ಹತ್ತು ವರ್ಷದ ಹಿಂದಿನ ಲವ್ ಲೆಟರ್

ಹತ್ತು ವರ್ಷದ ಹಿಂದಿನ ಲವ್ ಲೆಟರ್

ನಿನ್ನೆ ಹಳೆಯ ಬಾಕ್ಸ್ ಎಲ್ಲ ತೆಗೆದು ಅದೇನೋ ಹುಡುಕುವಾಗ ಹಳೆಯ ಡೈರಿಯೂ ಸಿಕ್ಕಿತು. ಸುಮಾರು ಹತ್ತು ವರ್ಷ ಹಳೆಯದು. ಸುಮ್ಮನೇ ತಿರುವುದರೆ ಹಳದಿ ಬಣ್ಣದ ಹಾಳೆಯೊಂದು ಕೆಳಬಿತ್ತು. ಅಹಾ ನಾನೇ ಬರೆದ ಪ್ರೇಮ ಪತ್ರ! 2003, ನಾನು ಬರೆದ ಮೊದಲ ಪ್ರೇಮ ಪತ್ರ. ಬರೆದವಳಿಗೆ ಕೊಡಲಾಗಲಿಲ್ಲ ಇನ್ನೂ ಇಲ್ಲಿಯೇ ಇದೆ. ಹುಚ್ಚು ಹುಚ್ಚಿನ ಆ ವಯಸಿನಲ್ಲಿ ಬರೆದ ಅದನ್ನೊಮ್ಮೆ ನೋಡಿ ಸುಮ್ಮನೇ ನಕ್ಕೆ. ಅವಳೋ ತುಂಬ ಮುದ್ದಾದ ಹುಡುಗಿ, ಮಾತನಾಡಿಸುವುದೇ ಅಪರಾಧವೆಂತಿದ್ದ ಆ ಸಮಯದಲ್ಲಿ. ಮಾತನಾಡಲಾಗದೇ ಒಂದು ಪತ್ರ ಬರೆದಿದ್ದೆ. ಆದರೆ ಅವಳಿಗೆ ಕೊಡುವ ಧೈರ್ಯ ಮಾತ್ರ ಬರಲಿಲ್ಲ. ಆಗ ಮೋಬೈಲ್ ಇಲ್ಲ, Facebook ಇಲ್ಲ. ಅವಳನ್ನು ನೋಡಬೇಕಾದರೆ ಶಾಲೆ ಹತ್ತಿರವೇ ಹೋಗಬೇಕು, ಕಂಡರೆ ಪುಣ್ಯ ಇಲ್ಲದಿದ್ದರೆ ಮತ್ತೆ ನಾಳೆ.

ಇದೋ ಇಲ್ಲಿದೆ ಆ ಪತ್ರ, ಟೈಮೂ ಹಾಗೂ patience ಇದ್ರೆ ಓದಿ, ಆಗಲ್ಲಾಂದ್ರೆ ಅದೇ facebook ಗೇ ಹೋಗಿ ಗೋಡೆ ಮೇಲೆ ಗಿಚಾಡಿ.

ಹಾಲುಗಲ್ಲದ ಹುಡುಗೀ...

ನಿನ್ನ ಸಣ್ಣನೆ ನಗುವಿನ ಬಗ್ಗೆ ಅದೆಷ್ಟು ಬರೆದರೂ ಸಾಲದು, ಸಾಲು ಸಾಲು ಮರಗಳ ನಡುವಿನ ಸಂಪಿಗೆಯಂತೆ ಹಾಲು ಗಲ್ಲದ ಹುಡುಗಿ ನೀನು. ನಿನ್ನ ಆ ಸಣ್ಣ ನಗುವಿನಿಂದಲೆ ಎಲ್ಲ ದಿಕ್ಕುಗಳಿಂದ ನನ್ನನ್ನು ಬಂಧಿಸಿದೆ, ವಾಲಿಬಾಲ್ ಆಡುವಾಗ ನಾನು ಮಂಗನಂತೆ ಮಾಡಿದ್ದು, ನೀನು ನನ್ನೆದುರು ಬಂದಾಕ್ಷಣ ನಾನು ದೊಡ್ಡ professor ಥರ ಇದ್ದದ್ದು ಕೊಂಚ ಅತಿಯಾಯಿತು ಅನಿಸುತ್ತಿತ್ತು. ಶುಕ್ರವಾರ, ಶನಿವಾರ ಹಾಗೂ ರವಿವಾರ ನಿನ್ನನ್ನು ನೋಡದೇ ಕಂಗಾಲಾಗಿದ್ದ ನಾನು ಮತ್ತೆ ನಿನ್ನನ್ನು ನೋಡಿದ್ದು ಸೋಮವಾರ ಮತ್ತದೇ ಬೇವಿನ ಮರದಡಿ. ಬೇಡವೆಂದುಕೊಳ್ಳುತ್ತಲೇ ನಿನ್ನನ್ನು ನಾನು, ನನ್ನನ್ನು ನೀನು ನೋಡಿ ಸಣ್ಣನೇ ನಗೆ ಬೀರಿದ್ಯಾಕೆ? ಪ್ರತಿ ಶನಿವಾರ ನಾನು ಶಾಲೆಗೆ ಬರುತ್ತಿದ್ದುದೇ ನೀನು ನನ್ನನ್ನು ನೋಡಬೇಕೆಂದು, ಬಡಕರೆಪ್ಪ ಸರ್ ನಿಮ್ಮನ್ನು ಗ್ರೌಂಡ್ ಕರೆಯುವತನಕವೂ ಅಲ್ಲಿ ಇಲ್ಲಿ ಸುತ್ತುತ್ತಿದ್ದ ನಾನು, ನೀವು ಗ್ರೌಂಡ್ ಗೆ ಬಂದಾಕ್ಷಣ ನಾನು ಬರುತ್ತಿದ್ದೆ. ಸಾಲು ಸಾಲಾಗಿ ನೀತಿರುತ್ತಿದ್ದ ನೂರಾರು ಹುಡುಗಿಯರಲ್ಲಿ ನಿನ್ನನ್ನು ಹುಡುಕಲು ನನಗಿರುತ್ತಿದ್ದುದು ಬರೀ ಕೇಲವೇ ನಿಮಿಷ ಮಾತ್ರ. ಇಳಿಜಾರಿನಲ್ಲಿ ಬಿಟ್ಟ ಪಾದರಸದಂತೇ ಮನ ನಿನ್ನೆಡೆ ಜಾರುತ್ತದೆ. ಮುಖ ಒಂದೆಡೆ ಇರಲಿ, ಸಾಲಿನಲಿ ನಿಂತ ನೂರಾರು ಪಾದಗಳಲ್ಲಿ ನಿನ್ನ ಪಾದವನ್ನು ಥಟ್ಟನೇ ಕಂಡುಹಿಡಿಯಬಲ್ಲೆ.

ಮೊನ್ನೆ ನಿನ್ನ ಮನೆ ಹುಡಕಿ ಖಾತರಿ ಮಾಡಿಕೊಳ್ಳಲೆಂದೇ ನಿಮ್ಮದೇ ಓಣಿಯಲಿ ಸುತ್ತಾಡಿದೆ. ಅಷ್ಟೊಂದು ಸಂದು ಗೊಂದಲಿರುವ ನಿಮ್ಮ ಕೇರಿಯ ಒಳಗೆ ಬರಲು ನನಗೆ ಧೈರ್ಯವಿಲ್ಲ ದೂರದಿಂದಲೇ ಹುಡುಕುತ್ತೇನೆ. ಅದೋ ಆ ಕಿರಾಣಿ ಅಂಗಡಿಯಲಿ, ಬೇಕರಿಯಲಿ ತಡಕುತ್ತೇನೆ. ನಿನ್ನದೇ ಕೇರಿಯ ಸಾಲು ಸಾಲು ಮನೆಗಳಲಿ ಖಂಡಿತ ನಿನ್ನ ಮನೆಯಿದೆ ಆದರೆ ಅದಿನ್ನೂ ಕಂಡಿಲ್ಲ. ಯಾವುದೋ ಓಂದು ಸಂಜೆ, ನಿನ್ನದೇ ಓಣಿಯಲಿ ಕಳ್ಳನಂತೇ ನಾ ನಡೆಯುವಾಗ 'ಓ ನೀವಾ ಏನಿಲ್ಲಿ? ಬನ್ನಿ ಒಳಗೆ' ಎಂಬ ಧ್ವನಿಗಾಗಿ ಕಾಯುತ್ತೇನೆ. ನಿನ್ನ ಮನ ನಿನ್ನ ನೆರಳ ಕೆಳಗೆ ಹಾಯುವಾಗ, ನಾನು ನಿನ್ನ ಮನ ಮನೆ ಮುಂದೆ ಹೋಗುವಾಗ ಮರೆಯದೇ ಕಿಟಕಿಯಲಿ ನಿಂತು ಕರೆ. 

ಸುಮ್ಮನೇ ನಾನು ನಡೆದುಕೊಂಡು ಹೋಗುವಾಗ ನೀ ಎದುರಿಗೆ ಬಂದರೆ, ಬೀಡಿ ಸೇದುತ್ತಿದ್ದ ಮಗ ಅಪ್ಪ ಮುಂದೆ ಬಂದಾಗ ಗಾಭರಿಗೊಳ್ಳುವಂತೇ ನಿನ್ನನ್ನು ನೋಡಿ ಬೆಚ್ಚಿಬೀಳುತ್ತಿದ್ದೆ. ನೂರಾರು ಹುಡುಗರ ಆ ಶಾಲೆಯಲ್ಲಿ ನಿನ್ನನ್ನು ಅವರಂತೇ ಕಾಣಲು ನಾನು ಪಟ್ಟ ಶ್ರಮ ಅಷ್ಟಿಷ್ಟಲ್ಲ. ನಾನೇ ನಿನ್ನನ್ನು ತಪ್ಪಾಗಿ ತಿಳಿದುಕೊಂಡಿದ್ದೇನೋ ಅಥವಾ ನೀನೆ ನನ್ನನ್ನು ಒಪ್ಪಾಗಿ ಕಂಡಿದ್ದಿಯೋ ಎಂದು ತಿಳಿಯುವುದ್ಯಾವಾಗ? ಅದಕ್ಕೊಂದು ನಿರ್ಧಾರ ತೆಗೆದುಕೊಳ್ಳಲೆಂದೆ ಅಂದು ಭಾನುವಾರ ನಿಮ್ಮ ಅಂಗಡಿಯನ್ನು ಹುಡುಕಿದೆ, ಆದರೆ ನಿಮ್ಮ ಅಂಗಡಿ ನನಗೆ ಸಿಗಲೇ ಇಲ್ಲ. ನೀನು ನನ್ನನ್ನು ಹಾಗೆ ನೋಡುದುವುದನ್ನು ನನ್ನಿಂದ ಸಹಿಸಿಕೊಳ್ಳಲಾಗುವುದಿಲ್ಲ, ನಿನ್ನೊಂದಿಗೆ ಮಾತನಾಡುವುದಿದೆ, ನಿನ್ನ ಎರಡೂ ಕೈಗಳನ್ನು ಹಿಡಿದೊಂಡು, ಅಷ್ಟು ದೂರ ನಡೆಯಬೇಕಿದೆ. ಒಂದು ಏಕಾಂತದಲಿ ನಿನ್ನೊಂದಿಗೆ ಇಷ್ಟು ಹೇಳಬೇಕಿದೆ, ನಿನ್ನಿಂದ ಸಣ್ಣದೊಂದು ಪದ್ಯ ಹಾಡಿಸಬೇಕಿದೆ, ನೀನು ನಕ್ಕಾಗ ನಿನ್ನ ಹಾಲುಗೆನ್ನೆಯಲಿ ಮೂಡುವ ಸಣ್ಣ ಗುಳಿಯಲ್ಲಿ ಹೊಸ ಆಸೆಯೊಂದನ್ನು ಕಾಣಬೇಕಿದೆ. ನಿನಗೆ ಬೇಕೆನಿಸಿದಾಗ ಕರೆ ಬಂದು ಮಾತನಾಡುತ್ತೇನೆ.


ಮೊದಮೊದಲಾಗಿ ನನಗೆ ತುಂಬ ಇಷ್ಟವಾದ ಹುಡುಗಿ ನೀನು.ಅದೊಂದು ಶುಕ್ರವಾರ ನೀ ಬೀರಿದ ಸಣ್ಣ ನಗು, ಮುಂದಿನ ಶನಿವಾರ ಹಾಗೂ ಭಾನುವಾರ ನಿನಗಾಗಿ ಕಾಯುವಂತೇ ಮಾಡಿತ್ತು. ಅದೇನು ಕೆಲಸವೋ ಅದನ್ನು ಭಾನುವಾರಕ್ಕೆ ಇಟ್ಟು ಪ್ರತದಿನ ಶಾಲೆಗೆ ಬಾ, ನೀನಿರದ ಆ ಕ್ಲಾಸು ಜೀವ ಕಳೆದುಕೊಳ್ಳುತ್ತದೆ.

ಅದಕ್ಕೆ ಮೊದಲು ಅಂದು ನೀನು ಗ್ರೌಂಡಲಿ ಬೇವಿನ ಮರದಡಿ ನಿಂತು ನನ್ನ ಕಡೆ ಸಣ್ಣ ನಗೆ ಬೀರಿದ್ಯಾಕೆ ಹೇಳು?
 
09/03/2003