ಹಣ ತೆತ್ತು ಸಾವು ಕೊಂಡವರು ! (ಭಾಗ ೧)
ಹೌದು, ಕೆಲವು ದಿನಗಳ ಹಿಂದಿನ ಘಟನಾವಳಿಗಳನ್ನು ನೋಡಿದಾಗ ನಮಗೆ ಅನಿಸುವುದೇ ಹಾಗೆ. ಇವರ ಬಳಿ ಏನು ಕಡಿಮೆ ಇತ್ತು. ಹಣವಿತ್ತು, ವಿದ್ಯೆಯಿತ್ತು, ಸೊಗಸಾದ ಸಂಸಾರವಿತ್ತು. ಆದರೆ ಹುಚ್ಚುತನ ಪರಮಾವಧಿಗೆ ತಲುಪಿ ಅನಾಥರಂತೆ ಸಾವು ಕಂಡರು. ಸಂಬಂಧಿಕರಿಗೆ ಇವರ ಹೆಣವನ್ನು ನೋಡುವ ಭಾಗ್ಯವೂ ಸಿಗಬಹುದು ಎಂದು ಹೇಳುವುದು ಕಷ್ಟ. ಹಾಗಾದರೆ ಇವರೆಲ್ಲಾ ಯಾರು? ಇವರು ಕೈಗೊಂಡ ಹುಚ್ಚು ಸಾಹಸವಾದರೂ ಏನು? ಬನ್ನಿ ಒಂದೊಂದಾಗಿ ತಿಳಿಯೋಣ.
ಪ್ರಪಂಚದಲ್ಲಿ ಬಹಳಷ್ಟು ಮಂದಿ ಸಾಹಸ ಪ್ರವೃತ್ತಿಯನ್ನೇ ತಮ್ಮ ಮುಖ್ಯ ಹವ್ಯಾಸವನ್ನಾಗಿ ಮಾಡಿಕೊಂಡವರಿರುತ್ತಾರೆ. ಕೆಲವರಿಗೆ ಆಕಾಶದಲ್ಲೆಲ್ಲಾ ಹಾರಾಡುವ ಆಸೆ, ಮತ್ತೆ ಕೆಲವರಿಗೆ ಬಾಹ್ಯಾಕಾಶಕ್ಕೆ ಹೋಗುವ ತವಕ, ಇನ್ನು ಕೆಲವರಿಗೆ ಸಾಗರದಾಳದಲ್ಲಿರುವ ಹೊಸ ಪ್ರಪಂಚ ಹುಡುಕುವ ಹುಮ್ಮಸ್ಸು ಹೀಗೆ ಹತ್ತು ಹಲವಾರು ಬಗೆಯ ವ್ಯಕ್ತಿಗಳು ನಮಗೆ ಸಿಗುತ್ತಾರೆ. ಹಲವಾರು ಮಂದಿ ಈ ಸಾಹಸದಲ್ಲಿ ಯಶಸ್ಸನ್ನೂ ಕಂಡಿದ್ದಾರೆ. ಇತ್ತೀಚೆಗೆ ಹೀಗೇ ಹುಚ್ಚು ಸಾಹಸಕ್ಕೆ ಇಳಿದ ಐದು ಮಂದಿ ಸಾಗರದಾಳದಲ್ಲಿ ಜಲಸಮಾಧಿಯಾದ ಸಂಗತಿ ನಿಮಗೆ ಖಂಡಿತಾ ಗೊತ್ತಿರುತ್ತದೆ. ಆದರೆ ಅದರ ಹಿಂದಿನ ವಿಷಯಗಳು, ಅವರು ಸಾಗರದಾಳಕ್ಕೆ ಹೋಗಲು ಬಯಸಿದ್ದು ಏಕೆ? ಅದಕ್ಕೆ ತಗಲಿದ ವೆಚ್ಚವೇನು? ಆ ಐದು ವ್ಯಕ್ತಿಗಳಾದರೂ ಯಾರ್ಯಾರು?
ಓಶಿಯನ್ ಗೇಟ್ (ಓಷನ್ ಗೇಟ್) ಎಂಬ ವಾಷಿಂಗ್ಟನ್ (ಅಮೇರಿಕಾ) ಮೂಲದ ಸಂಸ್ಥೆಯೊಂದು ವಿಶೇಷ ಬಗೆಯ ಸಬ್ ಮೆರೀನ್ (ಸಬ್ ಮರ್ಸಿಬಲ್) ಅನ್ನು ತಯಾರಿಸಿದೆ. ಅದರಲ್ಲಿ ಕೂತು ಪ್ರವಾಸಿಗರು ಸಾಗರದ ಆಳದಲ್ಲಿರುವ ಬೆಟ್ಟ ಗುಡ್ಡಗಳು, ವಿವಿಧ ಬಗೆಯ ಜಲಚರಗಳು, ಸಸ್ಯಗಳು, ಈ ಹಿಂದೆ ಮುಳುಗಿದ ಹಡಗಿನ ಅವಶೇಷಗಳು ಎಲ್ಲವನ್ನೂ ನೋಡಬಹುದಾಗಿತ್ತು. ಈ ಸಂಸ್ಥೆ ೨೦೨೧ರಿಂದಲೂ ಇಂತಹ ಸಾಗರದಾಳದ ಪ್ರವಾಸಗಳನ್ನು ಆಯೋಜಿಸುತ್ತಾ ಬಂದಿದೆ. ಇದು ಪ್ರಮುಖವಾಗಿ ಹಮ್ಮಿಕೊಳ್ಳುವ ಪ್ರವಾಸವೆಂದರೆ ಶತಮಾನದ ಹಿಂದೆ (೧೯೧೨) ಮುಳುಗಿದ “ಟೈಟಾನಿಕ್" ಎಂಬ ಐಷಾರಾಮಿ ಹಡಗಿನ ಅವಶೇಷಗಳನ್ನು ವೀಕ್ಷಿಸುವ ಪ್ರವಾಸ. ಇವರು ಈ ಪ್ರವಾಸಕ್ಕೆ ಬಳಸುವುದು “ಟೈಟನ್" ಎಂಬ ಹೆಸರಿನ ಸಬ್ ಮರ್ಸಿಬಲ್. ಇದರಲ್ಲಿ ಸಬ್ ಮೆರೀನ್ (ಜಲಾಂತರ್ಗಾಮಿ) ನಲ್ಲಿರುವಂತಹ ಯಾವ ಬಹು ಆಯ್ಕೆಗಳಿರುವುದಿಲ್ಲ. ಇದು ನೀರಿನ ಮೇಲೆ ಮತ್ತು ಒಳಗೆ ಚಲಿಸಬಲ್ಲ ಪುಟ್ಟದಾದ ವಾಹನ. ಇದು ನೀರಿನ ಕೆಳಭಾಗದಲ್ಲಿ ಚಲಿಸುವಾಗ ಮೇಲಿರುವ ಹಡಗಿನೊಂದಿಗೆ ಸಂಪರ್ಕದಲ್ಲಿರುತ್ತದೆ. ಈ ಸಬ್ ಮರ್ಸಿಬಲ್ ನಲ್ಲಿ ಯಾವುದೇ ರೀತಿಯ ಇಂಧನ ತುಂಬಿಸಿ ಇಟ್ಟುಕೊಳ್ಳುವ ವ್ಯವಸ್ಥೆಯೂ ಇರುವುದಿಲ್ಲವಾದುದರಿಂದ ಹಡಗಿನ ಜೊತೆ ನಿರಂತರ ಸಂಪರ್ಕ ಅಗತ್ಯ.
ಓಶಿಯನ್ ಗೇಟ್ ಸಂಸ್ಥೆಯವರ ಬಳಿ ಟೈಟನ್ ಹೊರತು ಪಡಿಸಿ ಇನ್ನೂ ಎರಡು ಸಬ್ ಮರ್ಸಿಬಲ್ ಗಳು ಇವೆ. ಆದರೆ ಇವುಗಳು ಟೈಟನ್ ನಷ್ಟು ಆಳಕ್ಕೆ ಇಳಿಯುವ ಸಾಮರ್ಥ್ಯ ಹೊಂದಿರುವುದಿಲ್ಲ. ಇವರ ಬಳಿ ಆಂಟಿಪಾಡ್ಸ್ (೧೦೦೦ ಅಡಿ) ಮತ್ತು ಸೈಕ್ಲಾಪ್ಸ್ (೧೬೦೦ ಅಡಿ) ಎಂಬ ಹೆಸರಿನ ಸಬ್ ಮರ್ಸಿಬಲ್ ಇವೆ. ೨೦೨೧-೨೨ರಲ್ಲಿ ಟೈಟನ್ ಸಬ್ ಮರ್ಸಿಬಲ್ ನಲ್ಲಿ ಸುಮಾರು ೪೫ ಜನರು ವಿವಿಧ ಸಾಗರ ತಳಗಳ ಪ್ರವಾಸ ಮಾಡಿದ್ದಾರೆ ಎಂದು ಸಂಸ್ಥೆ ಹೇಳುತ್ತಿದೆ. ಆದರೆ ನಿಜಕ್ಕೂ ಸುಮಾರು ೧೨ -೧೪ ಸಾವಿರ ಅಡಿಗಳಷ್ಟು ಆಳದಲ್ಲಿರುವ ಟೈಟಾನಿಕ್ ಹಡಗಿನ ಅವಶೇಷಗಳನ್ನು ವೀಕ್ಷಿಸಲು ತೆರಳುವ ಸಾಮರ್ಥ್ಯ ಟೈಟನ್ ಗೆ ಇತ್ತಾ? ಗೊತ್ತಿಲ್ಲ. ಏಕೆಂದರೆ ಅಷ್ಟೊಂದು ಆಳದಲ್ಲಿ ಭಯಂಕರವಾದ ನೀರಿನ ಒತ್ತಡ ಇರುತ್ತದೆ. ಈ ಒತ್ತಡವನ್ನು ತಡೆದುಕೊಳ್ಳುವ ಯಾವುದೇ ಸಾಮರ್ಥ್ಯ ಟೈಟನ್ ಗೆ ಇರಲು ಸಾಧ್ಯವೇ ಇಲ್ಲ ಎಂನ್ನುವುದು ಹಲವರ ವಾದ.
ಈ ಪ್ರವಾಸಕ್ಕೆ ತಗಲುವ ವೆಚ್ಚ ಎಷ್ಟು ಗೊತ್ತೇ? ಕೇವಲ ಎರಡುವರೆ ಲಕ್ಷ ಅಮೇರಿಕನ್ ಡಾಲರ್ ! ಅಂದರೆ ಸುಮಾರು ಎರಡು ಕೋಟಿ ರೂಪಾಯಿಗಳು. ಈ ಕಾರಣದಿಂದ ಹಣ ಇದ್ದವರಿಗೆ ಮಾತ್ರ ಈ ಟೈಟನ್ ಯಾನ ಲಭ್ಯವಿತ್ತು. ಈ ಯಾನದಲ್ಲಿ ಜೊತೆಯಾದ ಐದು ಮಂದಿಗಳೆಂದರೆ ಓಶಿಯನ್ ಗೇಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಸ್ಟಾಕ್ ಟನ್ ರಶ್. ಪಾಕಿಸ್ರಾನಿ ಉದ್ಯಮಿ ಶಹಜಾದಾ ದಾವೂದ್ ಮತ್ತು ಆತನ ಮಗ ಸುಲೇಮಾನ್, ಬ್ರಿಟೀಷ್ ಬಿಲಿಯನೇರ್ ಹಮೀಶ್ ಹಾರ್ಡಿಂಗ್ ಮತ್ತು ಫ್ರಾನ್ಸ್ ನ ಸಾಹಸಿ ಪಾಲ್ ಹೆನ್ರಿ ನರ್ಜೆಯೊಲೆಟ್. ಈ ಯಾನದಲ್ಲಿ ಭಾಗವಹಿಸಲು ಖ್ಯಾತ ಯೂಟ್ಯೂಬರ್ ಮಿ. ಬೀಟ್ಸ್ ಗೂ ಆಹ್ವಾನ ಬಂದಿತ್ತಂತೆ. ಆದರೆ ಅವರು ಒಪ್ಪದೇ ಇದ್ದ ಕಾರಣ ಅವರು ಬಚಾವಾಗಿದ್ದಾರೆ.
ಟೈಟನ್ ಪ್ರಯಾಣ ಆರಂಭವಾದದ್ದು ಭಾನುವಾರ ಜೂನ್ ೧೮, ೨೦೨೩ರಂದು. ಈ ಟೈಟನ್ ಸಬ್ ಮರ್ಸಿಬಲ್ ‘ಪೋಲಾರ್ ಪ್ರಿನ್ಸ್' ಎಂಬ ಹಡಗಿನ ನಂಟಿನಲ್ಲಿತ್ತು. ಈ ಹಡಗಿನ ಮುಖಾಂತರವೇ ಅದಕ್ಕೆ ಇಂಧನ ಮತ್ತು ಮಾಹಿತಿ ರವಾನೆಯಾಗುತ್ತಿತ್ತು. ಈ ಟೈಟನ್ ಸಬ್ ಮರ್ಸಿಬಲ್ ಅನ್ನು ಕಾರ್ಬನ್ ಫೈಬರ್ ಮತ್ತು ಟೈಟಾನಿಯಂ ಲೋಹದಿಂದ ತಯಾರಿಸಿದ್ದುದರಿಂದ ಬಹಳ ಗಟ್ಟಿಯಾಗಿಯೇ ಇತ್ತು. ಆದರೆ ಸಾಗರ ತಳದ ಒತ್ತಡವು ವಿಪರೀತ ಇದ್ದುದರಿಂದ ಒಳ ಸ್ಫೋಟವಾಗಿದೆ. ಇದರ ತೂಕ ೧೦,೪೩೨ ಗ್ರಾಂ. ಸಂಸ್ಥೆಯ ವೆಬ್ ಸೈಟ್ ಪ್ರಕಾರ, ಈ ಸಬ್ ಮರ್ಸಿಬಲ್ ಸುಮಾರು ೪೦೦೦ ಮೀಟರ್ ವರೆಗೆ ಮಾತ್ರ ಹೋಗುವ ಸಾಮರ್ಥ್ಯ ಹೊಂದಿದೆ. ಪ್ರತೀ ಗಂಟೆಗೆ ೫.೫. ಮೈಲು ವೇಗದಲ್ಲಿ ಚಲಿಸಬಲ್ಲದು. ಇದರ ಒಳಗೆ ಕುಳಿತುಕೊಳ್ಳಲು ಯಾವುದೇ ಆಸನಗಳಿಲ್ಲ. ಆ ವಾಹನದ ನೆಲದಲ್ಲೇ ಹಾಕಿರುವ ಹಾಸಿನ ಮೇಲೆ ಕುಳಿತುಕೊಳ್ಳಬೇಕು. ಒಂದೆಡೆ ಪುಟ್ಟದಾದ ಕಿಟಕಿಯನ್ನು ಅಳವಡಿಸಲಾಗಿದೆ. ಅದರ ಮುಖಾಂತರ ಹೊರಗಿನ ದೃಶ್ಯವನ್ನು ನೋಡಬಹುದಾಗಿದೆ. ಸುಮಾರು ಒಂದು ಸಾವಿರ ಅಡಿ ಆಳಕ್ಕೆ ಇಳಿದ ಬಳಿಕ ಸೂರ್ಯನ ಬೆಳಕು ಮಂದವಾಗುತ್ತಾ ಹೋಗುತ್ತದೆ. ಆಗ ಟೈಟನ್ ತನ್ನದೇ ಆದ ಬೆಳಕನ್ನು ಉರಿಸಿ ಮುಂದೆ ಸಾಗುತ್ತದೆ.
(ಇನ್ನೂ ಇದೆ)
ಚಿತ್ರ ಕೃಪೆ: ಅಂತರ್ಜಾಲ ತಾಣ