ಹಣ್ಣು-ತರಕಾರಿಗಳ ಚಮತ್ಕಾರ

ಹಣ್ಣು-ತರಕಾರಿಗಳ ಚಮತ್ಕಾರ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಗುರುಶಾಂತ ಲಿಂಬಿತೋಟ
ಪ್ರಕಾಶಕರು
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ -೫೮೦೦೨೦
ಪುಸ್ತಕದ ಬೆಲೆ
ರೂ.೪೦.೦೦, ಮುದ್ರಣ: ೨೦೧೯

ಆಯುರ್ವೇದ ರತ್ನ ಡಾ. ಗುರುಶಾಂತ ಲಿಂಬಿತೋಟ ಇವರು ಸುಮಾರು ೪೦ ಬಗೆಯ ಹಣ್ಣು ಹಾಗೂ ತರಕಾರಿಗಳ ಔಷಧೀಯ ಗುಣಗಳನ್ನು ಸವಿವರವಾಗಿ ನೀಡಿದ್ದಾರೆ. ನಮ್ಮದೇ ತೋಟದ ಹಣ್ಣುಗಳು ಅಥವಾ ತರಕಾರಿಗಳು ನಮಗೆಷ್ಟು ಪ್ರಯೋಜನಕಾರಿ ಎಂಬುದಾಗಿ ವಿವರಿಸಿದ್ದಾರೆ. ಡಾ. ಸುನೀತಾ ಲಿಂಬಿತೋಟ ಇವರು ಪುಸ್ತಕದ ಪ್ರಾರಂಭದಲ್ಲಿ ಹಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವುಗಳೆಂದರೆ…

* ಹಸಿರು ತರಕಾರಿ ಸೇವನೆ ಆರೋಗ್ಯದ ಹಿತದೃಷ್ಟಿಯಿಂದ ಅತ್ಯವಶ್ಯಕವಾಗಿದೆ. ಆದರೆ ಹಣ್ಣು-ತರಕಾರಿಗಳನ್ನು ಚೆನ್ನಾಗಿ ತೊಳೆಯದೆ ಉಪಯೋಗಿಸಿದರೆ ‘ನರ ವ್ಯವಸ್ಥೆ’ಯ ಮೇಲೆ ಸೋಂಕು ಬರುವ ಸಂಭವವಿರುತ್ತದೆ. ಈ ರೋಗ ಹಂದಿಗಳಲ್ಲಿರುವ ‘ಟೆನಿಮಾಸೋಲಿಯಮ್' ಕ್ರಿಮಿಗಳಿಂದ ಬರುತ್ತದೆ.

* ತರಕಾರಿಗಳಿಗಾಗಿ ಕೆಂಪು, ತಾಜಾ ಟೊಮೆಟೊ ಹಣ್ಣು ತೆಗೆದುಕೊಳ್ಳಬೇಕು, ಹಸಿರು ಅಥವಾ ಹಳದಿ ವರ್ಣದ ಟೊಮೆಟೊ ಸೇವಿಸಕೂಡದು.

* ಕಾಲರಾ ಅವಧಿಯಲ್ಲಿ ಮತ್ತು ಅತಿ ಉಷ್ಣ ಕಾಲದಲ್ಲಿ ಅಧಿಕ ಕರಬೂಜ ಸೇವನೆ ಕೂಡದು ಮತ್ತು ಅತಿ ಉಷ್ಣ ಪದಾರ್ಥಗಳನ್ನು ಸೇವಿಸಕೂಡದು, ಅದರಿಂದ ಉದರ, ಕರುಳು ಹಾಗೂ ಕಣ್ಣುಗಳಿಗೆ ಹಾನಿಯಾಗಬಹುದು. 

* ಹೆಚ್ಚು ಮಾವಿನ ಹಣ್ಣಿನ ಸೇವನೆಯಿಂದ ಅಜೀರ್ಣತೆಯಾದರೆ ಜಾಮೂನು (ನೇರಳೆ) ಹಣ್ಣು ಸೇವಿಸಬೇಕು.

* ಅಧಿಕ ದ್ರಾಕ್ಷಿ ತಿನ್ನುವುದರಿಂದ ಉದರದಲ್ಲಿ ಹಿಡಿದಂತೆ, ಶಬ್ಧವಾಗುತ್ತಿದ್ದರೆ ಸ್ವಲ್ಪ ಸೋಂಪು ಜಗಿಯಬೇಕು.

* ಅತಿಯಾದ ಬಾಳೆಹಣ್ಣು ತಿಂದು ಉದರದಲ್ಲಿ ಚುಚ್ಚಿದಂತೆ ನೋವು ಬರುತ್ತಿದ್ದರೆ ಏಲಕ್ಕಿಯನ್ನು ಜಗಿಯಬೇಕು. ನೋವು ಬೇಗ ನಿವಾರಣೆಯಾಗುತ್ತದೆ.

* ಹೆಚ್ಚು ಖರಬೂಜ ತಿಂದ ಮೇಲೆ ಸ್ವಲ್ಪ ಜೇನು ನೆಕ್ಕಲು ಉದರದ ಅಜೀರ್ಣತೆ, ಉದರದಲ್ಲಿಯ ಶಬ್ದ ಬರುವುದು ಕಡಿಮೆಯಾಗುತ್ತದೆ.

* ನೇರಳೆ ಹಣ್ಣು ಹೆಚ್ಚು ತಿನ್ನುವುದರಿಂದ ಅಜೀರ್ಣತೆ, ಉದರ ಭಾರವೆನಿಸುವುದು ಆಗುತ್ತಿದ್ದರೆ ಆಗ ಸ್ವಲ್ಪ ಉಪ್ಪು ನೆಕ್ಕಬೇಕು.

* ಅಧಿಕ ಪಪ್ಪಾಯಿ ತಿನ್ನುವುದರಿಂದ ತೊಂದರೆಯಾದರೆ ಸ್ವಲ್ಪ ಸಕ್ಕರೆ ತಿನ್ನಬೇಕು.

ವಿಶೇಷ ಎಚ್ಚರಿಕೆ: ಸೀತಾಫಲದ ಬೀಜಗಳಲ್ಲಿ ಒಂದು ರೀತಿಯ ಎಣ್ಣೆಯ ಅಂಶವಿರುತ್ತದೆ. ಇದು ವಿಷಯುಕ್ತವಾಗಿರುತ್ತದೆ. ಇದರ ಚೂರ್ಣ ಕಣ್ಣಿನಲ್ಲಿ ಬಿದ್ದರೆ ಕಣ್ಣುಗಳು ಉರಿಯುತ್ತವೆ. ಇದು ಕಣ್ಣುಗಳಿಗೆ ಬಹಳ ಹಾನಿಕಾರಕವಾಗಿದೆ. ಹೇನುಗಳಿಗಾಗಿ ಚೂರ್ಣವನ್ನು ತಲೆಗೆ ಹಚ್ಚುವಾಗ ಹಣ್ಣು ಮುಚ್ಚಿಕೊಳ್ಳಬೇಕು ಹಾಗೂ ಕಣ್ಣುಗಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕು ಎನ್ನುತ್ತಾರೆ.

ಪುಸ್ತಕದ ಲೇಖಕರಾದ ಡಾ. ಗುರುಶಾಂತ ಲಿಂಬಿತೋಟ ಇವರು ತಮ್ಮ ಮೊದಲ ಮಾತಿನಲ್ಲಿ ನಮಗೆ ನಿಸರ್ಗ ದಯಪಾಲಿಸಿದ ಈ ಹಾನಿ ರಹಿತ ಪದಾರ್ಥಗಳಿಂದ ನಮ್ಮ ದೈನಂದಿನ ಸಾಮಾನ್ಯ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು ಎಂದು ಅಭಿಪ್ರಾಯಪಡುತ್ತಾರೆ. 

ಈ ಪುಸ್ತಕದಲ್ಲಿ ಅಂಜೂರ, ಅವರೆ, ಕಡಲೆ, ಗಜ್ಜರಿ, ಗೆಣಸು, ಟೊಮೆಟೊ, ದಾಳಿಂಬೆ, ನಿಂಬೆ, ನುಗ್ಗೆ, ನೆಲ್ಲಿ, ಮಾವು, ಬದನೆ, ಬಟಾಟೆ, ಮೋಸಂಬಿ, ಸೀತಾಫಲ, ಸೇಬು, ಹಲಸು ಮೊದಲಾದ ಹಲವಾರು ಹಣ್ಣು ತರಕಾರಿಗಳ ಔಷಧೀಯ ಗುಣಗಳ ಬಗ್ಗೆ ವಿವರಿಸಲಾಗಿದೆ. ಈ ಒಂದು ಪುಟ್ಟ ಪುಸ್ತಕವು ನಿಮ್ಮ ಮನೆಯಲ್ಲಿದ್ದರೆ, ತುರ್ತು ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುವ ಸಾಧ್ಯತೆ ಇದೆ.