ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೊಂದು ಹೃದಯದ ಮಾತು...
ಪ್ರೀತಿಯ ಹತ್ತರ ವಿದ್ಯಾರ್ಥಿಗಳೇ.... ನಿಮ್ಮ ಶೈಕ್ಷಣಿಕ ಬದುಕಿನ ಒಂದು ಮುಖ್ಯ ಘಟ್ಟದಲ್ಲಿ ನೀವಿದ್ದೀರಿ. ಶಾಲಾ ವ್ಯವಸ್ಥೆಯೊಳಗೆ ನುಸುಳಿ ಸುಮಾರು ಹನ್ನೊಂದು ವಸಂತಗಳನ್ನು ದಾಟಿ ಈಗ 10ನೇ ತರಗತಿಗೆ ಬಂದಿದ್ದೀರಿ. ನೀವು ಶೈಕ್ಷಣಿಕವಾಗಿ ಕಳೆದದ್ದು ಅದೇನೂ ಕಡಿಮೆ ಅವಧಿಯಲ್ಲ. ಇಷ್ಟೊಂದು ಸುದೀರ್ಘ ಅವಧಿಯಲ್ಲಿ ನೀವು ಒಮ್ಮೆಯೂ ಸೋತದ್ದು ನಿಮ್ಮ ಅಪ್ಪ, ಅಮ್ಮ ಕಂಡಿಲ್ಲ. ಏಕೆಂದರೆ ನೀವು ಹೇಗೆ ಇದ್ದರೂ ಸೋಲುವ ಅವಕಾಶವನ್ನು ವ್ಯವಸ್ಥೆ ನಿಮಗೆ ನೀಡಿರಲಿಲ್ಲ. ಆದ್ದರಿಂದಲೇ ನಿಮ್ಮ ಅಪ್ಪ ಅಮ್ಮನಿಗೆ ನಿಮ್ಮ ಮೇಲೆ ಅತಿಯಾದ ನಂಬಿಕೆ. ನಿಮ್ಮ ಗೆಲುವಿನ ಕನಸು ಹೊತ್ತು ಮುಂದಿನ ಬಹುಮುಖ್ಯ ಫಲಿತಾಂಶದತ್ತ ನೋಟವಿಟ್ಟವರವರು.
ಎಸ್.ಎಸ್.ಎಲ್.ಸಿ. ಅದೇನೂ ಹತ್ತಲಾರದ ಎವರೆಸ್ಟ್ ಪರ್ವತವಲ್ಲ. ದಾಟಲಾರದ ಸಾಗರವಲ್ಲ. ತಲುಪಲಾರದ ದಿಗಂತವಲ್ಲ. ಅದೊಂದು ಸಾಮಾನ್ಯ ತರಗತಿ. ನಿಮ್ಮ ವಾರ್ಷಿಕ ಪರೀಕ್ಷೆಯ ಮೌಲ್ಯಮಾಪನ, ನಿಮ್ಮ ಶಿಕ್ಷಕರು ಮಾಡುವುದಿಲ್ಲ, ಎಂಬ ಒಂದಂಶ ಹೊರತು ಪಡಿಸಿದರೆ ಮತ್ತೆಲ್ಲವೂ ಸಾಮಾನ್ಯ ವಿಷಯವೇ ಆಗಿದೆ. ಆದರೂ ನೀವು ಈ ತನಕ ತೋರುತ್ತಿದ್ದ ಕಾಳಜಿಯಿಲ್ಲದ ಕಲಿಕೆಯಿಂದ ಬಹುತೇಕ ಶಿಕ್ಷಕರು ನಿಮ್ಮ ಬಗ್ಗೆ ತುಂಬಾನೆ ಆತಂಕಗೊಂಡಿರುತ್ತಾರೆ ಅಲ್ಲವೇ....?
ನಿಮ್ಮ ಮೇಲೆ ಹಿಂದೆಂದೂ ಹಾಕದ ಒತ್ತಡವನ್ನು ಎಸ್.ಎಸ್.ಎಲ್.ಸಿ. ಯಲ್ಲಿ ಹೇರಲು ನೀವೇ ಕಾರಣ ಎಂಬುವುದನ್ನು ಮರೆಯಬೇಡಿ. ಈ ಹಂತದಲ್ಲಿ ನಿಮಗೆ ಕೆಲವು ವಿಷಯಗಳನ್ನು ನೆನಪಿಸಿ, ನಿಮ್ಮನ್ನು ಸ್ವಲ್ಪಮಟ್ಟಿಗೆ ಜಾಗೃತಗೊಳಿಸಲು ಪ್ರಯತ್ನಿಸುತ್ತಿದ್ದೇನೆ. ಏಕೆಂದರೆ ನೀವೆಂದೂ ಸೋಲಬಾರದೆಂಬುವುದೇ ನನ್ನಾಸೆ.
ನಿಮಗೆ ಓದಿನಲ್ಲಿ ಆಸಕ್ತಿ ಬಹುತೇಕರಿಗೆ ಮೂಡುತ್ತಿಲ್ಲ. ಹಿಂದಿನ ತರಗತಿಗಳಲ್ಲೂ ನೀವು ಹೀಗೆಯೇ ಬೆಳೆದು ಬಂದವರು. ನಿಮ್ಮ ಶಿಕ್ಷಕರು ಅದೆಷ್ಟೇ ಪ್ರಯತ್ನಪಟ್ಟರೂ ನಿಮ್ಮಲ್ಲಿ ಬದಲಾವಣೆ ಸಾಧ್ಯವಾಗುತ್ತಿಲ್ಲ. ಕಳೆದು ಹೋದ ವರ್ಷಗಳಲ್ಲಿ ಹೇಗಿದ್ದೀರೋ ಹಾಗೆಯೇ ಇರುವುದು ನಿಮ್ಮ ಜಾಯಮಾನವಾಗಿದೆ. ಆದರೆ ಇಂದು ನೀವು ಬದಲಾಗುವುದು ಅನಿವಾರ್ಯ ಎಂಬ ಅರಿವು ನಿಮ್ಮಲ್ಲಿ ಮೂಡಬೇಕಿದೆ. ಏಕೆ ಬದಲಾಗಬೇಕು....? ಎಂಬ ನಿಮ್ಮ ಮನದಾಳದಲ್ಲಿ ಮೂಡುತ್ತಿರುವ ಪ್ರಶ್ನೆಗೆ ನಿಮ್ಮೊಳಗೇ ಉತ್ತರ ಹುಡುಕಬೇಕಿದೆ.
ಹನ್ನೊಂದು ವರ್ಷಗಳ ಹಿಂದೆ ಪುಟ್ಟ ಹೆಜ್ಜೆಯಿಡುತ್ತಿದ್ದ ನಿಮ್ಮನ್ನು ಅಮ್ಮ ಕೈಹಿಡಿದು ಅಂಗನವಾಡಿಯೊಳಗೆ ಬಿಟ್ಟ ಆ ಮೊದಲ ದಿನ ನೆನಪಿಸಿಕೊಳ್ಳಿ. ಹಟ ಹಿಡಿದು ಅಳುತ್ತಿದ್ದ ನಿಮ್ಮನ್ನು, ಬಿಟ್ಟು ಹಿಂತಿರುಗುವಾಗ ನಿಮ್ಮ ಅಮ್ಮನ ಹೃದಯ ಬಹಳನೇ ಭಾರವಾಗಿತ್ತು. ತನ್ನ ಮಡಿಲಲ್ಲಿ ಜೋಪಾನವಾಗಿದ್ದ ನಿಮ್ಮನ್ನು ಅಮ್ಮ ಅಂದು ಮೊದಲಬಾರಿ ಇನ್ನೊಬ್ಬರ ಕೈಗಿತ್ತು ಮನೆ ಕಡೆ ಹೆಜ್ಜೆ ಹಾಕಿದ್ದಳು. ಅಂದು ದುಃಖದಿಂದ ಕಟ್ಟಯೊಡೆದ ಅವರ ಕಣ್ಣೀರಿಗೆ ಬೆಲೆ ಕಟ್ಟಲಾಗದು. ಅಂದಿನಿಂದ ಇಂದಿನವರೆಗೂ ಅಪ್ಪನಾಗಲಿ, ಅಮ್ಮನಾಗಲಿ ನಿಮಗೆ ಯಾವ ಕೊರತೆಯನ್ನೂ ಮಾಡಿಲ್ಲ. ಬಹುತೇಕ ಅಪ್ಪಂದಿರು ಸುಡುಬಿಸಿಲಿನಲ್ಲಿ ಮೈ ಕಪ್ಪಾಗಿಸಿ, ದುಡಿದು ಸುಟ್ಟ ಚರ್ಮ ಹೊತ್ತು ಸಿಕ್ಕ ಸಂಬಳ ಕುಟುಂಬ ನಿರ್ವಹಣೆಗೂ ಸಾಕಾಗದೆ ಇದ್ದಾಗ, ಚಿಂತೆಯಿಂದ ನಿದ್ರೆ ಸುಳಿಯದಿದ್ದಾಗ ನಡುರಾತ್ರಿ ಚಾಪೆಯ ಮೇಲೆ ಕುಳಿತು ಕತ್ತಲೆಯ ಕೋಣೆಯಲ್ಲಿ ಸುರಿಸಿದ ಕಣ್ಣೀರ ಹನಿಗಳಿಗೆ ಲೆಕ್ಕವಿರದು. ಅಪ್ಪನ ಕಷ್ಟ ಕಂಡು ಮೈಮೇಲೆ ಅದೇನೇ ಕಾಯಿಲೆಗಳಿದ್ದರೂ ಲೆಕ್ಕಿಸದೆ, ಹತ್ತಾರು ಮನೆಯಲ್ಲಿ ದುಡಿದು ಸಂಸಾರ ಸರಿದೂಗಿಸುತ್ತಿದ್ದ ಅಮ್ಮ ತನ್ನ ಕಷ್ಟವನ್ನು ಯಾವತ್ತೂ ನಿಮ್ಮ ಮೇಲೆ ಹೇರಿಲ್ಲ. ತಾನು ಒಂದೊತ್ತು ಉಪವಾಸವಿದ್ದರೂ, ನಿಮಗೆ ನಾಲ್ಕು ಹೊತ್ತು ಉಣಬಡಿಸಿದ ದೇವತೆ ನಿಮ್ಮ ಅಮ್ಮ. ಅಂತಹ ತ್ಯಾಗಮಯಿಗಳಾದ ಅಪ್ಪ ಅಮ್ಮ ನಿಮ್ಮ ಮೇಲೆ ಇಟ್ಟಿರುವ ಭರವಸೆ ಅಪಾರ. ನಿಮ್ಮ ಶಿಕ್ಷಕರ ನಿರೀಕ್ಷೆನೂ ಬೆಟ್ಟದಷ್ಟಿದೆ. ಇವರೆಲ್ಲರನ್ನೂ ಸಂತೃಪ್ತಿಪಡಿಸಬೇಕಾದ ಹೊಣೆಗಾರಿಕೆ ನಿಮ್ಮ ಮೇಲಿದೆ. ಮಕ್ಕಳೇ ನಿಮ್ಮನ್ನು ನಾನು ಭಯಪಡಿಸುತ್ತಿಲ್ಲ. ಜವಾಬ್ದಾರಿಯನ್ನು ನೆನಪಿಸುತ್ತಿದ್ದೇನಷ್ಟೆ. ನೀವು ಸ್ವಲ್ಪನೇ ಬದಲಾದರೆ ಸಾಕು. ಎಲ್ಲರ ನಿರೀಕ್ಷೆಗಳೂ ಸಾಕಾರವಾಗುತ್ತದೆ. ಫಲಿತಾಂಶದ ದಿನ ನಿಮ್ಮ ಮೊಗದಲ್ಲಿ ಮಂದಹಾಸ ಮೂಡಬೇಕಿದೆ.
ನಿಮ್ಮ ಕೈನಲ್ಲಿರುವ ಮೊಬೈಲ್ ನಿಮಗೆ ಖಂಡಿತಾ ಅನಿವಾರ್ಯವಲ್ಲ. ಅದಿಲ್ಲದೆಯೂ ಬದುಕಬಹುದಲ್ವಾ....? ಹಾಗಾದರೆ ಇಂದೇ ಅದರಿಂದ ದೂರವಾಗಿ. ತೀರಾ ಅಗತ್ಯ ಸಂದರ್ಭ ಹೊರತು ಅದು ನಿಮ್ಮ ಕೈಗೆ ಎಟುಕದಿರಲಿ. ಬೆಳಿಗ್ಗೆ ತೀರಾ ತಡವಾಗಿ ಏಳುವುದು ಅಭ್ಯಾಸವಾಗಿಬಿಟ್ಟಿದೆ. ಹಾಗೇನೇ ರಾತ್ರಿ ಬೇಗನೇ ಮಲಗೋದು ಕೂಡಾ. ಇದೀಗ ಈ ಅಭ್ಯಾಸ ಬದಲಾಯಿಸಬೇಕಿದೆ. ಅದೊಂದು ತ್ಯಾಗವೆಂದು ಭಾವಿಸಿ. ತನ್ನ ಗುರಿ ಸಾಧನೆಗೆ ಸಿದ್ಧಾರ್ಥ ಹನ್ನೆರಡು ವರ್ಷ ಕಾಡಲ್ಲಿ ಬದುಕಿದ. ಆದ್ದರಿಂದಲೇ ಆತ ಅಮರನಾದ. ಬಾಹುಬಲಿ ಸರ್ವ ತ್ಯಾಗದಿಂದ ಶಾಶ್ವತನಾದ. ಆದರೆ ನೀವು ತ್ಯಾಗ ಮಾಡಬೇಕಿರುವುದು ಕೇವಲ ಒಂದೆರಡು ಗಂಟೆಗಳ ನಿದ್ರೆ. ಆ ತ್ಯಾಗವೇ ನಿಮ್ಮನ್ನು ಸಾಧಕರ ಸಾಲಿನಲ್ಲಿ ನಿಲ್ಲಿಸಬಹುದು. ಶಾಲೆಯೆಂಬುವುದು ಜ್ಞಾನಮಂದಿರ. ಅದರ ಗೌರವ ಹಾಗೂ ಪಾವಿತ್ರ್ಯತೆ ಕಾಪಾಡುವುದು ನಮ್ಮ ಧರ್ಮ. ತರಗತಿ ಕೋಣೆಗಳೇ ನಿಮ್ಮ ಬದುಕು ಕಟ್ಟುವ ತಾಣ. ಎಂದಿಗೂ ತರಗತಿಯಿಂದ ಹೊರಗುಳಿಯದಿರಿ. ಗುರುಗಳ ಸಾನಿಧ್ಯ ನಿಮ್ಮ ಬದುಕಿನ ಸೋಲಿಗೆ ಗುರಾಣಿ ಇದ್ದಂತೆ. ಅವರ ಮಾತುಗಳನ್ನು ತಪ್ಪದೆ ಪಾಲಿಸಿದಲ್ಲಿ ಸೋಲು ಹತ್ತಿರವೂ ಸುಳಿಯದು.
ನಿಮ್ಮ ಆಂತರ್ಯದಲ್ಲಿ ಉಂಟಾಗುವ ಧನಾತ್ಮಕ ಬದಲಾವಣೆಯೇ ನಿಮ್ಮ ಯಶಸ್ಸಿಗೆ ತೀರಾ ಅಗತ್ಯವಾದದ್ದು. ನಿನ್ನೆ ತನಕ ನೀವು ಹೇಗಿದ್ದಿರಿ? ಎಂಬುವುದನ್ನು ಮರೆತು ಬಿಡಿ. ನಾಳೆಯಿಂದ ನಾನು ಬದಲಾಗಬೇಕು ಎಂಬ ಗಟ್ಟಿ ತೀರ್ಮಾನ ನಿಮ್ಮದಾಗಿರಲಿ. ತರಗತಿಯ ಕೋಣೆಯಿಂದ ಹೊರಬರುತ್ತಿರುವ ಪ್ರತಿಯೊಂದು ದಿನವೂ ಹೊಸ ವಿಚಾರಗಳು ನಿಮ್ಮೊಳಗಿರಲಿ. ಹುಟ್ಟಿನಿಂದಲೇ ಕಣ್ಣು ಕಾಣದ, ಕಿವಿ ಕೇಳಿಸದೇ ಇದ್ದರೂ ಸಂಗೀತ ಸಾಮ್ರಾಟನಾದ ರವೀಂದ್ರ ಜೈನ್, ಕೈಕಾಲಿಲ್ಲದಿದ್ದರೂ ಇಂಗ್ಲೀಷ್ ಕಾಲುವೆ ಈಜಿದ ಸುನೀತಾ, ದೊಡ್ಡ ಪರ್ವತವೊಂದನ್ನು ತಾನೊಬ್ಬನೇ ಹಲವು ವರ್ಷಗಳ ಕಾಲ ಕೆತ್ತಿ ತನ್ನೂರಿಗೆ ದಾರಿ ಕೊಟ್ಟ ದಶರಂಥ ಮಾಂಜಿ, ಅನಾಹುತವೊಂದರಲ್ಲಿ ತನ್ನ ಕಾಲನ್ನು ಕಳೆದುಕೊಂಡರೂ ದೃತಿಗೆಡದೆ ಮೌಂಟ್ ಎವರೆಸ್ಟ್ ಸೇರಿ ಜಗತ್ತಿನ ಬಹುತೇಕ ದುರ್ಗಮ ಪರ್ವತಗಳನ್ನು ಏರಿ ನಿಂತ ಅರುಣಿಮಾ ಸಿನ್ಹಾ, ಪೋಲಿಯೋ ಪೀಡಿತಳಾಗಿ ಹಲವು ವರ್ಷಗಳ ಕಾಲ ಹೆಜ್ಜೆ ಊರಲಾಗದೆ ಹಾಸಿಗೆಯ ಮೇಲೆ ಮಲಗಿದ್ದರೂ, ಹಟತೊಟ್ಟು, ಒಲಿಂಪಿಕ್ಸ್ ನಲ್ಲಿ ಓಡಿ ಚಿನ್ನದ ಪದಕ ಗೆದ್ದ ವಿಲ್ಮಾ ರುಡಾಲ್ಪ್, ಸಾವಿರ ಬಾರಿ ವಿಫಲತೆಯನ್ನು ಕಂಡರೂ ಹಟಬಿಡದೆ ಪ್ರಯತ್ನಿಸಿ ಬಲ್ಬನ್ನು ಕಂಡುಹಿಡಿದು ಜಗತ್ತಿಗೆ ಕತ್ತಲೆಯಲ್ಲಿ ಬೆಳಕು ಕೊಟ್ಟ ಥಾಮಸ್ ಆಳ್ವಾ ಎಡಿಸನ್, ಬೀದಿ ದೀಪದಡಿ ಓದಿ, ಬೆಳಗ್ಗಿನ ಜಾವ ಹಾಲು, ಪೇಪರ್ ಮಾರಿ ಬಂದ ಹಣದಲ್ಲಿ ವಿದ್ಯೆ ಕಲಿತ ಅದ್ಭುತ ವ್ಯಕ್ತಿತ್ವದ ಸಾಕಾರ ರೂಪ ಎ.ಪಿ.ಜೆ.ಅಬ್ದುಲ್ ಕಲಾಂ.... ಇವರೆಲ್ಲರ ಕಥೆಗಳು ನಿಮಗೆ ಪ್ರೇರಣೆಯಾಗಬೇಕು. ಅದಾಗಲೇ ನಿಮ್ಮಿಂದ ಸಾಧನೆಗಳು ಹೊರಹೊಮ್ಮಬಲ್ಲುದು.
ಕಲಿಕೆಯೆಂಬುವುದು ಒಂದೆರಡು ರಾತ್ರಿ ನಿದ್ದೆಗೆಡುವ ಕಾರ್ಯವಲ್ಲ. ವರ್ಷದ ಆರಂಭದಿಂದ ಕೊನೆಯವರೆಗೂ ನಿರಂತರತೆ ಕಾಯ್ದುಕೊಂಡಾಗ ಅದು ಸಿದ್ಧಿಸುತ್ತದೆ. ಸಮಯಪಾಲನೆ ಸಾಧಕನ ಆಯುಧ. ಒಂದೊಂದು ವಿಷಯಕ್ಕೂ ಒಂದೊಂದು ಸಮಯ ನಿಗದಿಪಡಿಸಿ. ಅದನ್ನು ಪಾಲಿಸುವುದು ನಿಮ್ಮ ವೃತವಾಗಿರಲಿ. ಅದೇನೇ ಆದರೂ, ಅದೆಷ್ಟೇ ಕಷ್ಟ ಬಂದರೂ ವಿಚಲಿತರಾಗದಿರಿ. ಗಣಿತದಂತಹ ವಿಷಯಗಳನ್ನು ಬರೆದು ಕಲಿಯುವುದನ್ನು ರೂಢಿಸಿಕೊಳ್ಳಿ. ಸರಳ ವ್ಯಾಯಾಮ ದೈನಂದಿನ ಭಾಗವಾಗಲಿ. ದೇವರ ಮೇಲಿನ ಭಕ್ತಿ ಕಡಿಮೆಯಾಗದಿರಲಿ. ತಂದೆ- ತಾಯಿಯ ನಿರೀಕ್ಷೆಗೆ ತಕ್ಕ ಸಾಧನೆ ನಿಮ್ಮದಾಗಿರಲಿ. ಗುರುಗಳ ಮನಸ್ಸು ಪುಳಕಿತಗೊಳಿಸುವ ಸಾಧನೆಯತ್ತ ನಿಮ್ಮ ಹೆಜ್ಜೆಯಿರಲಿ.
ವಿದ್ಯಾರ್ಥಿಗಳೇ ಕೊನೆಗೊಂದು ಮಾತು. ಫಲಿತಾಂಶದ ದಿನ ನಿಮ್ಮ ಹೆತ್ತ ಅಮ್ಮನ ಮುಂದೆ ನಿಂತು ನಿಮ್ಮೆರಡೂ ಕೈಗಳಿಂದ ಅಮ್ಮನನ್ನು ಅಪ್ಪಿ ಕೊಂಡು ನಿಮ್ಮ ಯಶಸ್ಸನ್ನು ಹೇಳುತ್ತಿದ್ದಾಗ, ಅಮ್ಮನ ಕಣ್ಣಂಚಿನಲ್ಲಿ ಉದುರುತ್ತಿರುವ ಆನಂದ ಬಾಷ್ಪಗಳಿಗೆ ಬೊಗಸೆಯೊಡ್ಡುವ ಮಕ್ಕಳಾಗಿ ಎಂಬುವುದೇ ನನ್ನ ಹೃದಯದಾಳದ ಪ್ರಾರ್ಥನೆ.
-ಯಾಕೂಬ್ ಎಸ್ ಕೊಯ್ಯೂರು, ಶಿಕ್ಷಕರು, ಬೆಳ್ತಂಗಡಿ