ಹಣ್ಣು ಮತ್ತು ತರಕಾರಿ ಬೆಳೆಯುವವರ ಪರಮ ಶತ್ರು- ಹಣ್ಣು ನೊಣ
ಹಣ್ಣು- ತರಕಾರಿ ಬೆಳೆಗಾರರು ಬೆಳೆದ ಎಲ್ಲಾ ಉತ್ಪನ್ನಗಳೂ ಹಾಳಾಗದೆ ಉಳಿದರೆ, ಅವರಿಗೆ ಲಕ್ಷ್ಮಿ ಒಲಿದಂತೆ. ಆದರೆ ಈ ಒಂದು ಕೀಟ ಅವರ ಪಾಲಿನ ಪರಮ ವೈರಿ. ದೇವರು ಕೊಟ್ಟರೂ ಅರ್ಚಕ ಬಿಡ ಎಂಬಂತೆ ಈ ಕೀಟ ಸಾಧ್ಯವಾದಷ್ಟೂ ತೊಂದರೆ ಮಾಡಿ ರೈತನ ಪಾಲಿಗೆ ಸಿಂಹ ಸ್ವಪ್ನವಾಗುತ್ತಿದೆ. ನಮ್ಮ ದೇಶವೂ ಸೇರಿದಂತೆ ಪ್ರಪಂಚದಾದ್ಯಂತ ರೈತ ಬೆಳೆದ ಹಣ್ಣು, ತರಕಾರಿಗಳಲ್ಲಿ ೫೦% ಕ್ಕೂ ಹೆಚ್ಚು ಕೀಟಗಳ ಪಾಲಾಗುತ್ತಿವೆ.
ಮಾವಿನ ಹಣ್ಣಿಗೆ ಮಾರುಕಟ್ಟೆಯಲ್ಲಿ ಕಿಲೋಗೆ ೧೦೦ ರೂಪಾಯಿ ಇರಬಹುದು. ಆದರೆ ರೈತನಿಗೆ ಸಿಗುವುದು ಬರೇ ರೂ.೧೦ ಮಾತ್ರ. ಬಹಳಷ್ಟು ಜನ ಹೇಳುವುದುಂಟು ಮಾರಾಟ ಮಾಡುವವರು ಮಾಡುವ ಲಾಭ ಬೆಳೆದವನಿಗಿಲ್ಲ. ಒಂದು ವರ್ಷ ವ್ಯಾಪಾರ ಮಾಡಿದರೆ ಅವನು ಮಾಡುವ ಸಂಪಾದನೆ ವರ್ಷಾನುವರ್ಷ ಕೃಷಿ ಮಾಡಿದರೂ ಮಾಡಲಿಕ್ಕಾಗುವುದಿಲ್ಲ. ವ್ಯಾಪಾರಿಗಳು ಲಾಭ ಮಾಡುವುದಿಲ್ಲ ಎಂದಲ್ಲ. ಆದರೆ ನಾವು ಹೇಳುವಂತೆ ಅಲ್ಲಿ ಪೂರ್ತಿ ಲಾಭ ಇಲ್ಲ. ಯಾಕೆ ಎನ್ನುತ್ತೀರಾ? ನಾವು ರೂ.೧೦ ಕ್ಕೆ ಮಾರಾಟ ಮಾಡುವ ಮಾವಿನ ಕಾಯಿ ಖರೀದಿ ಕೇಂದ್ರದಿಂದ ವ್ಯಾಪಾರಿಗೆ ತಲುಪುವಾಗ ೫೦% ಕ್ಕೂ ಹೆಚ್ಚು ಹಾಳಾಗಿ ತಿಪ್ಪೆ ಸೇರಿರುತ್ತದೆ. ವ್ಯಾಪಾರಿಯಲ್ಲಿ ತಂದ ದಿನವೇ ಮಾರಾಟ ಆಗಿ ಹೋದರೆ ಲಾಭ ಜಾಸ್ತಿ. ಒಂದೆರಡು ದಿನ ಉಳಿದರೆ ಅಲ್ಲಿಯೂ ಬಿಸಾಡಬೇಕಾದದ್ದೇ ಹೆಚ್ಚಾಗಿರುತ್ತದೆ. ಇದೆಲ್ಲಾ ಯಾವ ರೈತ ಮಾಡುವುದೂ ಅಲ್ಲ. ವ್ಯಾಪಾರಿ ಮಾಡುವುದೂ ಅಲ್ಲ. ಹಣ್ಣು- ತರಕಾರಿಗಳನ್ನು ಹುಡುಕಿಕೊಂಡು ಕೆಡಿಸುವ ಒಂದು ಕೀಟ ಹಣ್ಣು ನೊಣ ಮಾಡುವಂತದ್ದು. ಈ ಹಣ್ಣು ನೊಣಕ್ಕೆ ಸಿಹಿ ಹಣ್ಣುಗಳೇ ಆಗಬೇಕೆಂದಿಲ್ಲ. ದಪ್ಪ ಸಿಪ್ಪೆಯ ಕುಂಬಳಕಾಯಿಯನ್ನೂ ಬಿಡುವುದಿಲ್ಲ. ಕಹಿ ರುಚಿಯ ಹಾಗಲಕಾಯಿಯನ್ನೂ ಬಿಡುವುದಿಲ್ಲ. ಯಾಕೋ ಈ ಕೀಟ ಹಣ್ಣು ತರಕಾರಿ ಬೆಳೆಗಾರರ ಪಾಲಿಗೆ ಪರಮ ವೈರಿ.
ಹಣ್ಣು ನೊಣ ಎಂದರೆ ಏನು?: ಹಣ್ಣು ನೊಣ ಎಂಬುದು ಎಲ್ಲಿ ಇಲ್ಲ, ಎಲ್ಲಿ ಇದೆ ಎಂದಿಲ್ಲ. ಎಲ್ಲೆಲ್ಲಿ ಹಣ್ಣು ತರಕಾರಿ ಬೆಳೆಯಲಾಗುತ್ತದೆಯೋ ಅಲ್ಲೆಲ್ಲಾ ಇದು ಇದ್ದೇ ಇದೆ. ರೈತರ ಹೊಲದಲ್ಲಿ ಮಾತ್ರವಲ್ಲ. ಈಗೀಗ ಹಣ್ಣು ತರಕಾರಿ ಮಾರುವ ಅಂಗಡಿಯಲ್ಲೂ ಜೇನು ನೊಣ ಹಾರಾಡಿದಂತೆ ಸುತ್ತುತ್ತಿರುವುದನ್ನು ಕಾಣಬಹುದು. ನಮ್ಮ ದೇಶ ಮಾತ್ರವಲ್ಲದೆ ಪ್ರಪಂಚದಾದ್ಯಂತೆ ಎಲ್ಲಾ ಕಡೆಗಳಲ್ಲೂ ಈ ಕೀಟ ಒಂದು ದೊಡ್ಡ ಸಮಸ್ಯೆಯೇ ಆಗಿರುತ್ತದೆ. ಹೆಚ್ಚಿನ ಕಡೆಗಳಲ್ಲಿ ಕಂಡು ಬರುವ ಹಣ್ಣು ನೊಣ Bactrocera dorsalis ಎಂಬ ಹೆಸರಿನದ್ದು. Psychodidae ಎಂಬ ಇನ್ನೊಂದು ವಿಧದ ಹಣ್ಣು ನೊಣ ಹೆಚ್ಚಾಗಿ ವಾಟರ್ ಆಪಲ್ ಮುಂತಾದ ಹಣ್ಣುಗಳಿಗೆ ಗಣನೀಯವಾಗಿ ಬಾಧಿಸುತ್ತದೆ. ಹಣ್ಣು ನೊಣ ಎಂಬುದು ಕೊಳೆತ ಅಥವಾ ಹುಳಿ ಬಂದ ತರಕಾರಿ, ಹಣ್ಣು ಹಂಪಲುಗಳಲ್ಲಿ ಉತ್ಪಾದನೆಯಾಗಿ ಆ ನಂತರ ಅದು ಸಂತಾನಾಭಿವೃದ್ದಿಗೆ ಹಣ್ಣು ತರಕಾರಿಗಳನ್ನು ಆಯ್ಕೆ ಮಾಡಿಕೊಳುತ್ತವೆ. ಹಣ್ಣು ನೊಣಗಳಲ್ಲಿ ದಕ್ಷಿಣ ಭಾರತದಲ್ಲಿ ಸುಮಾರು ೩೦೦ ಕ್ಕೂ ಹೆಚ್ಚಿನ ವಿಧಗಳನ್ನು ಗುರುತಿಸಲಾಗಿದೆ. ಕೆಲವು ಸೊಳ್ಳೆ ತರಹ ಇರುತ್ತದೆ. ಕೆಲವು ಕಂಚುಗಾರ ದುಂಬಿ ತರಹ ಇರುತ್ತದೆ. ಇನ್ನು ಕೆಲವು ಮನೆ ನೊಣದ ತರಹ ಇರುತ್ತವೆ. ಇವು ಬಾಧಿಸದೆ ಇರುವ ಹಣ್ಣು ತರಕಾರಿಗಳೇ ಇಲ್ಲ ಎನ್ನಬಹುದು. ಹಣ್ಣು ತರಕಾರಿಗಳು ಎಳೆ ಹಂತದಿಂದ ಪ್ರಾರಂಭವಾಗಿ ಬಲಿಯುವ ತನಕವೂ ಬಾಧಿಸುತ್ತಾ ಇರುತ್ತವೆ. ನೊಣವು ಕಾಯಿಯ ತೊಗಟೆಯಲ್ಲಿ ಕುಳಿತು ಮೊಟ್ಟೆ ಇಟ್ಟು ಹೊರಗೆ ಹೋಗುತ್ತದೆ. ಅದು ಒಳಗೆ ಮರಿಯಾಗುತ್ತದೆ. ಮರಿಯಾದಾಗ ಕಾಯಿ ಹುಳಮಯವಾಗಿ ಕೊಳೆತು ಹೋಗುತ್ತದೆ.
ಯಾವ ಕಾರಣಕ್ಕೆ ಬರುತ್ತದೆ?: ಈ ಹಣ್ಣು ನೊಣ ಉತ್ಪಾದನೆ ಆಗುವುದು ಕೊಳೆತ ವಸ್ತುಗಳಲ್ಲಿ ಎಂಬುದಾಗಿ ಹಿಂದೆಯೇ ಹೇಳಲಾಗಿದೆ. ಸಾಮಾನ್ಯವಾಗಿ ಮೊದಲ ಬೆಳೆಯಲ್ಲಿ ಈ ನೊಣದ ಕಾಟ ಕಡಿಮೆ ಇರುತ್ತದೆ. ನಂತರ ಅದರ ಕಾಟ ವಿಪರೀತವಾಗುತ್ತದೆ. ಹಾಗಾದರೆ ಇದು ಎಲ್ಲಿಂದ ಬರುತ್ತದೆ? ಇಲ್ಲಿಯೇ ಇರುವುದು ಅದರ ಸ್ವಾರಸ್ಯ. ಹಣ್ಣು ನೊಣದ ಉತ್ಪಾದನೆಯಾಗುವುದು ಹಾಳಾದ ಹಣ್ಣು ತರಕಾರಿಗಳ ಮೂಲಕ. ಮನೆಯಲ್ಲಿ ಅಂಗಡಿಯಿಂದ ತಂದು ಹಾಳಾಗಿದೆ ಎಂದು ಬಿಸಾಡಿದ ವಸ್ತುಗಳಲ್ಲಿ ಈ ಹಣ್ಣು ನೊಣದ ಉತ್ಪಾದನೆ ಆಗುತ್ತದೆ. ನಾವೆಲ್ಲಾ ಗುರುತಿಸಿರುವ ಕಂಚುಕಾರದ ದುಂಬಿಯನ್ನು ಹೋಲುವ ನೊಣ ಒಂದೇ ಹಣ್ಣು ನೊಣ ಅಲ್ಲ. ನಿಮ್ಮ ಮನೆಯಲ್ಲಿ ಹಲಸಿನ ಮರದಲ್ಲಿ ಕೊಳೆತು ಬಿದ್ದ ಹಲಸಿನ ಹಣ್ಣು, ಬೇರು ಹಲಸು, ಪಪ್ಪಾಯಿ, ಸೌತೆ, ಕುಂಬಳ ಇವುಗಳ ಮೇಲೆ ಒಂದು ಸೊಳ್ಳೆ ತರಹ ನೊಣ ಕುಳಿತಿರುತ್ತದೆ. ಇದೂ ಸಹ ಒಂದು ಹಣ್ಣು ನೊಣವೇ ಆಗಿರುತ್ತದೆ. ಮಾವಿನ ಮರದಲ್ಲಿ ಹಣ್ಣಾಗುವಾಗ ಕೆಲವು ಬಾವಲಿ ತಿಂದು ನೆಲಕ್ಕೆ ಬೀಳುತ್ತದೆ. ಇನ್ನು ಕೆಲವು ಬಲಿಯುವ ಮುಂಚೆ ಉದುರುತ್ತದೆ. ಇವೆಲ್ಲಾ ನಮ್ಮ ಉಪಯೋಗಕ್ಕೆ ಸಲ್ಲದ ಕಾರಣ ನಾವು ಅದರ ಗೋಜಿಗೇ ಹೋಗುವುದಿಲ್ಲ. ಬುಡದಲ್ಲಿ ಬಿದ್ದ ನಿರುಪಯುಕ್ತ ಹಣ್ಣು ಕಾಯಿಗಳ ಮೂಲಕ ಈ ನೋಣದ ಲಾರ್ವೆಗಳು ಹುಟ್ಟಿಕೊಂಡು ಬೀಜಾಸುರನಂತೆ ವೃದ್ದಿಸುತ್ತದೆ. ಒಂದೊಂದು ಕೊಳೆತ ಹಣ್ಣು ತರಕಾರಿಯಲ್ಲಿ ನೂರಾರು ಸಂಖ್ಯೆಯ ಹುಳಗಳಿದ್ದು, ಅವೆಲ್ಲಾ ದುಂಬಿಯಾಗಿ ತೊಂದರೆ ಮಾಡುತ್ತದೆ.
ಇತ್ತೀಚೆಗೆ ಹೆಚ್ಚಳವಾಗಲು ಕಾರಣ: ಹಿಂದೆಯೂ ಈ ಊಜಿ ನೊಣದ ಕಾಟ ಇತ್ತು. ಆದರೆ ಮಿತಿಯಲ್ಲಿತ್ತು. ಕಾರಣ ನಾವು ಬೆಳೆ ಪ್ರದೇಶವನ್ನು ಸ್ವಚ್ಚವಾಗಿಡುತ್ತಿದ್ದೆವು. ಹಿಂದೆ ಮಾವಿನ ಮರದ ಬುಡ, ಹಲಸಿನ ಮರದ ಬುಡ ಹಾಗೆಯೇ ಇನ್ನಿತರ ಹಣ್ಣು ಹಂಪಲು ಮರದ ಬುಡದ ತರಗೆಲೆ ಎಲ್ಲಾ ಆರಿಸಿ ಅದನ್ನು ಬಿಸಿನೀರು ಕಾಯಿಸಲು ಬಳಕೆ ಮಾಡುತ್ತಿದ್ದೆವು. ಹಸು, ಕರು ಇತ್ಯಾದಿಗಳನ್ನು ಮರದ ಬುಡದಲ್ಲಿ ಮೇಯಲು ಬಿಡುತ್ತಿದ್ದೆವು.ಆಗ ಅವುಗಳು ಉದುರಿ ಬಿದ್ದ ಕಾಯಿ ಹಣ್ಣುಗಳನ್ನು ತಿನ್ನುತ್ತಿದ್ದವು. ಹಾಗಾಗಿ ಅಲ್ಲಿ ಶೇಷಗಳು ಉಳಿಯುತ್ತಿರಲಿಲ್ಲ. ತರಗೆಲೆ ಗುಡಿಸಿದ ಕಾರಣ ನೆಲಕ್ಕೆ ಬಿಸಿಲು ಬಿದ್ದು, ಅಲ್ಲಿ ಲಾರ್ವೆಗಳು ನಾಶವಾಗುತ್ತಿದ್ದವು. ಹಕ್ಕಿ ಇತ್ಯಾದಿಗಳ ಸಂಖ್ಯೆ ಹೆಚ್ಚು ಇದ್ದ ಕಾರಣ ಅವು ನೆಲದಲ್ಲಿದ್ದ ಹುಳು ಹುಪ್ಪಟೆ ತಿನ್ನುತ್ತಿದ್ದವು. ಈಗ ಅವುಗಳ ಸಂಖ್ಯೆಯೂ ಕಡಿಮೆಯಾಗಿದೆ. ತರಗೆಲೆ ಗುಡಿಸುವುದಿಲ್ಲ. ಬುಡ ಸ್ವಚ್ಚ ಮಾಡುವುದಿಲ್ಲ. ಹಾಗಾಗಿ ವರ್ಷದಿಂದ ವರ್ಷಕ್ಕೆ ನೊಣಗಳ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಹಿಂದೆ ಕಾಡು ಜಾತಿಯ ಮಾವುಗಳಿಗೆ ಇದರ ಕಾಟ ಇರಲಿಲ್ಲ. ಈಗ ಅದಕ್ಕೂ ಬಂದಿದೆ. ತರಕಾರಿ ಬೆಳೆದ ನಂತರ ಆ ಹೊಲವನ್ನು ಬೆಳೆ ಪರಿವರ್ತನೆ ಅಥವಾ ಉಳುಮೆ ಮಾಡಿ ಮಣ್ಣನ್ನು ತೆರೆದಿಡುವ ಸಂಪ್ರದಾಯ ಇಲ್ಲದಾಗಿದೆ. ಹಾಗಾಗಿ ಹಣ್ಣು ನೊಣದ ಸಂತತಿ ಕಡಿಮೆಯಾಗಲು ಅವಕಾಶವೇ ಇಲ್ಲದಾಗುತ್ತಿದೆ.
ಪರಿಣಾಮಕಾರೀ ನಿಯಂತ್ರಣ: ಹಣ್ಣು ನೊಣಗಳ ನಿಯಂತ್ರಣಕ್ಕೆ ಲಿಂಗಾಕರ್ಷಕ ಬಲೆ (Pheromone Trap) ಪರಿಹಾರ ಎನ್ನುತ್ತಾರೆ. ಅದರೆ ಅದು ನಿಜವಲ್ಲ. ಫೆರಮೋನ್ ಟ್ರಾಪುಗಳು ಹಣ್ಣು ನೊಣದ ಇರುವಿಕೆಯನ್ನು ಗುರುತಿಸಲು ಒಂದು ವ್ಯವಸ್ಥೆ. ಇದಕ್ಕೆ ಆಕರ್ಷಣೆಯಾಗಿ ಬೀಳುವ ನೊಣಗಳ ಸಂಖ್ಯೆ ೫ ಕ್ಕಿಂತ ಹೆಚ್ಚಾದರೆ ಬೇರೆ ರೀತಿಯ ನಿಯಂತ್ರಣ ಉಪಾಯ ಕೈಗೊಳ್ಳಬೇಕಾಗುತ್ತದೆ. ಕೀಟ ನಾಶಕ ಇತ್ಯಾದಿ ಬಳಕೆ ಅಂತಿಮ ಆಯ್ಕೆಯಾಗಿರಬೇಕು. ಬೆಳೆ ಬೆಳೆಯುವ ಹೊಲದಲ್ಲಿ ನೊಣಗಳ ಸಂತಾನಾಭಿವೃದ್ದಿಯಾಗಲು ಅನುಕೂಲವಾಗುವ ಯಾವ ಸನ್ನಿವೇಶವನ್ನೂ ಸೃಷ್ಟಿಸಬಾರದು. ಸ್ವಚ್ಚತೆಗೆ ಆದ್ಯತೆ ನೀಡಬೇಕು. ಹಣ್ಣು ತರಕಾರಿಗಳಿಗೆ ವಿಷ ಸಿಂಪಡಿಸುವ ಬದಲಿಗೆ ನೆಲವನ್ನು ಸ್ವಚ್ಚಮಾಡಿ ಅಲ್ಲಿ ಅವಿತಿರುವ ಲಾರ್ವೆ ( ಹುಳ) ನಾಶ ಮಾಡಲು ನೆಲಕ್ಕೆ ಮಾತ್ರ ಕೀಟನಾಶಕವನ್ನು ಬಳಕೆ ಮಾಡಬೇಕು. ಹಣ್ಣು ತರಕಾರಿಗಳನ್ನು ಸಿಕ್ಕ ಸಿಕ್ಕಲ್ಲಿ ಬಿಡಾಡದೆ ಅದನ್ನು ಸುಟ್ಟು ಹಾಕುವುದು ಉತ್ತಮ. ಹಣ್ಣು ನೊಣದ ಹುಳ ನೋಡಲು ಸಣ್ಣದಿದ್ದರೂ ಅವು ಜಿಗಿದು ದೂರ ದೂರ ಹೋಗುವಷ್ಟು ಸಮರ್ಥವಾಗಿರುತ್ತವೆ. ಟ್ರಾಪುಗಳನ್ನು ಹಾಕುವಾಗ ಬೆಳೆ ಹಚ್ಚಿದ ತಕ್ಷಣದಿಂದಲೇ ಅದನ್ನು ನೇತುಹಾಕುವುದರಿಂದ ಹೆಚ್ಚು ಹೆಚ್ಚು ನೊಣಗಳು ನಾಶವಾಗುತ್ತವೆ. ಹೊಲದಲ್ಲಿ ಹಾಳಾಗುವ ಯಾವುದೇ ಹಣ್ಣು ತರಕಾರಿಗಳನ್ನು ಅಲ್ಲೇ ಬಿಟ್ಟು ಯಾವ ಕೀಟನಾಶಕ, ಟ್ರಾಪು ಹಾಕಿದರೂ ಅದು ಪ್ರಯೋಜನವೇ ಇಲ್ಲ.
ಹಣ್ಣು ನೊಣಗಳು ಈಗ ಗಣನೀಯವಾಗಿ ಹೆಚ್ಚಾಗಿದ್ದು, ಇದು ರೈತರಿಗೆ ಅತೀ ದೊಡ್ಡ ಸವಾಲಾಗಿರುತ್ತದೆ. ಇವುಗಳ ನಿಯಂತ್ರಣ ಮಾಡಿಕೊಳ್ಳದೆ ಬೆಳೆ ಬೆಳೆದರೆ ಅರ್ಧಕ್ಕೂ ಹೆಚ್ಚಿನ ಬೆಳೆ ನಷ್ಟ. ಬರೇ ಊಜಿ ನೊಣ ನಿಯಂತ್ರಣಕ್ಕೆ ಕೀಟನಾಶಕ ಸಿಂಪರಣೆಗೇ ಸಾವಿರಾರು ರೂಪಾಯಿ ಖರ್ಚು ಮಾಡುವ ಪ್ರಮೇಯವೂ ಇದೆ. ಈ ನೊಣವನ್ನು ಜೈವಿಕವಾಗಿ ನಿಯಂತ್ರಿಸುವ ಪರಿಣಾಮಕಾರಿ ವಿಧಾನ ಅಗತ್ಯವಾಗಿದೆ. ಹಾಗೆಯೇ ತರಕಾರಿ ಬೆಳೆಗಳಿಗೆ (ಅಲ್ಪಾವಧಿ ಬೆಳೆಗಳು) ಜೈವಿಕ ತಂತ್ರಜ್ಞಾನದ ಮೂಲಕ ಹಣ್ಣು ನೊಣ ನಿರೋಧಕ ಶಕ್ತಿ ಹೊಂದಿದ ತಳಿ ಅಭಿವೃದ್ದಿ ಆಗಬೇಕಾಗಿದೆ.
ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ