆಗಾರನ ಉತ್ಪನ್ನಕ್ಕೆ ಯಾವಾಗಲೂ ಸ್ವಲ್ಪ ಹೆಚ್ಚಿನ ದರ ದೊರೆಯುತ್ತದೆ. ಈ ನಾಜೂಕುತನ ಅವನ ಉತ್ಪನ್ನಕ್ಕೆ ಮುಂದಿನ ಸಾರಿಯೂ ಬೇಡಿಕೆ ತಂದುಕೊಡುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ರೈತರೂ ಗಮನ ಹರಿಸಬೇಕಾಗಿದೆ.

ಇಂತಹ ರೈತರು ಬೆಳೆದ ಉತ್ಪನ್ನವಾದರೆ ಅದರ ಗುಣಮಟ್ಟದ ಬಗ್ಗೆ ಮಾತಾಡಲಿಕ್ಕಿಲ್ಲ ಎಂಬಂತಿರಬೇಕು ನಾವು ಉತ್ಪಾದಿಸುವ ಉತ್ಪನ್ನ. ನಮ್ಮ ರೈತರು ಬೆಳೆಯುವ ಕೃಷಿ ಉತ್ಪನ್ನಗಳು ಗ್ರಾಹಕರ ಕೈ ಸೇರುವಾಗ ತಾಜಾತನ ಕೆಡುವುದಕ್ಕೆ  ರೈತರಷ್ಟೇ ಅಲ್ಲ, ವ್ಯಾಪಾರಿಗಳೂ, ದಳ್ಳಾಳಿಗಳೂ, ಬಿಡಿ ಮಾರಾಟಗಾರೂ ಕಾರಣರಾಗಿರುತ್ತಾರೆ. ಕಟಾವು ಗುತ್ತಿಗೆ ನೀಡುವಾಗ ಗುತ್ತಿಗೆದಾರರೂ ಮೃದುವಾಗಿ ನಿರ್ವಹಣೆ ಮಾಡುವುದಿಲ್ಲ. ಕೊಯಿಲಿನ ಸಮಯದಲ್ಲಿ ನೆಲಕ್ಕೆ ಬೀಳಿಸುವುದು, ಗಾಯಗಳಾಗುವುದು, ತುಂಡಾಗುವುದು ಆದರೆ, ನಂತರ ಲೋಡು ಮಾಡುವಾಗ ಅಡ್ಡಕ್ಕೆ ಒಂದರ ಮೇಲೆ ಒಂದು ಹೇರುವುದು, ಒಂದಕ್ಕೊಂದು ತಾಗುತ್ತಿರುವುದು, ಲಾರಿ, ಇಲ್ಲವೇ ಇನ್ಯಾವುದಾದರೂ ವಾಹನದಲ್ಲಿ ಯಾವುದೇ ನೆರಳು ಮಾಡದೇ ಸಾಗಣೆ ಮಾಡುವುದು, ಅಲ್ಲಿ ಬಿಸಿಲಿಗೆ ಬಿಸಿಯಾಗಿ, ಧೂಳು ಹಿಡಿದು, ಮೇಲಿನಿಂದ ಎತ್ತಿ ಎತ್ತಿ ಹಾಕುವುದು ಮಾಡುತ್ತಾರೆ. ಇದರಿಂದ ಒಟ್ಟಾರೆಯಾಗಿ ಇಂತಿಷ್ಟು ಶೇಕಡಾ ವೇಸ್ಟೇಜ್ ಎಂದು ಪರಿಗಣಿಸಲ್ಪಡುತ್ತದೆ. ಬೇಗನೆ ಹಣ್ಣಾಗುತ್ತದೆ, ನೋಟ ಕೆಡುತ್ತದೆ. ಇದೆಲ್ಲವೂ ರೈತನ ಮೇಲೆ ಬೀಳುವ ಹೊರೆಯೇ ಹೊರತು ನಂತರದ ಹಂತದ ಯಾರಿಗೂ ನಷ್ಟ ಇಲ್ಲ. ಉದಾಹರಣೆಗೆ ಸಪೋಟಾ ಅಥವಾ ಚಿಕ್ಕು ಹಣ್ಣು. ಈ ಹಣ್ಣನ್ನು ಕೊಯ್ಯುವಾಗ ಜಾಗರೂಕತೆ ವಹಿಸದೆ ಇದ್ದರೆ ಎಲ್ಲಾ  ಹಣ್ಣುಗಳ ಮೈಮೈಲೆ ಅದರ ಹಾಲಿನಂತಹ ಮೇಣ ಹರಿದು ಇದಕ್ಕೆ ಗ್ರಾಹಕರೇ ಕಮ್ಮಿಯಾಗುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಗ್ರಾಹಕರು ಹೊರನೋಟವನ್ನು ಗಮನಿಸಿಯೇ ಹಣ್ಣು ತರಕಾರಿಗಳನ್ನು ಕೊಳ್ಳುತ್ತಾರೆ.

ರಾತ್ರಿ ಹೊತ್ತು ಸಸ್ಯಗಳ ಎಲೆಗಳ ಮೂಲಕ ಭಾಷ್ಪೀಕರಣ ನಡೆಯುವುದಿಲ್ಲ. ಅದಕ್ಕಾಗಿಯೇ ರಬ್ಬರ್ ಟ್ಯಾಪಿಂಗ್ ಮಾಡುವಾಗ ಬೇಗ (ನಸುಕಿನಲ್ಲಿ) ಟ್ಯಾಪಿಂಗ್ ಮಾಡಬೇಕೆನ್ನುವುದು. ತಡವಾದರೆ ಹಾಲು ಕಡಿಮೆಯಾಗುತ್ತದೆ. ಸೂರ್ಯನ ಬೆಳಕು ಬಿದ್ದ ತಕ್ಷಣ ಎಲೆಗಳ ಮೂಲಕ ಮರದ ದ್ರವಾಂಶದ ಆವೀಕರಣ ಪ್ರಾರಂಭವಾಗುತ್ತದೆ. ಆದ ಕಾರಣ ಕೊಯಿಲಿನ ಅವಧಿಯನ್ನು ಬೆಳಗ್ಗಿನ ಹೊತ್ತಿಗೇ ಮೀಸಲಿಡಬೇಕು. ಹೆಚ್ಚು ಸಂಬಳ ನೀಡಿಯಾದರೂ ನಸುಕಿನ ವೇಳೆ ಕೊಯಿಲು ಮಾಡಿ ಸೂಕ್ತ ರೀತಿಯಲ್ಲಿ ಸಂಗ್ರಹಿಸಿದರೆ ತೂಕ ನಷ್ಟವನ್ನು ಕಡಿಮೆ ಮಾಡಬಹುದು.  

ಮುಖ್ಯವಾಗಿ ಬಾಳೆ ಗೊನೆಯನ್ನು ಒಬ್ಬ ಕಟಾವು ಮಾಡಬಾರದು. ಒಬ್ಬ ಗೊನೆಯನ್ನು ಹೆಗಲಿನಲ್ಲಿ ಆಧರಿಸಿ ಮತ್ತೊಬ್ಬ ಕಡಿಯಬೇಕು. ಕಡಿಯುವಾಗ, ಗೊನೆ ಮೂಡುವ ಬುಡದ ವರೆಗೂ ಇರುವಂತೇ ಕಡಿಯಬೇಕು. ಕಡಿದ ಮೇಲೆ ನೆರಳಿನಲ್ಲಿ  ಸ್ವಲ್ಪ ಸಮಯದ ತನಕ ಇಟ್ಟು ತಂಪಾದ ಮೇಲೆ ಗ್ರೇಡಿಂಗ್ ಮಾಡಿ ನಂತರ ತೊಟ್ಟು ಕಡಿಯಬೇಕು. ಕಡಿಯುವ ಹೊತ್ತಿನ ತಾಪಮಾನವೂ ಪ್ರಮುಖ್ಯ. ತಾಪಮಾನ ಏರುವ ಹೊತ್ತಿನಲ್ಲಿ ಕಡಿಯುವುದಕ್ಕಿಂತ ಇಳಿಯುವ ಹೊತ್ತಿನಲ್ಲಿ ಕಡಿಯುವುದು ಸೂಕ್ತ. ಗೊನೆಯ ಕಾಯಿಗಳಿಗೆ ಹಾಗೂ ಇನ್ನಿತರ ಭಾಗಗಳಿಗೆ ಗಾಯಗಳಾದರೆ ಸಾಕಷ್ಟು ತೇವಾಂಶ ನಷ್ಟವಾಗುತ್ತದೆ. ಕೊಯಿಲಿನ ಸಮಯದಲ್ಲಿ ವಾತಾವರಣದಲ್ಲಿ ಆರ್ಧ್ರತೆಯು ೭೦ ರಿಂದ ೧೦೦ % ತನಕ ಇದ್ದರೆ ಒಳ್ಳೆಯದು. ಕಟಾವು ಮಾಡುವ ಸಮಯದಲ್ಲಿ ಹೊಲದಲ್ಲಿ ಅಲ್ಲಲ್ಲಿ ಉತ್ತಮ ನೆರಳು ಇರುವ ತಾತ್ಕಾಲಿಕ ಶೆಡ್ ನಿರ್ಮಿಸಿ ಅಲ್ಲಿ ದಾಸ್ತಾನು ಮಾಡುವುದು ಉತ್ತಮ. ಪ್ಲಾಸ್ಟಿಕ್ ಶೀಟು  ಹೊದಿಸಿದ ಶೆಡ್ ಸೂಕ್ತವಲ್ಲ. ಇದರಿಂದ ತೇವಾಂಶ ಆವಿಯಾಗುವುದು ಜಾಸ್ತಿ. ಯಾವುದೇ ಹಣ್ಣು ಹಂಪಲು, ತರಕಾರಿ  ಕಟಾವು ಮಾಡಿ ಅದನ್ನು ತಕ್ಷಣ ನೆರಳಿಗೆ ವರ್ಗಾಯಿಸಿ ಒದ್ದೆ ಬಟ್ಟೆ ಅಥವಾ ಸೆಣಬಿನ ಚೀಲ ಮುಚ್ಚಬೇಕು. ಕಟಾವು ಮಾಡುವಾಗ ಹೊರಬರುವ ಮೇಣದಂತಹ ರಸವನ್ನು ತೆಗೆಯುವುದಕ್ಕಾಗಿ ನೀರಿನಲ್ಲಿ ತೊಳೆಯುವುದು ಉತ್ತಮ. ತೊಳೆದ ಮೇಲೆ ಗಾಳಿಯಲ್ಲಿ ನೀರಿನ ಅಂಶ ಆರುವಂತೆ ಮಾಡಬೇಕು. ಸಾಗಾಣಿಕೆ ಮಾಡುವಾಗ, ದಾಸ್ತಾನು ಮಾಡುವಾಗ  ೧೩ ಡಿಗ್ರಿಯಿಂದ ೧೫ ಡಿಗ್ರಿ ತಾಪಮಾನ ಮತ್ತು ೭೦ ರಿಂದ ೮೦% ಆರ್ದ್ರತೆ ಇದ್ದರೆ ಉತ್ತಮ. ರಪ್ತು ಉದ್ದೇಶದ ಕಾಯಿಗಳನ್ನು ಯಾವುದೇ ರೀತಿ ಕೊಯ್ಲೋತ್ತರ ರೋಗಗಳಿಗೆ ತುತ್ತಾಗದಂತೆ ತಡೆಯಬೇಕು. ಇದಕ್ಕೆ ಕೆಲವು ನಿಷೇಧಿತ ರಾಸಾಯನಿಕಗಳು ಪರಿಣಾಮಕಾರಿಯಾದರೂ ಅದನ್ನು ಬಳಕೆ ಮಾಡುವುದು ಸೂಕ್ತವಲ್ಲ. ಕಟಾವು ಮಾಡುವಾಗ ಮತ್ತು ನಂತರ ದಾಸ್ತಾನು ಮಾಡುವಾಗ ರೋಗದ ಸೋಂಕು ತಗಲದಂತೆ ಸೂಕ್ತ ಸ್ವಚ್ಚತೆಗೆ ಗಮನ ನೀಡಬೇಕು. ಹಾನಿ ರಹಿತ ಉಪಚಾರಗಳಾದ ಬಿಸಿ ನೀರಿನ (೫೫ ಡಿಗ್ರಿ) ಉಪ್ಪು ನೀರಿನ ಉಪಚಾರ ಮಾಡಿ ಪ್ಯಾಕಿಂಗ್ ಮಾಡಬೇಕು. ಪ್ಯಾಕಿಂಗ್ ಮಾಡುವಾಗ ಕಾಗದ ಚೂರು ಅಥವಾ ಒಣಗಿದ ಭತ್ತದ ಹೊಟ್ಟು ಹಾಕುವುದರಿಂದ ತಾಪಮಾನದ ಏರಿಳಿತವು ಕಾಯಿಯ ಮೇಲೆ ಪರಿಣಾಮ ಬೀರಲಾರದು. 

ಕಾಯಿಗಳನ್ನು ಸಾಂಪ್ರದಾಯಿಕವಾಗಿ ಮುಚ್ಚಿದ ಮನೆಯೊಳಗೆ ತುಂಬಿ ಹೊಗೆ ಹಾಕಿ ೨೪ ಗಂಟೆ ಒಳಗಿಟ್ಟು ನಂತರ ಹೊರಗೆ ತೆಗೆದ ೧೨ ಗಂಟೆಯಲ್ಲಿ ಅದು ಏಕ ಪ್ರಕಾರವಾಗಿ ಬಣ್ಣ ಬಂದು ಹಣ್ಣಾಗಿರುತ್ತದೆ. ಕೆಲವರು ಬೇವಿನ ಎಲೆ, ಗ್ಲೆರಿಸೀಡಿಯಾದ ಎಲೆಗಳಿಂದ ಮುಚ್ಚಿ ಹಣ್ಣು ಮಾಡುತ್ತಾರೆ. ಈ ವಿಧಾನಗಳಲ್ಲಿ ಬೆವರುವ ಕಾರಣದಿಂದ ೫ ರಿಂದ ೧೦ ಶೇಕಡಾ ತೂಕ ನಷ್ಟವಾಗುತ್ತದೆ. ಬೆವರಿಸಿ ಹಣ್ಣು ಮಾಡುವಾಗ ರಸ ಬೆವರಿ ತೂಕ ನಷ್ಟ ಉಂಟಾಗುತ್ತದೆ. ಇದಕ್ಕೆ ಮತ್ತೊಂದು ಪರಿಹಾರ ಇಥೆಲೀನ್ ಮೂಲಕ ಹಣ್ಣು ಮಾಡುವುದು. 100ಪಿಪಿಎಂನ ಇಥೆಲಿನ್ ದ್ರಾವಣವನ್ನು ಮಾಡಿಕೊಂಡು ಅದನ್ನು ಹಣ್ಣು ಮಾಡುವ ಕೋಣೆಯಲ್ಲಿ ಒಂದು ತೆರೆದ ಪಾತ್ರೆಯಲ್ಲಿ ಇಟ್ಟು ಕೋಣೆಯನ್ನು ಗಾಳಿ ಹೊರಬರದಂತೆ ಮುಚ್ಚಿದಾಗ ಇಥೆಲೀನ್ ಅನಿಲದಿಂದ ಕಾಯಿಗಳು ಏಕ ಪ್ರಕಾರವಾಗಿ ಹಣ್ಣಾಗುತ್ತವೆ. ಇಥೆಲೀನ್ ಆರೋಗ್ಯಕ್ಕೆ ಹಾನಿಕರವಲ್ಲ. ಆದರೂ ಅಧಿಕ ಬಳಕೆ ಮಾಡದಿರುವುದು ಉತ್ತಮ.

ನಮ್ಮ ರೈತರು ಬಹಳ ಶ್ರಮಪಟ್ಟು ಬೆಳೆ ಬೆಳೆಸುತ್ತಾರೆ. ಕೊಯಿಲಿನ ಸಮಯದಲ್ಲಿ ಅವಸರ ಮಾಡುತ್ತಾರೆ. ಅದಕ್ಕೆ  ಕಾರಣವೂ ಸಾಕಷ್ಟು ಇದೆ. ಬೆಲೆ ಅನುಕೂಲತೆ, ಹಣಕಾಸಿನ ಅಡಚಣೆ, ಬೆಲೆ ಇಳಿಕೆ ಮುಂತಾದ ಭಯದಲ್ಲಿ ಬೇಗ ಕೊಯಿಲು ಮಾಡುವುದು, ಕೊಯಿಲಿನಲ್ಲಿ ಅಜಾಗರೂಕತೆ ಮಾಡುವುದು, ಬೆಳೆ ಹಾಳು ಮಾಡುವುದು ಮಾಡುತ್ತಾರೆ. ಇದರಿಂದ ೧೦-೧೫ ಶೇಕಡ ನಷ್ಟ ರೈತರಿಗೆ ಆಗುತ್ತದೆ. ಆದುದರಿಂದ ಕೊಯಿಲು ಮತ್ತು ಸಾಗಾಟದ ಸಮಯದಲ್ಲಿ ಜಾಗರೂಕತೆ ಅತ್ಯವಶ್ಯಕ.  

ಚಿತ್ರ ಕೃಪೆ: ಅಂತರ್ಜಾಲ ಕೃಪೆ